ಸಹೋದರ ಶಾಸಕನಾದರೂ ಬದ್ಧವೈರಿಗಳಂತೆ ಚುನಾವಣೆಯಲ್ಲಿ ಅಕ್ಕ-ತಂಗಿಯರ ಸ್ಪರ್ಧೆ; ಬಸವನಾಡಲ್ಲಿ ಅಪರೂಪದ ರಾಜಕೀಯ ಜಿದ್ದಾಜಿದ್ದಿ

ನಾಗಠಾಣದ ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ ಅವರ ಇಬ್ಬರು ಅಕ್ಕಂದಿರಾದ ನೀಲಾಬಾಯಿ ಅಂಗಡಿ ಮತ್ತು ಕಸ್ತೂರಿಬಾಯಿ ದೊಡ್ಡಮನಿ ಅವರು ದೇವರಹಿಪ್ಪರಗಿಯ ಹಿಟ್ಟಿನಹಳ್ಳಿ ಗ್ರಾಮ ಪಂಚಾಯಿತಿಗೆ ಎದಿರುಬದುರಾಗಿ ಸ್ಪರ್ಧಿಸಿದ್ದಾರೆ.

Chavan sisters

Chavan sisters

  • Share this:
ವಿಜಯಪುರ(ಡಿ. 25): ರಾಜಕೀಯ ಎಂಬುದು ಹೇಗೆ ಒಂದು ಕುಟುಂಬದ ಸಂಬಂಧಗಳಿಗೂ ಬೆಲೆ ಇಲ್ಲದಂತೆ ಮಾಡುತ್ತದೆ ಎಂಬುದಕ್ಕೆ ಈ ಪ್ರಕರಣ ಪ್ರತ್ಯಕ್ಷ ಸಾಕ್ಷಿ. ಈ ಕುಟುಂಬದಲ್ಲಿ ತಮ್ಮ ಶಾಸಕರಾಗಿದ್ದಾರೆ. ಇವರ ಇಬ್ಬರು ಅಕ್ಕಂದಿರು ಮಾತ್ರ ಒಂದೇ ಊರಲ್ಲಿ, ಒಂದೇ ಸ್ಥಾನಕ್ಕೆ ಬದ್ಧ ವೈರಿಗಳಂತೆ ಪರಸ್ಪರ ಸ್ಪರ್ಧೆಗಿಳಿದಿದ್ದಾರೆ. ಈ ಘಟನೆಗೆ ಸಾಕ್ಷಿಯಾಗಿದ್ದು ಬಸವನಾಡು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಹಿಟ್ಟಿನಹಳ್ಳಿ ಗ್ರಾಮ ಪಂಚಾಯಿತಿ ಚುನಾವಣೆ. ವಿಜಯಪುರ ಜಿಲ್ಲೆಯ ನಾಗಠಾಣ(ಮೀ) ಜೆಡಿಎಸ್ ಶಾಸಕ ಡಾ. ದೇವಾನಂದ ಎಫ್. ಚವ್ಹಾಣ ಅವರ ಇಬ್ಬರು ಅಕ್ಕಂದಿರು ಈಗ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಎದುರು ಬದುರಾಗಿ ನಿಂತಿದ್ದಾರೆ.  ಒಡಹುಟ್ಟಿದ ಸಹೋದರಿಯರಾಗಿದ್ದರೂ ಇಲ್ಲಿ ರಾಜಕೀಯವೇ ಮೇಲಾಗಿದೆ.

ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಹಿಟ್ಟಿನಹಳ್ಳಿ ಗ್ರಾಮ ಪಂಚಾಯಿತಿಗೆ ಡಿ. 27ರಂದು ಚುನಾವಣೆ ನಡೆಯುತ್ತಿದೆ.  ಆದರೆ, ಈ ಚುನಾವಣೆ ಮಾತ್ರ ಈಗ ಎಲ್ಲರ ಗಮನ ಸೆಳೆದಿದೆ. ಒಡ ಹುಟ್ಟಿದವರಾದರೂ ಇವರು ಇಲ್ಲಿ ಪರಸ್ಪರ ಬದ್ಧ ವೈರಿಗಳಾಗಿದ್ದಾರೆ. ನಾನಾ ನೀನಾ ಎಂದು ಅಖಾಡಕ್ಕಿಳಿದ ಒಡಹುಟ್ಟಿದ ಸಹೋದರಿಯರು ಈಗ ಕುತುಹಲದ ಕೇಂದ್ರ ಬಿಂದುವಾಗಿದ್ದಾರೆ. ಒಂದೇ ಸ್ಥಾನಕ್ಕೆ ಎದುರಾಳಿಗಳಾದ ಖಾಸಾ ಅಕ್ಕತಂಗಿಯರು ಈಗ ಜಿಲ್ಲಾದ್ಯಂತ ಗಮನ ಸೆಳೆದಿದ್ದಾರೆ.  ಹಿಟ್ಟಿನಹಳ್ಳಿಯ 4ನೇ ವಾರ್ಡ್​ನಿಂದಲೇ ಇಬ್ಬರು ಸ್ಪರ್ಧೆ ಮಾಡಿದ್ದು, ನೀಲಾಬಾಯಿ ಅಂಗಡಿ ಮತ್ತು ಕಸ್ತೂರಿಬಾಯಿ ದೊಡಮನಿ ಅವರೇ ಈ ಸಹೋದರಿಯರಾಗಿದ್ದಾರೆ.

ನೀಲಾಬಾಯಿ ಅಂಗಡಿ ಈ ಹಿಂದೆ ನಾಲ್ಕು ಬಾರಿ ಗ್ರಾಮ ಪಂಚಾಯಿತಿ ಸದಸ್ಯೆಯಾಗಿದ್ದರು. ಅಲ್ಲದೇ, ಮೂರು ಬಾರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರೂ ಆಗಿದ್ದರು. ಕಸ್ತೂರಿಬಾಯಿ ದೊಡಮನಿ ಅವರೂ ಅಷ್ಟೇ, ಈ ಹಿಂದೆ ಸಿಂದಗಿ ತಾಲೂಕು ಪಂಚಾಯತಿ ಸದಸ್ಯೆಯಾಗಿದ್ದರು. ಅಲ್ಲದೇ, ಸಿಂದಗಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷರೂ ಆಗಿದ್ದರು. ಇದೀಗ ಒಂದೇ ತಾಯಿಯ ಮಕ್ಕಳಾಗಿದ್ದರೂ ಪರಸ್ಪರ ವೈರಿಗಳಂತಾಗಿದ್ದಾರೆ.

ಇದನ್ನೂ ಓದಿ: ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಯುವತಿಗೆ ಬ್ಲ್ಯಾಕ್​ಮೇಲ್, ಬಾರಿ ಬಾರಿ ಅತ್ಯಾಚಾರ: ಮಂಡ್ಯದ ವ್ಯಕ್ತಿ ಬಂಧನ

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಕ್ಕ ನೀಲಾಬಾಯಿ ಅಂಗಡಿ, ಜನ ತಮ್ಮ ಬೆಂಬಲ ಕೊಟ್ಟಿದ್ದಾರೆ. ಅವರ ಆಶೀರ್ವಾದ ತಮ್ಮ ಮೇಲಿದೆ. ಕೆಲಸ ಮಾಡುತ್ತಿದ್ದೇನೆ. ಆಯ್ಕೆಯಾಗುವ ವಿಶ್ವಾಸವಿದೆ. ಬಡವರ ಪರವಾಗಿದ್ದೇನೆ. ಅವರ ಬೆಂಬಲವಿದೆ. ಗ್ರಾಮದಲ್ಲಿ ಸಿಸಿ ರಸ್ತೆ, ಚರಂಡಿ ವ್ಯವಸ್ಥೆ ಮಾಡಿದ್ದೇನೆ. ನಮ್ಮ ತಂದೆ ರಾಜಕಾರಣಿ. ನನ್ನ ತಮ್ಮ ಶಾಸಕರಾಗಿದ್ದಾರೆ. ಅವರ ಆಶೀರ್ವಾದವೂ ನನ್ನ ಮೇಲಿದೆ. ಜನಸೇವೆ ಮಾಡಲು ಬದ್ಧನಾಗಿದ್ದೇನೆ. ಗೆದ್ದೆ ಗೆಲ್ಲುತ್ತೇನೆ. ತಂಗಿ ನನ್ನ ವಿರುದ್ಧವೇ ಸ್ಪರ್ಧಿಸಿದ್ದೇವೆ. ಅವರಿಗೆ ಮಾತನಾಡಿದೆ. ನಂತರ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆಕೆಯ ಮಗನಿಗೆ ಕೂಡ ಹೇಳಿದೆ. ಆದರೆ, ಅವರು ಮಾತು ಕೇಳದೆ ನನ್ನ ವಿರುದ್ಧವೇ ಸ್ಪರ್ಧಿಸಿದ್ದಾರೆ. 20 ವರ್ಷಗಳಿಂದ ರಾಜಕೀಣ ಮಾಡುತ್ತಿದ್ದೇನೆ. ಅವರ ರಾಜಕೀಯ ನಮ್ಮ ರಾಜಕೀಯ ನಮಗೆ ಎಂದು ನೀಲಾಬಾಯಿ ಅಂಗಡಿ ತಿಳಿಸಿದ್ದಾರೆ.

ಅಕ್ಕನ ವಿರುದ್ಧ ಸ್ಪರ್ಧಿಸಿರುವ ಕಸ್ತೂರಿಬಾಯಿ ದೊಡಮನಿ ಕೂಡ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಜನಸೇವೆ ಮಾಡುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. 30 ವರ್ಷದಿಂದ ರಾಜಕಾರಣ ಮಾಡುತ್ತಿದ್ದೇನೆ. ಜನಪ್ರೀಯಳಾಗಿದ್ದೇನೆ. 1995ರಲ್ಲಿ ತಾ. ಪಂ. ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದೇನೆ. ನಾನು ಸಂಸಾರ ನೋಡಿಲ್ಲ. ಜನಸೇವೆ ಮಾಡುತ್ತಿದ್ದೇನೆ. ತಂದೆಯ ಕಾಲದಿಂದಲೇ ರಾಜಕೀಯ ಮಾಡುತ್ತಿದ್ದೇನೆ. ಅಕ್ಕನ ವಿರುದ್ಧ ನಾನು ಸ್ಪರ್ಧಿಸಿಲ್ಲ. ಜನರ ಪರವಾಗಿ, ಜನರ ಸಲುವಾಗಿ ಸಂಪೂರ್ಣವಾಗಿ ಜೀವನ ಮುಡುಪಾಗಿಟ್ಟಿದ್ದೇನೆ. ಜನ ಹಗಲು ರಾತ್ರಿ ಯಾವಾಗ ಕರೆದರೂ ಅವರ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮಂಡ್ಯ ರೈತ ವಿಜ್ಞಾನಿ ಮಂಜೇಗೌಡರಿಂದ ಕೆರೆಯ ನೀರಿನಲ್ಲಿ ವಿದ್ಯುತ್ ತಯಾರಿಕೆ; ಇಡೀ ಊರಿಗೆ ಉಚಿತ ಕರೆಂಟ್

ಅಕ್ಕಂದಿರ ಸ್ಪರ್ಧೆಯ ಕುರಿತು ನ್ಯೂಸ್ 18 ಕನ್ನಡದ ಜೊತೆ ಮಾತನಾಡಿರುವ ಶಾಸಕ ಡಾ. ದೇವಾನಂದ ಎಫ್. ಚವ್ಹಾಣ, ಇದು ತಮಗೂ ಧರ್ಮ ಸಂಕಟ. ಯಾರಿಗೂ ಏನನ್ನೂ ಹೇಳದ ಪರಿಸ್ಥಿತಿಯಲ್ಲಿ ನಾನಿದ್ದೇನೆ. ಆ ಕ್ಷೇತ್ರದ ತುಂಬೆಲ್ಲ ನಮ್ಮ ಸಂಬಂಧಿಕರೇ ತುಂಬಿದ್ದಾರೆ. ಆ ಗ್ರಾಮದಲ್ಲಿ ಎರಡು ಬಣಗಳಿವೆ. ಹೀಗಾಗಿ ಒಂದೊಂದು ಬಣದಿಂದ ಅಕ್ಕಂದಿರು ಸ್ಪರ್ಧಿಸಿದ್ದಾರೆ. ಈ ಚುನಾವಣೆಯಲ್ಲಿ ತಮ್ಮ ಯಾವ ಸಹೋದರಿಗೂ ಸ್ಪರ್ಧಿಸಬೇಡಿ ಎಂದು ಹೇಳಲು ಸಾಧ್ಯವಾಗಿಲ್ಲ. ಯಾರಿಗೆ ಬೇಡ ಎಂದರೂ ಮತ್ತೋಬ್ಬರಿಗೆ ನೋವಾಗುತ್ತದೆ ಎಂಬ ದೃಷ್ಠಿಯಿಂದ ಆ ವಿಚಾರದಲ್ಲಿ ಯಾವುದೇ ರೀತಿಯಿಂದ ತಲೆ ಹಾಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆ, ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಹಿಟ್ಟಿನಹಳ್ಳಿ ಗ್ರಾಮ ಪಂಚಾಯಿತಿ ಚುನಾವಣೆ ಈಗ ಬಸವನಾಡು ವಿಜಯಪುರ ಅಷ್ಟೇ ಅಲ್ಲ, ಇಡೀ ರಾಜ್ಯದಲ್ಲಿಯೇ ಗಮನ ಸೆಳೆದಿರುವುದಂತೂ ಸತ್ಯ.

ವರದಿ: ಮಹೇಶ ವಿ. ಶಟಗಾರ
Published by:Vijayasarthy SN
First published: