ರಾಮನಗರ: ಇದು ರಾಜ್ಯದ ಪ್ರತಿಷ್ಠಿತ ಕಂಪನಿ. ಕಂಪನಿ ಆಡಳಿತ ಮಂಡಳಿ ವಿರುದ್ದ ಕಂಪನಿ ಕಾರ್ಮಿಕರು ಕಳೆದ 40 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಕಾರ್ಮಿಕರಪ್ರತಿಭಟನೆಗೆ, ಕಂಪನಿ ಆಗಲಿ ಅಥವಾ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಖ್ಯಾರೆ ಅಂದಿಲ್ಲ. ಹೀಗಾಗಿ ಆಕ್ರೋಶಗೊಂಡಿರುವ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ್ದಾರೆ.
ಹೌದು, ರಾಮನಗರ ತಾಲೂಕಿನ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಪ್ರತಿಷ್ಠಿತ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯ ಕಾರ್ಮಿಕರು, ಕಂಪನಿಯ ಆಡಳಿತ ಮಂಡಳಿ ವಿರುದ್ದ ಕಳೆದ 40 ದಿನಗಳಿಂದ ಕಂಪನಿ ಮುಂಭಾಗ ಮುಷ್ಕರ ನಡೆಸುತ್ತಿದ್ದಾರೆ. ಆದರೆ ಕಂಪನಿ ಆಗಲಿ, ರಾಜ್ಯ ಸರ್ಕಾರವಾಗಲಿ ಅಥವಾ ರಾಮನಗರ ಜಿಲ್ಲಾಡಳಿತ ಖ್ಯಾರೆ ಅಂದಿಲ್ಲ. ಹೀಗಾಗಿ ರಾಮನಗರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಕಾರ್ಮಿಕರು ಹೋರಾಟ ನಡೆಸಿದರು. ಕಾರ್ಮಿಕರ ಸಮಸ್ಯೆ ಬಗೆಹರಿಸಬೇಕು. ರಾಮನಗರ ಜಿಲ್ಲಾಡಳಿತ ಮಧ್ಯೆ ಪ್ರವೇಶಿಸಬೇಕು ಎಂದು ಒತ್ತಾಯಿಸಿ ಸುಮಾರು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು. ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡಗೆ ಮನವಿ ಸಲ್ಲಿಸಿದರು. ನಮ್ಮ ಸಮಸ್ಯೆಗೆ ಪರಿಹಾರ ಸಿಗದಿದ್ದರೆ ಮುಂದೆ ಉಗ್ರ ಹೋರಾಟ ನಡೆಸುವುದಾಗಿ ಟೊಯೋಟಾ ಕಾರ್ಮಿಕ ಒಕ್ಕೂಟದ ಅಧ್ಯಕ್ಷ ಚಕ್ಕೆರೆ ಪ್ರಸನ್ನ ಎಚ್ಚರಿಕೆ ಕೊಟ್ಟರು.
ಅಂದಹಾಗೆ ರಾಮನಗರ ತಾಲೂಕಿನ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರೋ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿ, ರಾಜ್ಯದ ಪ್ರತಿಷ್ಠಿತ ಕಂಪನಿ. ದೇಶದಲ್ಲಿಯೇ ಇರುವ ಏಕೈಕ ಘಟಕ ಸಹಾ ಇದು. ಟಿಕೆಎಂ ಪ್ರಮುಖ ಘಟಕದಲ್ಲಿ ಸುಮಾರು 3500 ಸಾವಿರ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ನಡುವಿನ ತಿಕ್ಕಾಟದಿಂದಾಗಿ, ಕಾರ್ಮಿಕರು ಪ್ರತಿಭಟನೆ ಮುಂದುವರೆಸಿದ್ದಾರೆ. ಈ ಹಿಂದೆ ರಾಜ್ಯ ಸರ್ಕಾರ ಮಧ್ಯೆ ಪ್ರವೇಶಿಸಿ, ಆಡಳಿತ ಮಂಡಳಿ ಹಾಗೂ ಕಾರ್ಮಿಕರ ನಡುವೆ ಮಾತುಕತೆ ನಡೆಸಿದರೂ ಸಮಸ್ಯೆ ಬಗೆಹರಿದಿಲ್ಲ. ಹೀಗಾಗಿ ಕಾರ್ಮಿಕರು ಪ್ರತಿಭಟನೆ ಮುಂದುವರೆಸಿದ್ದಾರೆ.
ಇದನ್ನು ಓದಿ: ಕರವೇ ನಾರಾಯಣಗೌಡ ಕರೆ; ಟ್ವಿಟರ್ನಲ್ಲಿ #ಕನ್ನಡವಿವಿಉಳಿಸಿ ಟಾಪ್ ಟ್ರೆಂಡಿಂಗ್!
ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಅಶ್ವಥ್ ನಾರಾಯಣ್, ಕಾರ್ಮಿಕರು ಹಾಗೂ ಆಡಳಿತ ಮಂಡಳಿ ಜೊತೆ ಈಗಾಗಲೇ ಮಾತುಕತೆ ಮಾಡಿ ಸರ್ಕಾರದ ತೀರ್ಮಾನ ಹೇಳಲಾಗಿದೆ. ಆದರೆ ಇನ್ನು ಕೂಡ ಪ್ರತಿಭಟನೆ ಮುಂದುವೆಸಿದ್ದಾರೆ. ಇಬ್ಬರೂ ತಮ್ಮ ಸಮಸ್ಯೆಗಳನ್ನ ಬಗೆಹರಿಸಿಕೊಳ್ಳಲು ಕಾರ್ಮಿಕರ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಬಹುದು ಎಂದು ಹೇಳಿದ್ದಾರೆ. ನಾವು ಇಬ್ಬರ ಪರವಾಗಿಯೂ, ವಿರುದ್ಧವಾಗಿಯೂ ಇಲ್ಲ. ಎಲ್ಲವನ್ನು ವಿರೋಧ ಮಾಡಿದರೆ ರಾಜ್ಯದಲ್ಲಿ ಯಾವ ಕಂಪನಿಗಳು ಸ್ಥಾಪನೆಯಾಗಲ್ಲ ಎಂದರು.
ವರದಿ : ಎ.ಟಿ.ವೆಂಕಟೇಶ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ