ಬೆಂಗಳೂರು: ಆನಂದ್ ರಾವ್ ಸರ್ಕಲ್ ಬಳಿ ಎರಡು ಬೃಹತ್ ಅವಳಿ ಕಟ್ಟಡಗಳನ್ನ ಸರ್ಕಾರ ನಿರ್ಮಿಸಲಿದೆ. 8.5 ಎಕರೆ ಪ್ರದೇಶದಲ್ಲಿ 50 ಅಂತಸ್ತಿನ ಎರಡು ಕಟ್ಟಡಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಸ್ವಾಮ್ಯದ ಎನ್ಬಿಸಿಸಿ ಸಂಸ್ಥೆಯೊಂದಿಗೆ ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ. ಉಪ ಮುಖ್ಯಮಂತ್ರಿ ಗೋವಿಂದ್ ಕಾರಜೋಳ ಅವರು ಮಾಧ್ಯಮಗಳಿಗೆ ಈ ವಿಚಾರವನ್ನು ತಿಳಿಸಿದ್ದಾರೆ. ಈ ಅವಳಿ ಕಟ್ಟಡಗಳ ನಿರ್ಮಾಣಕ್ಕೆ 1,251 ಕೋಟಿ ರೂ ವೆಚ್ಚವಾಗುವ ಅಂದಾಜು ಮಾಡಲಾಗಿದೆ. ಸರ್ಕಾರಿ ಕಚೇರಿಗಳನ್ನ ಒಂದು ಕಡೆ ನಿಲ್ಲಿಸುವ ದೃಷ್ಟಿಯಲ್ಲಿ ಈ ಕಟ್ಟಡಗಳನ್ನ ನಿರ್ಮಿಸಲಾಗುತ್ತಿದೆ.
ಈ ಎರಡು ಅವಳಿ ಕಟ್ಟಡಗಳಲ್ಲಿ ಶೇ. 40ರಷ್ಟು ಸ್ಥಳವನ್ನು ಕೇಂದ್ರ ಸರ್ಕಾರ ಉಪಯೋಗಿಸಿಕೊಳ್ಳಲಿದೆ. ಉಳಿದ ಸ್ಥಳವನ್ನು ರಾಜ್ಯ ಸರ್ಕಾರ ನಿಭಾಯಿಸಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಕಚೇರಿಗಳನ್ನ ಇಲ್ಲಿಗೆ ಸ್ಥಳಾಂತರಿಸುವ ಯೋಜನೆ ಇದೆ. ಇದರಿಂದ ಸರ್ಕಾರಕ್ಕೆ ಸಾಕಷ್ಟು ಉಳಿತಾಯವಾಗುತ್ತದೆ. ಮುಖ್ಯ ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣಗಳು ಸಮೀಪವೇ ಇರುವುದರಿಂದ ಉದ್ಯೋಗಿಗಳಿಗೂ ಕಛೇರಿಗೆ ಹೋಗಿ ಬರಲು ಅನುಕೂಲವಾಗುತ್ತದೆ ಎಂದು ಕಾರಜೋಳ ತಿಳಿಸಿದ್ದಾರೆ.
ಇದನ್ನೂ ಓದಿ: ಸಿ.ಎಂ. ಇಬ್ರಾಹಿಂ ಕಾಂಗ್ರೆಸ್ ತೊರೆಯುವುದು ನಿಜವಾ? ಕುತೂಹಲ ಮೂಡಿಸಿದೆ ಡಿಕೆಶಿ ಭೇಟಿ
ಆನಂದ್ ರಾವ್ ಸರ್ಕಲ್ ಬಳಿ ಇರುವ ಲೋಕೋಪಯೋಗಿ ಇಲಾಖೆ ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಕಚೇರಿಗಳು ಇರುವ ಸ್ಥಳದಲ್ಲಿ ಅವಳಿ ಕಟ್ಟಡಗಳು ತಲೆ ಎತ್ತಲಿವೆ. ಇದು ಕಾರಜೋಳ ಸಚಿವರಾಗಿರುವ ಲೋಕೋಪಯೋಗಿ ಇಲಾಖೆಗೆ ಸೇರಿದ ಕಟ್ಟಡವಾಗಿದೆ. 8.5 ಎಕರೆ ಪ್ರದೇಶದಲ್ಲಿ ತಲಾ 50 ಅಂತಸ್ತಿನ ಈ ಎರಡು ಕಟ್ಟಡಗಳ ಒಟ್ಟು ನಿರ್ಮಾಣ ವಿಸ್ತೀರ್ಣವು 23.94 ಲಕ್ಷ ಚದರಡಿ ಇರಲಿದೆ. ಶಂಕು ಸ್ಥಾಪನೆಯಾಗಿ ಎರಡು ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಈ ಜಾಗದಲ್ಲಿರುವ ಎಲ್ಲಾ ಕಚೇರಿಗಳನ್ನ ಶೀಘ್ರದಲ್ಲೇ ಖಾಲಿ ಮಾಡಿಸಲಾಗುತ್ತದೆ.
ಕಳೆದ ಬಾರಿಯ ಬಜೆಟ್ನಲ್ಲೇ ಯಡಿಯೂರಪ್ಪ ಅವರು ಈ ಅವಳಿ ಕಟ್ಟಡಗಳ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದ್ದರು. 400 ಕೋಟಿ ರೂ ಅಂದಾಜು ವೆಚ್ಚ ನಿರೀಕ್ಷಿಸಲಾಗಿತ್ತು. ಈಗ 1,250 ಕೋಟಿ ರೂ ವೆಚ್ಚದ ಅಂದಾಜು ಮಾಡಲಾಗಿದೆ. ಇದರ ಬಗ್ಗೆ ಸ್ಪಷ್ಟನೆ ನೀಡಿರುವ ಪಿಡಬ್ಲ್ಯೂಡಿ ಅಧಿಕಾರಿಗಳು, ಬಜೆಟ್ ವೇಳೆ 25 ಅಂತಸ್ತಿನ ಕಟ್ಟಡಗಳ ಯೋಜನೆಗೆ 400 ಕೋಟಿ ಅಂದಾಜು ಮಾಡಲಾಗಿತ್ತು. ಅಕ್ಟೋಬರ್ನಲ್ಲಿ ಯೋಜನೆ ಪರಿಷ್ಕರಿಸಿ 50 ಅಂತಸ್ತಿನ ಅವಳಿ ಕಟ್ಟಡಗಳ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಹೀಗಾಗಿ ಸಹಜವಾಗಿಯೇ ವೆಚ್ಚ ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ.
ಇದನ್ನೂಓದಿ: 58 ವರ್ಷದಿಂದ ಚುನಾವಣೆ ಕಾಣದ ಗ್ರಾಮ ಪಂಚಾಯಿತಿ; ಬೆಳಗಾವಿಯಲ್ಲಿ ಇತಿಹಾಸ ಬರೆದ ಅವಿರೋಧ ಆಯ್ಕೆ
ಈ ಅವಳಿ ಕಟ್ಟಡ ಯೋಜನೆಯ ಮತ್ತೊಂದು ವಿಶೇಷತೆ ಎಂದರೆ, ಸಮೀಪದಲ್ಲಿರುವ ಮೂರು ಮೆಟ್ರೋ ನಿಲ್ದಾಣಗಳಿಂದ ಇಲ್ಲಿಯವರೆಗೆ ಮೂರು ಸ್ಕೈವಾಕ್ಗಳನ್ನ ನಿರ್ಮಿಸಲಾಗುತ್ತದೆ. ಇದರಿಂದ ಮೆಟ್ರೋದಿಂದ ಬರುವ ಸಿಬ್ಬಂದಿಗೆ ಅನುಕೂಲವಾಗುತ್ತದೆ. ಕೆಂಪೇಗೌಡ ನಿಲ್ದಾಣ, ಮಂತ್ರಿ ಸ್ಕ್ವಯರ್ ಮತ್ತು ವಿಧಾನಸೌಧ ಮೆಟ್ರೋ ನಿಲ್ದಾಣಗಳು ಆನಂದ್ ರಾವ್ ಸರ್ಕಲ್ ಸಮೀಪ ಇವೆ. ಈ ಮೂರು ಕಡೆಗಳಿಂದಲೂ ಸ್ಕೈವಾಕ್ ಇರಲಿದೆ. ಇದು ಸರ್ಕಾರಿ ಉದ್ಯೋಗಿಗಳ ಜೊತೆಗೆ ಜನಸಾಮಾನ್ಯರಿಗೂ ಅನುಕೂಲವಾಗುವ ನಿರೀಕ್ಷೆ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ