ಎರಡು ಕೊಲೆ ಪ್ರಕರಣ ಬೇಧಿಸಿದ ಕಲಬುರ್ಗಿ ಪೊಲೀಸರು ; ಒಂಬತ್ತು ಆರೋಪಿಗಳ ಬಂಧನ

ನವೆಂಬರ್ 2 ರಂದು ಶಿವಲಿಂಗಪ್ಪ ಭೋಗಶೆಟ್ಟಿ ಎಂಬುವವರ ಬರ್ಬರ ಹತ್ಯೆಯಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ರಾಘವೇಂದ್ರನಗರ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಲಬುರ್ಗಿ(ನವೆಂಬರ್​. 06): ಕಲಬುರ್ಗಿ ನಗರದಲ್ಲಿ ನಡೆದ ಎರಡು ಪ್ರತ್ಯೇಕ ಕೊಲೆ ಪ್ರಕರಣಗಳಿಗೆ ಸಂಬಂಧಿಸಿ ಪೊಲೀಸರು ಒಂಬತ್ತು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಕೈಲಾಶ ನಗರದಲ್ಲಿ ನಡೆದ ಗ್ರಾಮ ಪಂಚಾಯತ್ ಸದಸ್ಯನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿದೆ. ಕಲಬುರ್ಗಿಯ ಎಂ.ಜಿ.ರಸ್ತೆಯಲ್ಲಿ ನಡೆದ ಫಾರ್ಮಸಿ ವಿದ್ಯಾರ್ಥಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಬಂಧಿಸಿರೋದಾಗಿ ಡಿಸಿಪಿ ಕಿಶೋರ್ ಬಾಬು ಮಾಹಿತಿ ನೀಡಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ಕಲಬುರ್ಗಿಯಲ್ಲಿ ಕೊಲೆ, ಸುಲಿಗೆ, ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಅದರಲ್ಲಿಯೂ ಕೊಲೆ ಪ್ರಕರಣಗಳು ಎಗ್ಗಿಲ್ಲದೆ ನಡೆದಿದ್ದು, ನಾಗರೀಕರನ್ನು ಭೀತಿಗೊಳಿಸಿವೆ. ಇದು ಹೀಗಿರುವಾಗಲೇ ಕಲಬುರ್ಗಿ ನಗರದಲ್ಲಿ ನಡೆದ ಎರಡು ಪ್ರತ್ಯೇಕ ಕೊಲೆ ಪ್ರಕರಣಗಳಿಗೆ ಸಂಬಂಧಿಸಿ ಪೊಲೀಸರು ಒಂಬತ್ತು ಜನ ಆರೋಪಿಗಳನ್ನು ಬಂಧಿಸಿದ್ದಾರೆ.  ನವೆಂಬರ್ 2 ರಂದು ಶಿವಲಿಂಗಪ್ಪ ಭೋಗಶೆಟ್ಟಿ ಎಂಬುವವರ ಬರ್ಬರ ಹತ್ಯೆಯಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ರಾಘವೇಂದ್ರನಗರ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಶರಣಬಸಪ್ಪ @ ಶರಣು ಮಾದಗುಂಡ, ಯೋಗಿನಾಥ್ ಮಾದಗುಂಡ, ಸಾಯಿನಾಥ ಮಾದಗುಂಡ ಹಾಗೂ ಅಶೋಕ ರಾಜಾಪುರ ಎಂದು ಗುರುತಿಸಲಾಗಿದೆ. ಬಂಧಿತರೆಲ್ಲರೂ ಆಳಂದ ತಾಲೂಕಿನ ಕಡಗಂಚಿ ಗ್ರಾಮದವರಾಗಿದ್ದು, ಜಮೀನು ವಿವಾದದ ಹಿನ್ನೆಲೆಯಲ್ಲಿ ಕಡಗಂಚಿ ಗ್ರಾಮ ಪಂಚಾಯತ್​ ಸದಸ್ಯನಾಗಿದ್ದ ಶಿವಲಿಂಗಪ್ಪನ ಹತ್ಯೆ ಮಾಡಿದ್ದರು. ಉಳಿದ ಆರೋಪಿಗಳ ಬಂಧನಕ್ಕೂ ಜಾಲ ಬೀಸಲಾಗಿದೆ ಎಂದು ಕಲಬುರ್ಗಿ ಡಿಸಿಪಿ ಕಿಶೋರ್ ಬಾಬು ತಿಳಿಸಿದ್ದಾರೆ.

ಮತ್ತೊಂದೆಡೆ ಫಾರ್ಮಸಿ ವಿದ್ಯಾರ್ಥಿಯ ಕೊಲೆ ಪ್ರಕರಣವನ್ನೂ ಪೊಲೀಸರು ಬೇಧಿಸಿದ್ದಾರೆ. ಎಂ.ಬಿ.ನಗರ ಠಾಣೆ ಪೊಲೀಸರಿಂದ ಐವರು ಆರೋಪಿಗಳ ಬಂಧನವಾಗಿದೆ. ಬಂಧಿತ ಆರೋಪಿಗಳನ್ನು ಶಾಬಾಸ್, ಸೋಹೆಲ್, ನದೀಮ್, ಜುಬೇರ್ ಹಾಗೂ ಸಮೀರ್ ಎಂದು ಗುರುತಿಸಲಾಗಿದೆ. ಕಲಬುರ್ಗಿಯ ಎಂ.ಜಿ.ರಸ್ತೆಯಲ್ಲಿನ ನಿರ್ಮಾಣ ಹಂತಕ ಕಟ್ಟಡದ ಬಳಿ ಅಕ್ಟೋಬರ್ 9 ರಂದು ವಿದ್ಯಾರ್ಥಿಯ ಕೊಲೆ ನಡೆದಿತ್ತು.

ಇದನ್ನೂ ಓದಿ : ವಿನಯ್ ಕುಲಕರ್ಣಿ ಬೆಂಬಲಕ್ಕೆ ನಿಂತಿರುವ ಮಠಾಧೀಶರ ವಿರುದ್ಧ ಹರಿಹಾಯ್ದ ಯೋಗೇಶ್‌ಗೌಡ ಕುಟುಂಬಸ್ಥರು

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿದಾಗ ಗೆಳೆಯರಿಂದಲೇ ಸಲಾಂ ದಸ್ತಗೀರ್ ಎಂಬುವನ ಕೊಲೆ ನಡೆದಿರುವುದು ಖಾತ್ರಿಯಾಗಿತ್ತು. ನಿರ್ಮಾಣ ಹಂತದ ಕಟ್ಟಡದ ಮೇಲಿಂದ ಗೆಳೆಯರು ದಬ್ಬಿದ್ದರಿಂದ ಬಿದ್ದು ದಸ್ತಗೀರ್ ಸಾವನ್ನಪ್ಪಿದ್ದ. ಕುಡಿದ ನಶೆಯಲ್ಲಿ ದಸ್ತಗೀರ್ ನನ್ನು ಮೇಲಿಂದ ದಬ್ಬಿದ್ದರು. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಕಲಬುರ್ಗಿ ಡಿಸಿಪಿ ಕಿಶೋರ್ ಬಾಬು ತಿಳಿಸಿದ್ದಾರೆ.

ಎರಡೂ ಪ್ರಕರಣಗಳನ್ನು ಪ್ರತ್ಯೇಕವಾಗಿ ದಾಖಲಿಸಿಕೊಂಡಿರುವ ರಾಘವೇಂದ್ರ ನಗರ ಹಾಗೂ ಎಂ.ಬಿ.ನಗರ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಗ್ರಾ.ಪಂ. ಸದಸ್ಯನ ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಜಾಲ ಬೀಸಲಾಗಿದೆ.
Published by:G Hareeshkumar
First published: