ಸಾರಾಯಿ ಬಿಡಿಸಿದವರಿಗೆ ದೊಡ್ಡ ರೋಗ ಬರ್ಲಿ: ಅಂಬಾಮಠದಲ್ಲಿ 2 ಹರಕೆ ಪುಟಗಳು ಈಗ ವೈರಲ್

ರಾಯಚೂರಿನ ಸಿಂಧನೂರಿನ ಸೋಮಲಾಪುರದಲ್ಲಿರುವ ಅಂಬಾಮಠದಲ್ಲಿ ದೇವರ ಹುಂಡಿಯಲ್ಲಿ ಹಣ, ಒಡವೆಗಳ ಜೊತೆ ಭಕ್ತನೊಬ್ಬನ ಎರಡು ಹರಕೆ ಪತ್ರಗಳೂ ಇವೆ. ಈತ ವಿಚಿತ್ರ ಬೇಡಿಕೆಗಳನ್ನ ಮಾಡಿರುವ ಈ ಪತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ರಾಯಚೂರು ಸಿಂಧನೂರಿನಲ್ಲಿರುವ ಅಂಬಾಮಠ

ರಾಯಚೂರು ಸಿಂಧನೂರಿನಲ್ಲಿರುವ ಅಂಬಾಮಠ

  • Share this:
ರಾಯಚೂರು: ಕಷ್ಟ ಬಂದಾಗ ವೆಂಕಟರಮಣ ಎನ್ನುತ್ತಾರೆ. ದೇವರಿಗೆ ತರಹೇವಾರಿ ಹರಕೆ ಹೊರುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಭಕ್ತ ತನ್ನ ದೇವರಿಗೆ ವಿಶಿಷ್ಟ ಹರಕೆಗಳನ್ನ ಸಲ್ಲಿಸಿದ್ದಾನೆ. ಈ ಹರಕೆಗಳನ್ನು ನೋಡಿದರೆ ಎಲ್ಲರಿಗೂ ಅಚ್ಚರಿಯಾಗುತ್ತದೆ. ತನಗೆ ಎಲ್ಲವೂ ಸಿಗಬೇಕು, ತನಗೆ ಕಾಟ ಕೊಡುವವರಿಗೆ ಕಷ್ಟ ಕೊಡಬೇಕು ಎಂಬಿತ್ಯಾದಿ ಎರಡು ಪುಟಗಳಲ್ಲಿ ಹಲವು ಹರಕೆಗಳನ್ನ ಬರೆದು ದೇವರ ಹುಂಡಿಗೆ ಹಾಕಿದ್ದಾನೆ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸೋಮಲಾಪುರದಲ್ಲಿರುವ ಸಿದ್ದಪರ್ವತ ಎಂದು ಕರೆಯುವ ಅಂಬಾಮಠವು ಈ ಭಾಗದ ಆರಾದ್ಯ ದೇವರು. ಅಂಬಾಮಠಕ್ಕೆ ಕರ್ನಾಟಕ, ಆಂಧ್ರ, ಮಹಾರಾಷ್ಟ್ರದಿಂದ‌ ಲಕ್ಷಾಂತರ ಭಕ್ತರು ಇದ್ದಾರೆ. ಬಂದ ಭಕ್ತರು ದೇವರಿಗೆ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಹರಕೆ ಸಲ್ಲಿಸುತ್ತಾರೆ. ದೇವರ ಹುಂಡಿಯಲ್ಲಿ ತಮ್ಮ ಶಕ್ತ್ಯಾನಾಸಾರ ದೇವರಿಗೆ ಧನ ಕನಕ ಹಾಕುತ್ತಾರೆ. ಅದರಂತೆ ಅಂಬಾಮಠದಲ್ಲಿಯೂ ಭಕ್ತರ ಹಣ ಹಾಕಿದ್ದು ಒಂದು ಕಡೆಯಾದರೆ, ಈ ಒಬ್ಬ ಭಕ್ತ ತನ್ನ ವಿಶಿಷ್ಠ ಬೇಡಿಕೆಯನ್ನು ಎರಡು ಪುಟಗಳಲ್ಲಿ ಬರೆದು ಹುಂಡಿಯಲ್ಲಿ ಹಾಕಿದ್ದಾನೆ.

ಒಂದು ಪತ್ರದಲ್ಲಿ ತನಗೆ ಈ ಬಾರಿ ಬಂಡಿ ಸಾರಾಯಿ ಸವಾಲ್ ಆಗಬೇಕು. ನನ್ನ ವಿರೋಧಿಗಳು 5 ಲಕ್ಷಕ್ಕಿಂತ ಕಡಿಮೆ ಸವಾಲ್ ಕೂಗಬೇಕು, ಮಾರ್ಚ್ 31 ರೊಳಗಾಗಿ ತನಗೆ 12 ಲಕ್ಷ ರೂಪಾಯಿ ಸಿಗಬೇಕು. ತನಗೆ ಭವ್ಯವಾದ ಕಟ್ಟಡ ಕಟ್ಟುವಂತೆ ಹಣ ನೀಡಮ್ಮ ತಾಯಿ. ಸಾರಾಯಿ ಸವಾಲ್ ಕೂಗುವಾಗ ನನ್ನ ವಿರೋಧಿಗಳಿಗೆ ಕೂಗದಂತೆ ಮಾಡಿ ಎಂದು ಈತ ಒಂದು ಪತ್ರದಲ್ಲಿ ಬರೆದಿದ್ದಾನೆ. ನನಗೆ ಸಾರಾಯಿ ಕುಡಿಯುವುದನ್ನು ಬಿಡಿಸಿರುವವರಿಗೆ ದೊಡ್ಡ ರೋಗ ಬರಲಿ, ಈ ರೀತಿ ಮಾಡಮ್ಮ ಎಂದೂ ಈತ ಈ ಪತ್ರ ಬರೆದಿದ್ದಾನೆ.

ಇದನ್ನೂ ಓದಿ: ಮತ್ತೆ ಲಾಕ್​ಡೌನ್ ಇಲ್ಲ; ಆದರೆ ಜನರು ಎಚ್ಚರದಿಂದರಬೇಕು: ಆರೋಗ್ಯ ಸಚಿವ ಸುಧಾಕರ್

ಇನ್ನೊಂದು ಪತ್ರದಲ್ಲಿ ತಾನು ಪದವಿ ತರಗತಿಯಲ್ಲಿ ಫಸ್ಟ್ ಕ್ಲಾಸ್ ಬರುವಂತೆ ಮಾಡಮ್ಮ. ನನಗೆ ಮನೆಯ ಹತ್ತಿರದವರು ಬಹಳಷ್ಟು ಕಾಟ ಕೊಡುತ್ತಿದ್ದಾರೆ, ಅವರಿಗೆ ದೊಡ್ಡ ರೋಗ ಬರಲಿ. ನನಗೆ ಯಾವುದೇ ವಿಷಯಗಳು ಬ್ಯಾಕ್ ಉಳಿಯಬಾರದು. ನನಗೆ ಪ್ರೀತಿಸಿದವರು ಸಿಗಲಿ. ಆಕೆಗೆ ಮದುವೆ ಮಾಡಲು ಹುಡುಗ ನೋಡಲು ಬರಬಾರದು, ಈ ರೀತಿಯಾಗಿ ವಿಚಿತ್ರವಾದ ಬೇಡಿಕೆಗಳುಳ್ಳ ಪತ್ರವನ್ನು ಬರೆದು ಹಾಕಿದ್ದಾನೆ.

ಅಂಬಾಮಠದಲ್ಲಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಹುಂಡಿ ಎಣಿಕೆ ಮಾಡಲಾಗುತ್ತದೆ. ಅದರಂತೆ ಇದೇ ಫೆಬ್ರವರಿ 17 ರಂದು ಎಣಿಕೆ ಮಾಡಿದ್ದಾರೆ. ಎಣಿಕೆ ಮಾಡುವಾಗ ಒಟ್ಟು 38 ಲಕ್ಷ ರೂಪಾಯಿ ಹಣವು ಹುಂಡಿಯಲ್ಲಿ ಜಮಾ ಆಗಿದೆ. ಅದರ ಜೊತೆಗೆ ಯಾವುದೇ ವಿಳಾಸ, ಹೆಸರು ಇಲ್ಲದ ಒಬ್ಬ ಅನಾಮಧೇಯ ವ್ಯಕ್ತಿಯ ಎರಡು ಪತ್ರಗಳು ಇವೆ. ಎಣಿಕೆ ಮಾಡುವಾಗ ಸಿಕ್ಕಿರುವ ಈ ಪತ್ರಗಳು ಈಗ ಫುಲ್ ವೈರಲ್ ಆಗಿವೆ.

Two pages of Harake in Ambamatha in Raichur go viral on Social Media
ಅಂಬಾಮಠದ ದೇವರ ಹುಂಡಿಯಲ್ಲಿ ಸಿಕ್ಕ ಭಕ್ತನೊಬ್ಬನ ಹರಕೆ ಪತ್ರಗಳು


ದೇವರಿಗೆ ಸಾಕಷ್ಟು ಮನವಿ ಮಾಡಿಕೊಳ್ಳುವ ಜನರು, ತಮ್ಮ ಇಷ್ಟಾರ್ಥ ಸಿದ್ದಿಗಾಗಿ ದೀಡ್ ನಮಸ್ಕಾರ, ದೇಹ ದಂಡನೆ, ಧನ ಕನಕ ನೀಡುವ ಕಾಲದಲ್ಲಿಯೇ ಕೆಲವರು ನೇರವಾಗಿ ದೇವರಿಗೆ ತಮ್ಮ ಮನದಾಳದ ಹರಕೆಗಳನ್ನು ತೀರಿಸಿ ಎಂದು ಪತ್ರ ಬರೆಯುತ್ತಿದ್ದಾರೆ. ಈ ರೀತಿಯ ಪತ್ರಗಳು ಸಾಕಷ್ಟು ಗಮನ ಸೆಳೆಯುವಂತೆ ಇರುತ್ತವೆ. ಅವುಗಳಲ್ಲಿ ಪ್ರೀತಿ ಪ್ರೇಮದ ಬಗ್ಗೆ ಹೆಚ್ಚಾಗಿರುವುದು ಸ್ವಾಭಾವಿಕ. ಆದರೆ ಇಲ್ಲಿ ಸಿಕ್ಕಿರುವ ಪತ್ರ ತನಗೆ ಒಳ್ಳೆಯದಾಗಬೇಕು, ಸರಾಯಿ ಗುತ್ತಿಗೆ ಸಿಗಬೇಕು, ತನ್ನ ವಿರೋಧಿಗಳಿಗೆ ರೋಗ ಬರಲಿ ಎಂದು ಹಾಕಿರುವುದು ಗಮನ ಸೆಳೆಯುವಂತೆ ಇದೆ. ದೇವಿಯ ಹುಂಡಿಯಲ್ಲಿ ಹಾಕಿರುವ ಈ ಪತ್ರ ದೇವಿಗೆ ಮುಟ್ಟಿತೊ ಇಲ್ಲವೊ ಗೊತ್ತಿಲ್ಲ, ಆದರೆ ಸಾಮಾಜಿಕ ಜಾಲತಾಣಗಳಿಗಂತೂ ಮುಟ್ಟಿದೆ.

ವರದಿ: ಶರಣಪ್ಪ ಬಾಚಲಾಪುರ
Published by:Vijayasarthy SN
First published: