ಐಸಿಸ್ ನಂಟಿದ್ದ ಅಕ್ಕಿ ವ್ಯಾಪಾರಿ, ಬ್ಯುಸಿನೆಸ್ ಅನಾಲಿಸ್ಟ್ ಬೆಂಗಳೂರಲ್ಲಿ ಎನ್ಐಎ ಬಲೆಗೆ

ಫ್ರೇಜರ್ ಟೌನ್​ನ ಅಕ್ಕಿ ವ್ಯಾಪಾರಿ ಇರ್ಫಾನ್ ನಾಸೀರ್, ಚೆನ್ನೈನ ಬ್ಯುಸಿನೆಸ್ ಅನಾಲಿಸ್ಟ್ ಅಹಮದ್ ಅಬ್ದುಲ್ ಅವರಿಬ್ಬರನ್ನು ಎನ್ಐಎ ಬೆಂಗಳೂರಿನಲ್ಲಿ ಬಂಧಿಸಿದೆ. ಸದ್ಯ ಇವರನ್ನ 10 ದಿನ ಎನ್ಐಎ ಕಸ್ಟಡಿಗೆ ಒಪ್ಪಿಸಲಾಗಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ಬೆಂಗಳೂರು(ಅಕ್ಟೋಬರ್ 8): ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಜೊತೆ ನಂಟು ಹೊಂದಿದ್ದ ಆರೋಪದ ಮೇಲೆ ಇಬ್ಬರು ಶಂಕಿತರನ್ನ ಎನ್ಐಎ ಬಂಧಿಸಿದೆ‌. ಬಂಧಿತರು ಬೆಂಗಳೂರಿನ ಗುರಪ್ಪನಪಾಳ್ಯ ನಿವಾಸಿ ಇರ್ಫಾನ್ ನಾಸೀರ್ ಮತ್ತು ತಮಿಳುನಾಡಿನ ಅಬ್ದುಲ್ ಅಹಮದ್ ಎನ್ನಲಾಗಿದೆ.

ಇಬ್ಬರು ಶಂಕಿತರು ಈ ಹಿಂದೆ ಬೆಂಗಳೂರಿನ ಬಸವನಗುಡಿಯಲ್ಲಿ ಬಂಧಿತನಾಗಿದ್ದ ವೈದ್ಯ ಡಾ. ಅಬ್ದುರ್ ರೆಹಮಾನ್ ಜೊತೆ ನಿಕಟ ಸಂಪರ್ಕ ಹೊಂದಿದ್ದು ಈ ಬಗ್ಗೆ ವೈದ್ಯನ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದನಂತೆ. ವೈದ್ಯ ಡಾ. ಅಬ್ದುರ್ ರೆಹಮಾನ್ ಮಾಹಿತಿ ಮೇರೆಗೆ ನಿನ್ನೆ ಎನ್ಐಎ ಆಧಿಕಾರಿಗಳು ಬೆಂಗಳೂರು ಹಾಗೂ ತಮಿಳುನಾಡಿನಲ್ಲಿ ದಾಳಿ ನಡೆಸಿದ್ದಾರೆ. ಬೆಂಗಳೂರು ನಿವಾಸಿ ಇರ್ಫಾನ್ ನಾಸೀಸ್​ಗೆ ಸೇರಿದ ಫ್ರೇಜರ್ ಟೌನ್‌ ಮತ್ತು ಗುರಪ್ಪನಪಾಳ್ಯದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ ಇರ್ಫಾನ್ ನಾಸೀರ್ ಎನ್ಐಎ ಬಲೆಗೆ ಬಿದ್ದಿದ್ದಾನೆ.

ಇರ್ಫಾನ್ ನಾಸೀರ್ ಫ್ರೇಜರ್ ಟೌನ್​ನಲ್ಲಿ ಅಕ್ಕಿ ವ್ಯಾಪಾರಿಯಾಗಿದ್ದ ಹಾಗೂ ಮತ್ತೊಬ್ಬ ಶಂಕಿತ ಅಹಮದ್ ಅಬ್ದುಲ್ ಚೆನ್ನೈನ ಬ್ಯಾಂಕ್​ವೊಂದರಲ್ಲಿ ಬ್ಯುಸಿನೆಸ್ ಅನಾಲಿಸಿಸ್ ಆಗಿದ್ದನಂತೆ. ಇಬ್ಬರೂ ಸಹ ಬಸವನಗುಡಿಯಲ್ಲಿ ಬಂಧಿತನಾಗಿದ್ದ ವೈದ್ಯ ಅಬ್ದುರ್ ರೆಹಮಾನ್ ಜೊತೆ ಐಸಿಸ್​ನೊಂದಿಗೆ ಕೈ ಜೋಡಿಸಿದ್ದರು ಎನ್ನಲಾಗಿದೆ. ಈ ಬಗ್ಗೆ ಎನ್ಐಎ ಸೆಪ್ಟೆಂಬರ್ 10 ರಂದು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಕಾಂಗ್ರೆಸ್‌ನವರು ವಿರೋಧ ಪಕ್ಷದಲ್ಲಿರಲು ಅಯೋಗ್ಯರು ; ಸಚಿವ ಕೆ ಎಸ್ ಈಶ್ವರಪ್ಪ

ಇನ್ನು, ಬಂಧಿತ ಶಂಕಿತರು ಹಿಜ್ಬ್ ಉತ್ ತೆಹ್ರಿರ್ ಎಂಬ ಸಂಘಟನೆ ಕಟ್ಟಿದ್ದರು ಎಂದು ಎನ್ಐಎ ಉಲ್ಲೇಖ ಮಾಡಿದೆ. ಹಾಗೂ ಕುರಾನ್ ಸರ್ಕಲ್ ಎಂಬ ಗ್ರೂಪ್ ಕಟ್ಟಿಕೊಂಡು ಯುವಕರನ್ನ ಸಿರಿಯಾಗೆ ಹೋಗಲು ಪ್ರಚೋದನೆ ಮಾಡುತ್ತಿದ್ದರು ಎಂದು ಎನ್ಐಎ ತನಿಖೆ ವೇಳೆ ಬೆಳಕಿಗೆ ಬಂದಿದೆ. ಹಾಗೂ ISIS ಪರವಾಗಿ ಹೋರಾಟ ಮಾಡಲು ಯುವಕರಿಗೆ ಪ್ರೇರಣೆ ಮಾಡುತ್ತಿದ್ದರಂತೆ. ಸಿರಿಯಾಗೆ ತೆರಳಲು ಯುವಕರಿಗೆ ಫಂಡಿಂಗ್ ಕೂಡ ಮಾಡುತ್ತಿದ್ದರು ಎಂದು ಎನ್ಐಎ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಸದ್ಯ ಎನ್ಐಎ ಅಹಮದ್ ಅಬ್ದುಲ್ ಹಾಗೂ ಇರ್ಫಾನ್ ನಾಸೀರ್ ಮನೆ ಮೇಲೆ ದಾಳಿ ನಡೆಸಿ ಶೋಧ ನಡೆಸಿದೆ. ಇಬ್ಬರನ್ನು ಬಂಧಿಸಿದ ಎನ್ಐಎ ಆಧಿಕಾರಿಗಳು ಶಂಕಿತರನ್ನ NIA ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಲಯ ಶಂಕಿತರ ಹೆಚ್ಚಿನ ವಿಚಾರಣೆ ಸಲುವಾಗಿ ಇಬ್ಬರು ಆರೋಪಿಗಳನ್ನ ಹತ್ತು ದಿನ NIA ವಶಕ್ಕೆ ನೀಡಿದೆ.

ವರದಿ: ಮುನಿರಾಜು ಹೊಸಕೋಟೆ
Published by:Vijayasarthy SN
First published: