ತಾಕತ್ತಿದ್ದರೆ ನನ್ನನ್ನ ಎದುರಿಸಿ; ನನ್ನ ಮಗನ ಮೇಲೆ ನಿಮಗೆ ದ್ವೇಷ ಯಾಕೆ? – ತುರುವೇಕೆರೆ ಶಾಸಕ ಅಕ್ರೋಶ

ನನ್ನ ಮಗನ ಹತ್ಯೆ ಸಂಚಿನಲ್ಲಿ ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪನ ಕೈವಾಡ ಇದೆ. ಯಾವತ್ತೂ ರಾಜಕೀಯ ಮಾತನಾಡದ ನನ್ನ ಮಗನ ಮೇಲೆ ಅವರಿಗೆ ಯಾಕೆ ದ್ವೇಷ? ರಾಜಕೀಯ ಪ್ರತಿಸ್ಪರ್ಧಿಯಾಗಿರುವ ನನ್ನನ್ನ ಅವರು ಎದುರಿಸಲಿ ಎಂದು ಶಾಸಕ ಮಸಾಲ ಜಯರಾಮ್ ಸವಾಲು ಹಾಕಿದ್ದಾರೆ.

ಮಸಾಲ ಜಯರಾಮ್

ಮಸಾಲ ಜಯರಾಮ್

  • Share this:
ತುಮಕೂರು: ನಿಮಗೆ ತಾಕತ್ತಿದ್ದರೆ ನನ್ನೆದುರಿಗೆ ನಿಂತು ಹೋರಾಟ ಮಾಡಿ. ಹಿಂಬಾಗಿಲ ಮೂಲಕ ಮೀರ್ ಸಾದಿಕ್ ರಾಜಕಾರಣ ಮಾಡಬೇಡಿ ಎಂದು ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪ ಅವರಿಗೆ ತುರುವೇಕೆರೆ ಬಿಜೆಪಿ ಶಾಸಕ ಮಸಾಲ ಜಯರಾಮ್‌ ಸವಾಲು ಹಾಕಿದರು. ತುರುವೇಕೆರೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ಜನರು ನನಗೆ ಆರ್ಶೀವಾದ ಮಾಡಿದ್ದಾರೆ. ನಿಮ್ಮ ಕ್ರಿಮಿನಲ್ ರಾಜಕಾರಣ, ಅಟ್ಟಹಾಸ, ದುರಹಂಕಾರ, ದುರಾಡಳಿತದಿಂದ ಬೇಸತ್ತಿರುವ ಕ್ಷೇತ್ರದ ಜನತೆ ನಿಮ್ಮ ರಾಜಕೀಯ ಭವಿಷ್ಯದ ಅಂತ್ಯಕ್ಕೆ ಈಗಾಗಲೇ ನಾಂದಿ ಹಾಡಿದ್ದಾರೆ. ನಾನು ಶಾಸಕನಾಗಿ 3 ವರ್ಷವಾಗಿದ್ದರೂ ಇನ್ನೂ ನನ್ನ ಅನುದಾನ ಎಂದು ಹೇಳಿಕೊಳ್ಳಲು ನಿಮಗೆ ನಾಚಿಕೆಯಾಗುವುದಿಲ್ಲವೇ? ಹಿಂಬಾಗಿಲ ಮೂಲಕ ರಾಜಕಾರಣ ಮಾಡುವ ಕೆಲಸವನ್ನು ಕೈಬಿಟ್ಟು ಗೌರವದಿಂದ ನಡೆದುಕೊಳ್ಳುವುದನ್ನು ಕಲಿಯಿರಿ ಎಂದು ಉಪದೇಶ ಮಾಡಿದರು.

ನನ್ನ ಪುತ್ರನ ಹತ್ಯೆ ಸಂಚಿನಲ್ಲಿ ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪ ಅವರ ಕೈವಾಡವಿದೆ ಎಂದು ಆರೋಪಿಸಿದ ಅವರು, ನನಗೆ, ನನ್ನ ಕುಟುಂಬಕ್ಕೆ, ನನ್ನ ಕಾರ್ಯಕರ್ತರ ಮೇಲೆ ಹಲ್ಲೆ, ದೌರ್ಜನ್ಯ, ಹತ್ಯೆ ಸಂಚು ಸೇರಿದಂತೆ ಯಾವುದೇ ತೊಂದರೆಯಾದರೂ ಅದಕ್ಕೆ ಎಂ.ಟಿ. ಕೃಷ್ಣಪ್ಪ ಅವರೇ ನೇರ ಹೊಣೆಗಾರರು ಎಂದು ಈಗಾಗಲೇ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದು, ನನ್ನ ಪುತ್ರ ತೇಜು ಹತ್ಯೆಗೆ ಯತ್ನಿಸಿದವರ ಮೇಲೆ ಕ್ರಮ ಕೈಗೊಳ್ಳುವ ಭರವಸೆಯನ್ನು ಎಸ್‌ಪಿ ನೀಡಿದ್ದಾರೆಂದರು.

ಇದನ್ನೂ ಓದಿ: ಕರ್ನಾಟಕದಲ್ಲೂ SSLC ಪರೀಕ್ಷೆ ರದ್ದಾಗುತ್ತಾ?; ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ಇಂದು ಮಹತ್ವದ ಸಭೆ

ಮಾಜಿ ಶಾಸಕ ಎಂ.ಟಿ. ಕೃಷ್ಣಪನವರ ದರ್, ದೌರ್ಜನ್ಯ, ದುರಹಂಕಾರ ಪ್ರವೃತ್ತಿಗಳನ್ನು ಕ್ಷೇತ್ರದ ಜನತೆ ಸಾಕಷ್ಟು ನೋಡಿದ್ದಾರೆ. ಕೃಷ್ಣಪ್ಪನವರ ಮೇಲೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆಯೇ ವಿನಃ ನನ್ನ ಮೇಲೆ ತಾಲೂಕಿನಿಂದ ರಾಜ್ಯದವರೆಗೆ ಯಾವುದೇ ಠಾಣೆಯಲ್ಲಿ ಒಂದೇ ಒಂದು ಪ್ರಕರಣ ಇದುವರೆಗೆ ದಾಖಲಾಗಿಲ್ಲ. ಈಗ ಮಾಜಿ ಶಾಸಕರು ಕುತಂತ್ರದ ಮೂಲಕ ನನ್ನ ಮೇಲೆ ಪ್ರಕರಣ ದಾಖಲಾಗುವಂತೆ ಮಾಡುತ್ತಿದ್ದಾರೆ ಎಂದ ತುರುವೇಕೆರೆ ಬಿಜೆಪಿ ಶಾಸಕರು, ಸ್ವಂತ ಪಕ್ಷದವರ ಬೆಳವಣಿಗೆಯನ್ನೇ ಸಹಿಸದ ಮಾಜಿ ಶಾಸಕರಿಗೆ ಕ್ಷೇತ್ರದ ಜನತೆ ನನಗೆ ತೋರಿಸುತ್ತಿರುವ ಪ್ರೀತಿಯನ್ನು ಕಂಡು ಸಹಿಸಲಾಗುತ್ತಿಲ್ಲ ಎಂದು ಕಿಡಿಕಾರಿದರು.

ಅಲ್ಲದೇ ಹಡೆಮಟ್ಟೆಯಿಂದ ಹೊಡೆಯುತ್ತೇನೆಂಬ ಪ್ರಕರಣ, ಬ್ಯಾಲಹಳ್ಳಿ ಗೇಟ್ ನಲ್ಲಿ ಮಾಜಿ ಶಾಸಕರು ಒದೆತಿಂದ ಪ್ರಕರಣ, ಉಪವಿಭಾಗಾಧಿಕಾರಿ ಬಸವರಾಜೇಂದ್ರ ಮೇಲೆ ಹಲ್ಲೆ ಎಸಗಿದ ಪ್ರಕರಣ, ಸಿಪಿಐ ರಾಮಚಂದ್ರ ಅವರನ್ನು ಅವಾಚ್ಯ ಶಬ್ದಗಳಿಂದ ಬೈದಿದ್ದು, ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡರನ್ನೂ ನಿಂದಿಸಿದ್ದು, ಬಸ್ ನಿಲ್ದಾಣಕ್ಕೆ ಕತ್ತೆ ನುಗ್ಗಿಸಿದ ಪ್ರಕರಣ, ಪ.ಪಂ ಮಾಜಿ ಅಧ್ಯಕ್ಷೆ ನೇತ್ರಾವತಿ ರಂಗಸ್ವಾಮಿ ಮಹಿಳೆ ಎನ್ನುವುದನ್ನೂ ಮರೆತು ನಿಂದಿಸಿದ್ದು ಸೇರಿದಂತೆ ಮಾಜಿ ಶಾಸಕರ ಮೇಲೆ ಸಾಕಷ್ಟು ಪ್ರಕರಣಗಳು ಠಾಣೆಯಲ್ಲಿ ಇನ್ನೂ ಇದೆ. ಜನಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ಮನಸೋಇಚ್ಛೆ ನಿಂದಿಸುವ ಸಿದ್ಧಾಂತ ಹಾಗೂ ಸಂಸ್ಕಾರರಹಿತ ರಾಜಕಾರಣದಿಂದಲೇ ಇಂದು ಮಾಜಿ ಶಾಸಕರು ಮನೆಯಲ್ಲಿ ವಿಶ್ರಾಂತಿ ಪಡೆಯುವಂತಾಗಿದೆ ಎಂಬುದನ್ನು ಮರೆಯಬಾರದು ಎಂದು ಮಸಾಲ ಜಯರಾಂ ಟೀಕಿಸಿದರು.

ಇದನ್ನೂ ಓದಿ: Sringeri Rape Case - ಶೃಂಗೇರಿ ಬಾಲಕಿ ಅತ್ಯಾಚಾರ ಪ್ರಕರಣ: ಪೋಕ್ಸೋ ಕೋರ್ಟ್​ನಲ್ಲಿ ಚಾರ್ಜ್​ಶೀಟ್ ಸಲ್ಲಿಕೆ

ನನ್ನ ಪುತ್ರನೇನು ರಾಜಕೀಯದಲ್ಲಿ ಎಂ.ಟಿ. ಕೃಷ್ಣಪ್ಪನವರಿಗೆ ಪ್ರತಿಸ್ಪರ್ಧಿಯಾ? ಯಾವುದಾದರೂ ಪತ್ರಿಕಾಗೋಷ್ಟಿ ಸಭೆಯಲ್ಲಿ ರಾಜಕೀಯ ಮಾತನಾಡಿದ್ದಾನಾ? ತೇಜು ಯಾವ ತಪ್ಪು ಮಾಡಿದ್ದಾನೆ ಅಂತ ಆತನ ಹತ್ಯೆಗೆ ಸಂಚು ರೂಪಿಸಿದ್ದೀರಿ. ಆತನ ಮೇಲೆ ನಿಮಗ್ಯಾಕೆ ದ್ವೇಷ? ನಿಮಗೂ ಮಕ್ಕಳಿದ್ದಾರಲ್ಲವೇ? ಅವರ ಮೇಲೆ ಯಾರಾದರೂ ಈ ರೀತಿ ಕೃತ್ಯ ನಡೆಸಿದ್ದರೆ ನಿಮಗೆ ಸಂತೋಷವಾಗುತ್ತಿತ್ತೇ? ಎಂದು ಭಾವುಕರಾಗಿ ಪ್ರಶ್ನಿಸಿದ ಅವರು, ನಿಮ್ಮ ರಾಜಕೀಯ ಪ್ರತಿಸ್ಪರ್ಧಿ ನಾನು. ನಿಮಗೆ ತಾಕತ್ತಿದ್ದರೆ ನನ್ನ ಎದುರಿಗೆ ಬಂದು ಹೋರಾಟ ನಡೆಸಿ. ಜಾತಿ ಸಂಸ್ಕೃತಿ ನಮ್ಮದಲ್ಲ. ನೇಗಿಲು ಹಿಡಿದು ವ್ಯವಸಾಯ ಮಾಡಿ ಬೆಳೆದ ಕುಟುಂಬ ನಮ್ಮದು. ನಿಮಗೆಂದಾದರೂ ನೇಗಿಲು ಹಿಡಿದು ಕೃಷಿ ಮಾಡಿದ ಅನುಭವವಿದೆಯೇ? ನೌಕರರ ಸಂಘದಲ್ಲಿಯೂ ರೌಡಿಸಂ ರಾಜಕಾರಣ ಮಾಡಿದ ಹಿನ್ನೆಲೆ ನಿಮ್ಮದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ತುರುವೇಕೆರೆ ಕ್ಷೇತ್ರದ ನಿಮ್ಮ ರಾಜಕೀಯ ಭವಿಷ್ಯವನ್ನು 2018ರಲ್ಲಿ ಜನ ತೀರ್ಮಾನಿಸಿದ್ದಾರೆ. ಜನರ ತೀರ್ಪೇ ಅಂತಿಮ. ಯಾವುದೇ ಕಾರಣಕ್ಕೂ ನಿಮ್ಮನ್ನು ರಾಜಕೀಯವಾಗಿ ಮತ್ತೆ ತಲೆ ಎತ್ತಲು ಬಿಡುವುದಿಲ್ಲ. ತಾಪಂ, ಜಿಪಂ, ವಿಧಾನಸಭೆ ಯಾವುದೇ ಚುನಾವಣೆಗಳಿರಲಿ ನಿಮ್ಮನ್ನು ಸೋಲಿಸುವುಕ್ಕೆ ನಾನು ಯಾರೊಂದಿಗೆ ಬೇಕಾದರೂ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧನಿದ್ದೇನೆ. ನಿಮ್ಮ ರಾಜಕೀಯ 2018ಕ್ಕೆ ಅಂತ್ಯ. ಇನ್ನು ನೀವು ಮಾಜಿ ಶಾಸಕರಷ್ಟೇ. ನಿಮ್ಮ ರಾಜಕಾರಣ ಅಂತ್ಯವೇ ನನ್ನ ಗುರಿ ಎಂದು ಮಸಾಲ ಜಯರಾಮ್ ಆರ್ಭಟಿಸಿದರು. ಈ ವೇಳೆಯಲ್ಲಿ ಗ್ರಾಪಂ ಸದಸ್ಯ ಕಾಳಂಜೀಹಳ್ಳಿ ಸೋಮಶೇಖರ್‌, ಮುಖಂಡರಾದ ಎ.ಬಿ. ಸುರೇಶ್, ಮಂಜುನಾಥ್, ನಾಗೇಶ್ ಮುಂತಾದವರಿದ್ದರು.

ವರದಿ: ವಿಠಲ್ ಕುಮಾರ್
Published by:Vijayasarthy SN
First published: