• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • Twins Suicide: ಮದುವೆಯಾದರೆ ಬೇರೆ ಮನೆಗೆ ಹೋಗ್ಬೇಕು, ಜೊತೆಗೇ ಇರಲು ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡ ಅವಳಿಗಳು !

Twins Suicide: ಮದುವೆಯಾದರೆ ಬೇರೆ ಮನೆಗೆ ಹೋಗ್ಬೇಕು, ಜೊತೆಗೇ ಇರಲು ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡ ಅವಳಿಗಳು !

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

Crime News: ಮದುವೆಯಾದ ನಂತರ ತಾವಿಬ್ಬರೂ ಬೇರೆಯಾಗಬೇಕಾಗುತ್ತದೆ. ಹುಟ್ಟಿಗೂ ಮುಂಚಿನಿಂದಲೇ ಜೊತೆಯಿರುವ ತಮ್ಮ ಬಂಧ ಮುರಿಯುತ್ತದೆ ಎನ್ನುವುದರ ಬಗ್ಗೆ ತೀವ್ರವಾಗಿ ಆಲೋಚಿಸಿಬಿಟ್ಟಿದ್ದಾರೆ.

  • Share this:

ಮಂಡ್ಯ: ಅವಳಿಗಳು ಸದಾ ಜೊತೆಗೇ ಇರಲು ಇಷ್ಟಪಡ್ತಾರೆ. ಅಮ್ಮನ  ಹೊಟ್ಟೆಯಲ್ಲಿದ್ದಾಗಲೂ ಜೊತೆಗೇ ಇದ್ದ ಜೀವಗಳು ಭೂಮಿಗೆ ಬಿದ್ದ ಮೇಲೂ ಅಂಟಿಕೊಂಡೇ ಇರುವುದು ಅಪರೂಪವೇನಲ್ಲ. ಅದಕ್ಕೇ ಒಂದು ಅವಳಿಗೆ ಅನಾರೋಗ್ಯ ಉಂಟಾದ್ರೆ ಎರಡೂ ಮಕ್ಕಳಿಗೆ ಔಷಧ ಕುಡಿಸ್ತಾರೆ.. ಇನ್ನೊಂದು ಅವಳಿಗೆ ಖಂಡಿತಾ ಅದೇ ಸಮಸ್ಯೆ ಆಗುತ್ತೆ ಅನ್ನೋದು ಗೊತ್ತಿರೋದ್ರಿಂದ. ಬಹುಪಾಲು ಅವಳಿಗಳಿಗೆ ಜೀವನದುದ್ದಕ್ಕೂ ಇರೋ ತನ್ನದೇ ಮತ್ತೊಂದು ಭಾಗದಂತೆ ಇರುತ್ತಾರೆ. ಈ ಅನುಬಂಧ ಅದೆಷ್ಟು ಗಟ್ಟಿಯಾಗಿರುತ್ತದೆ ಎಂದರೆ ಒಬ್ಬರನ್ನು ಬಿಟ್ಟು ಮತ್ತೊಬ್ಬರು ಇರುವುದು ಅತಿ ವಿರಳ. ಒಂದೇ ಶಾಲೆಗೆ ಹೋಗೋದು, ಒಂದೇ ರೀತಿಯ ಬಟ್ಟೆ ಧರಿಸೋದು, ಒಂದೇ ಗುಂಪಿನಲ್ಲಿ ಇರೋದು ಹೀಗೇ ಜೊತೆಯಾಗಿ ಇರುತ್ತದೆ ಅವಳಿಗಳ ಬದುಕು. ಈ ಬಂಧ ಕೆಲವೊಮ್ಮೆ ಗಾಬರಿ ಹುಟ್ಟಿಸುವಂಥಾ ಬೆಳವಣಿಗೆಗೂ ದಾರಿ ಮಾಡಿಕೊಡುತ್ತದೆ.


ಈಗ ಮಂಡ್ಯದಲ್ಲಿ ಆಗಿರುವುದು ಇದೇ ಸನ್ನಿವೇಶ. ಶ್ರೀರಂಗಪಟ್ಟಣ ತಾಲೂಕಿನ ಹಣಸನಹಳ್ಳಿ ಗ್ರಾಮದ ಸುರೇಶ್ ಮತ್ತು ಯಶೋದ ದಂಪತಿಗೆ 19 ವರ್ಷದ ದೀಪಿಕಾ ಮತ್ತು ದಿವ್ಯಾ ಎನ್ನುವ ಅವಳಿ ಹೆಣ್ಣುಮಕ್ಕಳಿದ್ದರು. ಅನ್ಯೋನ್ಯವಾಗಿದ್ದ ಈ ಕುಟುಂಬಕ್ಕೆ ಅದ್ಯಾವ ಕೆಟ್ಟ ದೃಷ್ಟಿ ತಗುಲಿತೋ ಏನೋ ಒಂದು ವಿಷ ಘಳಿಗೆಯಲ್ಲಿ ಇಡೀ ಕುಟುಂಬ ಸಾಯುವವರಗೆ ಕೊರಗುವಂಥಾ ಘಟನೆ ನಡೆದೇಹೋಯ್ತು.


ಎಷ್ಟೇ ಜೊತೆಯಿದ್ದರೂ ಮದುವೆಯಾದ ನಂತರ ಅಕ್ಕ ತಂಗಿಯರು ತಂತಮ್ಮ ಗಂಡನ ಮನೆಗಳಿಗೆ ತೆರಳುತ್ತಾರೆ. ಅಪರೂಪಕ್ಕೆ ಅವಳಿಗಳಿಗೆ ಅವಳಿಗಳನ್ನೇ ಹುಡುಕಿ ಮದುವೆ ಮಾಡುತ್ತಾರೆ. ಆದ್ರೆ ಎಲ್ಲಾ ಅವಳಿಗಳಿಗೂ ಆ ಭಾಗ್ಯ ಇರೋದಿಲ್ಲ. ಅದೇನು ಆಲೋಚನೆ ಬಂತೋ, ಈ ಹುಡುಗಿಯರಿಬ್ಬರು ಅದೇನು ಚರ್ಚೆ ಮಾಡ್ಕೊಂಡ್ರೋ ಮದುವೆಯಾದ ನಂತರ ತಾವಿಬ್ಬರೂ ಬೇರೆಯಾಗಬೇಕಾಗುತ್ತದೆ. ಹುಟ್ಟಿಗೂ ಮುಂಚಿನಿಂದಲೇ ಜೊತೆಯಿರುವ ತಮ್ಮ ಬಂಧ ಮುರಿಯುತ್ತದೆ ಎನ್ನುವುದರ ಬಗ್ಗೆ ತೀವ್ರವಾಗಿ ಆಲೋಚಿಸಿಬಿಟ್ಟಿದ್ದಾರೆ. ಮದುವೆಯಾಗಿ ಬೇರೆಯಾಗುವುದನ್ನು ಇಷ್ಟಪಡದೇ ಇಬ್ಬರೂ ನೇಣಿಗೆ ಶರಣಾಗಿಬಿಟ್ಟಿದ್ದಾರೆ.


ಇದನ್ನೂ ಓದಿ: ಅತಿಹೆಚ್ಚು ಚಾರ್ಜ್​ಶೀಟ್ ಸಲ್ಲಿಕೆಯಾದ ಕೇಸ್; ಶೃಂಗೇರಿ ಅಪ್ರಾಪ್ತ ಬಾಲಕಿ ಅತ್ಯಾಚಾರ ಪ್ರಕರಣದಲ್ಲಿ 42 ಮಂದಿ ಬಂಧನ


ಬೆಳೆದ ಹೆಣ್ಣುಮಕ್ಕಳಿಗೆ ಮದುವೆ ಮಾಡಲು ಪೋಷಕರು ನಿರ್ಧರಿಸಿದ್ದರು. ಹಾಗಾಗಿ ದೀಪಿಕಾ ಮತ್ತು ದಿವ್ಯಾ ಇಬ್ಬರಿಗೂ ಸೂಕ್ತ ವರನನ್ನು ನೋಡಿದ್ದರು. ಆದರೆ ಇಬ್ಬರೂ ಮದುವೆಯಾದ ನಂತರ ಬೇರೆ ಬೇರೆ ಕುಟುಂಬಗಳಿಗೆ ಸೇರಬೇಕಿತ್ತು. ಮದುವೆಯ ನಂತರ ಬೇರೆಯಾಗುವ ಈ ಆಲೋಚನೆಯನ್ನು ಅದ್ಯಾಕೋ ಈ ಹೆಣ್ಣುಮಕ್ಕಳಿಗೆ ಅರಗಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ ಎನಿಸುತ್ತದೆ. ಈ  ಅವಳಿ ಸಹೋದರಿಯರು ಚಿಕ್ಕಂದಿನಿಂದ ಬಹಳ ಅನ್ಯೋನ್ಯತೆಯಿಂದಿದ್ದು ಇಬ್ಬರನ್ನೂ ಬೇರೆ ಬೇರೆ ಮನೆಗೆ ಮದುವೆ ಮಾಡಿಕೊಡಲು ಪೋಷಕರು ಸಿದ್ಧತೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಬೇರೆ ಬೇರೆ ಮನೆಗೆ ಮದುವೆಯಾದರೆ ತಮ್ಮ ಬಾಂಧವ್ಯ ಕೊನೆಯಾಗುತ್ತದೆ ಎಂದು ಆಲೋಚಿಸಿ ಸಂಜೆ ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಅರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

First published: