HOME » NEWS » District » TRANSPORT STRIKE IN BENGALURU IS COMPLETE SUCCESSFUL ON FIRST DAY GVTV SNVS

KSRTC Workers Strike - ಸಾರಿಗೆ ನೌಕರರ ಮುಷ್ಕರ ಮೊದಲ ದಿನ ಸಂಪೂರ್ಣ ಯಶಸ್ವಿ

ಸಾರಿಗೆ ನೌಕರರ ಮುಷ್ಕರದಿಂದಾಗಿ ಬೆಂಗಳೂರಿನ ಸಂಚಾರಿ ಜೀವನಾಡಿ ನಿನ್ನೆ ಸಂಪೂರ್ಣ ಸ್ಥಬ್ಧವಾಗಿತ್ತು. ಮೆಜೆಸ್ಟಿಕ್​ನೊಳಗೆ ಇತಿಹಾಸದಲ್ಲೇ ಮೊದಲ ಬಾರಿಗೆ ಖಾಸಗಿ ಬಸ್ ಎಂಟ್ರಿ ಕೊಟ್ಟಿದ್ದೂ ಆಯ್ತು. ಒಂದು ಅಮಾಯಕ ಜೀವ ಉಸಿರು ನಿಲ್ಲಿಸಿದ ಘಟನೆಯೂ ನಡೆದುಹೋಯಿತು.

news18-kannada
Updated:April 8, 2021, 7:33 AM IST
KSRTC Workers Strike - ಸಾರಿಗೆ ನೌಕರರ ಮುಷ್ಕರ ಮೊದಲ ದಿನ ಸಂಪೂರ್ಣ ಯಶಸ್ವಿ
ಮೆಜೆಸ್ಟಿಕ್
  • Share this:
ಬೆಂಗಳೂರು: ಆರನೇ ವೇತನ ಆಯೋಗ ಜಾರಿ ಸೇರಿ ವಿವಿಧ ಬೇಡಿಕೆಗೆ ಆಗ್ರಹಿಸಿ ಸಾರಿಗೆ ನೌಕರರ ಕೂಟ ಕರೆಕೊಟ್ಟಿರೋ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ನೌಕರರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ರಾಜಧಾನಿ ಬೆಂಗಳೂರಿನಲ್ಲಿ ಬಿಎಂಟಿಸಿ ಸಿಬ್ಬಂದಿ ಮುಷ್ಕರಕ್ಕೆ ಸಂಪೂರ್ಣ ಬೆಂಬಲ ಕೊಟ್ಟಿದ್ದಾರೆ. ಮೊನ್ನೆ ಮಂಗಳವಾರ ಸಂಜೆ ವೇಳೆಗೆ ವಿರಳವಾಗಿದ್ದ ಬಸ್​ಗಳು ನಿನ್ನೆ ಬುಧವಾರ ಬೆಳಗ್ಗೆ ಡಿಪೋಗಳಿಂದಲೇ ಹೊರಡಲಿಲ್ಲ. ಬೆಳಗಿನ ಶಿಫ್ಟ್ ನೌಕರರು ಸಂಪೂರ್ಣವಾಗಿ ಗೈರಾಗಿ ಇಡೀ ಬಿಎಂಟಿಸಿ ಸ್ಥಬ್ಧವಾಗುವಂತೆ ನೋಡಿಕೊಂಡರು. ಪರಿಣಾಮ ಮುಂಜಾನೆಯೇ ಮೆಜೆಸ್ಟಿಕ್​ನಲ್ಲಿ ಬಿಎಂಟಿಸಿ ಇಲ್ಲದೆ ಪ್ರಯಾಣಿಕರು ಪರದಾಡುವಂತಾಯ್ತು. ಹೊರ ಜಿಲ್ಲೆಗಳಿಂದ ಬಂದಿಳಿದ ಪ್ರಯಾಣಿಕರು ಇಲ್ಲಿ ಬಸ್ ಇಲ್ಲದೇ ಮೆಜೆಸ್ಟಿಕ್ ನಲ್ಲಿ ಅಲೆದಾಡುವಂತಾಯ್ತು. ಇದನ್ನ ಬಂಡವಾಳ ಮಾಡಿಕೊಂಡ ಕೆಲ ಆಟೋ, ಕ್ಯಾಬ್ ಚಾಲಕರು ಒಂದಕ್ಕೆ ನಾಲ್ಕರಷ್ಟು ದುಡ್ಡು ಪೀಕಿದ ಘಟನೆಯೂ ನಡೆಯಿತು.

ಬುಧವಾರ ಮುಂಜಾನೆ 8 ಗಂಟೆವರೆಗೂ ಮೆಜೆಸ್ಟಿಕ್​ನಲ್ಲಿ ಪ್ರಯಾಣಿಕರ ಗೋಳು ಜೋರಾಗೇ ಇತ್ತು. ಪ್ರಯಾಣಿಕರ ತೊಂದರೆ ತಪ್ಪಿಸಲು ಸಾರಿಗೆ ಇಲಾಖೆ ಅಧಿಕಾರಿಗಳು ಫೀಲ್ಡಿಗಿಳಿದ್ದರು. ಸಾರಿಗೆ ಇಲಾಖೆ ಅಪರ ಆಯುಕ್ತ ನರೇಂದ್ರ ಹೋಳ್ಕರ್ ನೇತೃತ್ವದ ತಂಡ ಖಾಸಗಿ ಬಸ್​ಗಳನ್ನ ರೂಟ್ ಮಾಡೋ ಮೂಲಕ ಪರಿಸ್ಥಿತಿ ತಿಳಿಗೊಳಿಸಿತು. ಜನರ ಅನುಕೂಲತೆಗೆ ತಕ್ಕಂತೆ ಖಾಸಗಿ ಬಸ್ ಹಾಗೂ ಟಿಟಿ, ಕ್ಯಾಬ್​ಗಳನ್ನ ವ್ಯವಸ್ಥೆ ಮಾಡಲಾಯ್ತು. ಇನ್ನು ಹೆಚ್ಚು ಹಣ ವಸೂಲಿ ಮಾಡದಂತೆ ಖಾಸಗಿ ಬಸ್​ಗಳಿಗೂ ದರಪಟ್ಟಿ ನೀಡಿ ಅದರಂತೆ ಟಿಕೆಟ್ ಕಲೆಕ್ಷನ್​ಗೆ ಸೂಚಿಸಲಾಯ್ತು. ಹೀಗಾಗಿ ಬೆಳಗ್ಗೆ 9 ಗಂಟೆಯಾಗ್ತಿದ್ದಂತೆ ಮೆಜೆಸ್ಟಿಕ್​ನಲ್ಲಿದ್ದ ಪ್ರಯಾಣಿಕರ ಸಂಖ್ಯೆ ಇಳಿಮುಖ ಆಯ್ತು.

ಇದನ್ನೂ ಓದಿ: BS Yeddyurappa: ಸಾರಿಗೆ ನೌಕರರ ಮುಷ್ಕರ, ಎರಡು ದಿನ ಕಾದು ಕಠಿಣ ಕ್ರಮ; ಮುಖ್ಯಮಂತ್ರಿ ಯಡಿಯೂರಪ್ಪ ಎಚ್ಚರಿಕೆ!

ಬಿಎಂಟಿಸಿ ಬದಲಿಗೆ ಖಾಸಗಿ ಬಸ್​ಗಳು ರಸ್ತೆಗಿಳಿದಿದ್ದರೂ ಹೆಚ್ಚಿನ ಜನ ಮೆಟ್ರೋದತ್ತ ಮುಖಮಾಡಿದ್ರು. ಕೋವಿಡ್ ಬಂದ ಬಳಿಕ ಖಾಲಿ ಖಾಲಿಯಾಗಿದ್ದ ನಮ್ಮ ಮೆಟ್ರೋ ಇಂದು ಮತ್ತೆ ಫುಲ್ ಆಗಿತ್ತು. ಹೀಗಾಗಿ ಮೆಟ್ರೋ ಫ್ರೀಕ್ವೆನ್ಸಿಯನ್ನೂ ಹೆಚ್ಚಿಸಲಾಗಿತ್ತು. ಇನ್ನು ಮೆಟ್ರೋದಲ್ಲಿ ಟೋಕನ್ ವ್ಯವಸ್ಥೆ ರದ್ದುಪಡಿಸಿರೋ ಕಾರಣ ಕೆಲ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯೂ ಆಯ್ತು. ಮತ್ತೆ ಕೆಲವರು ಅನಿವಾರ್ಯವಾಗಿ ಸ್ಮಾರ್ಟ್ ಕಾರ್ಡ್ ಕೊಂಡೇ ಮೆಟ್ರೋ ಪ್ರಯಾಣ ಮಾಡಿದರು.

ಇನ್ನು ಮುಷ್ಕರಕ್ಕೆ ಎಲ್ಲಾ ನೌಕರರು ಬೆಂಬಲ ಕೊಟ್ಟಿರುವಾಗಲೇ ಡ್ರೈವರ್ ತ್ಯಾಗರಾಜು ಕರ್ತವ್ಯಕ್ಕೆ ಹಾಜರಾಗಿ ಪ್ರಶಂಸೆಗೆ ಪಾತ್ರವಾದರು. ಎಂದಿನಂತೆ ಶಿಫ್ಟ್​ಗೆ ಹಾಜರಾದ ಚಾಲಕ ತ್ಯಾಗರಾಜ್ ತಾನು ಸಾರ್ವಜನಿಕರ ಹಿತದೃಷ್ಟಿಯಿಂದ ಸೇವೆ ಸಲ್ಲಿಸುತ್ತಿದ್ದೇವೆ. ಕೋವಿಡ್ ಸಂದರ್ಭದಲ್ಲಿ ಮನೆಯಲ್ಲಿ ಕೂರಿಸಿ ಸಂಬಳಕೊಟ್ಟಿದ್ದಾರೆ. ಮಾನವೀಯತೆ ಇದ್ದವರು ಮುಷ್ಕರ ಮಾಡದೇ ಕೆಲಸಕ್ಕೆ ಹಾಜರಾಗಬೇಕು ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಸರ್ಕಾರ ಲಿಖಿತ ರೂಪದಲ್ಲಿ ಭರವಸೆ ಈಡೇರಿಸಿದರೆ ಮಾತ್ರ ಸಾರಿಗೆ ಸತ್ಯಾಗ್ರಹ ನಿಲ್ಲಿಸುತ್ತೇವೆ; ಕೋಡಿಹಳ್ಳಿ ಚಂದ್ರಶೇಖರ್!

ಕೆಲ ಸಂಘಟನೆಗಳು ತ್ಯಾಗರಾಜ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಸನ್ಮಾನ ಮಾಡಿದ ಘಟನೆಯೂ ನಡೆಯಿತು.ಇದೆಲ್ಲದರ ನಡುವೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲೇ ಚಿನ್ನಪ್ಪ ಎಂಬ ವ್ಯಕ್ತಿ ಕೊನೆಯುಸಿರೆಳೆದ ಘಟನೆಯೂ ನಡೆಯಿತು. ಆನೆಕಲ್ ತಾಲೂಕಿನ ಚಿಕ್ಕನಹಳ್ಳಿ ನಿವಾಸಿಯಾಗಿದ್ದ ಚಿನ್ನಪ್ಪ, ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಕುಸಿದು ಬಿದ್ದು ಹೃದಯಾಘಾತದಿಂದ ಸಾವಿಗೀಡಾದ ದುರ್ಘಟನೆ ನಡೆದುಹೋಯ್ತು.ಒಟ್ಟಿನಲ್ಲಿ ಸಾರಿಗೆ ನೌಕರರ ಮುಷ್ಕರ ಸಂಪೂರ್ಣ ಯಶಸ್ವಿಯಾಗಿದ್ದು ಬೆಂಗಳೂರಿನಲ್ಲಿ ಬಿಎಂಟಿಸಿ ಸಂಚಾರ ಸ್ಥಬ್ಧವಾಗಿತ್ತು. ಇಂದೂ ಕೂಡ ಇದೇ ಸ್ಥಿತಿ ಮುಂದುವರೆಯಲಿದೆ. ಆದ್ರೆ ಸಾರಿಗೆ ಇಲಾಖೆ ಖಾಸಗಿಯವರ ಜೊತೆ ಸಂಪರ್ಕ ಸಾಧಿಸಿ ಹೆಚ್ಚೆಚ್ಚು ಬಸ್ ಓಡಿಸೋಕೆ ತೀರ್ಮಾನಿಸಿದೆ. ಸರ್ಕಾರ ಹಾಗೂ ಸಾರಿಗೆ ನೌಕರರು ಜಿದ್ದಿಗೆ ಬಿದ್ದಿರೋ ಕಾರಣ ಸದ್ಯಕ್ಕೆ ಮುಷ್ಕರ ಅಂತ್ಯವಾಗುವ ಯಾವುದೇ ಲಕ್ಷಣ ಕಾಣಿಸದಾಗಿದೆ.

ವರದಿ: ಗಂಗಾಧರ ವಾಗಟ
Published by: Vijayasarthy SN
First published: April 8, 2021, 7:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories