HOME » NEWS » District » TOMORROW HELD MANDYA DCC BANK PRESIDENT AND VICE PRESIDENT ELECTION RH RGM

ಕುತೂಹಲ ಮೂಡಿಸಿದ ಮಂಡ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ; ಗದ್ದುಗೆಗಾಗಿ ಕಾಂಗ್ರೆಸ್ ಕಸರತ್ತು

ನಾಳೆ ನಡೆಯಲಿರುವ ಮಂಡ್ಯ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆ ಭಾರೀ ಕುತೂಹಲ ಮೂಡಿಸಿದ್ದು, ಮಂಡ್ಯ ಡಿಸಿಸಿ ಬ್ಯಾಂಕ್ ನ  ಅಧ್ಯಕ್ಷ ಯಾರಾಗಲಿದ್ದಾರೆ? ಅಧಿಕಾರ ಗದ್ದುಗೆ ಯಾರ ಪಾಲಾಗಲಿದೆ ಅನ್ನೋದು ನಾಳೆ  ನಿರ್ಧಾರವಾಗಲಿದೆ.

news18-kannada
Updated:November 16, 2020, 7:24 PM IST
ಕುತೂಹಲ ಮೂಡಿಸಿದ ಮಂಡ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ; ಗದ್ದುಗೆಗಾಗಿ ಕಾಂಗ್ರೆಸ್ ಕಸರತ್ತು
ಮಂಡ್ಯ ಡಿಸಿಸಿ ಬ್ಯಾಂಕ್.
  • Share this:
ಮಂಡ್ಯ: ಮಂಡ್ಯ ಜಿಲ್ಲೆಯ ರಾಜಕೀಯ ಅಂದರೆ ಅದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತದೆ. ಈ ಜಿಲ್ಲೆಯ ಪಾಲಿಟಿಕ್ಸ್ ಅಷ್ಟರ ಮಟ್ಟಿಗೆ ಪ್ರಸಿದ್ದಿಯಾಗಿದೆ. ಇದೀಗ  ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನ.17ರಂದು ಚುನಾವಣೆ ನಡೆಯಲಿದೆ. ಅಧಿಕಾರಕ್ಕಾಗಿ ಮತ್ತೆ ಪಾಲಿಟಿಕ್ಸ್ ಶುರುವಾಗಿದೆ.  ಎಂಡಿಸಿಸಿ ಬ್ಯಾಂಕ್ ನಲ್ಲಿ ಅಧಿಕಾರ ಹಿಡಿಯುಲು 12 ರಲ್ಲಿ 8 ಸ್ಥಾನ ಗೆದ್ದ ಕಾಂಗ್ರೆಸ್ ಶತಾಗತ ಪ್ರಯತ್ನ ಮಾಡುತ್ತಿದ್ದರೆ, ಜೆಡಿಎಸ್ ಪಕ್ಷ ಕಾಂಗ್ರೆಸ್ ಗೆ ಅಧಿಕಾರ ತಪ್ಪಿಸಲು ಬಿಜೆಪಿ ಜೊತೆ ಸೇರಿ ಗದ್ದುಗೆ ಏರಲು ರಣತಂತ್ರ ರೂಪಿಸಿದೆ.

ಹೌದು, ಮಂಡ್ಯದಲ್ಲಿ ಡಿಸಿಸಿ ಬ್ಯಾಂಕ್ ನ ಅಧಿಕಾರ ಗದ್ದುಗೆಗಾಗಿ ಮೂರು ಪಕ್ಷಗಳ ಹೋರಾಟ ಶುರುವಾಗಿದೆ‌. ಇದೇ ತಿಂಗಳ ನ. 3ರಂದು ಮಂಡ್ಯದ ಡಿಸಿಸಿ ಬ್ಯಾಂಕ್  ನ 12 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 8 ಸದಸ್ಯರು ಆಯ್ಕೆಯಾದರೆ 4 ರಲ್ಲಿ ಜೆಡಿಎಸ್ ಬೆಂಬಲಿತರು ಆಯ್ಕೆಯಾಗಿದ್ದರು. ಅಧ್ಯಕ್ಷ -ಉಪಾಧ್ಯಕ್ಷ ಚುನಾವಣೆಗೆ 12 ನಿರ್ದೇಶಕ ಮತಗಳ ಜೊತೆ 1 ನಾಮಿನಿ ನಿರ್ದೇಶಕನ ಮತ, 1 ಜಿಲ್ಲಾ ರಿಜಿಸ್ಟ್ರಾರ್ ಮತ ಹಾಗೂ 1 ಅಪೆಕ್ಸ್ ಪ್ರತಿನಿಧಿ ಮತಗಳು ಸೇರಿ 15 ಮತಬಲವಿದೆ. ಅಧಿಕಾರ ಹಿಡಿಯಲು 8 ಮತಗಳ ಅವಶ್ಯಕತೆ ಇದ್ದು, ಮೇಲ್ನೋಟಕ್ಕೆ 8 ನಿರ್ದೇಶಕರನ್ನು ಗೆದ್ದಿರುವ ಕಾಂಗ್ರೆಸ್ ಪಕ್ಷ ಸ್ಪಷ್ಟ ಮೇಲುಗೈ ಸಾಧಿಸಿದೆ. ಆದರೆ ಕಾಂಗ್ರೆಸ್ ಬೆಂಬಲಿತ ಓರ್ವ ಸದಸ್ಯ ಸಿ. ಅಶ್ವಥ್ ಜೆಡಿಎಸ್ ನ ಕುಮಾರಸ್ವಾಮಿ ಸಂಪರ್ಕಕ್ಕೆ ಬಂದಿರೋದು ಇದೀಗ ಕಾಂಗ್ರೆಸ್ ಪಕ್ಷದ ತಲೆನೋವಿಗೆ ಕಾರಣವಾಗಿದೆ. ಕಾಂಗ್ರೆಸ್ ಮಾಜಿ ಸಚಿವ ಪಿ.ನರೇಂದ್ರಸ್ವಾಮಿ ನೇತೃತ್ವದಲ್ಲಿ ಡಿಸಿಸಿ  ಬ್ಯಾಂಕ್ ನ ಅಧಿಕಾರ ಹಿಡಿಯಲು ಸ್ವತಃ ಚುನಾವಣೆಗೆ ನಿಂತು ಗೆದ್ದು ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿರುವ ನರೇಂದ್ರ ಸ್ವಾಮಿ ತಮ್ಮ ಪಕ್ಷದ ಬೆಂಬಲಿತರನ್ನು ಹಿಡಿದಿಟ್ಟುಕೊಂಡು  ಶತ ಪ್ರಯತ್ನ‌ಮಾಡ್ತಿದ್ದಾರೆ. ಅಲ್ಲದೆ ತಾವೇ ಅಧ್ಯಕ್ಷರಾಗಿ ಅಧಿಕಾರ ಹಿಡಿಯುವ ಭರವಸೆಯಲ್ಲಿದ್ದಾರೆ.

ಇನ್ನು ಇತ್ತ 4 ಸ್ಥಾನ ಗೆದ್ದ ಜೆಡಿಎಸ್  ಕಾಂಗ್ರೆಸ್ ಪಕ್ಷ ದ ಓರ್ವ ಸದಸ್ಯನನ್ನು ಸೆಳೆದು ತಾನೂ ಕೂಡ ಅಧಿಕಾರ  ಹಿಡಿಯಲು ಭಾರೀ ತಂತ್ರಗಾರಿಕೆಯನ್ನೇ ರೂಪಿಸಿದೆ. ಬಿಜೆಪಿ ಪಕ್ಷದೊಂದಿಗೆ ಕೈ ಜೋಡಿಸಿ  ಕಾಂಗ್ರೆಸ್ ಪಕ್ಷಕ್ಕೆ ಮುಖಭಂಗ ಮಾಡಲು ನಿರ್ಧರಿಸಿದೆ. ಜೆಡಿಎಸ್ ಪಕ್ಷದ ಮಾಜಿ ಸಚಿವ ಪುಟ್ಟರಾಜು ಮೂಲಕ ಮಾಜಿ ಸಿ.ಎಂ ಕುಮಾರಸ್ವಾಮಿ ಅವರು ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಸಂಪರ್ಕಮಾಡಿ ಆ ಭಾರೀ ತಂತ್ರ ಗಾರಿಕೆಯನ್ನು ವರ್ಕೌಟ್ ಮಾಡಲು ಪ್ಲ್ಯಾನ್ ಸಿದ್ದಪಡಿಸಿದ್ದಾರೆ. ತಮ್ಮ 4 ಸದಸ್ಯರ ಜೊತೆ  ಪಕ್ಷದ ಮುಖಂಡರ ಜೊತೆ ಸಂಪರ್ಕದಲ್ಲಿರುವ ಕಾಂಗ್ರೆಸ್ ಬೆಂಬಲಿತ ನಿರ್ದೇಶಕ ಸಿ.ಅಶ್ವಥ್ ಅವರನ್ನು ಸೇರಿಸಿಕೊಂಡು ಸರ್ಕಾರದ ನಾಮಿನಿ ನಿರ್ದೇಶಕನ ಮತ, 1ಜಿಲ್ಲಾ ರಿಜಿಸ್ಟ್ರಾರ್ ಮತ ಹಾಗೂ 1 ಅಪೆಕ್ಸ್ ಪ್ರತಿನಿಧಿ ಮತಗಳ ಮೂಲಕ ಅಧಿಕಾರದ ಗದ್ದುಗೆ ಏರುವ ಪ್ರಯತ್ನಕ್ಕೆ ಕೈ ಹಾಕಿದೆ. ಇದಕ್ಕಾಗಿ ಈಗಾಗಲೇ ಮಾಜಿ ಸಿಎಂ ಎಚ್​ಡಿಕೆ ಅವರು ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿದ್ದಾರೆ. ಸಿಎಂ ಕೂಡ ಒಪ್ಪಿಗೆ ಸೂಚಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಕಾಂಗ್ರೆಸ್ ಪಕ್ಷ 8 ಸ್ಥಾನ ಗೆದ್ದರು ತಮ್ಮ ಪಕ್ಷದ ನಿರ್ದೇಶಕ ಸಿ.ಅಶ್ವಥ್ ನಡೆಯಿಂದಾಗಿ ಇದೀಗ ಆತಂಕಕ್ಕೆ ಒಳಗಾಗಿದೆ.

ಇದರ ಜೊತೆಗೆ ಇದೀಗ ಡಿಸಿಸಿ ಬ್ಯಾಂಕ್ ನ ಅಧಿಕಾರ ಗದ್ದುಗೆ ಹಿಡಿಯಲು ಎರಡು ಪಕ್ಷಗಳು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರೆ, ಇವೆರಡರ ಮಧ್ಯೆ ಬಿಜೆಪಿ ಕೂಡ ಇದರ ಲಾಭ ತೆಗೆದುಕೊಳ್ಳಲು‌ ಮುಂದಾಗಿ‌ದೆ. ಬಿಜೆಪಿ ಪಕ್ಷಕ್ಕೆ ತಳಮಟ್ಟದ ಪಕ್ಷ ಸಂಘಟನೆಗೆ ಅವಕಾಶ ಸಿಗುವ ಕಾರಣದಿಂದ ಜೆಡಿಎಸ್ ಪಕ್ಷದ ಜೊತೆ ಕೈ ಜೋಡಿಸಲು ಮುಂದಾಗಿದೆ ಎಂದು ಹೇಳಲಾಗ್ತಿದೆ. ಅದಕ್ಕಾಗಿ ಹಾಲಿ ಇದ್ದ ಜಿಲ್ಲಾ ರಿಜಿಸ್ಟಾರ್ ಅವರನ್ನು ಎತ್ತಂಗಡಿ ಮಾಡಿ ತಮಗೆ ಬೇಕಾಗಿರುವ ವ್ಯಕ್ತಿಯನ್ನು ಪ್ರಭಾರಿಯಾಗಿ ನೇಮಿಸಿಕೊಂಡಿದ್ದು, ಸರ್ಕಾರದ ನಾಮನಿರ್ದೇಶನ ವ್ಯಕ್ತಿಯನ್ನು ಕೂಡ ಬದಲಾಯಿಸಿಕೊಂಡಿದೆ‌.

ಇದನ್ನು ಓದಿ: ಅಂಬರೀಶ್ ಇರುವವರೆಗೂ ಯಾರಿಗೂ ಮಾತನಾಡುವ ಧೈರ್ಯ ಇರಲಿಲ್ಲ; ಪ್ರತಾಪ್ ಸಿಂಹ ಹೇಳಿಕೆಗೆ ಸುಮಲತಾ ತಿರುಗೇಟು

ಆದರೆ ಜೆಡಿಎಸ್ ಈ ತಂತ್ರಗಾರಿಕೆ ಅರಿತ ಜಿಲ್ಲೆಯ ಕಾಂಗ್ರೆಸ್ ಮುಖಂಡ ಚಲುವರಾಯಸ್ವಾಮಿ ಇದೀಗ ಸಂಸದೆ ಸುಮಲತಾ ಮೂಲಕ ತಮ್ಮ ದಾಳ ಉರುಳಿಸಿದ್ದು, ಸಿ.ಎಂ. ಜೊತೆ ಮಾತುಕತೆ ಮೂಲಕ ಸಂಧಾನ ಮಾಡಿಸ್ತಿದ್ದಾರೆ‌ ಅನ್ನೋ ಮಾತುಗಳ ಕೂಡ ಕೇಳಿ ಬರುತ್ತಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಆಯಾ ಪಕ್ಷದ ನಿರ್ದೇಶಕರನ್ನು ಮುಖಂಡರು ಅಜ್ಞಾತ ಸ್ಥಳದಲ್ಲಿರಿಸಿ ಹಿಡಿದಿಟ್ಟುಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಒಟ್ಟಾರೆ ನಾಳೆ ನಡೆಯಲಿರುವ ಮಂಡ್ಯ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆ ಭಾರೀ ಕುತೂಹಲ ಮೂಡಿಸಿದ್ದು, ಮಂಡ್ಯ ಡಿಸಿಸಿ ಬ್ಯಾಂಕ್ ನ  ಅಧ್ಯಕ್ಷ ಯಾರಾಗಲಿದ್ದಾರೆ? ಅಧಿಕಾರ ಗದ್ದುಗೆ ಯಾರ ಪಾಲಾಗಲಿದೆ ಅನ್ನೋದು ನಾಳೆ  ನಿರ್ಧಾರವಾಗಲಿದೆ.
Published by: HR Ramesh
First published: November 16, 2020, 7:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories