ಚಾಮರಾಜನಗರ (ಜನವರಿ 22); ಮೋಸ ಹೋಗುವವರು ಇರೋವರೆಗೂ ಮೋಸ ಮಾಡುವವರು ಇದ್ದೆ ಇರುತ್ತಾರೆ ಎಂಬ ಮಾತು ಸಾರ್ವಕಾಲಿಕ ಸತ್ಯ. ಈ ಮಾತಿಗೆ ಪುಷ್ಠಿ ನೀಡುವಂತೆ ಸುಲಭವಾಗಿ ಸಾಲ ಸಿಗುತ್ತದೆ ಎಂಬ ಆಸೆಗೆ ಬಿದ್ದ ಜನರಿಗೆ ಅನಧಿಕೃತ ಖಾಸಗಿ ಸಂಸ್ಥೆಯೊಂದು ಲಕ್ಷಾಂತರ ರೂಪಾಯಿ ಟೋಪಿ ಹಾಕಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಸಾಲ ಕೊಡಿಸುವುದಾಗಿ ಆಮಿಷ ಒಡ್ಡಿದ ಈ ಅನಧಿಕೃತ ಖಾಸಗಿ ಸಂಸ್ಥೆಯ ಮಾಲೀಕ ನೂರಾರು ಜನರಿಂದ ಕಮಿಷನ್ ಹಾಗೂ ನೋಂದಣಿ ಶುಲ್ಕದ ರೂಪದಲ್ಲಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ್ದು ಮೋಸ ಹೋದ ಜನ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಚಾಮರಾಜನಗರ ಹಾಗೂ ಕೊಳ್ಳೇಗಾಲ ಪೊಲೀಸ್ ಠಾಣೆಗಳಲ್ಲಿ ಈ ಅನಧಿಕೃತ ಖಾಸಗಿ ಸಂಸ್ಥೆಯ ವಿರುದ್ದ ದೂರು ದಾಖಲಾಗಿದ್ದು, ಕೊಳ್ಳೇಗಾಲ ಪೊಲೀಸರು ಈ ಸಂಸ್ಥೆಯ ಬಿಸಿನೆಸ್ ಹೆಡ್ ಮೋಹನಸುಂದರಂ ಹಾಗೂ ಉದ್ಯೋಗಿ ಶಶಿಕಲಾ ಎಂಬುವರನ್ನು ಬಂಧಿಸಿದ್ದಾರೆೆ.
ಎಸ್.ಎಂ.ಎಸ್. ಅಸೋಸೀಯೇಟ್ಸ್ ಎಂಬ ಈ ಸಂಸ್ಥೆ, ಉದ್ಯೋಗಿ ಶಶಿಕಲಾ ಎಂಬುವರ ಹೆಸರಿನಲ್ಲಿ ಜಿ.ಎಸ್.ಟಿ. ನಂಬರ್ ಪಡೆದಿರುವುದನ್ನು ಬಿಟ್ಟರೆ ಇನ್ಯಾವುದೇ ರೀತಿಯ ಸರ್ಕಾರಿ ಸಂಸ್ಥೆಗಳಿಂದ ಪರವಾನಗಿ ಪಡೆದಿಲ್ಲ. ಅಲ್ಲದೇ ನೋಂದಣಿಯೂ ಆಗಿಲ್ಲ. ಆದರೂ ಚಾಮರಾಜನಗರ ಕೊಳ್ಳೇಗಾಲ, ಮಳವಳ್ಳಿ, ಟಿ.ನರಸೀಪುರ, ಮೈಸೂರು ಸೇರಿದಂತೆ 15 ಕಡೆ ಶಾಖೆ ತೆರೆದು ಖಾಸಗಿ ಬ್ಯಾಂಕುಗಳಿಂದ ವ್ಯಾಪಾರ, ಕೈಗಾರಿಕೆ, ಮನೆ, ವಾಹನ, ಕೃಷಿ ಮತ್ತಿತರ ಸಾಲ ಸೌಲಭ್ಯ ಕೊಡಿಸುವುದಾಗಿ ಜನರನ್ನು ನಂಬಿಸಿದೆ.
ಅಗತ್ಯ ಡಾಕ್ಯುಮೆಂಟ್ ಇದ್ರೂ ಬ್ಯಾಂಕ್ ಗಳಲ್ಲಿ ಸಾಲ ಸಿಗೋದು ಕಷ್ಟ. ಆದರೆ ನಾನು ಸಾಲ ಕೊಡಿಸ್ತೀನಿ. ನಮ್ಮ ಸಂಸ್ಥೆಯಲ್ಲಿ ಒಂದು ಖಾತೆ ತೆರಿಯಿರಿ ಅಂತಾ ಹೇಳಿಕೊಂಡ ಮೋಹನಸುಂದರಂ ಎಂಬ ವ್ಯಕ್ತಿ ನೂರಾರು ಮಂದಿಯಿಂದ ತಲಾ 2000 ರೂಪಾಯಿಯಂತೆ ವಸೂಲಿ ಮಾಡಿದ್ದಾನೆ. ಅಲ್ಲದೆ ಕೋಟಿಗಟ್ಟಲೇ ಸಾಲ ಕೊಡಿಸುವುದಾಗಿ ಮುಂಗಡವಾಗಿ ಶೇಕಡಾ ಮೂರರಂತೆ ಕಮಿಷನ್ ವಸೂಲಿ ಮಾಡಿದ್ದಾನೆ.
ಇದನ್ನು ಓದಿ: ಪಿಯು ಸೇವೆಗಳು ಸಕಾಲ ವ್ಯಾಪ್ತಿಗೆ ತರಲು ಚಿಂತನೆ: ಶಿಕ್ಷಣ ಸಚಿವ ಸುರೇಶ್ ಕುಮಾರ್
ಚಾಮರಾಜನಗರದ ಪ್ರಖ್ಯಾತ ವೈದ್ಯರೊಬ್ಬರಿಗು ಈತ 30 ಕೋಟಿ ರೂಪಾಯಿ ಸಾಲ ಕೊಡಿಸುವುದಾಗಿ ಮಧ್ಯವರ್ತಿಗಳ ಮೂಲಕ ಮುಂಗಡವಾಗಿ 20 ಲಕ್ಷ ರೂಪಾಯಿ ಕಮಿಷನ್ ಪಡೆದು ಟೋಪಿ ಹಾಕಿದ್ದಾನೆ. ಕೆಲ್ಲಂಬಳ್ಳಿಯ ರೈತರೊಬ್ಬರಿಗೆ ಸಾಲ ಕೊಡಿಸುವುದಾಗಿ 10 ಲಕ್ಷ ರೂಪಾಯಿ ಕಮಿಷನ್ ಪಡೆದು ವಂಚಿಸಿದ್ದಾನೆ. ಸುಲಭವಾಗಿ ಸಾಲ ಸಿಗುತ್ತದೆ ಎಂಬ ಆಸೆಯಿಂದ ಈತನ ಮಾತಿಗೆ ಮರುಳಾಗಿ ಮೋಸ ಹೋಗಿದ್ದೇವೆ ಎಂದು ಅರಿತ ಗ್ರಾಹಕರು ಕೊಳ್ಳೇಗಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವ್ಯಾಪಾರ ಮಾಡಲು ಸಾಲ ಸಿಗುತ್ತೆ ಅಂತಾ ನಂಬಿಕೊಂಡಿದ್ವಿ. ಆರು ತಿಂಗಳಾದರೂ ನಮಗೆ ಯಾವ ಸಾಲವನ್ನು ಕೊಡಿಸಲಿಲ್ಲ. ಕೇಳಿದರೆ ಇಂದು ನಾಳೆ ಎನ್ನುತ್ತಾ ದಿನ ಸಬೂಬು ಹೇಳುತ್ತಿದ್ದಾರೆ. ಒಂದು ಕಡೆ ನಮಗೆ ಸಾಲವನ್ನೂ ಕೊಡಿಸಲಿಲ್ಲ. ನಾವು ಕಟ್ಟಿರುವ ಡೆಪಾಸಿಟ್ ಹಣ ವಾಪಸ್ ಕೊಡಿ ಅಂದ್ರೆ ಅದನ್ನು ಕೊಡ್ತಿಲ್ಲ ಎಂದು ಮೋಸ ಹೋದ ರತ್ನಮ್ಮ ಎಂಬ ಮಹಿಳೆ ತಿಳಿಸಿದರು.
ವರದಿ; ಎಸ್.ಎಂ.ನಂದೀಶ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ