news18-kannada Updated:August 25, 2020, 10:49 PM IST
ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಸಿಎಂ ಬಿ ಎಸ್ ಯಡಿಯೂರಪ್ಪ
ಬೆಳಗಾವಿ(ಆಗಸ್ಟ್. 25): ಬೆಳಗಾವಿ ಜಿಲ್ಲೆಯಲ್ಲಿ ಉಂಟಾಗಿರುವ ಪ್ರವಾಹ ಸ್ಥಿತಿ ಬಗ್ಗೆ ವೈಮಾನಿಕ ಸಮೀಕ್ಷೆಯನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದು ನಡೆಸಿದ್ದಾರೆ. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಜನಪ್ರತಿನಿಧಿಗಳ ಸಭೆ ನಡೆಸಿ, ಬಾಗಲಕೋಟೆ ವರೆಗೆ ವೈಮಾನಿಕ ಸಮೀಕ್ಷೆ ನಡೆಸಿದರು. ಬೆಳಗಾವಿಯಿಂದ ಬಾಗಲಕೋಟೆಗೆ ಹೋದ ಸಿಎಂ, ಡಿಸಿಎಂ ಲಕ್ಷ್ಮಣ ಸವದಿಯನ್ನು ಕರೆದುಕೊಂಡು ಹೋಗಲಿಲ್ಲ. ಇದು ರಾಜಕೀಯವಾಗಿ ಹಲವು ಚರ್ಚೆಗಳಿಗೆ ಕಾರಣವಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಕೃಷ್ಣ, ಮಲಪ್ರಭಾ, ಘಟಪ್ರಭಾ, ಹಿರೇಣ್ಯಕೇಶಿ ಹಾಗೂ ಮಾರ್ಕಂಡಯ್ಯ ನದಿಯ ಪ್ರವಾಹದಿಂದ ಕೋಟ್ಯಾಂತರ ರೂಪಾಯಿ ಹಾನಿಯಾಗಿದೆ. ಜಿಲ್ಲೆಯಲ್ಲಿ 972 ಕೋಟಿ ರೂಪಾಯಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಇಂದು ಸಿಎಂ ಬಿಎಸ್ ಯಡಿಯೂರಪ್ಪ ವೈಮಾನಿಕ ಸಮೀಕ್ಷೆಯನ್ನು ನಡೆಸಿದ್ದಾರೆ.
ಬೆಳಗಾವಿಯಿಂದ ವೈಮಾನಿಕ ಸಮೀಕ್ಷೆ ಆರಂಭಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸಚಿವರಾದ ಆರ್. ಅಶೋಕ್, ಬಸವರಾಜ್ ಬೊಮ್ಮಾಯಿ ಹಾಗೂ ರಮೇಶ ಜಾರಕಿಹೊಳಿ ಸಾಥ್ ನೀಡಿದರು. ಬೆಳಗಾವಿಯ ವಿಮಾನ ನಿಲ್ದಾಣದ ಸಭೆಯಲ್ಲಿ ಪಾಲ್ಗೊಂಡಿದ್ದ ಲಕ್ಷ್ಮಣ ಸವದಿಯನ್ನು ಏಕೆ ಕರೆದುಕೊಂಡು ಹೋಗಲಿಲ್ಲ ಎಂಬ ಪ್ರಶ್ನೆ ಉದ್ಭವಿಸಿದೆ. 14 ಜನ ಪ್ರಯಾಣಿಸುವ ಸಾಮರ್ಥ್ಯ ಹೊಂದಿದ್ದ ಹೆಲಿಕಾಪ್ಟರ್ ಇದ್ದರೂ ಕೇವಲ 8 ಜನ ಮಾತ್ರ ಪ್ರಯಾಣ ಬೆಳೆಸಿದ್ದಾರೆ. ಇದು ರಾಜಕೀಯವಾಗಿ ಹಲವು ಚರ್ಚೆಗಳಿಗೆ ಗ್ರಾಸವಾಗಿದೆ.
ಬಾಗಲಕೋಟೆ ಪ್ರವಾಸ ಮುಗಿಸಿ ಹೆಲಿಕಾಪ್ಟರ್ ನಲ್ಲಿ ವಾಪಸ್ ಬಂದ ಸಿಎಂ ಬಿ ಎಸ್ ಯಡಿಯೂರಪ್ಪ ಬೆಳಗಾವಿಯಿಂದ ಬೆಂಗಳೂರಿಗೆ ವಿಶೇಷ ವಿಮಾನದಲ್ಲಿ ಪ್ರಯಾಣ ಬೆಳೆಸಿದರು. ಇದಕ್ಕೂ ಹತ್ತು ನಿಮಿಷ ಮೊದಲು ಡಿಸಿಎಂ ಲಕ್ಷ್ಮಣ ಸವದಿ ಪ್ರತ್ಯೇಕ ವಿಮಾನದಲ್ಲಿ ಬೆಂಗಳೂರಿಗೆ ತೆರಳಿದರು. ವಿಶೇಷ ವಿಮಾನದಲ್ಲಿ ಸಿಎಂ ಬಿ ಎಸ್ ಯಡಿಯೂರಪ್ಪ ಹಾಗೂ ಡಿಸಿಎಂ ಗೋವಿಂದ ಕಾರಜೋಳ, ಶಾಸಕ ಮುರುಗೇಶ ನಿರಾಣಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.
ಪ್ರವಾಹಕ್ಕೆ ಪರಿಹಾರ ನೀಡುವ ಯಾವುದೇ ಮಹತ್ವದ ಘೋಷಣೆಯನ್ನು ಸಿಎಂ ಬಿಎಸ್ ಯಡಿಯೂರಪ್ಪ ಮಾಡಲಿಲ್ಲ. ಕೇವಲ ಹೆಚ್ಚಿನ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದ ಬಳಿ ಹೋಗುತ್ತೇನೆ ಎಂಬ ಮಾತನ್ನು ಮಾತ್ರ ಹೇಳಿ ಹೋದರು. ಇದು ಬೆಳಗಾವಿ ಜಿಲ್ಲೆಯ ಜನರಲ್ಲಿ ನಿರಾಶೆಯನ್ನು ಮೂಡಿಸಿದೆ.
ಇದನ್ನೂ ಓದಿ :
ಲಾರ್ಡ್ ಮೆಕಾಲೆ ಶಿಕ್ಷಣ ವ್ಯವಸ್ಥೆಗೆ ವಿದಾಯದ ಕ್ಷಣ ಸನ್ನಿಹಿತ ; ಶಿಕ್ಷಣ ಸಚಿವ ಸುರೇಶ್ ಕುಮಾರ್
ಕಳೆದ ವರ್ಷದ ಭೀಕರ ಪ್ರವಾಹದಿಂದ ಆಗಿರುವ ಹಾನಿಗೆ ಇನ್ನೂ ಸರಿಯಾದ ಪರಿಹಾರ ಸಿಕ್ಕಿಲ್ಲ. ಈಗ ಮತ್ತೆ ಗಾಯದ ಮೇಲೆ ಬರೆ ಬಿದ್ದಿದೆ, ಆದರೆ, ಇದಕ್ಕೆ ಸ್ಪಂದಿಸಬೇಕಿದ್ದ ಸರ್ಕಾರ ಮಾತ್ರ ಕೊರೋನಾ ಇರುವ ಕಾರಣಕ್ಕೆ ಸಂಪನ್ಮೂಲದ ಕೊರತೆ ಇದೆ ಎಂದು ಹೇಳುತ್ತಿದೆ. ಇದು ಪ್ರವಾಹ ಸಂತ್ರಸ್ತರನ್ನು ಮತ್ತಷ್ಟು ಚಿಂತೆಗೆ ಇಡು ಮಾಡಿದೆ.
ಬೆಳಗಾವಿ ಜಿಲ್ಲೆಗೆ ಸ್ವತಃ ಸಿಎಂ ಬಿಎಸ್ ಯಡಿಯೂರಪ್ಪ ಭೇಟಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿದರು. ರಾಮದುರ್ಗದಲ್ಲಿ ಮಾತ್ರ ಸಂತ್ರಸ್ತರದ ಧರಣಿ ಮುಂದುವರೆದಿದೆ. ಕಳೆದ ಎರಡು ದಿನಗಳಿಂದ ನಿರಂತರವಾಗಿ ಧರಣಿ ನಡೆಯುತ್ತಿದ್ದು, ಧರಣಿ ಬಗ್ಗೆ ಶಾಸಕ ಮಹಾದೇವಪ್ಪ ಯಾದವಾಡ್ ಸಿಎಂ ಬಿ ಎಸ್ ಯಡಿಯೂರಪ್ಪ ಗಮನಕ್ಕೆ ತಂದಿದ್ದಾರೆ. ರಾಮದುರ್ಗ ತಾಲೂಕಿನಲ್ಲಿ 774 ಮನೆಗಳು ಇನ್ನೂ ಜಿಪಿಎಸ್ ಆಗದ ಕಾರಣ ನೀಡಿ ಪರಿಹಾರ ನೀಡಿಲ್ಲ. ರಾಮದುರ್ಗದಲ್ಲಿ ಅಹೋರಾತ್ರಿ ಧರಣಿಯನ್ನು ರೈತರು ಮುಂದುವರೆಸಿದ್ದಾರೆ.
Published by:
G Hareeshkumar
First published:
August 25, 2020, 10:46 PM IST