ಚಾಮರಾಜನಗರ (ಸೆ.20): ನಿಧಿ(Treasure hunt) ಸಿಗುತ್ತೆ ಅಂದ್ರೆ ಯಾರಿಗೆ ತಾನೆ ಆಸೆಯಾಗಲ್ಲ ಹೇಳಿ. ನಿಧಿಯಾಸೆಗೆ ನರ ಬಲಿ ಕೊಡೋದು, ಕುರಿ ಕೋಳಿಗಳನ್ನು ಬಲಿ ಕೊಡೋದು, ಚಿತ್ರ-ವಿಚಿತ್ರ ಪೂಜೆ ಮಾಡೋದು, ದೇವಸ್ಥಾನಗಳಲ್ಲಿ ವಿಗ್ರಹ ಇರೋ ಜಾಗಗಳನ್ನು ಅಗೆಯೋದು ಹೀಗೆ ನಾನಾ ರೀತಿಯ ಮೂಢನಂಬಿಕೆ(superstition)ಗೆ ಜನ ಜೋತು ಬೀಳುವುದನ್ನು ಕೇಳಿದ್ದೇವೆ. ಇಂತಹುದ್ದೇ ಒಂದು ವಿಚಿತ್ರ ಘಟನೆ ಚಾಮರಾಜನಗರ(chamarajanagar) ಜಿಲ್ಲೆಯಲ್ಲಿ ನಡೆದಿದೆ.
ಚಾಮರಾಜನಗರ ತಾಲೂಕು ಸೋಮಣ್ಣ ಕೂಲಿ-ನಾಲಿ ಮಾಡಿಕೊಂಡು ಹೇಗೋ ಜೀವನ ಸಾಗಿಸುತ್ತಿದ್ದ ಕಾರ್ಮಿಕ. ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸ ಮಾಡುತ್ತಿದ್ದ ಸೋಮಣ್ಣನ ಮನೆಯೊಳಗೆ ಕಳೆದ ಕೆಲ ದಿನಗಳ ಹಿಂದೆ ಹಾವೊಂದು ಕಾಣಿಸಿಕೊಂಡಿದೆ. ಮನೆಯಲ್ಲಿ ಮಕ್ಕಳು ಇದ್ದುದ್ದರಿಂದ ತೊಂದರೆಯಾಗಬಹುದು ಎಂದು ಎಣಿಸಿದ ಸೋಮಣ್ಣ ಆ ಹಾವನ್ನು ಸಾಯಿಸಿದ್ದ. ಆದರೆ ಒಂದೆರಡು ದಿನಗಳ ನಂತರ ಮನೆಯೊಳಗೆ ಮತ್ತೆ ಎರಡು ಹಾವುಗಳು ಕಂಡು ಬಂದಿವೆ. ಇಷ್ಟೇ ಅಲ್ಲದೆ ಮನೆಯೊಳಗಷ್ಟೇ ಅಲ್ಲ ಮನೆಯ ಸುತ್ತಮುತ್ತ ಪದೇ ಪದೇ ಹಾವುಗಳು ಕಾಣಿಸಿಕೊಳ್ಳತೊಡಗಿವೆ. ಇದರಿಂದ ಭಯಭೀತನಾದ ಸೋಮಣ್ಣ ಹತ್ತಿರದ ಸಂಬಂಧಿಕರಿಗೆ ವಿಷಯ ತಿಳಿಸಿದ್ದಾನೆ. ಅವರು ಕೇರಳದ ಮಾಂತ್ರಿಕನೊಬ್ಬನನ್ನು ಪರಿಚಯ ಮಾಡಿಕೊಟ್ಟು ಅವರಿಂದ ಪೂಜೆ ಮಾಡಿಸಿದರೆ ಸರಿ ಹೋಗುತ್ತದೆ ಎಂದು ಹೇಳಿದ್ದಾರೆ.
ಸಂಬಂಧಿಕರ ಮಾತಿನಂತೆ ಸೋಮಣ್ಣ ಕೇರಳದ ಮಾಂತ್ರಿಕನನ್ನು ಕರೆಸಿ ಮನೆಯೊಳಗೆ ಪೂಜೆ ಮಾಡಿಸಿದ್ದಾನೆ. ಈ ವೇಳೆ ಮನೆಯೊಳಗಿನ ನೆಲದಲ್ಲಿ ನಿಧಿ ಇದ್ದು ಸರ್ಪಗಳು ಕಾಯುತ್ತಿವೆ ಎಂದು ಕೇರಳದ ಮಂತ್ರವಾದಿ ಸೋಮಣ್ಣನನ್ನು ನಂಬಿಸಿದ್ದಾನೆ.
ಇದನ್ನೂ ಓದಿ:Shocking News: ಪ್ರಿಯಕರನ ಜೊತೆ ಓಡಿ ಹೋಗೋಕೆ ಅಪ್ಪ-ಅಮ್ಮಂಗೆ ವಿಷ ಉಣಿಸಿದ ಪಾಪಿ ಮಗಳು; ಇಂಥಾ ಮಕ್ಕಳೂ ಇರ್ತಾರೆ
ಬಳಿಕ ನೆಲದೊಳಗಿರುವ ನಿಧಿ ತೆಗೆದುಕೊಡುವುದಾಗಿ ಒಂದು ವಾರ ಕಾಲ ಮನೆಯೊಳಗೆ ಪೂಜೆ ಮಾಡಿದ್ದಾನೆ. ಇದಕ್ಕಾಗಿ ಸಹಸ್ರಾರು ರೂಪಾಯಿಗಳನ್ನು ಸೋಮಣ್ಣನಿಂದ ವಸೂಲಿ ಮಾಡಿದ್ದಾನೆ. ಮನೆಯೊಳಗೆ 20 ಅಡಿ ಆಳದಲ್ಲಿ ನಿಧಿ ಇದ್ದು ಗುಂಡಿ ತೆಗೆಯಿರಿ ಎಂದು ಹೇಳಿ ಹೋಗಿದ್ದಾನೆ. ಮಾಂತ್ರಿಕನ ಮಾತು ನಂಬಿದ ಸೋಮಣ್ಣ ಹಾಗೂ ಆತನ ಪತ್ನಿ ಇಬ್ಬರೇ ಸೇರಿಕೊಂಡು ಮನೆಯೊಳಗೆ ಸುಮಾರು 20 ಅಡಿ ಆಳದ ಬಾವಿಯಂತೆ ಗುಂಡಿ ತೋಡಿದ್ದಾರೆ.
ಅಕ್ಕಪಕ್ಕದ ಮನೆಯವರಿಗೆ ಗೊತ್ತಾಗದಂತೆ ಯಾವುದೇ ಸದ್ದಿಲ್ಲದೆ 20 ಅಡಿ ಆಳ ಗುಂಡಿ ತೆಗೆದಿದ್ದಾರೆ. ಮಣ್ಣನ್ನು ಹೊರಹಾಕಿದರೆ ಎಲ್ಲಿ ಅಕ್ಕಪಕ್ಕದವರಿಗೆ ಗೊತ್ತಾಗಿಬಿಡುತ್ತೋ ಎಂದು ಮನೆಯೊಳಗಿನ ಕೊಠಡಿಯೊಂದರಲ್ಲಿ ತುಂಬಿದ್ದಾರೆ. ಕೊನೆಗೆ 20 ಅಡಿ ಆಳ ತೆಗೆದರೂ ಯಾವ ನಿಧಿಯು ಸಿಗದೆ ಮೋಸ ಹೋಗಿದ್ದಾರೆ.
ಈ ವಿಚಾರ ಹೇಗೋ ಚಾಮರಾಜನಗರ ಪೂರ್ವ ಪೊಲೀಸರ ಗಮನಕ್ಕೆ ಬಂದು ಅವರು ಸೋಮಣ್ಣನ ಮನೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪೊಲೀಸರ ಭೇಟಿ ನಂತರವಷ್ಟೇ ನಿಧಿಯಾಸೆಗೆ ಗುಂಡಿ ತೆಗೆದಿರುವ ವಿಷಯ ಬಯಲಾಗಿದೆ. ಸೋಮಣ್ಣನನ್ನು ಪೊಲೀಸರು ವಿಚಾರಣೆ ನಡೆಸಿದ್ದು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ಇದೀಗ ಕೇರಳದ ಮಂತ್ರವಾದಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಸೋಮಣ್ಣ ಮಂತ್ರವಾದಿ ಮಾತು ಕೇಳಿ ಮನೆ ಅಗೆದು ಹಾಳು ಮಾಡಿಕೊಂಡಿದ್ದಾನೆ. ಇದಕ್ಕೆ ಅಲ್ಲವೇ ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇರುತ್ತಾರೆ ಅಂತಾ!
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ