• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಟೊಯೋಟಾ ಕಂಪನಿಯ ಕಾರ್ಮಿಕರಿಗೆ ಅನ್ಯಾಯ; ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರ ಅಹೋರಾತ್ರಿ ಪ್ರತಿಭಟನೆ

ಟೊಯೋಟಾ ಕಂಪನಿಯ ಕಾರ್ಮಿಕರಿಗೆ ಅನ್ಯಾಯ; ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರ ಅಹೋರಾತ್ರಿ ಪ್ರತಿಭಟನೆ

ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ಟೊಯೋಟಾ  ಕಿರ್ಲೋಸ್ಕರ್ ಕಂಪನಿ ಕಾರ್ಮಿಕರು.

ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ಟೊಯೋಟಾ ಕಿರ್ಲೋಸ್ಕರ್ ಕಂಪನಿ ಕಾರ್ಮಿಕರು.

ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯದಾದ್ಯಂತ ಇರುವ ಟೊಯೋಟಾ ವಾಹನ ಮಾರಾಟ ಮಳಿಗೆಗಳಿಗೆ ಬೀಗ ಜಡಿದು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು. ಜೊತೆಗೆ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಲಿ ಎಂದು ಆಗ್ರಹಿಸಿದರು.

  • Share this:

ರಾಮನಗರ : ಟೊಯೋಟಾ ಕಂಪನಿಯ 40 ಜನ ಕಾರ್ಮಿಕರನ್ನು ಏಕಾಏಕಿ ವಜಾ ಮಾಡಲಾಗಿದೆ. ಈ ಹಿನ್ನೆಲೆ ಕಾರ್ಮಿಕರು ಕಂಪನಿಯ ಎದುರು ಕಳೆದ 4 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಕಂಪನಿಯವರು ಮಾತ್ರ ಕಾರ್ಮಿಕರ ಹೋರಾಟಕ್ಕೆ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ.


ಹೌದು, ರಾಮನಗರ ಜಿಲ್ಲೆ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಪ್ರತಿಷ್ಠಿತ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್‌ ಕಾರ್ಖಾನೆ ನೌಕರರ ಮುಷ್ಕರವು 4 ನೇ ದಿನವೂ ಮುಂದುವರಿದಿದ್ದು, ಕಾರ್ಮಿಕರು ತಮ್ಮ ಪಟ್ಟು ಸಡಿಲಿಸಿಲ್ಲ. ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ಇರುವ ಕಾರ್ಖಾನೆಯ ಮುಂಭಾಗ ನಡೆದಿರುವ ಮುಷ್ಕರದಲ್ಲಿ ನೂರಾರು ಕಾರ್ಮಿಕರು ಭಾಗಿಯಾಗಿದ್ದು, ಅಹೋರಾತ್ರಿ ಧರಣಿ ಕುಳಿತಿದ್ದಾರೆ. ಇಲ್ಲಸಲ್ಲದ ಕಾರಣ ಹೇಳಿ 40 ಜನ ಕಾರ್ಮಿಕರನ್ನು ಅಮಾನತು ಮಾಡಲಾಗಿದೆ. ಹಾಗಾಗಿ ಕೂಡಲೇ ಅಮಾನತು ಆದೇಶ ವಾಪಸ್ ಪಡೆಯುವುದು ಹಾಗೂ ಕಾರ್ಮಿಕರಿಗೆ ಕೆಲಸದ ಅವಧಿಯಲ್ಲಿ ವಿಶ್ರಾಂತಿ ಸೇರಿದಂತೆ ಹಲವು ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.


ಕಾರ್ಖಾನೆಯಲ್ಲಿ ಕೆಲಸದ ಅವಧಿಯಲ್ಲಿ ತೀರಾ ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸಲಾಗುತ್ತಿದೆ. ಎರಡು ಗಂಟೆ ನಿರಂತರ ಕೆಲಸದ ಬಳಿಕ ಕೇವಲ 10 ನಿಮಿಷ ವಿಶ್ರಾಂತಿ ನೀಡಲಾಗುತ್ತದೆ. ಈ ಅವಧಿಯಲ್ಲಿ ನೀರು ಕುಡಿಯಲು ಹಾಗೂ ಶೌಚಾಲಯಕ್ಕೆ ತೆರಳಲು ಸಮಯವೂ ಸಾಲದು. ಮಧ್ಯದಲ್ಲಿ ನೀರು ಕುಡಿಯಬೇಕಾದರೂ ವ್ಯವಸ್ಥಾಪಕರಿಂದ ಅನುಮತಿ ಪಡೆಯಬೇಕು. ಅಲ್ಲದೇ ಕೆಲಸದ ಒತ್ತಡ ಹೆಚ್ಚಾಗಿದ್ದು, ಹೆಚ್ಚಿನ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳುವಂತೆ ಕಾರ್ಮಿಕರ ಮೇಲೆ ಒತ್ತಡ ಹೇರಲಾಗುತ್ತಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ಕಾರ್ಮಿಕ ಸಂಘದ ಪ್ರತಿನಿಧಿಗೆ ಅಮಾನತು ಶಿಕ್ಷೆ ನೀಡಲಾಗಿದೆ ಎಂದು ದೂರಿದರು. ಜೊತೆಗೆ ಊಟದ ಸಮಯ, ಶೌಚಾಲಯಕ್ಕೆ ಹೋದ ಸಮಯವನ್ನು ಲೆಕ್ಕ ಹಾಕಿ ಸಂಬಳಕ್ಕೆ ಕತ್ತರಿ ಹಾಕುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ.


ಇದನ್ನು ಓದಿ: ಇಲ್ಲಿದೆ ಇಮ್ಯುನಿಟಿ ಹೆಚ್ಚಿಸುವ ಅಕ್ಕಿ; ಜಿಕೆವಿಕೆ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ ಕೊರೋನಾ ವಿರುದ್ಧ ಸಮರ ಸಾರುವ ಭತ್ತದ ತಳಿ


ಪ್ರತಿಭಟನೆ ಹೆಚ್ಚಾಗುತ್ತಿದ್ದಂತೆ ಕಂಪನಿಯನ್ನು ಸದ್ಯ ಎರಡು ದಿನದಿಂದ ಲಾಕ್ ಔಟ್ ಮಾಡಲಾಗಿದೆ. ಈ ಹಿನ್ನೆಲೆ  ಪ್ರತಿಭಟನಾ ನಿರತ ಕಾರ್ಮಿಕರನ್ನು ಕನ್ನಡಪರ ಹೋರಾಟಗಾರರು ಭೇಟಿ ಮಾಡಿ ಧೈರ್ಯ ತುಂಬಿದರು. ಕಾರ್ಖಾನೆಗಾಗಿ ನೂರಾರು ಜನರು ಇಲ್ಲಿ ದುಡಿಯುತ್ತಿದ್ದಾರೆ. ಕಾರ್ಮಿಕರೆಲ್ಲರೂ ರೈತರ ಮಕ್ಕಳೇ ಆಗಿದ್ದಾರೆ. ಜಪಾನ್‌ ಮೂಲದ ಕಂಪನಿಯು ಇಲ್ಲಸಲ್ಲದ ನಿಯಮಗಳನ್ನು ತೆಗೆದು ಕಾರ್ಖಾನೆಯನ್ನು ಲಾಕ್‌ಔಟ್‌ ಮಾಡಿರುವುದು ಸರಿಯಲ್ಲ. ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯದಾದ್ಯಂತ ಇರುವ ಟೊಯೋಟಾ ವಾಹನ ಮಾರಾಟ ಮಳಿಗೆಗಳಿಗೆ ಬೀಗ ಜಡಿದು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು. ಜೊತೆಗೆ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಲಿ ಎಂದು ಆಗ್ರಹಿಸಿದರು.


ಒಟ್ಟಾರೆ ಕಾರ್ಮಿಕರ ಹೋರಾಟಕ್ಕೆ ವಿವಿಧ ಕಾರ್ಮಿಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ಸರ್ಕಾರದ ಮಧ್ಯ ಪ್ರವೇಶಕ್ಕೆ ಆಗ್ರಹಿಸಿವೆ. ಟಿಕೆಎಂ ಕಂಪನಿಯು ಕಾರ್ಖಾನೆಯ ಲಾಕ್‌ಔಟ್‌ ಆದೇಶವನ್ನು ಕೂಡಲೇ ಹಿಂಪಡೆದು ಕಾರ್ಮಿಕರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಬೇಕು. ಕಾರ್ಮಿಕರ ಈ ಹೋರಾಟವನ್ನು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯು ಬೆಂಬಲಿಸಲಿದೆ. ಜಿಲ್ಲಾಡಳಿತ ಹಾಗೂ ಕಾರ್ಮಿಕ ಇಲಾಖೆಯು ಮಧ್ಯ ಪ್ರವೇಶ ಮಾಡಿ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು ಎಂಬ ಕೂಗು ಕೇಳಿಬಂದಿದೆ.


ವರದಿ : ಎ.ಟಿ.ವೆಂಕಟೇಶ್

Published by:HR Ramesh
First published: