• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಗದಗಿನಲ್ಲಿ ಕಾಡಿನ ರಾಜನ ಘರ್ಜನೆ; ಬಿಂಕದಕಟ್ಟಿ ಜೂಗೆ ಅರ್ಜುನ, ಧರ್ಮ ಎಂಬ ಎರಡು ಗಂಡು ಸಿಂಹಗಳ ಆಗಮನ!

ಗದಗಿನಲ್ಲಿ ಕಾಡಿನ ರಾಜನ ಘರ್ಜನೆ; ಬಿಂಕದಕಟ್ಟಿ ಜೂಗೆ ಅರ್ಜುನ, ಧರ್ಮ ಎಂಬ ಎರಡು ಗಂಡು ಸಿಂಹಗಳ ಆಗಮನ!

ಬಿಂಕದಕಟ್ಟಿ ಮೃಗಾಲಯಕ್ಕೆ ತರಲಾದ ಸಿಂಹ.

ಬಿಂಕದಕಟ್ಟಿ ಮೃಗಾಲಯಕ್ಕೆ ತರಲಾದ ಸಿಂಹ.

ಉತ್ತರ ಕರ್ನಾಟಕ ಪ್ರಾಣಿ ಸಂಗ್ರಹಾಲಯದಲ್ಲಿ ಈಗ ಸಿಂಹಗಳ ಘರ್ಜನೆ ಆರಂಭವಾಗಿದೆ. ವಿಜಯನಗರ ಜಿಲ್ಲೆಯ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿ ಸಿಂಹಗಳ ಸಂತತಿ ಆರಂಭವಾಗಿದೆ. ಅದೇ ರೀತಿ  ಬೆಳಗಾವಿ ನಗರದ ಭೂತರಾಮನಟ್ಟಿಯಲ್ಲಿರುವ ಮೃಗಾಲಯಕ್ಕೂ ಸಿಂಹಗಳು ಆಗಮಿಸಿವೆ.

  • Share this:

ಗದಗ: ಉತ್ತರ ಕರ್ನಾಟಕ ಭಾಗದಲ್ಲಿ ಜೋಡಿ ಹುಲಿಗಳನ್ನು ಹೊಂದಿರುವ ಖ್ಯಾತಿ ಪಡೆದಿರುವ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯಕ್ಕೆ ಜೋಡಿ ಸಿಂಹಗಳ ಆಗಮನವಾಗಿದೆ. ಇದರೊಂದಿಗೆ ಪ್ರಾಣಿ ಸಂಗ್ರಹಾಲಯ ಮತ್ತಷ್ಟು ಆಕರ್ಷಣೀಯವಾಗಿದೆ. ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯಕ್ಕೆ ಸಿಂಹಗಳ ಹಸ್ತಾಂತರಕ್ಕೆ ಕೇಂದ್ರ ಮೃಗಾಲಯ ಪ್ರಾಧಿಕಾರ ಒಪ್ಪಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಬನ್ನೆರುಘಟ್ಟ ಜೈವಿಕ ಉದ್ಯಾನದಿಂದ ಎರಡು ಸಿಂಹಗಳನ್ನು ಬಿಂಕದಕಟ್ಟಿ ಮೃಗಾಲಯಕ್ಕೆ ಹಸ್ತಾಂತರ ಮಾಡಿದ್ದಾರೆ. ಬನ್ನೆರುಘಟ್ಟ ಜೈವಿಕ ಉದ್ಯಾನದಲ್ಲೇ ಹುಟ್ಟಿ ಬೆಳೆದಿದ 11 ವರ್ಷದ ಧರ್ಮ ಮತ್ತು ಅರ್ಜುನ ಎಂಬ ಹೆಸರಿನ ಎರಡು ಗಂಡು ಸಿಂಹಗಳು ಗದಗನ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯದ ವಿಶೇಷಯ ಅಥಿತಿಗಳಾಗಿ ಆಗಮಿಸಿವೆ.


ಸಿಂಹಗಳ ನೈಸರ್ಗಿಕ ಆವಾಸ ಸ್ಥಾನದ ಮಾದರಿಯಲ್ಲೇ ಬಿಂಕದಕಟ್ಟಿ ಮೃಗಾಲಯದಲ್ಲಿ ಪಂಜರವನ್ನು ರೂಪಿಸಲಾಗಿದೆ. 1000 ಚದರ್ ಮೀಟರ್ ಸ್ಥಳಾವಕಾಶದಲ್ಲಿ ಸಿಂಹಗಳು ಸ್ವಚ್ಛಂದವಾಗಿ ವಿಹರಿಸಲು ಅನುಕೂಲವಾಗುವಂಥ ವಾತಾವರಣ, ನೀರಿನ ಹೊಂಡ, ಕಲ್ಲಿನ ಬಂಡೆಗಳು, ಗಿಡ-ಮರಗಳು ಇರುವಂತೆ ವಿನ್ಯಾಸಗೊಳಿಸಲಾಗಿದೆ.


ಬನ್ನೆರುಘಟ್ಟ ಜೈವಿಕ ಉದ್ಯಾನದಲ್ಲೆ ಹುಟ್ಟಿ ಬೆಳೆದಿದ್ದರೂ ಇಲ್ಲಿನ ಪರಿಸರಕ್ಕೆ ಹೊಂದಿಕೊಳ್ಳುವವರೆಗೆ ಸಿಂಹಗಳನ್ನು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸುವುದಿಲ್ಲ. ಅಲ್ಲದೇ ಕೇಂದ್ರ ಮೃಗಾಲಯ ಪ್ರಾಧಿಕಾರದ ಮಾರ್ಗಸೂಚಿ ಅನ್ವಯ 15 ದಿನದಿಂದ 30 ದಿನಗಳವರೆಗೆ ತಜ್ಞ ವೈದ್ಯರು ಮತ್ತು ಅವುಗಳನ್ನು ನೋಡಿಕೊಳ್ಳುವ ಸಿಬ್ಬಂದಿ ನಿಗಾದಲ್ಲಿಟ್ಟು, ಇಲ್ಲಿನ ಪರಿಸರಕ್ಕೆ ಹೊಂದಿಕೊಂಡ ನಂತರ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗುವುದು ಎಂದು ಗದಗ ಡಿಎಚ್ಓ ಸೂರ್ಯಸೇನ್ ಅವರು ತಿಳಿಸಿದ್ದಾರೆ.


ಎರಡು ವರ್ಷದ ಹಿಂದಷ್ಟೇ ಜೋಡಿ ಹುಲಿಗಳು ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯದ ಆಕರ್ಷಣೆಯ ಕೇಂದ್ರ ಬಿಂದುಗಳಾಗಿದ್ದವು. ಹುಲಿಗಳ ಆಗಮನದ ನಂತರ ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲೂ ಏರಿಕೆಯಾಗಿತ್ತು. ಇದರಿಂದ ಪ್ರೇರಿತರಾಗಿ ಆಸ್ಟಿಚ್ ಸೇರಿದಂತೆ ವಿದೇಶಿ ಪಕ್ಷಿಗಳನ್ನು ತರಲಾಯಿತು. ಅದಾದ ನಂತರ ಹೈನಾಗಳು ಮೃಗಾಲಯ ಸೇರಿದ್ದು, ಈಗ ಜೋಡಿ ಸಿಂಹಗಳು ಮೃಗಾಲಯವನ್ನು ಮತ್ತಷ್ಟು ಆಕರ್ಷಣೀಯಗೊಳಿಸುವುದು ನಿಶ್ಚಿತ ಎನ್ನುತ್ತಾರೆ ವನ್ಯಜೀವಿ ಪ್ರಿಯರು.


ಇದನ್ನು ಓದಿ: ಪ್ರಧಾನಿಯೊಂದಿಗೆ ಪರೀಕ್ಷಾ ಪೇ ಚರ್ಚಾಗೆ ಆಯ್ಕೆಯಾದ ವಿದ್ಯಾರ್ಥಿ ಭೇಟಿ ಮಾಡಿದ ಶಿಕ್ಷಣ ಸಚಿವ ಸುರೇಶ್‌ ಕುಮಾರ್


ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯದಲ್ಲಿ ಕತ್ತೆ ಕಿರುಬ ವೀಕ್ಷಣೆಗೆ ಮಾಡಿರುವ ಗಾಜಿನ ಪರದೆ ರೀತಿಯಲ್ಲೇ ಸಿಂಹಗಳನ್ನು ಸಹ ಗಾಜಿನ ಮೂಲಕ ವೀಕ್ಷಿಸಬಹುದಾಗಿದೆ. ಮೂರು ಲೇಪನ ಹೊಂದಿರುವ 39 ಎಂಎಂ ಅಳತೆಯ ಮೂರು ಗಾಜುಗಳನ್ನು ಚಂಡಿಘಡದಿಂದ ತರಿಸಲಾಗುತ್ತಿದ್ದು, ವಾರದಲ್ಲಿ ಗಾಜುಗಳ ಅಳವಡಿಕೆ ಪೂರ್ಣಗೊಳ್ಳಲಿದೆ. ಆ ಮೂಲಕ ಸಿಂಹಗಳನ್ನು ತಂತಿ ಬೇಲಿಯ ಅಡೆತಡೆ ಇಲ್ಲದೇ ಮುಕ್ತವಾಗಿ ನೋಡಬಹುದು ಎನ್ನುತ್ತಾರೆ ಪ್ರಾಣಿ ಸಂಗ್ರಹಾಲಯದ ಅಧಿಕಾರಿಗಳು.


ಉತ್ತರ ಕರ್ನಾಟಕ ಪ್ರಾಣಿ ಸಂಗ್ರಹಾಲಯದಲ್ಲಿ ಈಗ ಸಿಂಹಗಳ ಘರ್ಜನೆ ಆರಂಭವಾಗಿದೆ. ವಿಜಯನಗರ ಜಿಲ್ಲೆಯ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿ ಸಿಂಹಗಳ ಸಂತತಿ ಆರಂಭವಾಗಿದೆ. ಅದೇ ರೀತಿ  ಬೆಳಗಾವಿ ನಗರದ ಭೂತರಾಮನಟ್ಟಿಯಲ್ಲಿರುವ ಮೃಗಾಲಯಕ್ಕೂ ಸಿಂಹಗಳು ಆಗಮಿಸಿವೆ. ಸದ್ಯ ಗದಗ ಸಮೀಪದ ಬಿಂಕದಕಟ್ಟಿ ಮೃಗಾಲಯದಕ್ಕೂ ಸಿಂಹಗಳ ಆಗಮನವಾಗಿದ್ದು, ಸಾರ್ವಜನಿಕರ ವೀಕ್ಷಣೆಗೆ ಶೀಘ್ರವೇ ಮುಕ್ತವಾಗಲಿವೆ.

  • ವರದಿ: ಸಂತೋಷ ಕೊಣ್ಣೂರ

First published: