ಕಾರವಾರ; ಕೊರೋನಾ ಮಹಾಮಾರಿ ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ನುಂಗಿದೆ. ಕಳೆದ ಎರಡು ತಿಂಗಳ ಹಿಂದೆ ನಿರೀಕ್ಷೆಗೂ ಮೀರಿ ಅಭಿವೃದ್ದಿಯತ್ತ ಸಾಗುತ್ತಿದ್ದ ಪ್ರವಾಸೋದ್ಯಮ ಈಗ ಪ್ರವಾಸಿಗರು ಇಲ್ಲದೆ ಪ್ರವಾಸಿ ಸ್ಥಳಗಳು ಬಿಕೋ ಎನ್ನುತ್ತಿದ್ದು ಕಳೆ ಕಳೆದುಕೊಂಡಿದೆ. ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ವಿವಿಧ ಪ್ರವಾಸಿ ಸ್ಥಳಗಳಿಗೆ ಅತೀ ಹೆಚ್ಚು 6 ಲಕ್ಷ ಪ್ರವಾಸಿಗರು ಭೇಟಿ ನೀಡಿದ ಈ ನಡುವೆ ಕೊರೋನಾ ಎರಡನೇ ಅಲೆಯ ಆತಂಕ ಶುರುವಾಗುತ್ತಿದ್ದಂತೆ ಮಾರ್ಚ್ ತಿಂಗಳ ಅಂತ್ಯದಿಂದ ಏಪ್ರಿಲ್ ತಿಂಗಳ ಇಲ್ಲಿಯವರೆಗೂ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿದೆ.
ಪ್ರವಾಸೋದ್ಯಮ ಇಲಾಖೆಯ ಮಾಹಿತಿಯಂತೆ ಶೇ. 60ರಷ್ಟು ಪ್ರವಾಸಿಗರ ಸಂಖ್ಯೆ ಇಳಿಕೆ ಕಂಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸಿಗರ ಸ್ವರ್ಗ ಎಂದೇ ಖ್ಯಾತಿ ಪಡೆದ ದಾಂಡೇಲಿಯಲ್ಲಿ ಪ್ರವಾಸಿಗರು ಕಳೆದ ಒಂದು ವಾರದಿಂದ ಬರುತ್ತಿಲ್ಲವಂತೆ. ಈ ಹಿಂದೆ ಹೋಂ ಸ್ಟೇ ಕಾಟೇಜ್ ಗಳನ್ನು ಕಾಯ್ದಿರಿಸಿದವರು ಹೊರತುಪಡಿಸಿ ಹೊಸದಾಗಿ ಬುಕ್ಕಿಂಗ್ ಮಾಡುವವರ ಸಂಖ್ಯೆ ಗಣನೀಯ ಇಳಿಕೆ ಕಂಡಿದೆ. ಏಪ್ರಿಲ್ ಮೇ ತಿಂಗಳು ಹೋಂ ಸ್ಟೇ, ಬೀಚ್ ರೆಸ್ಟೋರೆಂಟ್ ಮಾಲೀಕರಿಗೆ ಹಬ್ಬವಾಗಿರುತ್ತಿತ್ತು. ಆದರೆ ಕೋವಿಡ್ ಎರಡನೇ ಅಲೆ ನೇರವಾಗಿ ಪ್ರವಾಸಿಗರು ಮತ್ತು ಪ್ರವಾಸೋದ್ಯಮದ ಮೇಲೆ ಕರಿನೆರಳು ಬೀರಿದೆ. ಧಾರ್ಮಿಕ ಕ್ಷೇತ್ರದಲ್ಲೂ ಗಣನೀಯವಾಗಿ ಭಕ್ತರ ಸಂಖ್ಯೆ ಇಳಿಕೆ ಕಂಡಿದೆ. ಗೋಕರ್ಣ,ಮೂರ್ಡೆಶ್ವರ ದಲ್ಲಿ ಭಕ್ತರ ಸಂಖ್ಯೆ ಇಳಿಕೆಯಾಗಿದೆ. ಕಳೆದ ಹದಿನೈದು ದಿನದಲ್ಲಿ ಇಡೀ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ನೆಲಕಚ್ಚಿದೆ. ಇದರಿಂದ ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡು ಬಂಡವಾಳ ಹಾಕಿದ್ದ ಪ್ರವಾಸೋದ್ಯಮಿಗಳು ಕಂಗಾಲಾಗಿದ್ದಾರೆ. ಈ ನಡುವೆ ರಾಜ್ಯ ಸರಕಾರ ಲಾಕ್ ಡೌನ್ ಭಯ ಹುಟ್ಟಿಸುತ್ತಿದ್ದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಕೇವಲ ಹದಿನೈದೆ ದಿನದಲ್ಲಿ ಕೋವಿಡ್ ಎರಡನೇ ಅಲೆಗೆ ಸಿಕ್ಕಿ ಇಡೀ ಪ್ರವಾಸೋದ್ಯಮದ ಚಿತ್ರಣವೇ ಬದಲಾಗಿದೆ.
ಇದನ್ನು ಓದಿ: Coronavirus | ಸಿಬಿಎಸ್ಇ 10ನೇ ತರಗತಿ ಪರೀಕ್ಷೆಗಳು ರದ್ದು, 12ನೇ ತರಗತಿ ಪರೀಕ್ಷಾ ದಿನಾಂಕ ಮುಂದೂಡಿಕೆ
ಲಾಕ್ ಡೌನ್ ಭಯ
ಇನ್ನು ಕೋವಿಡ್ ಎರಡನೇ ಅಲೆ ಜೋರಾಗಿದೆ. ಈಬೆನ್ನಲ್ಲೆ ರಾಜ್ಯ ಸರಕಾರ ಲಾಕ್ ಡೌನ್ ಮಾಡಲು ಮುಂದಾಗಿದೆ, ತಜ್ಞರ ಜತೆ ಹತ್ತಾರು ಸಭೆ, ಚರ್ಚೆ ನಡೆಸುತ್ತಿದೆ. ಇದ್ರಿಂದ ತಂತಿ ಮೇಲಿನ ನಡಿಗೆ ಪ್ರವಾಸೋದ್ಯಮಿಗಳದ್ದಾಗಿದೆ. ಹೀಗೆ ನ್ಯೂಸ್18 ಕನ್ನಡದೊಂದಿಗೆ ಮಾತಿಗೆ ಸಿಕ್ಕಿದ ದಾಂಡೇಲಿಯ ಪರಂಪರಾ ರೆಸಾರ್ಟ್ ಮಾಲೀಕ ಇಮಾಮ್ ಮಾತನಾಡುತ್ತ ಕಳೆದ ವರ್ಷ ಪ್ರವಾಸೋದ್ಯಮ ಸಂಪೂರ್ಣ ನೆಲಕಚ್ಚಿತ್ತು. ಈ ವರ್ಷ ನವೆಂಬರ್ನಿಂದ ನಿರೀಕ್ಷೆ ಮೀರಿ ಪ್ರವಾಸಿಗರು ದಾಂಡೇಲಿ ಮತ್ತು ಕರಾವಳಿಗೆ ಬಂದಿದ್ದರು. ಅಭಿವೃದ್ಧಿ ಹಂತ ಕಾಣುತ್ತಿರುವಾಗಲೆ ಕೋವಿಡ್ ಎರಡನೇ ಅಲೆ ತಮ್ಮನ್ನು ಲಾಕ್ ಡೌನ್ ಭಯದ ಸುಳಿಯಲ್ಲಿ ಸಿಲುಕಿಸಿದೆ. ಈ ಬಾರಿ ಸರಕಾರ ಲಾಕ್ ಡೌನ್ ಮಾಡಿದರೆ ದೇವರೆ ಗತಿ ಅಂತಾರೆ.
ಎರಡನೇ ಅಲೆಯಲ್ಲಿ ಪ್ರವಾಸೋದ್ಯಮ ದಿಢೀರ್ ಕುಸಿತ ಕಂಡಿದೆ. ಕಳೆದ ಹದಿನೈದು ದಿನದಿಂದ ಪ್ರವಾಸಿ ಸ್ಥಳಗಳು ಖಾಲಿ ಖಾಲಿ ಆಗಿ ಕಾಣುತ್ತಿವೆ. ಗೋಕರ್ಣ, ಕಾರವಾರ, ಮೂರ್ಡೇಶ್ವರ ಕಡಲತೀರಗಳಲ್ಲಿ ಪ್ರವಾಸಿಗರ ಕೊರತೆ ಎದ್ದು ಕಾಣುತ್ತಿದೆ. ಧಾರ್ಮಿಕ ಕ್ಷೇತ್ರದ ಮೇಲು ಕೊರೋನಾ ಎರಡನೇ ಅಲೆಯ ಕರಿನೇರಳು ಬೀರಿದೆ. ಒಟ್ಟಾರೆ ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಕೋವಿಡ್ ಎರಡನೇ ಅಲೆ ಕಂಟಕವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ