ಬಯಲುಸೀಮೆ ಕೋಲಾರದಲ್ಲಿ (Kolar) ಇದೇ ಮೊದಲ ಬಾರಿಗೆ ಟೊಮೆಟೊ ಬೆಲೆ (Tomato Price) ಗಗನಕ್ಕೇರಿತ್ತು, ಏಷ್ಯಾದಲ್ಲಿಯೇ ಎರಡನೇ ಅತಿದೊಡ್ಡ ಟೊಮೆಟೊ ಮಾರುಕಟ್ಟೆ (Tomato Market) ಎಂಬ ಹೆಗ್ಗಳಿಕೆ ಪಡೆದಿರುವ, ಕೋಲಾರದ ಮಾರುಕಟ್ಟೆಯಲ್ಲಿ ಕೆಂಪು ಹಣ್ಣಿಗೆ ಭರ್ಜರಿ ಬೆಲೆ ಸಿಕ್ಕಿದೆ. ಕಳೆದ ಮೂರು ದಿನದ ಹಿಂದೆ 15 ಕೆಜಿ ತೂಕದ ಒಂದು ಬಾಕ್ಸ್ ಟೊಮೆಟೊ ಬೆಲೆ 1,800 ರೂಪಾಯಿಗೆ ಮಾರಾಟವಾಗಿದೆ, 2020-21 ನೇ ವರ್ಷದಲ್ಲಿ ಇದೇ ಮೊದಲ ಬಾರಿಗೆ ಈ ಮೊತ್ತಕ್ಕೆ ಟೊಮೆಟೊ ಮಾರಾಟವಾಗಿದ್ದು, ಈ ಹಿಂದೆ 2019 ರಲ್ಲಿ 1,275 ರೂಪಾಯಿಗೆ ಟೊಮೆಟೊ ಮಾರಾಟವಾಗಿದ್ದು ದೊಡ್ಡ ಮೊತ್ತವಾಗಿತ್ತು. ಆದರೆ ಮೂರು ದಿನ ಕಳೆಯುವಷ್ಟರಲ್ಲಿ ದಿಢೀರನೆ ಬೆಲೆ ಕುಸಿತ ಕಂಡಿದೆ.
ಶುಕ್ರವಾರ ಮಾರುಕಟ್ಟೆಯಲ್ಲಿ 15 ಕೆಜಿ ತೂಕದ ಒಂದು ಬಾಕ್ಸ್ ಬೆಲೆ 800 ರೂಪಾಯಿಗೆ ಮಾರಾಟವಾಗಿದ್ದು, ಕನಿಷ್ಟ 300 ರೂಪಾಯಿಗೆ ಮಾರಾಟವಾಗಿದೆ. ಮಾರುಕಟ್ಟೆಯಲ್ಲಿ ನಾಟಿ ಟೊಮೆಟೊ ಹಾಗು ಸೀಡ್ಸ್ ಟೊಮೆಟೊ ಆವಕ ಬರುತ್ತಿದೆ. ಗುಣಮಟ್ಟದ ಆಧಾರದ ಮೇಲೆ ಟೊಮೆಟೊ ಬೆಲೆ ನಿಗದಿ ಮಾಡಲಾಗುತ್ತಿದೆ. ಉತ್ತರ ಭಾರತದ ರಾಜ್ಯಗಳಿಗೆ ಸರಬರಾಜು ಆಗುವ ಟೊಮೆಟೊ ದಷ್ಟ ಪುಷ್ಟವಾಗಿ ಇರಬೇಕಿದೆ, ಅಲ್ಲದೆ ಉತ್ತಮ ಬಣ್ಣವನ್ನು ಹೊಂದಿರಬೇಕು, ಹೀಗಿದ್ದರೆ, ಅಧಿಕ ಮೊತ್ತವನ್ನು ರೈತರು ತಮ್ಮ ಟೊಮೆಟೋಗೆ ಪಡೆಯಬಹುದಾಗಿದೆ.
ಮಳೆ ಎಪೆಕ್ಟ್ ನಿಂದ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಗೆ ಮುಖ್ಯ ಕಾರಣ.
ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಸದ್ಯ ಟೊಮೆಟೊ ಬೆಲೆ ಇಳಿಕೆ ಕಂಡಿದೆ, ಆದರೆ ಕಳೆದ 1 ತಿಂಗಳಿಂದ ಪ್ರತಿದಿನ ಏರಿಕೆಯಾಗಿದ್ದ ಟೊಮೆಟೊ ಬೆಲೆಯು ಕಡಿಮೆಯಾಗಿದೆ. ಇದಕ್ಕೆ ಕಾರಣ ಮಳೆಯಿಂದಾಗಿ ಟೊಮೆಟೊ ಬೆಳೆ ನೆಲಕಚ್ಚಿದೆ, ಮಳೆಯಿಂದಾಗಿ ನಾಶವಾಗಿದ್ದ ತೋಟಗಳಲ್ಲೆ ಅಳಿದು ಉಳಿದಿದ್ದ ಟೊಮೆಟೊ ಕಟಾವಿಗು ತೋಟಗಳಲ್ಲಿ ನಿಂತಿದ್ದ ನೀರು ಅಡಚಣೆ ಉಂಟು ಮಾಡಿತ್ತು, ಆದರೀಗ ಮಳೆಯೂ ಇಲ್ಲವಾದ್ದರಿಂದ ರೈತರು ಟೊಮೆಟೊ ಮಾರುಕಟ್ಟೆಗೆ ತರುತ್ತಿದ್ದಾರೆ. ಇದರ ಜೊತೆಗೆ ಆಂದ್ರದಿಂದಲೂ ಹೆಚ್ಚಾಗಿ ಟೊಮೆಟೊ ಬರುತ್ತಿರುವ ಕಾರಣ ಬೆಲೆ ಇಳಿಕೆಯಾಗಿದೆ.
ಅಕಾಲಿಕ ಮಳೆಗೆ ಟೊಮೆಟೊ ನಾಶ, ಸಾಲದಲ್ಲಿ ರೈತ
ಇನ್ನು ಜಿಲ್ಲೆಯಲ್ಲಿ ಮಳೆಯಿಂದಾಗಿ 50 ಸಾವಿರ ಹೆಕ್ಟೇರ್ ನಷ್ಟು ಕೃಷಿ ಬೆಳೆಗಳು ಹಾನಿಯಾಗಿದ್ದು, 10 ಸಾವಿರ ಹೆಕ್ಟೇರ್ ನಷ್ಟು ತರಕಾರಿ ಬೆಳೆಗಳು ಹಾನಿಗೊಳಗಾಗಿದೆ, ತರಕಾರಿ ಬೆಳೆಗಳಲ್ಲಿ ಟೊಮೆಟೊ ಬೆಳೆ ಹೆಚ್ಚು ನಾಶವಾಗಿದೆ. ಟೊಮೆಟೊ ಗೆ ಹೆಚ್ಚು ಬಂಡವಾಳ ಹಾಕಿರುವ ರೈತರು ಬೆಳೆ ನಾಶದಿಂದ ಮತ್ತೊಮ್ಮೆ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ.
ಇದನ್ನೂ ಓದಿ: Karnataka Weather Report: ಇಂದು ಮತ್ತು ನಾಳೆಯೂ ಸುರಿಯಲಿದೆ ಮಳೆ; ಜನತೆಗೆ ಎಚ್ಚರಿಕೆ ಸಂದೇಶ
ಬೆಳೆದಿದ್ದ ಟೊಮೆಟೊ ತೋಟಗಳಲ್ಲಿ ನೀರು ನುಗ್ಗಿದ್ದರಿಂದ ಗಿಡಗಳೆ ನಾಶವಾಗಿದೆ, ಸರ್ಕಾರ ತರಕಾರಿ ಬೆಳೆಗಳಿಗೆ ಹಾಕಿದ ಬಂಡವಾಳದ ಹಣವನ್ನಾದರು ಪರಿಹಾರವಾಗಿ ನೀಡಿದರೆ ಉಪಯುಕ್ತ ಎಂದು ಮನವಿ ಮಾಡಿದ್ದಾರೆ.
ನಿಟ್ಟುಸಿರು ಬಿಟ್ಟ ಗ್ರಾಹಕರು
ಒಟ್ಟಿನಲ್ಲಿ ಕೋಲಾರದಲ್ಲಿ ಕೆಂಪುಹಣ್ಣಿನ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗಿದ್ದಕ್ಕೆ ಗ್ರಾಹಕರು ತಬ್ಬಿಬ್ಬಾಗಿದ್ದರು, ಆ್ಯಪಲ್ ಹಣ್ಣಿನಂತೆ ಕೆಜಿ ಟೊಮೆಟೊ ಬೆಲೆ 130 ರೂಗೆ ಏರಿಕೆಯಾಗಿದ್ದನ್ನ ಕಂಡು ಗ್ರಾಹಕರು ಅಚ್ಚರಿ ವ್ಯಕ್ತಪಡಿಸಿದ್ದರು,.ಇದೀಗ ಕೆಜಿಗೆ 30 ರಿಂದ 50 ರೂಪಾಯಿಗೆ ಬೆಲೆ ಇಳಿಮುಖ ಆಗಿದ್ದಕ್ಕೆ ಗ್ರಾಹಕರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ: Earthquake: ಬೆಂಗಳೂರು, ರಾಮನಗರ, ಮಂಡ್ಯದಲ್ಲಿ ಕಂಪನದ ಅನುಭವ: ಭೂ ವಿಜ್ಞಾನ ಇಲಾಖೆ ಹೇಳಿದ್ದೇನು?
ಈರುಳ್ಳಿ ಬಿಟ್ರೆ ಉಳ್ದೆಲ್ಲಾ ತರಕಾರಿ, ಸೊಪ್ಪುಗಳು ಮಳೆಗೆ ಹಾಳಾಗಿ ಹೋಗಿರೋದ್ರಿಂದ ರೇಟ್ ಜಾಸ್ತಿಯಾಗಿದೆ. ಒಂದು ಕಡೆ ಮಳೆ, ಮತ್ತೊಂದೆಡೆ ಮಾಡೋಕೆ ಕೆಲ್ಸ ಇಲ್ಲ ಸಂಬಳವೂ ಇಲ್ಲ. ಈ ಗ್ಯಾಪ್ ನಲ್ಲಿ ಟೊಮೊಟೊ 100 ರೂಪಾಯಿ ಆದ್ರೆ ಹೇಗೆ ಜೀವನ ಮಾಡೋದು ಎಂದು ಜನಸಾಮಾನ್ಯರು ಬೇಸರ ವ್ಯಕ್ತಪಡಿಸುತ್ತಿದ್ದರು.
ಅಕಾಲಿಕ ಮಳೆಯಿಂದಾಗಿ ಬೆಳೆದಿರುವ ತರಕಾರಿ ನೀರಿನಲ್ಲಿ ಕೊಳೆಯುವಂತಾಗಿದೆ. ಮತ್ತೊಂದು ಕಡೆ ತರಕಾರಿ ಕಟಾವು ಮಾಡಲು ಸಹ ರೈತರಿಗೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಆಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ