ಕಾರವಾರ: ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಪ್ರಕ್ರಿಯೆ ಭರದಿಂದ ಸಾಗಿದೆ. ಕೊರೋನಾ ಸಂದರ್ಭದಲ್ಲಿ ಮಂದಗತಿಯಲ್ಲಿ ಸಾಗುತ್ತಿದ್ದ ಕಾಮಗಾರಿ ಇದೀಗ ಚುರುಕುಗೊಂಡಿದೆ. ನಿರ್ಮಾಣ ಕಾರ್ಯ ಸಹ ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ. ಕರಾವಳಿಯಲ್ಲಿ ಕೇವಲ ಕೊಂಕಣ ರೈಲ್ವೆ ಮಾರ್ಗದಲ್ಲಿ ಕಾಣಸಿಗುತ್ತಿದ್ದ ಸುರಂಗ ಸಂಚಾರ ಇದೀಗ ಹೆದ್ದಾರಿ ಸವಾರರಿಗೂ ಲಭ್ಯವಾಗಲಿದೆ.
ಉತ್ತರಕನ್ನಡ ಎಂದಾಕ್ಷಣ ಇಲ್ಲಿನ ಪ್ರವಾಸಿ ತಾಣಗಳು ಎಷ್ಟು ಪ್ರಸಿದ್ದವೋ ಅದೇ ಮಾದರಿಯಲ್ಲಿ ಜಿಲ್ಲೆಯಲ್ಲಿ ಹಾದು ಹೋಗುವ ಕೊಂಕಣ ರೈಲ್ವೆ ಮಾರ್ಗ ಸಹ ಸಾಕಷ್ಟು ಪ್ರಸಿದ್ದಿಯನ್ನ ಹೊಂದಿದೆ. ಗುಡ್ಡಗಳನ್ನ ಕೊರೆದು ಟನಲ್ ಮಾಡುವ ಮೂಲಕ ಗುಡ್ಡಗಳ ಮಧ್ಯದಲ್ಲಿ ರೈಲು ಸಂಚಾರವಾಗುವುದು ಈ ಯೋಜನೆಯ ಪ್ರಮುಖ ಅಂಶವಾಗಿತ್ತು. ಅದರಂತೆ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ರಸ್ತೆ ಮಾರ್ಗದಲ್ಲೂ ಸುರಂಗ ಮಾರ್ಗ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು ಇದೀಗ ಸುರಂಗ ಮಾರ್ಗಗಳು ಬಹುತೇಕ ಪೂರ್ಣಗೊಳ್ಳುವ ಹಂತ ತಲುಪಿವೆ.
ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ ಕಾರ್ಯ ನಡೆಯುತ್ತಿದ್ದು ಕಾರವಾರ ತಾಲೂಕಿನ ಎರಡು ಕಡೆ ಸುರಂಗ ಮಾರ್ಗವನ್ನ ನಿರ್ಮಾಣ ಮಾಡಲಾಗುತ್ತಿದೆ. ತಾಲೂಕಿನ ಬಿಣಗಾ ಗ್ರಾಮ ಹಾಗೂ ಆಲಿಗದ್ದಾ ಗ್ರಾಮದ ಬಳಿ ಎರಡು ಟನಲ್ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಬಹುತೇಕ ಪೂರ್ಣಗೊಳ್ಳುತ್ತಿದೆ. ಕಾಮಗಾರಿ ಗುತ್ತಿಗೆ ಪಡೆದಿರುವ ಐ.ಆರ್.ಬಿ ಕಂಪನಿ ಬಿಣಗಾ ಗ್ರಾಮದ ಬಳಿ 346 ಮೀಟರ್ ಉದ್ದದ ಟನಲ್ ನಿರ್ಮಾಣವನ್ನ ಮಾಡುತ್ತಿದ್ದು ಈಗಾಗಲೇ ಎರಡು ಟನಲ್‌ಗಳ ನಿರ್ಮಾಣ ಕಾರ್ಯ ಮುಗಿದಿದೆ. ಇದಲ್ಲದೇ ಅಲಿಗದ್ದಾ ಗ್ರಾಮದ ಬಳಿ 350 ಮೀಟರ್ ಉದ್ದದ ಟನಲ್ ನಿರ್ಮಿಸುತ್ತಿದ್ದು ಇದರಲ್ಲಿ ಈಗಾಗಲೇ ಒಂದು ಟನಲ್ ಪೂರ್ಣಗೊಂಡಿದ್ದು ಸಾರ್ವಜನಿಕರನ್ನ ಆಕರ್ಷಿಸುತ್ತಿದೆ.
ಇದನ್ನೂ ಓದಿ: ಪೊಲೀಸ್ ಅಧಿಕಾರಿಗಳ ಹೆಸರಲ್ಲಿ ನಕಲಿ ಅಕೌಂಟ್ ಸೃಷ್ಟಿಸಿ ವಂಚನೆ; ಸಿಐಡಿಯಿಂದ ನಾಲ್ವರ ಬಂಧನ
ಇನ್ನು, ಕಾರವಾರ ತಾಲೂಕಿನ ಆಲಿಗದ್ದಾ ಹಾಗೂ ಬಿಣಗಾ ಗ್ರಾಮದಲ್ಲಿ ಸುರಂಗಮಾರ್ಗ ನಿರ್ಮಾಣ ಮಾಡುವುದರಿಂದ ಹೆದ್ದಾರಿ ಸಂಚಾರದಲ್ಲಿ ಸುಮಾರು 5 ಕಿಲೋ ಮೀಟರ್ ದೂರ ಕಡಿಮೆಯಾಗಲಿದೆ. ಹೆದ್ದಾರಿ ಅಗಲೀಕರಣ ಕಾಮಗಾರಿಯನ್ನ ಐಆರ್.ಬಿ ಕಂಪನಿ ಮಾಡುತ್ತಿದ್ದು ಟನಲ್ ನಿರ್ಮಾಣ ಕಾರ್ಯವನ್ನ ಮುಂಬೈನ ಚಂದ್ರಶೇಖರ್ ಇನ್ಫ್ರಾ ಅನ್ನೋ ಕಂಪನಿ ಮಾಡುತ್ತಿದೆ. ಕಳೆದ ಮೂರು ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದು ಕೊರೋನಾ ಕಾರಣದಿಂದಾಗಿ ಸುರಂಗ ನಿರ್ಮಾಣ ಕೊಂಚ ನಿಧಾನಗತಿಯಲ್ಲಿ ಸಾಗಿತ್ತು. ಇದೀಗ ಕಾಮಗಾರಿ ವೇಗ ಪಡೆದುಕೊಳ್ಳುತ್ತಿದ್ದು ಸುರಂಗ ನಿರ್ಮಾಣ ಕಾರ್ಯ ಇನ್ನೇನು ಪೂರ್ಣಗೊಳ್ಳುವ ಹಂತ ತಲುಪಿದೆ. ಜನವರಿ ಅಂತ್ಯದ ವೇಳೆಗೆ ಹೆದ್ದಾರಿ ಟನಲ್‌ನ ಒಂದು ಬದಿಯ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಲಭ್ಯವಾಗುವ ನಿರೀಕ್ಷೆಯಿದೆ ಅಂತಾ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಒಟ್ಟಾರೆ, ಉತ್ತರಕನ್ನಡ ಜಿಲ್ಲೆಯ ಮೊದಲ ಟನಲ್ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಳ್ಳುತ್ತಿದ್ದು ಆದಷ್ಟು ಬೇಗ ಹೆದ್ದಾರಿ ಕಾಮಗಾರಿ ಸಹ ಪೂರ್ಣಗೊಂಡು ಸಾರ್ವಜನಿಕರಿಗೆ ಲಭ್ಯವಾಗಬೇಕಿದೆ.
ವರದಿ: ದರ್ಶನ್ ನಾಯ್ಕ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ