• Home
  • »
  • News
  • »
  • district
  • »
  • ಊಜಿನೊಣದ ಬಾಧೆ: ನಿತ್ಯ ತಿಪ್ಪೆಗುಂಡಿ ಸೇರುತ್ತಿದೆ ಟನ್​ಗಟ್ಟಲೇ ಟೊಮ್ಯಾಟೊ!

ಊಜಿನೊಣದ ಬಾಧೆ: ನಿತ್ಯ ತಿಪ್ಪೆಗುಂಡಿ ಸೇರುತ್ತಿದೆ ಟನ್​ಗಟ್ಟಲೇ ಟೊಮ್ಯಾಟೊ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಊಜಿನೊಣದ ಬಾಧೆಗೆ ತುತ್ತಾದ ಟೊಮ್ಯಾಟೊ ಹಣ್ಣನ್ನು ನಾವು ಖರೀದಿಸುತ್ತಿಲ್ಲ. ಅಲ್ಲದೆ ಸ್ಥಳೀಯವಾಗಿಯೂ ಇಂತಹ ಹಣ್ಣು ಮಾರಾಟವಾಗುವುದಿಲ್ಲ. ಹಾಗಾಗಿ ರೈತರು ಇಂತಹ ಹಣ್ಣುಗಳನ್ನು  ಅನಿವಾರ್ಯವಾಗಿ ತಿಪ್ಪೆಗೆ ಸುರಿಯುತ್ತಿದ್ದಾರೆ ಎಂದು ದಲ್ಲಾಳಿ ಸುರೇಂದ್ರಕುಮಾರ್ ತಿಳಿಸಿದ್ದಾರೆ.

  • Share this:

ಚಾಮರಾಜನಗರ (ನವೆಂಬರ್ 28); ವರುಣನ ಕೃಪೆಯಿಂದ ಈ ಬಾರಿ  ರೈತರು ಒಳ್ಳೆಯ ಬೆಳೆ ಬೆಳೆದಿದ್ದಾರೆ. ಆದರೆ ಊಜಿನೊಣದ ಬಾಧೆಯ ಪರಿಣಾಮ ಟೊಮ್ಯಾಟೊ ಬೆಳೆದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗಿದೆ. ಊಜಿನೊಣ ಬಿದ್ದ ಟೊಮ್ಯಾಟೋ ಹಣ್ಣನ್ನು ಕೇಳುವವರಿಲ್ಲದೆ ಕಾಲಕಸವಾಗಿದೆ.


ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಎಪಿಎಂಸಿ ಮಾರುಕಟ್ಟೆಗೆ ಟೊಮ್ಯಾಟೋ ತಂದ ರೈತರು ನಿತ್ಯ ಟನ್ ಗಟ್ಟಲೇ ಟೊಮ್ಯಾಟೋ ಹಣ್ಣನ್ನು ರಸ್ತೆ ಬದಿಗೆ ಸುರಿದು ಹೋಗುತ್ತಿದ್ದಾರೆ. ಗುಂಡ್ಲುಪೇಟೆ ಎಪಿಎಂಸಿ ತುಂಬೆಲ್ಲಾ ಟೊಮ್ಯಾಟೊ ರಾಶಿ ಬಿದಿದ್ದು ಕೇಳುವರರೇ ಇಲ್ಲವಾಗಿದ್ದಾರೆ.


ಈಗ ಕೆ.ಜಿ ಟೊಮ್ಯಾಟೊಗೆ 9 ರಿಂದ 10 ರೂ‌ ಬೆಲೆ ಇದ್ದರೂ ರೈತರ ಪಾಲಿಗೆ ಪ್ರಯೋಜನವಿಲ್ಲದಂತಾಗಿದೆ. ಗುಂಡ್ಲುಪೇಟೆಯಿಂದ ಪಕ್ಕದ ರಾಜ್ಯ ಕೇರಳ, ತಮಿಳುನಾಡು ಮತ್ತು ದೆಹಲಿಗೆ ಟೊಮ್ಯಾಟೊ ಹಣ್ಣನ್ನು ಸರಬರಾಜು ಮಾಡಲಾಗುತ್ತದೆ. ದೆಹಲಿಯಲ್ಲಿ ಟೊಮ್ಯಾಟೊ ಹಣ್ಣಿನ ಬೆಲೆ ಗಗನಕ್ಕೇರಿದ್ದು, ದೆಹಲಿಯೊಂದಕ್ಕೇ ಇಲ್ಲಿಂದ ಪ್ರತಿ ದಿನ ನಾಲ್ಕು ಸಾವಿರ ಕ್ರೇಟ್ ಟೊಮ್ಯಾಟೋ ಸರಬರಾಜು ಆಗುತ್ತದೆ. ಆದರೆ ಊಜಿನೊಣ ಬಾಧೆಯಿಂದ ಟೊಮ್ಯಾಟೊ ಹಣ್ಣಿನ ಮೇಲೆ ಕಪ್ಪು ಚುಕ್ಕೆ ಕಾಣಿಸಿಕೊಳ್ಳುತ್ತಿದೆ. ಹೀಗೆ ಕಪ್ಪು ಚುಕ್ಕೆ ಕಾಣಿಸಿಕೊಂಡರೆ ಯಾರೂ ಖರೀದಿ ಮಾಡುವುದಿಲ್ಲ. ಊಜಿನೊಣದ ಬಾಧೆಯಿಂದ  ಕಪ್ಪು ಚುಕ್ಕೆ ಕಾಣಿಸಿಕೊಂಡ ಟೊಮ್ಯಾಟೊ ಹಣ್ಣಿನಿಂದ ಇತರ ಹಣ್ಣುಗಳು ಸಹ ಕೆಟ್ಟು ಹೋಗುವುದರಿಂದ ಇಂತಹ ಹಣ್ಣನ್ನು ಖರೀದಿಸಲು ಯಾವ ವ್ಯಾಪಾರಿಗಳು ಮುಂದೆ ಬರುತ್ತಿಲ್ಲ. ಹಾಗಾಗಿ ನೂರಾರು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.


ಪ್ರತಿದಿನ ಮೂರರಿಂದ ನಾಲ್ಕು ಟನ್ ನಷ್ಟು ಟೊಮ್ಯಾಟೊವನ್ನು ಎಪಿಎಂಸಿಯ ರಸ್ತೆ ಬದಿಯಲ್ಲಿ‌ ಬಿಸಾಡಲಾಗುತ್ತಿದೆ. ರೈತರು ಮಾರಾಟಕ್ಕೆಂದು ತರುವ ಟೊಮ್ಯಾಟೊ ಹಣ್ಣನ್ನು ಮೊದಲಿಗೆ ದಪ್ಪ ಮತ್ತು ಸಣ್ಣ ಎಂದು ವರ್ಗೀಕರಿಸಲಾಗುತ್ತದೆ. ಇದರಲ್ಲಿ ಊಜಿನೊಣದ ಬಾಧೆಗೆ ತುತ್ತಾಗಿರುವ ಟೊಮ್ಯಾಟೊವನ್ನು ಬೇರ್ಪಡಿಸುತ್ತಾರೆ. ಇದರಿಂದ ಶೇಕಡಾ 80 ರಷ್ಟು ಟೊಮ್ಯಾಟೋ ಹಣ್ಣು ಯೋಗ್ಯವಿಲ್ಲದೆ ಕಸದ ರಾಶಿಗೆ ಸುರಿಯುವಂತಾಗಿದೆ.


ಇದನ್ನು ಓದಿ: ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಕನಕಪುರದಲ್ಲಿ ಮೆಡಿಕಲ್ ಕಾಲೇಜು ಆಗಲಿದೆ; ಸಚಿವ ವಿ.ಸೋಮಣ್ಣ


ಸಾಲ ಸೋಲ ಮಾಡಿ ಟೊಮ್ಯಾಟೊ ಬೆಳೆದಿದ್ದೆ.  ಫಸಲೇನೋ ಉತ್ತಮವಾಗಿಯೇ ಬಂತು. ಆದರೆ ಹಣ್ಣಾಗುವಷ್ಟರಲ್ಲಿ ಊಜಿನೊಣದ ಬಾಧೆ ಶುರುವಾಯಿತು. ಎಲ್ಲಾ ರೀತಿಯ ಕ್ರಿಮಿನಾಶಕ, ಕೀಟನಾಶಕ ಸಿಂಪಡಿಸಿದರೂ ಕಡಿಮೆಯಾಗದೆ ನಷ್ಟ ಅನುಭವಿಸುವಂತಾಗಿದ ಎನ್ನುತ್ತಾರೆ ಬೇಗೂರಿನ ರೈತ ಸುಂದರೇಶ್.


ಬೇರೆ ರಾಜ್ಯಗಳಿಗೆ ಕಳಿಸಬೇಕಾದರೆ ಉತ್ತಮ ಗುಣಮಟ್ಟದ ಟೊಮ್ಯಾಟೊ ಹಣ್ಣನ್ನೇ ಖರೀದಿಸಬೇಕು. ಏಕೆಂದರೆ ಅವುಗಳನ್ನು ಸಾಗಿಸಲು ದಿನಗಟ್ಟಲೆ ಬೇಕಾಗುತ್ತದೆ. ಈ ಅವಧಿಯಲ್ಲಿ ಟೊಮ್ಯಾಟೊ ಕೆಟ್ಟು ಹೋದರೆ ನಾವು ನಷ್ಟ ಅನುಭವಿಸಬೇಕಾಗುತ್ತದೆ. ಹಾಗಾಗಿ ಊಜಿನೊಣದ ಬಾಧೆಗೆ ತುತ್ತಾದ ಟೊಮ್ಯಾಟೊ ಹಣ್ಣನ್ನು ನಾವು ಖರೀದಿಸುತ್ತಿಲ್ಲ. ಅಲ್ಲದೆ ಸ್ಥಳೀಯವಾಗಿಯೂ ಇಂತಹ ಹಣ್ಣು ಮಾರಾಟವಾಗುವುದಿಲ್ಲ. ಹಾಗಾಗಿ ರೈತರು ಇಂತಹ ಹಣ್ಣುಗಳನ್ನು  ಅನಿವಾರ್ಯವಾಗಿ ತಿಪ್ಪೆಗೆ ಸುರಿಯುತ್ತಿದ್ದಾರೆ ಎಂದು ದಲ್ಲಾಳಿ ಸುರೇಂದ್ರಕುಮಾರ್ ತಿಳಿಸಿದ್ದಾರೆ.


ವರದಿ; ಎಸ್.ಎಂ.ನಂದೀಶ್

Published by:HR Ramesh
First published: