ತುಮಕೂರು ಅತ್ಯಾಚಾರ-ಕೊಲೆ ಪ್ರಕರಣ: ಆರು ದಿನವಾದರೂ ಆರೋಪಿಗಳ ಸುಳಿವಿಲ್ಲ; ಜನರ ಪ್ರತಿಭಟನೆ

ದನ ಮೇಯಿಸಲು ಹೋಗಿದ್ದ 34 ವರ್ಷದ ಮಹಿಳೆಯ ಅತ್ಯಾಚಾರ ಕೊಲೆಯಾಗಿ ಆರು ದಿನ ಕಳೆದರೂ ಒಬ್ಬನೂ ಆರೋಪಿ ಪತ್ತೆಯಾಗಿಲ್ಲ. ಇದನ್ನ ಖಂಡಿಸಿ ಇಂದು ಅಗ್ನಿವಂಶ ಕ್ಷತ್ರಿಯ ಸಮಾಜದವರು ಪ್ರತಿಭಟನೆ ನಡೆಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತುಮಕೂರು: ಮೈಸೂರಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ನಡೆದ ದಿನವೇ ತಮಕೂರಲ್ಲೂ ಮಹಿಳೆಯೋರ್ವಳು ಅನುಮಾನಾಸ್ಪದವಾಗಿ ಸಾವನಪಿದ್ದಳು. ಬೆಟ್ಟದ ಮೇಲೆ ಬೆತ್ತಲೆ ಶವವಾಗಿ ಬಿದ್ದ ಮಹಿಳೆಯದ್ದು ಅತ್ಯಾಚಾರ ಪ್ರಕರಣ ಎಂದೇ ಹೇಳಲಾಗಿದೆ. ಮೈಸೂರಿನ ಪ್ರಕರಣದ ಆರೋಪಿಯನ್ನು ನಾಲ್ಕೇ ದಿನದಲ್ಲಿ ಪೊಲೀಸರು ಬಂಧಿಸಿದ್ದಾರೆ. ತುಮಕೂರು ಪ್ರಕರಣದಲ್ಲಿ ಮಾತ್ರ ಪೊಲೀಸರಿಗೆ ಆರೋಪಿಗಳ ಸುಳಿವೇ ಸಿಕ್ಕಿಲ್ಲ. ಪೊಲೀಸರ ಕಾರ್ಯವೈಖರಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಇಂದು ಸೋಮವಾರ ಆರೋಪಿಗಳನ್ನ ಬಂಧಿಸುವಂತೆ ಒತ್ತಾಯಿಸಿ ಅಗ್ನಿವಂಶ ಕ್ಷತ್ರಿಯ ಸಮಾಜದವರು ಪ್ರತಿಭಟನೆ ಕೂಡ ನಡೆಸಿದರು..

ಆಗಸ್ಟ್ 24 ರಂದು ತುಮಕೂರು ತಾಲೂಕಿನ ಹೀರೇಹಳ್ಳಿಯ ಚೋಟಾಸಾಬರ ಪಾಳ್ಯದ ಗುಡ್ಡದ ಮೇಲೆ 34 ವರ್ಷ ವಿವಾಹಿತ ಮಹಿಳೆ ಜಯಲಕ್ಷ್ಮಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದರು. ಗುಡ್ಡದ ಮೇಲೆ ದನ ಮೇಯಿಸಲು ಹೋದ ಜಯಲಕ್ಷ್ಮಿ ಬೆತ್ತಲಾಗಿ ಹೆಣವಾಗಿ ಬಿದ್ದಿದ್ದರು. ಜಯಲಕ್ಷ್ಮಿಯನ್ನು ವಿವಸ್ತ್ರಗೊಳಿಸಿ, ಮೈಮೇಲಿದ್ದ ಚಿನ್ನಾಭರಣ ದೋಚಿ ಕೊಲೆ ಮಾಡಲಾಗಿತ್ತು. ಮೈಮೇಲೆ ಕಚ್ಚಿದ ಮತ್ತು ಪರಚಿದ ಕಲೆಗಳು ಇದ್ದವು. ಇದನ್ನೆಲಾ ಪರಿಗಣಿಸಿ ಮೇಲ್ನೋಟಕ್ಕೆ ಸಾಮೂಹಿಕ ಅತ್ಯಾಚಾರ ಎಂದೇ ಹೇಳಲಾಗಿತ್ತು. ಆದರೆ ಪ್ರಕರಣ ದಾಖಲಿಸಿಕೊಂಡ ಕ್ಯಾತಸಂದ್ರ ಪೊಲಿಸರು ಇನ್ನೂವರೆಗೆ ಆರೋಪಿಗಳನ್ನು ಬಂಧಿಸಿಲ್ಲ. ಕೇವಲ ಮೃತಳ ಸಂಬಂಧಿಕರ ವಿಚಾರಣೆ ಮಾಡಿರುವುದನ್ನು ಬಿಟ್ಟರೆ ಇನ್ನಾವ ಮೂಲದ ಸಾಕ್ಷ್ಯವನ್ನೂ ಪೊಲೀಸರು ಸಂಗ್ರಹಿಸಿಲ್ಲ.

ಇನ್ನೊಂದಡೆ ಘಟನೆಯಿಂದ ಚೋಟಾಸಾಬರ್ ಪಾಳ್ಯ, ಹಿರೇಹಳ್ಳಿ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಮಹಿಳೆಯರು ಒಂಟಿಯಾಗಿ ಓಡಾಡಲು ಹೆದರುವಂತಾಗಿದೆ. ಶಾಲೆಗೆ ಹೆಣ್ಣು ಮಕ್ಕಳನ್ನು ಕಳುಹಿಸುವುದು ಹೇಗೆ ಅಂತ ಯೋಚಿಸುವಂತಾಗಿದೆ. ಈವರೆಗೂ ಕಾಡು ಪ್ರಾಣಿಗಳ ಕಾಟವಿತ್ತು. ಇದೀಗ ಕಾಮುಕರ ಕಾಟ ಶುರುವಾಗಿರುವುದು ಭಯಹುಟ್ಟಿದೆ. ಆರು ದಿನದಿಂದ ಮನೆಯಿಂದ ಹೊರಗೆ ಹೋಗುತ್ತಿಲ್ಲ, ಹೊಲೆ, ಗದ್ದೆ, ತೋಟಗಳ ಕೆಲಸಕ್ಕೆ ಹೋಗೋಕೆ ಆಗ್ತಿಲ್ಲ. ಇಷ್ಟು ದಿನ ಅಕ್ಕಪಕ್ಕದ ಜಮೀನುಗಳಿಗೆ ಕೂಲಿ ಕೆಲಸಗಳಿಗೆ ತೆರಳುತ್ತಿದ್ದ ಒಂಟಿ ಮಹಿಳೆಯರು ಈಗ ಬರೋಕೆ ಹೆದರುತ್ತಿದ್ದಾರೆ. ಯಾರೇ ಅಪರಿಚಿತ‌ ಗಂಡಸರು ಊರಿಗೆ ಎಂಟ್ರಿ ಕೊಟ್ರೆ ಊರಿನ ಮಹಿಳೆಯರು ಬೆಚ್ವಿ ಬೀಳುತ್ತಿದ್ದಾರೆ ಅಂತಾರೆ ಗ್ರಾಮದ ನಿವಾಸಿ ಶಿವಗಂಗಮ್ಮ.

ಘಟನೆ ಸಂಭವಿಸಿ ಬರೊಬ್ಬರಿ ಆರು ದಿನವಾಗಿದೆ. ಆದರೂ ಪೊಲೀಸರಿಗೆ ಒಂದು ಸಣ್ಣ ಸುಳಿವೂ ಸಿಕ್ಕಿಲ್ಲ ಎನ್ನಲಾಗಿದೆ. ಮೈಸೂರಿನಲ್ಲಿ ಅತ್ಯಾಚಾರಿಗಳನ್ನು ಹಿಡಿಯುವಲ್ಲಿ ಅಲ್ಲಿನ ಪೊಲೀಸರು ತೋರಿಸಿದ  ಕಾಳಜಿ ಇಲ್ಲಿನ ಪೊಲೀಸರು ತೋರುತ್ತಿಲ್ಲ ಎಂಬ ಆಪಾದನೆ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.. ಟವರ್ ಲೊಕೇಶನಲ್ಲೂ ಪೊಲೀಸರಿಗೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ ಎನ್ನಲಾಗಿದೆ. ಈ ನಡುವೆ ಡಿವೈಎಸ್​ಪಿ ನೇತೃತ್ವದಲ್ಲಿ ಮೂರು ತಂಡಗಳನ್ನು ಮಾಡಿ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆಬೀಸಿದ್ದಾರೆ.

ಇದನ್ನೂ ಓದಿ: ಬೆಳಗಾವಿ ಪಾಲಿಕೆ ಫೈಟ್; ಬಿಜೆಪಿಯ ಉಚಿತ ಅಂತ್ಯಕ್ರಿಯೆ ಭರವಸೆ: ಡಿಕೆ ಶಿವಕುಮಾರ್ ಟೀಕೆ

ಪೊಲೀಸರು ಕೇವಲ ಮೃತಳ ಸಂಬಂಧಿಕರ ವಿಚಾರಣೆ ಮಾಡೋದ್ರಲ್ಲೇ ಕಾಲ ಕಳೆಯಬಾರದು. ಬೇರೆ ಬೇರೆ ಆಯಾಮದಲ್ಲೂ ತನಿಖೆ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಅತ್ತ ಸರ್ಕಾರ ಕೂಡ ಈ ಅತ್ಯಾಚಾರ ಪ್ರಕರಣವನ್ನು ಮೈಸೂರು ಅತ್ಯಾಚಾರ ಪ್ರಕರಣದಂತೆ ಗಂಭೀರವಾಗಿ ಪರಿಗಣಿಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿ ಆರೋಪಿಗಳ ಬಂಧನಕ್ಕೆ ಆಸ್ಥೆ ವಹಿಸಬೇಕು ಅನ್ನೋದು ಸ್ಥಳೀಯರ ಆಗ್ರಹವಾಗಿದೆ..

ಅಗ್ನಿವಂಶ ಕ್ಷತ್ರಿಯ ಸಮಾಜದವರಿಂದ ಪ್ರತಿಭಟನೆ:

ಹಿರೇಹಳ್ಳಿ ಸಮೀಪ ದನಕಾಯುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಆರೋಪಿಗಳನ್ನ ಪತ್ತೆ ಮಾಡಿ ಬಂಧಿಸುವಂತೆ ಒತ್ತಾಯಿಸಿ ಅಗ್ನಿವಂಶ ಕ್ಷತ್ರಿಯ ಸಮಾಜದವರಿಂದ ಪ್ರತಿಭಟನೆ ನಡೆಸಿದರು. ಕಿಡಿಗೇಡಿಗಳ ಪ್ರತಿಕೃತಿಗೆ ನೇಣು ಬಿಗಿದು ಸಾಂಕೇತಿಕ ಪ್ರತಿಭಟನೆ ನಡೆಸಿದ ಜನರು, ತುಮಕೂರು ಟೌನ್ ಹಾಲ್​ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯತೆಯನ್ನೂ ಪ್ರತಿಭಟನಾಕಾರರು ಖಂಡಿಸಿದರು.

ವರದಿ: ವಿಠಲ್ ಕುಮಾರ್
Published by:Vijayasarthy SN
First published: