ಆಸ್ಪತ್ರೆಗೆ ಮಗು ಕರೆದೊಯ್ಯಲು ತಾಯಿ ಪರದಾಟ; ವೃದ್ಧೆಯ ಸಂಕಟ; ನಿರ್ವಾಹಕನ ಕಣ್ಣೀರು

ಸಾರಿಗೆ ನೌಕರರ ಮುಷ್ಕರದಿಂದ ಯಾದಗಿರಿ ಜನಜೀವನ ಹೈರಾಣಗೊಂಡಿದೆ. ಖಾಸಗಿ ವಾಹನಗಳ ದುಪ್ಪಟ್ಟು ಹಣವಸೂಲಿಯಿಂದ ಹಿಡಿದು ಆಸ್ಪತ್ರೆ ಇತ್ಯಾದಿ ಅಗತ್ಯ ಸೇವೆಗಳಿಗೆ ತೆರಳಲು ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸಾರಿಗೆ ನೌಕರರ ಮುಷ್ಕರದಿಂದ ಯಾದಗಿರಿಯಲ್ಲಿ ಜನಜೀವನ ಅಸ್ತವ್ಯಸ್ತ

ಸಾರಿಗೆ ನೌಕರರ ಮುಷ್ಕರದಿಂದ ಯಾದಗಿರಿಯಲ್ಲಿ ಜನಜೀವನ ಅಸ್ತವ್ಯಸ್ತ

  • Share this:
ಯಾದಗಿರಿ: ‌ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಈಗ ಜನಸಾಮನ್ಯರಿಗೆ ತಟ್ಟಿದೆ. ಯಾದಗಿರಿ ಜಿಲ್ಲೆಯಲ್ಲಿ ಕೂಡ ಸಾರಿಗೆ ನೌಕರರ ಮುಷ್ಕರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಯಾದಗಿರಿ, ಸುರಪುರ, ಶಹಾಪುರ, ಗುರುಮಠಕಲ್ ಮೊದಲಾದ ಕಡೆ ಈಶಾನ್ಯ ಸಾರಿಗೆ ಸಂಸ್ಥೆಯ ನೌಕರರು ಮುಷ್ಕರಕ್ಕೆ ಬೆಂಬಲಿಸಿ ಕರ್ತವ್ಯಕ್ಕೆ ಗೈರಾಗಿದ್ದು ಜಿಲ್ಲೆಯಾದ್ಯಂತ ಪ್ರಯಾಣಿಕರು ಪರದಾಡುವಂತಾಗಿದೆ‌. ನಿನ್ನೆ ಬೆಳಗ್ಗೆಯಿಂದಲೇ ಖಾಸಗಿ ವಾಹನಗಳ ಮೂಲಕ ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರು ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ ಗಳಿಲ್ಲದೇ ಊರಿಗೆ ಹೋಗಲು ಪರದಾಡುವಂತಾಗಿದೆ‌.

ದುಪ್ಪಟ್ಟು ಹಣ ವಸೂಲಿ...!

ಸಾರಿಗೆ ನೌಕರರ ಮುಷ್ಕರವನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ವಾಹನಗಳ ಚಾಲಕರು ಶಹಾಪುರ, ಸುರಪುರ, ಕಲಬುರಗಿ, ಗುರುಮಠಕಲ್, ರಾಯಚೂರು ಜಿಲ್ಲೆಗೆ ತೆರಳಲು ಪ್ರಯಾಣಿಕರಿಂದ ಹೆಚ್ಚಿನ ಹಣವಸೂಲಿ ನಡೆಸಿದರು. ಇದರಿಂದ ಬಡವರು ಹಣವಿಲ್ಲದೇ ಕಂಗಲಾಗಿದ್ದಾರೆ.

ರಾಯಚೂರಿಗೆ ತೆರಳಲು ಮಗುವಿನೊಂದಿಗೆ ತಾಯಿ ಸಂಕಷ್ಟ:

ಯಾದಗಿರಿ ತಾಲೂಕಿನ ಹೊಸಳ್ಳಿ ಗ್ರಾಮದ ಶೋಭಾ ಜ್ವರದಿಂದ ಬಳಲುತ್ತಿರುವ ಒಂದುವರೆ ವರ್ಷದ ಮಗುವಿನೊಂದಿಗೆ ಖಾಸಗಿ ವಾಹನದ ಮೂಲಕ ಊರಿಂದ ಯಾದಗಿರಿ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದಿರುತ್ತಾರೆ. ಆದರೆ, ಬಸ್ ಬಂದ್ ಇರುವುದನ್ನು ಅರಿತು‌ ಕೆಲ ಗಂಟೆಗಳ ಕಾಲ ಪರದಾಡುತ್ತಾರೆ. ಆಸ್ಪತ್ರೆಗೆ ರಾಯಚೂರಿಗೆ ಹೋಗಲು ಖಾಸಗಿ ವಾಹನಗಳವರು 1600 ರೂ ದುಪ್ಪಟ್ಟು ಹಣ ಡಿಮ್ಯಾಂಡ್ ಮಾಡುತ್ತಾರೆ. ನಂತರ ಬೇರೆ ಚಾಲಕನೊಬ್ಬ ಕಡಿಮೆ ಹಣಕ್ಕೆ ರಾಯಚೂರಿಗೆ ಕರೆದುಕೊಂಡು ಹೋಗುತ್ತಾನೆ.

ಇದನ್ನೂ ಓದಿ: ಚಿರತೆ ಹಾವಳಿಗೆ ಬಿಚ್ಚಿದ ಹಾವೇರಿ ಜನ: ಕಾಡುಮೃಗ ಸೆರೆಹಿಡಿಯಲು ಬಲೆಬೀಸಿದ ಅರಣ್ಯ ಇಲಾಖೆ

ಇನ್ನು ಮತ್ತೊಂದು ಘಟನೆಯಲ್ಲಿ, ಹೈದ್ರಾಬಾದ್​ನಿಂದ ಮಲ್ಲಹಳ್ಳಿ ಗ್ರಾಮಕ್ಕೆ ತೆರಳಬೇಕಿರುವ ವೃದ್ದೆಯೊಬ್ಬರು ಊರಿಗೆ ತೆರಳಲು ಪರದಾಡುವಂತಾಗಿತ್ತು. ಕಾಲು ನೋವುನಿಂದ ಬಳಲುತ್ತಿದ್ದ ವೃದ್ದೆ ಚಿಕಿತ್ಸೆ ಪಡೆಯಲು ಹೈದ್ರಾಬಾದ್​ಗೆ ಹೋಗಬೇಕಿರುತ್ತದೆ. ಚಿಕಿತ್ಸೆ ಪಡೆದು ತೆಲಂಗಾಣದ ಬಸ್ ಮೂಲಕ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿಂದ ತನ್ನ ಊರಿಗೆ ತೆರಳಲು ಇವರು ಪಟ್ಟ ಪಾಡು ಹೇಳತೀರದು.

ನಿರ್ವಾಹಕ ಕಣ್ಣೀರು...!

ಸಾರಿಗೆ ಸಂಸ್ಥೆ ಅಧಿಕಾರಿಗಳು ಹೇಗಾದರೂ ಮಾಡಿ ನಿನ್ನೆ ಬಸ್ ಸಂಚಾರ ಆರಂಭ ಮಾಡಲು ಸಿಬ್ಬಂದಿಗೆ ಒತ್ತಡ ಹಾಕುವ ತಂತ್ರ ಮಾಡಿದರು. ಇದಕ್ಕೆ ಬೆದರಿದ ನಿರ್ವಾಹಕ ಶಿವಪ್ಪ ಕೆಲಸಕ್ಕೆ ಹಾಜರಾಗುತ್ತಾರೆ. ನಂತರ ಗಳಗಳ ಕಣ್ಣೀರು ಹಾಕಿ ನೋವು ತೊಡಿಕೊಳ್ಳುತ್ತಾರೆ. ಕಡಿಮೆ ವೇತನದಲ್ಲಿ ನಾವು ಹೇಗೆ ಬದುಕು ಸಾಗಿಸಬೇಕು. ನನ್ನ ಮಕ್ಕಳ ಶಾಲೆ ಶುಲ್ಕ ಕಟ್ಟಲು ಆಗುತ್ತಿಲ್ಲ. ಆಸ್ಪತ್ರೆಯ ಚಿಕಿತ್ಸೆ ವೆಚ್ಚ ಭರಿಸಲು ಹಣ ಸರಿ ಹೋಗುತ್ತಿಲ್ಲ. ಈಗಾಗಲೇ ನನಗೆ ಒಂದುವರೆ ಲಕ್ಷ ರೂ ಸಾಲವಾಗಿದ್ದು ಸಾಲಗಾರರ ಕಾಟದಿಂದ ನೆಮ್ಮದಿ ಇಲ್ಲದಂತಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ಣ ಸವದಿ ಅವರೇ ನೌಕರರ ಕಷ್ಟ ಅರಿತು ಬೇಡಿಕೆಗಳನ್ನು ಈಡೇರಿಸಿ ನಮ್ಮ ಜೀವ ಉಳಿಸಿ ಎಂದು ಕಣ್ಣೀರು ಹಾಕುತ್ತಾ ಮನವಿ ಮಾಡುತ್ತಾರೆ.

ವರದಿ: ನಾಗಪ್ಪ ಮಾಲಿಪಾಟೀಲ
Published by:Vijayasarthy SN
First published: