Kodagu MLC Election 2021: ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಹಣಾಹಣಿ; ಮಂಥರ್​ಗೌಡಗೆ ವರವಾಗಲಿದೆಯೇ ಕಮಲ ಪಾಳಯದ ಬಂಡಾಯ?

ಬಿಜೆಪಿಯಿಂದ ಟಿಕೆಟ್ ಗಾಗಿ 15 ಆಕಾಂಕ್ಷಿಗಳಿದ್ದರು. ಬಂಡಾಯ ಬೇಗುದಿ ಕುದಿಯುತ್ತಿದೆ. ಹೀಗಾಗಿ ಅವರಲ್ಲಿ ಕೆಲವರು ಒಳಗೊಳಗೆ ನೋಡಿಕೊಂಡು ಮತ ಚಲಾಯಿಸಿ ಎಂದು ಹೇಳುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.

ಸುಜಾ ಕುಶಾಲಪ್ಪ ಹಾಗೂ ಡಾ ಮಂಥರ್​ ಗೌಡ

ಸುಜಾ ಕುಶಾಲಪ್ಪ ಹಾಗೂ ಡಾ ಮಂಥರ್​ ಗೌಡ

  • Share this:
ಕೊಡಗು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ (Assembly Council Election 2021) ನಡೆಯುತ್ತಿರುವ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಮತದಾರರು ಅಭ್ಯರ್ಥಿಗಳ ಭವಿಷ್ಯವನ್ನು ಶುಕ್ರವಾರ ಬರೆಯಲಿದ್ದಾರೆ. ಕೊಡಗು ಪುಟ್ಟ ಜಿಲ್ಲೆ, ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಏಕಸ್ಥಾನವಿದೆ. ಈ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಮಾಜಿ ಸಚಿವ ಎ ಮಂಜು ಅವರ ಮಗ ಮಂಥರ್ ಗೌಡ (Former Minister A Manju Son Manthar Gowda) ಸ್ಪರ್ಧಿಸಿದ್ದರೆ, ಬಿಜೆಪಿಯಿಂದ ಮಾಜಿ ಸಚಿವ, ಹಾಲಿ ಬಿಜೆಪಿಯ ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಸಹೋದರ ಸುಜಾ ಕುಶಾಲಪ್ಪ (Suja Kushalappa) ಸ್ಪರ್ಧಿಸಿದ್ದಾರೆ. ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ವೇಳೆ ಜೆಡಿಎಸ್ ನಿಂದ ಇಸಾಕ್ ಖಾನ್ ಕೂಡ ನಾಮಪತ್ರ ಸಲ್ಲಿಸಿದ್ದರು. ಈ ವೇಳೆ ಕಾಂಗ್ರೆಸ್ ಅಭ್ಯರ್ಥಿ ಒಂದಷ್ಟು ವಿಚಲಿತರಾಗಿದ್ದು ಸುಳ್ಳೇನಲ್ಲ. ಏಕೆಂದರೆ ಜಿಲ್ಲೆಯಲ್ಲಿರುವ ಒಟ್ಟು 1329 ಮತಗಳ ಪೈಕಿ ಬಿಜೆಪಿಯ 800 ಮತಗಳು ಬಿಜೆಪಿಯ ಪರವಾಗಿದ್ದರೆ, ಕಾಂಗ್ರೆಸ್ 400 ಮತಗಳು ಇದ್ದವು. ಜೆಡಿಎಸ್ ನ 129 ಮತಗಳು ಇದ್ದವು. ಆದರೆ ಎರಡೇ ದಿನಗಳಲ್ಲಿ ಜೆಡಿಎಸ್ ಅಭ್ಯರ್ಥಿ ಇಸಾಕ್ ಖಾನ್ ತಮ್ಮ ನಾಮಪತ್ರವನ್ನು ಹಿಂತೆಗೆದುಕೊಂಡಿತು. ಇದು ಕಾಂಗ್ರೆಸ್ಸಿನಲ್ಲಿ ಒಂದಷ್ಟು ಹುಮ್ಮಸ್ಸು ಮೂಡಿಸಿತು.

ಕೊಡಗಿನಲ್ಲಿ ಕಾಂಗ್ರೆಸ್ ನಾಯಕರಲ್ಲಿ ಒಮ್ಮತವಿಲ್ಲ ಎಂಬುದು ಜಗತ್ ಜಾಹೀರಾಗಿದೆ. ಆದರೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಂಥರ್ ಗೌಡ ಅವರು ಜಿಲ್ಲೆಯ ಎಲ್ಲಾ ಕಾಂಗ್ರೆಸ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಆಯಾ ತಾಲ್ಲೂಕು ವ್ಯಾಪ್ತಿಯಲ್ಲಿ ಕಾಂಗ್ರೆಸ್ ನ ಎಲ್ಲಾ ನಾಯಕರು ಮಂಥರ್ ಗೌಡ ಅವರೊಂದಿಗೆ ಕೂಡಿ 104 ಗ್ರಾಮ ಪಂಚಾಯಿತಿ, 3 ಪಟ್ಟಣ ಪಂಚಾಯಿತಿ ಮತ್ತು ಒಂದು ನಗರಸಭೆಯ ಮತದಾರರನ್ನು ಭೇಟಿ ಮಾಡಿದ್ದಾರೆ. ಇದರಲ್ಲಿ ಸಾಕಷ್ಟು ಮತದಾರರು ಈ ಬಾರಿ ಒಂದು ಬದಲಾವಣೆ ಮಾಡಿ ನೋಡೋಣ ಎನ್ನೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನಾನು ಗೆಲ್ಲುತ್ತೇನೆ ಎನ್ನೋದು ಮಂಥರ್ ಗೌಡ ಅವರ ಅಭಿಪ್ರಾಯ. ಈಗಾಗಲೇ ಬಿಜೆಪಿಯಿಂದ ಒಂದು ಕಾಲು ಹೊರತೆಗೆದಿರುವ ಎ. ಮಂಜು ಅವರು ಕೊಡಗಿನಲ್ಲಿ ಇದ್ದುಕೊಂಡು ಸಾಕಷ್ಟು ಕೆಲಸ ಮಾಡುತ್ತಿದ್ದಾರೆ.

ವೈದ್ಯ ವೃತ್ತಿಯಿಂದ ರಾಜಕೀಯಕ್ಕೆ ಬಂದ ಡಾ. ಮಂಥರ್ ಗೌಡ

ಇನ್ನು ಮಂಥರ್​ ಗೌಡ ಅವರು ವೃತ್ತಿಯಲ್ಲಿ ವೈದ್ಯರು. ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದವರು. ಬಳಿಕ ತಂದೆಯ ಹಾದಿಯಲ್ಲಿ ಸಾಗಿದ ಮಂಥರ್​ಗೌಡ ಅವರು ಈ ಮೊದಲು ಹಾಸನ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇದೀಗ ಅವರು ಕೊಡಗು ಸ್ಥಳೀಯ ಸಂಸ್ಥೆಗಳಿಂದ ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡಿದ್ದಾರೆ. ಇರುವ ಒಬ್ಬನೇ ಮಗನ ರಾಜಕೀಯ ಭವಿಷ್ಯಕ್ಕಾಗಿ ಮಾಜಿ ಸಚಿವ ಎ ಮಂಜು ಅವರು ಈಗಾಗಲೇ ಬಿಜೆಪಿಯಿಂದ ಹೊರಬರುವ ಸೂಚನೆಯನ್ನು ಪರೋಕ್ಷವಾಗಿ ನೀಡಿದ್ದಾರೆ.

ಡಾ. ಮಂಥರ್​ ಗೌಡ


ಟಿಕೆಟ್ ಸಿಗದ ಕಾರಣ ಬಿಜೆಪಿಗರ ಅಸಮಾಧಾನ

ಇತ್ತ ಬಿಜೆಪಿಯ ಭದ್ರಕೋಟೆ ಆಗಿರುವ ಕೊಡಗಿನಲ್ಲಿ ಗ್ರಾಮ ಪಂಚಾಯಿತಿ ಮಟ್ಟದಿಂದಲೂ ಬಿಜೆಪಿ ಪಕ್ಷ ಗಟ್ಟಿಯಾಗಿದೆ. ಜಿಲ್ಲೆಯಲ್ಲಿ ಬಿಜೆಪಿಯ 800 ಮತದಾರರು ಇದ್ದಾರೆ. ಹೀಗಾಗಿ ತಾನು ಸುಲಭವಾಗಿ ಗೆಲ್ಲುತ್ತೇನೆ ಎನ್ನೋ ಆತ್ಮವಿಶ್ವಾಸದಲ್ಲಿ ಅಭ್ಯರ್ಥಿ ಸುಜಾ ಕುಶಾಲಪ್ಪ ಇದ್ದಾರೆ. ತಮ್ಮ ಸಹೋದರನನ್ನು ಗೆಲ್ಲಿಸಲೇ ಬೇಕು ಎಂದು ಪಣತೊಟ್ಟಿರುವ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ತಮ್ಮ ಕ್ಷೇತ್ರದ ಮತದಾರರನ್ನು ಮನವೊಲಿಸುವ ಜವಾಬ್ದಾರಿ ಹೊತ್ತಿದ್ದಾರೆ. ಇನ್ನು ಸ್ವತಃ ಅಭ್ಯರ್ಥಿ ಸುಜಾ ಕುಶಾಲಪ್ಪ ಅವರು ಕೂಡ ವಿರಾಜಪೇಟೆ ಭಾಗದ ಜವಾಬ್ದಾರಿ ಹೊತ್ತಿದ್ದರೆ, ಪೊನ್ನಂಪೇಟೆ ಭಾಗದಲ್ಲಿ ಪ್ರಭಾವಿ ನಾಯಕರ ಹೆಗಲಿಗೆ ಜವಾಬ್ದಾರಿ ಹಾಕಿದ್ದಾರೆ. ಆದರೆ ಬಿಜೆಪಿಯಿಂದ ಟಿಕೆಟ್ ಗಾಗಿ 15 ಆಕಾಂಕ್ಷಿಗಳಿದ್ದರು. ಬಂಡಾಯ ಬೇಗುದಿ ಕುದಿಯುತ್ತಿದೆ. ಹೀಗಾಗಿ ಅವರಲ್ಲಿ ಕೆಲವರು ಒಳಗೊಳಗೆ ನೋಡಿಕೊಂಡು ಮತ ಚಲಾಯಿಸಿ ಎಂದು ಹೇಳುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. ಇದು ಬಿಜೆಪಿಯ ಅಭ್ಯರ್ಥಿ ಸುಜಾ ಕುಶಾಲಪ್ಪ ಅವರಿಗೆ ಹಿನ್ನಡೆಗೆ ಕಾರಣವಾಗಬಹುದು ಎನ್ನಲಾಗಿದೆ.

ಇದನ್ನು ಓದಿ: ಯಾರಾಗ್ತಾರೆ ಮುಂದಿನ CDS? ಮೋದಿ ಸರಕಾರಕ್ಕೀರುವ ಸವಾಲುಗಳೇನು?

ಒಟ್ಟಿನಲ್ಲಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ವೇಳೆ ಕಾಂಗ್ರೆಸ್ ನಿಂದ ಅಭ್ಯರ್ಥಿ ಇಲ್ಲದೆ ಹೊರಗಿನಿಂದ ಕರೆತಂದು ಸ್ಪರ್ಧಿಸುತ್ತಿದ್ದಾರೆ ಎಂದಿದ್ದ ಬಿಜೆಪಿಗೆ ಕಾಂಗ್ರೆಸ್ ನ ಮಂಥರ್ ಗೌಡ ಬಿಜೆಪಿ ಟಫ್ ಫೈಟ್ ಕೊಡುತ್ತಿದ್ದಾರೆ ಎನ್ನೋದು ಸುಳ್ಳಲ್ಲ.
Published by:HR Ramesh
First published: