ಕರೆ ಮಾಡಿದಲ್ಲಿಗೆ ಹೋಗಿ ತರಕಾರಿ ವಿತರಣೆ; ತುರುವೇಕೆರೆ ಬೀದಿ ವ್ಯಾಪಾರಿಗಳ ವಿನೂತನ ಪ್ರಯತ್ನಕ್ಕೆ ಜನ ಮೆಚ್ಚುಗೆ

ಈ ಸೇವೆಯನ್ನು ತುರುವೇಕೆರೆ ಪಟ್ಟಣದಾದ್ಯಂತ ಮಾಡುತ್ತಿದ್ದು, ಸುಮಾರು 45 ರಿಂದ 50 ವ್ಯಾಪಾರಿಗಳು ತಮ್ಮ ನಂಬರ್​ಗಳನ್ನು ಸಾರ್ವಜನಿಕರಿಗೆ ಕೊಟ್ಟು ಕರೆದಲ್ಲಿಗೆ, ಕೇಳಿದ್ದನ್ನು ತಂದು ತಲುಪಿಸುತ್ತಿದ್ದಾರೆ. ಇನ್ನೊಂದು ಗಮನಿಸಬೇಕಾದ ಅಂಶ ಅಂದರೆ ಇವರು ಶಿಪ್ಪಿಂಗ್ ಚಾರ್ಜ್ ಮಾಡಲ್ಲ. ಕೇವಲ ಆ ವಸ್ತುವಿನ ಬೆಲೆ ಎಷ್ಟಿದೆಯೋ ಅದನ್ನು ಮಾತ್ರ ಪಡೆಯುತ್ತಾರೆ.

ತರಕಾರಿ

ತರಕಾರಿ

  • Share this:
ತುಮಕೂರು: ದಿನದಿಂದ ದಿನಕ್ಕೆ ಕೊರೋನಾ ವೈರಸ್ ಅತಿವೇಗವಾಗಿ ಹರಡುತ್ತಿದೆ. ಈ ವೈರಸ್ ಹರಡುವುದನ್ನು ತಡೆಯಲು ವಿಶ್ವಮಟ್ಟದಲ್ಲಿ ಸಂಶೊಧನೆಗಳು ನಡೆಯುತ್ತಿವೆ.  ಮತ್ತೊಂದು ಕಡೆ ಕೊರೋನಾ ಬಗ್ಗೆ ಜನರೂ ಎಚ್ಚರ ವಹಿಸುತ್ತಿಲ್ಲ. ಎಷ್ಟೇ ಹೇಳಿದರೂ ಸಾಮಾಜಿಕ ಅಂತರವನ್ನೂ ದೂರ ತಳ್ಳಿ ಎಲ್ಲಂದರಲ್ಲಿ ಅಡ್ಡಾದಿಡ್ಡಿ ಓಡಾಡ್ತಿದ್ದಾರೆ. ಹೀಗಾಗಿ ಜನರ ಒಟ್ಟುಗೂಡುವಿಕೆ ನಿಯಂತ್ರಿಸುವ ಸಲುವಾಗಿಯೇ ಸರ್ಕಾರ ಲಾಕ್​ಡೌನ್​ ದಂಡ ಹೇರಿದೆ.

ಪರಿಸ್ಥಿತಿ ಏನಿದ್ದರೂ ಜನರು ದಿನಬಳಕೆ ವಸ್ತುಗಳನ್ನು ಖರೀದಿ ಮಾಡ್ಬೇಕು. ಎಂಥ ಪರಿಸ್ಥಿತಿಯಲ್ಲೂ ಜನರು ತರಕಾರಿಗೋಸ್ಕರ ಸಾಲುಗಟ್ಟಿ ನಿಲ್ಲುತ್ತಾರೆ. ಹೀಗಾಗಿ ಜನರನ್ನು  ಮಾರುಕಟ್ಟೆ ಕಡೆ ಅಲೆದಾಡಿಸಬಾರದು, ಅವರು ಮನೆಯಲ್ಲೇ ಇದ್ದು, ಅವರಿಗೆ ಏನು ಬೇಕೋ ಅದನ್ನು ನಾವೇ ಕೊಡೋಣ, ಒಟ್ಟಿನಲ್ಲಿ ಹೇಗಾದರೂ ಮಾಡಿ ಕೊರೋನಾ ತಡೆಗಟ್ಟೋಣ ಎಂದು ನಿರ್ಧರಿಸಿರುವ ಬೀದಿ ವ್ಯಾಪಾರಿಗಳು, ಹಾಗೂ ಸಣ್ಣಪುಟ್ಟ ಗೂಡಂಗಡಿ ವ್ಯಾಪಾರಿಗಳು ಕೊರೊನಾ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ.

ಹೌದು, ತುಮಕೂರು ಜಿಲ್ಲೆ ತುರುವೇಕೆರೆ ಪಟ್ಟಣದಲ್ಲಿ ಬೀದಿ ಬದಿ ವ್ಯಾಪಾರಿಗಳು ಸಣ್ಣ ಸೇವೆಯನ್ನು ಆರಂಭಿಸಿದ್ದಾರೆ. ಈಗ ಪಟ್ಟಣದ ನಿವಾಸಿಗಳು ಹೂ, ಹಣ್ಣು, ತರಕಾರಿಗೋಸ್ಕರ ಯಾವ ಮಾರುಕಟ್ಟೆಗೂ ಹೋಗುವ ಪರಿಸ್ಥಿತಿ ಇಲ್ಲ. ಬೀದಿ ಬದಿ ವ್ಯಾಪಾರಿಗಳಿಗೆ ಒಂದೇ ಒಂದು ಫೋನ್ ಕಾಲ್ ಮಾಡಿದರೆ ಸಾಕು ಅವರಿಗೇನು ಬೇಕೋ ಅದನ್ನೆಲ್ಲಾ ಅವರ ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ. ಈ ಸೇವೆಯನ್ನು ಪ್ರಾರಂಭ ಮಾಡಿ ಕೇವಲ ಒಂದು ದಿನ ಆಗಿದೆ ಅಷ್ಟೆ. ಆಗಲೇ ಬೀದಿ ಬದಿ ವ್ಯಾಪಾರಿಗಳ ಕಾರ್ಯಕ್ಕೆ ನಾರಿಯಾರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಇದು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಯಾರೊಬ್ಬರೂ ಕೂಡ ಮನೆಯಿಂದ ಹೊರಗೆ ಬರುವ ಪ್ರಮೇಯವೇ ಉದ್ಬವವಾಗುವುದಿಲ್ಲ.

ಇದನ್ನು ಓದಿ: ಖಾಸಗಿ ಆಸ್ಪತ್ರೆಗಳೊಂದಿಗೆ ಸಿಎಂ ಸಭೆ ಫಲಪ್ರದ; ನಾಳೆಯಿಂದಲೇ ಶೇ.50 ಹಾಸಿಗೆ ನೀಡಲು ಒಪ್ಪಿಕೊಂಡ ಮಾಲೀಕರು

ಇನ್ನು ಈ ಸೇವೆಯನ್ನು ತುರುವೇಕೆರೆ ಪಟ್ಟಣದಾದ್ಯಂತ ಮಾಡುತ್ತಿದ್ದು, ಸುಮಾರು 45 ರಿಂದ 50 ವ್ಯಾಪಾರಿಗಳು ತಮ್ಮ ನಂಬರ್​ಗಳನ್ನು ಸಾರ್ವಜನಿಕರಿಗೆ ಕೊಟ್ಟು ಕರೆದಲ್ಲಿಗೆ, ಕೇಳಿದ್ದನ್ನು ತಂದು ತಲುಪಿಸುತ್ತಿದ್ದಾರೆ. ಇನ್ನೊಂದು ಗಮನಿಸಬೇಕಾದ ಅಂಶ ಅಂದರೆ ಇವರು ಶಿಪ್ಪಿಂಗ್ ಚಾರ್ಜ್ ಮಾಡಲ್ಲ. ಕೇವಲ ಆ ವಸ್ತುವಿನ ಬೆಲೆ ಎಷ್ಟಿದೆಯೋ ಅದನ್ನು ಮಾತ್ರ ಪಡೆಯುತ್ತಾರೆ. ಒಟ್ಟಾರೆ ಕೊರೋನಾ ತಡೆಗಟ್ಟಲು ಮತ್ತು ಬೀದಿ ವ್ಯಾಪಾರಿಗಳ ಜೀವನೋಪಾಯಕ್ಕೆ ಈ ಉಪಾಯ ತುರುವೇಕೆರೆಯಲ್ಲಿ ಯಶಸ್ವಿಯಾಗಿದ್ದು, ನಾಡಿನ ಎಲ್ಲೆಡೆ ಇದೇ ರೀತಿ ಆದರೆ ಸರ್ಕಾರದ ಲಾಕ್​ಡೌನ್​ ಉದ್ದೇಶ ಈಡೇರಿದಂತಾಗುತ್ತದೆ.
Published by:HR Ramesh
First published: