ತುಮಕೂರು(ಜು.26): ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ದೇಶದ ಮೂಲೆ ಮೂಲೆಯ ಪವಿತ್ರ ಕ್ಷೇತ್ರಗಳಿಂದ ಮಣ್ಣು ಸಂಗ್ರಹಿಸಲಾಗುತ್ತಿದೆ. ಅಂತೆಯೇ ತುಮಕೂರು ಜಿಲ್ಲೆಯ ಮೂರು ಪವಿತ್ರ ಸ್ಥಳಗಳಿಂದ ಮಣ್ಣು ಹಾಗೂ ನೀರು ಸಂಗ್ರಹಿಸಲಾಗುತ್ತಿದೆ. ಹಿಂದೂ ಪರ ಸಂಘಟನೆಗಳು ಈ ಕಾರ್ಯಕ್ಕೆ ಮುಂದಾಗಿದ್ದಾರೆ.
ತುಮಕೂರಿನ ಸಿದ್ದಗಂಗಮಠದ ಸ್ವಾಮೀಜಿ ಈ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಸುಪ್ರೀಂಕೋರ್ಟ್ ಆದೇಶದ ಅನ್ವಯ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ರಾಮ ಮಂದಿರ ನಿರ್ಮಾಣದ ವಿಚಾರದಲ್ಲಿ ಉಂಟಾಗಿದ್ದ ಎಲ್ಲಾ ವಿವಾದಗಳು ಬಗೆ ಹರಿದಿದೆ. ಇದೀಗ ರಾಮ ಮಂದಿರವನ್ನು ಸುಗಮವಾಗಿ ನಿರ್ಮಾಣ ಮಾಡಲು ಪ್ರಯತ್ನ ನಡೆಯುತ್ತಿದೆ. ಅದಕ್ಕಾಗಿ ದೇಶದ ಮೂಲೆ ಮೂಲೆಯಿಂದ ಮಣ್ಣು ಹಾಗೂ ನೀರು ಸಂಗ್ರಹಿಸಲಾಗುತ್ತಿದೆ.
ತುಮಕೂರಿನ ಶ್ರೀ ಸಿದ್ದಗಂಗಾ ಮಠ, ಸಿದ್ದರಬೆಟ್ಟ, ನಾಮದ ಚಿಲುಮೆ ಹಾಗೂ ಯಡಿಯೂರು ಸಿದ್ದಲಿಂಗೇಶ್ವರ ಕ್ಷೇತ್ರಗಳಲ್ಲಿ ಮಣ್ಣು ಸಂಗ್ರಹಿಸಲಾಗಿದೆ. ಇದಕ್ಕಾಗಿ ತುಮಕೂರು ವಿಶ್ವ ಹಿಂದೂ ಪರಿಷತ್, ಭಜರಂಗದಳ ಸೇರಿದಂತೆ ಹಲವು ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಈ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.
ವಿಜಯಪುರದಲ್ಲಿ ರೌಡಿಶೀಟರ್ನ ಬರ್ಬರ ಹತ್ಯೆ; ಕೊಲೆಗೆ ಕಾರಣ ನಿಗೂಢ..!
ಶನಿವಾರ ಮುಂಜಾನೆಯೇ ಎಲ್ಲಾ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿರುವ ಹಿಂದೂ ಪರ ಸಂಘಟನೆ ಕಾರ್ಯಕರ್ತರು, ಮೊದಲು ಅಲ್ಲಿನ ಕ್ಷೇತ್ರದ ಆರಾಧ್ಯ ದೈವಗಳಿಗೆ ಪೂಜೆ ಸಲ್ಲಿಸಿದ್ದಾರೆ. ಬಳಿಕ ಮಣ್ಣನ್ನು ಬಾಕ್ಸ್ ನಲ್ಲಿ ಸಂಗ್ರಹಿಸಿದ್ದಾರೆ. ಆಗಸ್ಟ್ 5ರೊಳಗೆ ಈ ಮಣ್ಣು ಹಾಗೂ ನೀರನ್ನು ಅಯೋಧ್ಯೆಗೆ ರವಾನಿಸುವ ಜವಬ್ದಾರಿಯನ್ನು ಹಿಂದೂಪರ ಸಂಘಟನೆಯ ಸ್ಥಳೀಯ ಮುಖಂಡರು ಹೊತ್ತಿದ್ದಾರೆ. ಪವಿತ್ರ ಕ್ಷೇತ್ರ ಸಿದ್ದಗಂಗಾಮಠದಲ್ಲೂ ಮಣ್ಣು ಮತ್ತು ಶ್ರೀ ಶಿವಕುಮಾರ ಶ್ರೀಗಳ ಗದ್ದುಗೆಯಲ್ಲಿ ತೀರ್ಥವನ್ನ ಸಂಗ್ರಹಿಸಿದ್ದಾರೆ.
ಇನ್ನು ಈ ಕಾರ್ಯಕ್ಕೆ ತುಮಕೂರಿನಲ್ಲಿ ಸಿದ್ದಗಂಗಾ ಮಠದ ಸಿದ್ದಲಿಂಗಸ್ವಾಮೀಜಿಯವರು ಚಾಲನೆ ನೀಡಿದ್ದಾರೆ. ಈ ರಾಮ ಮಂದಿರ ನಿಮಾರ್ಣಕ್ಕೆ ಯಾವುದೇ ವಿಘ್ನಬಾರದೆ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದ್ದಾರೆ. ಇಂದು ಸಂಜೆ ಅಯೋಧ್ಯೆಗೆ ಮಣ್ಣು ಕಳುಹಿಸುವ ವ್ಯವಸ್ಥೆಯನ್ನು ಇಲ್ಲಿನ ಕಾರ್ಯಕರ್ತರು ಮಾಡಿಕೊಂಡಿದ್ದಾರೆ. ಮೊದಲು ಮಣ್ಣಿನ ಬಾಕ್ಸ್ ಗಳು ಬೆಂಗಳೂರು ತಲುಪಲಿವೆ.
ಬೆಂಗಳೂರಿಗೆ ರಾಜ್ಯದ ಮೂಲೆ ಮೂಲೆಯಿಂದಲ್ಲೂ ಮಣ್ಣಿನ ಸಂಗ್ರಹ ಬರಲಿದೆ. ಅಲ್ಲಿಂದ ನೇರವಾಗಿ ಅಯೋಧ್ಯೆಗೆ ಮಣ್ಣು ಕಳುಹಿಸಲಾಗುವುದು. ತುಮಕೂರು ಜಿಲ್ಲೆಯಲ್ಲಿ ಮಣ್ಣು ಸಂಗ್ರಹಿಸಿರುವುದು ಜಿಲ್ಲೆಯ ಜನರಿಗೆ ಹೆಮ್ಮೆ ತಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ