ನಾಪತ್ತೆಯಾಗಿದ್ದ ಮಾಜಿ ಶಾಸಕರ ಮೊಮ್ಮಕ್ಕಳು ಶವವಾಗಿ ಪತ್ತೆ; ವಾಮಾಚಾರಕ್ಕೆ ಬಲಿಯಾಗಿರುವ ಶಂಕೆ

ಮಾಜಿ ಶಾಸಕ ಹಂಪಯ್ಯ ನಾಯಕ್ ಅವರ ಇಬ್ಬರು ಮಕ್ಕಳು ವಾಮಾಚಾರಕ್ಕೆ ಬಲಿಯಾಗಿರುವ ಶಂಕೆ ಇದೆ. ಭಾನುವಾರ ಮಧ್ಯಾಹ್ನ ನಾಪತ್ತೆಯಾಗಿದ್ದ ಈ ಮಕ್ಕಳು ನಿನ್ನೆ ಹಳ್ಳವೊಂದರಲ್ಲಿ ಶವವವಾಗಿ ಪತ್ತೆಯಾಗಿದ್ದರು. ಆ ಜಾಗದಲ್ಲಿ ವಾಮಾಚಾರದ ವಸ್ತುಗಳೂ ಸಿಕ್ಕಿವೆ.

ಸಾವನ್ನಪ್ಪಿದ ಮಾಜಿ ಶಾಸಕ ಹಂಪಯ್ಯ ನಾಯಕ್ ಮೊಮ್ಮಕ್ಕಳು

ಸಾವನ್ನಪ್ಪಿದ ಮಾಜಿ ಶಾಸಕ ಹಂಪಯ್ಯ ನಾಯಕ್ ಮೊಮ್ಮಕ್ಕಳು

  • Share this:
ರಾಯಚೂರು:  ಕಾಣೆಯಾಗಿದ್ದ ರಾಯಚೂರಿನ ಮಾನ್ವಿಯ ಮಾಜಿ ಶಾಸಕ ಹಂಪಯ್ಯ ನಾಯಕ್ ಮೊಮ್ಮಕ್ಕಳು ಶವವಾಗಿ ಪತ್ತೆಯಾಗಿರುವ ಪ್ರಕರಣ ಹಲವಾರು ಅನುಮಾನಗಳನ್ನ ಸೃಷ್ಟಿಸಿದೆ. ಈ ಇಬ್ಬರು ಬಾಲಕರನ್ನ ಕೊಲೆ ಮಾಡಿ ಹಳ್ಳದಲ್ಲಿ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಶವ ಪತ್ತೆಯಾದ ಸ್ಥಳದಲ್ಲಿ ವಾಮಾಚಾರಕ್ಕೆ ಬಳಸುವ ವಸ್ತುಗಳು ಸಿಕ್ಕಿರುವುದು ನಾನಾ ಅನುಮಾನಗಳಿಗೆ ಇನ್ನಷ್ಟು ಪುಷ್ಠಿ ನೀಡಿದೆ. 

ಮಾರ್ಚ್ 7 ಭಾನುವಾರ ಮಧ್ಯಾಹ್ನ 2 ಗಂಟೆ ವೇಳೆ ರಾಯಚೂರಿನ ಸಿರವಾರ ತಾಲೂಕಿನ ಬಲ್ಲಟಗಿ ಗ್ರಾಮದಲ್ಲಿ ಕಾಣೆಯಾಗಿದ್ದ ಮಾಜಿ ಶಾಸಕ ಹಂಪಯ್ಯ ನಾಯಕ್ ಮೊಮ್ಮಕ್ಕಳು ಮರುದಿನ ಬೆಳಗ್ಗೆ, ಅಂದರೆ ನಿನ್ನೆ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆದರೆ, ಇಡೀ ದಿನ ಹಾಗೂ ಬೆಳಗಿನ ಜಾವ 3 ಗಂಟೆವರೆಗೂ ಗ್ರಾಮದಲ್ಲಿ, ಹಳ್ಳದಲ್ಲಿ ಹುಡುಕಿದರೂ ಸಿಗದ ಮಕ್ಕಳು ಬೆಳಿಗ್ಗೆ 10 ಗಂಟೆ ಸುಮಾರಿಗೆ ಹಳ್ಳದಲ್ಲಿ ಪತ್ತೆಯಾಗಿರುವುದು ಅನುಮಾನಗಳಿಗೆ ಕಾರಣವಾಗಿದೆ. 9 ವರ್ಷದ ವರುಣ್ ಹಾಗೂ 5 ವರ್ಷದ ಸಣ್ಣಯ್ಯ ಸಾವನ್ನಪ್ಪಿರುವ ಬಾಲಕರು.

ಹಳ್ಳದಲ್ಲಿ ಮೊಣಕಾಲು ಮಟ್ಟಕ್ಕೆ ನೀರಿದ್ದು ಮಕ್ಕಳು ಈಜಲು ಬಂದೂ ಕೂಡ ಸಾವನ್ನಪ್ಪಿದ್ದಾರೆ ಎನ್ನುವುದು ಸಾಧ್ಯವಿಲ್ಲ ಅಂತ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ಈ ಹಿಂದೆಯೂ ಇದೇ ರೀತಿ ಅನುಮಾನಾಸ್ಪದವಾಗಿ ನಾಲ್ಕು ಮಕ್ಕಳು ಸಾವನ್ನಪ್ಪಿದ್ದಾರೆ. ಈಗ ಪುನಃ ಘಟನೆ ಮರುಕಳಿಸಿರುವುದರಿಂದ ಮಕ್ಕಳ ಸಾವಿನ ಹಿಂದೆ ಬಲವಾದ ಕಾರಣವಿದೆ ಅಂತ ಅನುಮಾನಿಸಲಾಗಿದೆ. ಅಲ್ಲದೆ ಬಾಲಕರ ಶವಪತ್ತೆಯಾದ ಸ್ಥಳದಲ್ಲಿ ವಾಮಾಚಾರಕ್ಕೆ ಬಳಸುವ ವಸ್ತುಗಳು ಪತ್ತೆಯಾಗಿವೆ. ಹೀಗಾಗಿ ಸಿರವಾರ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದ ಅ ಬಾಲಕರ ಕುಟುಂಬ ಕೊಲೆ ಶಂಕೆ ಪ್ರಕರಣ ದಾಖಲಿಸಲು ಮುಂದಾಗಿದೆ. ಪ್ರಭಾವಿ ರಾಜಕಾರಣಿ ಮೊಮ್ಮಕ್ಕಳಿಗೆ ರಕ್ಷಣೆಯಿಲ್ಲದೆ ಹೋದರೆ ಸಾಮಾನ್ಯರ ಗತಿ ಏನು ಅಂತ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಧಾರವಾಡದಲ್ಲಿ ಬಡ್ಡಿ ಹಣಕ್ಕಾಗಿ ಮಗು ಮಾರಾಟ ಮಾಡಿದ ಗ್ಯಾಂಗ್; ಒಂದು ವಾಟ್ಸಾಪ್ ಮೆಸೇಜ್​ನಿಂದ‌ ಅಮ್ಮನ ಸೇರಿತು ಕಂದಮ್ಮ

ಎರಡು ಬಾರಿ ಕಾಂಗ್ರೆಸ್‌ನಿಂದ ಮಾನ್ವಿ ಕ್ಷೇತ್ರಕ್ಕೆ ಶಾಸಕರಾಗಿ ಆಯ್ಕೆಯಾಗಿದ್ದ ಹಂಪಯ್ಯ ನಾಯಕ್ ಸ್ವಗ್ರಾಮ ಬಲ್ಲಟಗಿಯಲ್ಲೇ ವಾಸವಾಗಿದ್ದಾರೆ. ಹಂಪಯ್ಯ ನಾಯಕ್ ಪುತ್ರ ಶಿವಾನಂದ ಅವರ ಮಕ್ಕಳಾದ ವರುಣ್ ಹಾಗೂ ಸಣ್ಣಯ್ಯ ಊರಜಾತ್ರೆಗೆ ಮಾನ್ವಿಯಿಂದ ಬಂದಿದ್ದರು. ಮಧ್ಯಾಹ್ನ ವೇಳೆ ಮನೆಯ ಹೊರಗಡೆ ಆಟವಾಡುತ್ತಿದ್ದ ಬಾಲಕರು ಏಕಾಏಕಿ ನಾಪತ್ತೆಯಾಗಿದ್ದರು. ಸಿರವಾರ ಹಾಗೂ ಕವಿತಾಳ ಠಾಣೆ ಪೊಲೀಸರಿಂದ ಬಾಲಕರಿಗಾಗಿ ಹುಡುಕಾಟ ನಡೆದಿತ್ತು, ಗ್ರಾಮದ ಹಳ್ಳದಲ್ಲೇ ಸೋಮವಾರ ಬೆಳಿಗ್ಗೆ ಶವಗಳು ಪತ್ತೆಯಾಗಿವೆ. ತನಿಖೆ ಆರಂಭಗೊಡಿದ್ದು ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ಕಾರಣ ತಿಳಿದು ಬರಲಿದೆ ಅಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕಮ್ ಹೇಳಿದ್ದಾರೆ. ಇಬ್ಬರು ಮಕ್ಕಳನ್ನು ಕಳೆದುಕೊಂಡ ಹಂಪಯ್ಯ ನಾಯಕ್ ಕುಟುಂಬ ದುಃಖದಲ್ಲಿ ಮುಳುಗಿದೆ. ಆದ್ರೆ ಸಾವಿನ ಬಗ್ಗೆ ಅನುಮಾನಗಳು ಇರುವುದರಿಂದ ಇದೊಂದು ವ್ಯವಸ್ಥಿತ ಕೊಲೆ ಅಂತ ಶಂಕಿಸಿದ್ದಾರೆ.

ಘಟನೆ ಹಿನ್ನೆಲೆ ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಬಳಿಕವಷ್ಟೇ ಮಕ್ಕಳ ಸಾವಿಗೆ ನಿಖರ ತಿಳಿದು ಬರಲಿದೆ. ಬಾಲಕರ ಸಾವಿಗೆ ಮಾಜಿ ಎಂಎಲ್ ಸಿ ಎನ್  ಬೋಸರಾಜು, ಮಾಜಿ ಸಂಸದ ಬಿ.ವಿ.ನಾಯಕ್ ಸೇರಿದಂತೆ ಹಲವಾರು ಗಣ್ಯರು ಕಂಬನಿ ಮಿಡಿದಿದ್ದಾರೆ. ಈ ಮಧ್ಯೆ ಇದೇ ಗ್ರಾಮದಲ್ಲಿ ಇಂಥ ಹಲವಾರು ಘಟನೆಗಳಿವೆ. ಇಲ್ಲಿ ವಾಮಚಾರಕ್ಕೆ ಮಕ್ಕಳ ಬಲಿ ನೀಡಲಾಗಿದೆ ಎಂಬ ಕಾರಣಕ್ಕೆ ಗ್ರಾಮಸ್ಥರು ಭಯ ಭೀತರಾಗಿದ್ದಾರೆ. ಈ ಕಾರಣಕ್ಕೆ ಈ ಪ್ರಕರಣವನ್ನು ತನಿಖೆ ಮಾಡಿ ಪ್ರಕರಣದ ಸಂಪೂರ್ಣ ಮಾಹಿತಿ ಬಯಲಿಗೆ ಬರುವಂತಾಗಬೇಕು ಎಂದು ಮಾನವಿ ಶಾಸಕ ರಾಜಾ ವೆಂಕಟಪ್ಪ ಅವರು ನಾಯಕ ಗೃಹ ಸಚಿವ ಬಸವರಾಜ ಬೋಮ್ಮಾಯಿಯವರಿಗೆ ವಿಧಾನಸೌಧದಲ್ಲಿ ಮನವಿ ಪತ್ರ ನೀಡಿ ಆಗ್ರಹಿಸಿದ್ದಾರೆ.

ವರದಿ: ಶರಣಪ್ಪ ಬಾಚಲಾಪುರ
Published by:Vijayasarthy SN
First published: