ಸಾರಿಗೆ ಮುಷ್ಕರದಲ್ಲಿ ಅಪಸ್ವರ; ಕರ್ತವ್ಯಕ್ಕೆ ಹಾಜರಾಗುವಂತೆ ಎಸ್.ಸಿ, ಎಸ್.ಟಿ ನೌಕರರ ಸಂಘ ಕರೆ

ಈಗಾಗಲೇ ಕೇಂದ್ರ ಸರ್ಕಾರ ಹಲವು ಸಂಸ್ಥೆಗಳ ಖಾಸಗೀಕರಣ ಮಾಡಿದೆ. ಅದರ ಮುಂದುವರೆದ ಭಾಗವಾಗಿ ರಾಜ್ಯದಲ್ಲಿ ಸಾರಿಗೆ ಖಾಸಗೀಕರಣ ಯತ್ನ ನಡೆದಿದೆ. ಇದಕ್ಕೆ ಸಾರಿಗೆ ನೌಕರರು ಆಸ್ಪದ ಕೊಡಬಾರದು. ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ದೇವಾನಂದ ಜಗಾಪುರ ಮತ್ತು ಸಿದ್ದಣ್ಣ ತೇಜಿ ಹುಬ್ಬಳ್ಳಿಯಲ್ಲಿ ಸಾರಿಗೆ ನೌಕರರಿಗೆ ಕರೆ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹುಬ್ಬಳ್ಳಿ; ಸಾರಿಗೆ ನೌಕರರ ಮುಷ್ಕರ 10ನೇ ದಿನಕ್ಕೆ ಕಾಲಿಟ್ಟಿದೆ. ಇದೇ ಸಂದರ್ಭದಲ್ಲಿ ಹೋರಾಟಗಾರರಲ್ಲಿ ಅಪಸ್ವರ ಕೇಳಿಬಂದಿದೆ. ಮುಷ್ಕರದ ಹಿಂದೆ ಖಾಸಗೀಕರಣ ಹುನ್ನಾರ ಅಡಗಿದೆ ಎಂದು ಆರೋಪಿಸಿರುವ ಕೆಲ ಸಂಘಟನೆಗಳು, ಮುಷ್ಕರ ಕೈ ಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ಹುಬ್ಬಳ್ಳಿಯಲ್ಲಿ ಕರೆ ನೀಡಿವೆ. ಸಾರಿಗೆ ನೌಕರರ ಮುಷ್ಕರ ಬಿಜೆಪಿ ಖಾಸಗೀಕರಣದ ಹುನ್ನಾರವಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಎಸ್ಸಿ, ಎಸ್ಟಿ ನೌಕರರ ಸಂಘದ ವಾಯುವ್ಯ ಸಮಿತಿ ಅಧ್ಯಕ್ಷ ಎಫ್ ಎಚ್ ಜಕ್ಕಪ್ಪನವರ ಆರೋಪಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕೋಡಿಹಳ್ಳಿ ಚಂದ್ರಶೇಖರ್ ಅವರು ರೈತ ಮುಖಂಡರಾಗಿದ್ದವರು. ಈಗ ಸಾರಿಗೆ ನೌಕರರ ಒಕ್ಕೂಟ ಎಂದು ಸಂಘ ರಚಿಸಿಕೊಂಡು ಹೋರಾಟಕ್ಕಿಳಿದಿದ್ದಾರೆ. ಇದರ ಹಿಂದೆ ಖಾಸಗೀಕರಣದ ಹುನ್ನಾರ ಅಡಗಿದೆ ಎಂದು ಕಿಡಿಕಾರಿದ್ದಾರೆ.

ಸದ್ಯ ಎರಡನೇ ಹಂತದ ಹೋರಾಟ ನಡೆದಿದೆ. 10 ದಿನಗಳಿಂದ ಹೋರಾಟ ಮಾಡುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಸಾರಿಗೆ ಖಾಸಗೀಕರಣ ತಪ್ಪಿಸಬೇಕೆಂದರೆ ಹೋರಾಟದಿಂದ ಹಿಂದೆ ಸರಿಯಬೇಕು. ಕೋಡಿಹಳ್ಳಿ ಚಂದ್ರಶೇಖರ್ ಮತ್ತು ಆನಂದ್ ಹೋರಾಟದಿಂದ ಹಿಂದೆ ಸರಿಯಬೇಕು. ಸಾರಿಗೆ ನೌಕರರ ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು. ಮೂರನೇ ಹಂತದಲ್ಲಿ ಮತ್ತೆ ತೀವ್ರ ತರದ ಹೋರಾಟ ಮಾಡೋಣ.
ಮೀಸಲಾತಿಯಿಂದ ವಂಚಿಸಲು ಬಿಜೆಪಿ ನಡೆಸಿರುವ ಖಾಸಗೀಕರಣ ಪಿತೂರಿ ತಡೆಯೋಣ. ಬಿಜೆಪಿ ಷಡ್ಯಂತ್ರಕ್ಕೆ ಇಡೀ ಸಾರಿಗೆ ನೌಕರರ ಹಿತ ಬಲಿಕೊಡುವುದು ಸರಿಯಲ್ಲ. ಇದನ್ನು ಅರ್ಥ ಮಾಡಿಕೊಂಡು ಮುಖಂಡರು ಕೂಡಲೇ ಹೋರಾಟ ಕೈಬಿಡಬೇಕು. ನೌಕರರು ಕರ್ತವ್ಯಕ್ಕೆ ಹಾಜರಾಗಿ ಮುಂದಿನ ಅನಾಹುತಗಳನ್ನು ತಪ್ಪಿಸಬೇಕೆಂದು ಹುಬ್ಬಳ್ಳಿಯಲ್ಲಿ ಎಫ್.ಎಚ್.ಜಕ್ಕಪ್ಪನವರ ಕರೆ ನೀಡಿದ್ದಾರೆ.

ಕೋಡಿಹಳ್ಳಿ ವಿರುದ್ಧ ಹರಿಹಾಯ್ದ ಸಂಘಟನೆಗಳು

ಸಾರಿಗೆ ನೌಕರರು ನಡೆಸುತ್ತಿರುವ ಹೋರಾಟ ಕೈ ಬಿಡುವಂತೆ ಕಳಸಾ- ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ಸಿದ್ದಣ್ಣ ತೇಜಿ ಮತ್ತು ಎಐಟಿಯುಸಿ ಜಿಲ್ಲಾಧ್ಯಕ್ಷ ದೇವಾನಂದ ಜಕಾಪುರ್ ಕರೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಜಂಟಿಯಾಗಿ ಮಾತನಾಡಿದ ಅವರು, ಸಾರಿಗೆ ನೌಕರರ ಒಕ್ಕೂಟದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಕಿಡಿಕಾರಿದರು.

ಇದನ್ನು ಓದಿ: ಸದ್ಯದ ಪರಿಸ್ಥಿತಿ ಪ್ರಕಾರ ಎಸ್.ಎಸ್.ಎಲ್.ಸಿ., ಪಿಯುಸಿ ಪರೀಕ್ಷೆ ನಡೆಯುತ್ತವೆ: ಸಚಿವ ಸುರೇಶ್ ಕುಮಾರ್

ಕೋಡಿಹಳ್ಳಿ ಚಂದ್ರಶೇಖರ್ ಹಿಂದೆ ರೈತ ಸಂಘಟನೆಯಲ್ಲಿ ಇದ್ದಾಗಲೂ ಇದೇ ರೀತಿ ವರ್ತಿಸುತ್ತಿದ್ದರು. ಈಗ ಸಾರಿಗೆ ನೌಕರರ ಕೂಟ ಕಟ್ಟಿಕೊಂಡು ಅದನ್ನೇ ಪುನರಾವರ್ತಿಸುತ್ತಿದ್ದಾರೆ. ಇದರಿಂದ ಸಾರಿಗೆ ನೌಕರರಿಗೆ ನ್ಯಾಯ ಸಿಗೋ ಬದಲು ಸಾರಿಗೆ ಇಲಾಖೆ ಖಾಸಗೀಕರಣ  ಆಗೋ ಆತಂಕ ಸೃಷ್ಟಿಯಾಗಿದೆ. ಸರ್ಕಾರ ಮುಷ್ಕರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವುದರಿಂದ ಸಮಸ್ಯೆಯಾಗ್ತಿದೆ ಎಂದರು.

ಇದರ ಹಿಂದೆ ಖಾಸಗೀಕರಣ ಮಾಡುವ ಹುನ್ನಾರ ಅಡಗಿದೆ. ಸಾರಿಗೆ ಸಂಸ್ಥೆ ಉಳಿಯಬೇಕಂದ್ರೆ ನೌಕರರು ಕೆಲಸಕ್ಕೆ ಹಾಜರಾಗಬೇಕು. ಪ್ರತಿಷ್ಠೆ ಬದಿಗೊತ್ತಿ ಕೆಲಸಕ್ಕೆ ಹಾಜರಾಗಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ತೀರ್ಮಾನ ಕೈಗೊಳ್ಳಬೇಕು. ಕೋಡಿಹಳ್ಳಿ ಚಂದ್ರಶೇಖರ್ ನಡೆಸುತ್ತಿರುವ ಹೋರಾಟ ಪೂರ್ವನಿಯೋಜಿತವಲ್ಲ. ನೌಕರರ ವೇತನ ಬಂದ ಮೇಲೆ ಮುಷ್ಕರ ಆರಂಭಿಸಬಹುದಿತ್ತು. ಅದಕ್ಕೂ ಮುಂಚೆಯೇ ಹೋರಾಟ ಆರಂಭಿಸಿರೋದ್ರಿಂದ ಎಲ್ಲರಿಗೂ ತೊಂದರೆಯಾಗ್ತಿದೆ. ಈಗಾಗಲೇ ಕೇಂದ್ರ ಸರ್ಕಾರ ಹಲವು ಸಂಸ್ಥೆಗಳ ಖಾಸಗೀಕರಣ ಮಾಡಿದೆ. ಅದರ ಮುಂದುವರೆದ ಭಾಗವಾಗಿ ರಾಜ್ಯದಲ್ಲಿ ಸಾರಿಗೆ ಖಾಸಗೀಕರಣ ಯತ್ನ ನಡೆದಿದೆ. ಇದಕ್ಕೆ ಸಾರಿಗೆ ನೌಕರರು ಆಸ್ಪದ ಕೊಡಬಾರದು. ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ದೇವಾನಂದ ಜಗಾಪುರ ಮತ್ತು ಸಿದ್ದಣ್ಣ ತೇಜಿ ಹುಬ್ಬಳ್ಳಿಯಲ್ಲಿ ಸಾರಿಗೆ ನೌಕರರಿಗೆ ಕರೆ ನೀಡಿದ್ದಾರೆ.

ವರದಿ - ಶಿವರಾಮ ಅಸುಂಡಿ 
Published by:HR Ramesh
First published: