HOME » NEWS » District » TWO MAIN REASON ALONG WITH MAHARASHTRA RAIN CAUSED BHEEMA RIVER FLOOD IN KARNATAKA MVSV HK

ಬಸವನಾಡಿನಲ್ಲಿ ಭೀಮಾ ಪ್ರವಾಹ ಉಲ್ಬಣಿಸಲು ಕಾರಣವೇನು ಗೊತ್ತಾ? : ಸರಕಾರ ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯದಲ್ಲಿ ಕಷ್ಟ

ಕರ್ನಾಟಕ-ಮಹಾರಾಷ್ಟ್ರ ಅಧಿಕಾರಿಗಳ ಸಮಿತಿ ರಚಿಸಬೇಕಿದೆ. ಮಳೆಗಾಲದಲ್ಲಿ ಸುರಿಯುವ ಮಳೆ, ಹರಿಯುವ ನೀರಿನ ಪ್ರಮಾಣದ ಕುರಿತು ಪರಸ್ಪರ ಮಾಹಿತಿ ವಿನಿಮಯದ ಮೂಲಕ ಭೀಮಾ ನದಿಯಲ್ಲಿ ಪ್ರವಾಹವನ್ನು ನಿಯಂತ್ರಿಸಬಹುದಾಗಿದೆ.

news18-kannada
Updated:October 20, 2020, 7:16 AM IST
ಬಸವನಾಡಿನಲ್ಲಿ ಭೀಮಾ ಪ್ರವಾಹ ಉಲ್ಬಣಿಸಲು ಕಾರಣವೇನು ಗೊತ್ತಾ? : ಸರಕಾರ ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯದಲ್ಲಿ ಕಷ್ಟ
ಭೀಮಾ ನದಿ ಪ್ರವಾಹ
  • Share this:
ವಿಜಯಪುರ(ಅಕ್ಟೋಬರ್​. 20): ಭೀಮಾ ನದಿಯಲ್ಲಿ ಹಿಂದೆಂದೂ ಕಂಡರಿಯದ ಪ್ರವಾಹ ಈ ಬಾರಿ ಉಂಟಾಗಿದೆ. ವಿಜಯಪುರ ಜಿಲ್ಲೆಯಿಂದ ಆರಂಭವಾದ ಭೀಮಾ ನದಿಯ ಪ್ರವಾಹ ಇದೀಗ ಕಲಬುರಗಿ, ಯಾದಗಿರಿ ಸೇರಿದ ರಾಯಚೂರು ಜಿಲ್ಲೆಯ ವರೆಗೂ ವ್ಯಾಪಿಸುತ್ತಿದೆ. ಈ ಪ್ರವಾಹದಿಂದಾಗಿ ಜನ, ಜಾನುವಾರು, ಬೆಳೆ, ಆಸ್ತಿಪಾಸ್ತಿ ಹಾನಿಯಾಗಿದೆ. ವಿಜಯಪುರ ಜಿಲ್ಲೆಯೊಂದರಲ್ಲಿಯೇ ಸುಮಾರು 1000 ಕೋಟಿ ರೂಪಾಯಿ ವರೆಗೆ ಬೆಳೆ ಹಾನಿಯಾಗಿದೆ.  ಇನ್ನು ಈ ಸಂದರ್ಭದಲ್ಲಿ ಉಂಟಾದ ಆಸ್ತಿಪಾಸ್ತಿ ಹಾನಿ ಇನ್ನೂ ನಿಖರವಾಗಿ ಗೊತ್ತಾಗಿಲ್ಲ. ಭೀಮಾ ನದಿಯಲ್ಲಿ ಪ್ರವಾಹ ಉಂಟಾಗಲು ಮಹಾರಾಷ್ಟ್ರದಲ್ಲಿ ಸುರಿದ ಧಾರಾಕಾರ ಮಳೆ ಮತ್ತು ಕರ್ನಾಟದಲ್ಲಿ ಸುರಿದ ಮಳೆ ಎಂದೇ ಬಹುತೇಕರು ನಂಬಿದ್ದಾರೆ. ಆದರೆ, ಈ ಪ್ರವಾಹ ಹೆಚ್ಚಾಗಲು ಎರಡು ಪ್ರಮುಖ ಅಂಶಗಳು ಕಾರಣ ಎಂಬುದು ನ್ಯೂಸ್ 18 ಕನ್ನಡಕ್ಕೆ ತಿಳಿದು ಬಂದಿದೆ.

ಸೊನ್ನ ಬ್ಯಾರೇಜ್ ನಿರ್ವಹಣೆಯಲ್ಲಿ ವೈಫಲ್ಯ

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸೊನ್ನ ಹಾಗೂ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ದೇವಣಗಾಂವ ಗ್ರಾಮಗಳ ವ್ಯಾಪ್ತಿಯಲ್ಲಿ ಭೀಮಾ ನದಿಗೆ ಸೊನ್ನ ಬ್ಯಾರೇಜ್ ನಿರ್ಮಿಸಲಾಗಿದೆ. ಈ ಬ್ಯಾರೇಜ್ ನಿರ್ಮಾಣದ ನಂತರ ವಿಜಯಪುರ ಜಿಲ್ಲೆಯಲ್ಲಿ ಭೀಮಾ ನದಿಯಲ್ಲಿ ಪ್ರವಾಹ ಹೆಚ್ಚಾಗುತ್ತಿದೆ. ಈ ಬ್ಯಾರೇಜಿನ ಹಿನ್ನೀರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ತಾರಾಪುರ ಗ್ರಾಮಕ್ಕೆ ಅತೀ ಹೆಚ್ಚು ಕಂಟಕವಾಗಿದೆ.

ಈ ಬಾರಿ ಭೀಮಾ ನದಿಯಲ್ಲಿ ಭಾರಿ ಪ್ರವಾಹ ಉಂಟಾಗಲು ಪ್ರಮುಖ ಕಾರಣ ಮಹಾರಾಷ್ಚ್ರದಲ್ಲಿ ಸುರಿದ ಧಾರಾಕಾರ ಮಳೆ ಎಂದೇ ಬಹುತೇಕರು ನಂಬಿದ್ದಾರೆ. ಆದರೆ, ಇದರ ಜೊತೆಯಲ್ಲಿಯೇ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳ ವೈಫಲ್ಯವೂ ಕಾರಣವಾಗಿದೆ. ಸೊನ್ನ ಬ್ಯಾರೇಜಿನಲ್ಲಿ 29 ಗೇಟುಗಳಿವೆ. ಅವುಗಳಲ್ಲಿ 8 ಗೇಟುಗಳು ಮೇಲಕ್ಕೆ ಎತ್ತಲಾಗದೇ ಬಹು ವರ್ಷಗಳಿಂದ ಸಿಲುಕಿಕೊಂಡಿವೆ. ಈ ಬಾರಿ ಪ್ರವಾಹ ಉಂಟಾದಾಗ ಇಲ್ಲಿನ ಅಧಿಕಾರಿಗಳಿಗೆ ಅದರ ಅಂದಾಜು ಇರಲೇ ಇಲ್ಲ.

ನಿಖರವಾಗಿ ಹೇಳುವ ಬದಲು ಬಹುತೇಕ ಒಂದು ಅಂದಾಜಿನಂತೆ ನೀರಿನ ಒಳ ಮತ್ತು ಹೊರ ಹರಿವಿನ ಮಾಹಿತಿ ನೀಡಿದರು ಎಂಬ ಆರೋಪವಿದೆ. ಪ್ರವಾಹದ ಮುನ್ಸೂಚನೆ ಅರಿತು ಒಂದೆರಡು ದಿನ ಮುಂಚಿತವಾಗಿ ಕ್ರಸ್ಟ್​​ ಗೇಟುಗಳನ್ನು ತೆರೆದು ನೀರನ್ನು ಬಿಟ್ಟಿದ್ದರೆ ಸೊನ್ನ ಬ್ಯಾರೇಜಿನ ಹಿನ್ನೀರಿನಿಂದ ವಿಜಯಪುರ ಜಿಲ್ಲೆಯ ಚಡಚಣ, ಇಂಡಿ ಮತ್ತು ಸಿಂದಗಿ ತಾಲೂಕುಗಳಲ್ಲಿ ಹಿನ್ನೀರಿನಿಂದ ಇಷ್ಟೋಂದು ಆಸ್ತಿಪಾಸ್ತಿ ಹಾನಿಯಾಗುತ್ತಿರಲಿಲ್ಲ ಎಂದು ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾ.ಯಗೌಡ ವಿ. ಪಾಟೀಲ ಹೇಳಿರುವುದು ಸತ್ಯಕ್ಕೆ ಬಹುತೇಕ ಹತ್ತಿರವಾಗಿದೆ. ಇಲ್ಲಿ ಈ ಬ್ಯಾರೇಜಿನ ಅಧಿಕಾರಿಗಳ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಕರ್ನಾಟಕ-ಮಹಾರಾಷ್ಟ್ರಗಳ ಮಧ್ಯೆ ಸಮನ್ವಯದ ಕೊರತೆ :

ಇನ್ನು ಭೀಮಾ ಪ್ರವಾಹ ಹೆಚ್ಚಾಗಲು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಮಧ್ಯೆ ಸಮನ್ವಯತೆಯ ಕೊರತೆ ಕಂಡು ಬಂದಿದೆ. ಕಳೆದ ವರ್ಷ ಕೃಷ್ಣಾ ನದಿಯಿಂದ ಕರ್ನಾಟಕದಲ್ಲಿ ಪ್ರವಾಹ ಉಂಟಾದಾಗ ಉಭಯ ರಾಜ್ಯಗಳ ಮಧ್ಯೆ ಅಧಿಕಾರಿಗಳ ಸಮಿತಿಯೊಂದನ್ನು ರಚಿಸಿ ಪ್ರವಾಹ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಇದರಿಂದಾಗಿ ಈ ವರ್ಷ ಕೃಷ್ಣಾ ನದಿಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದರೂ ಕಳೆದ ವರ್ಷದಂತೆ ಪ್ರವಾಹ ಪರಿಸ್ಥಿತಿ ಎದುರಾಗಲಿಲ್ಲ.ಇದನ್ನೂ ಓದಿ : ಭೀಮಾ ನದಿಯ ಪ್ರವಾಹದಲ್ಲಿ ಏರಿಳಿತ ; ಭೀತಿಯಿಂದ ಊರು ತೊರೆಯುತ್ತಿರುವ ಜನ

ಇದೇ ರೀತಿಯ ಸಮನ್ವಯತೆ ಸಾಧಿಸಲು ಭೀಮಾ ನದಿ ಪ್ರವಾಹದ ವಿಚಾರದಲ್ಲಿಯೂ ಕರ್ನಾಟಕ-ಮಹಾರಾಷ್ಟ್ರ ಅಧಿಕಾರಿಗಳ ಸಮಿತಿ ರಚಿಸಬೇಕಿದೆ. ಇದರಿಂದ ಮಳೆಗಾಲದಲ್ಲಿ ಸುರಿಯುವ ಮಳೆ, ಹರಿಯುವ ನೀರಿನ ಪ್ರಮಾಣದ ಕುರಿತು ಪರಸ್ಪರ ಮಾಹಿತಿ ವಿನಿಮಯದ ಮೂಲಕ ಭೀಮಾ ನದಿಯಲ್ಲಿ ಪ್ರವಾಹವನ್ನು ನಿಯಂತ್ರಿಸಬಹುದಾಗಿದೆ.

ಸರಕಾರ ಈ ಕೂಡಲೇ ಮಹಾರಾಷ್ಚ್ರದೊಂದಿಗೆ ಸಮನ್ವಯತೆ ಸಾಧಿಸಲು ಕ್ರಮ ಕೈಗೊಳ್ಳಬೇಕು ಎಂಬುದು ನ್ಯೂಸ್ 18 ಕನ್ನಡದ ಆಶಯವಾಗಿದೆ.
Published by: G Hareeshkumar
First published: October 20, 2020, 7:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories