ಮೈಸೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಜಮೀರ್ ಅಹಮದ್ ಖಾನ್ ನಡುವಿನ ವಾಗ್ವಾದ ವಿಚಾರವಾಗಿ, ಮಾತನಾಡಿರುವ ಶಾಸಕ ಸಾ.ರಾ.ಮಹೇಶ್, ಜಮೀರ್ ಅವರು ಇವತ್ತು ದೊಡ್ಡ ಅರಮನೆಯಲ್ಲಿ ಇರಬಹುದು. ಆದರೆ ನಿಮಗೆ ವಾಸದ ಮನೆ ಕೊಟ್ಟವರು ಯಾರು ಅಂತ ನೆನಪಿಸಿಕೊಳ್ಳಿ ಅಂತ ತಿರುಗೇಟು ಕೊಟ್ಟಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಾ.ರಾ.ಮಹೇಶ್, ಜಮೀರ್ ಅವರೇ ನಿಮಗೆ ಸೀಟ್ ಕೊಟ್ಟಿದ್ದು ಯಾರು.? ನಿಮ್ಮನ್ನ ವ್ಯಕ್ತಿಯಲ್ಲ ಶಕ್ತಿ ಎಂದವರು ಯಾರು? ನಿಮಗೆ ಚುನಾವಣೆಗೆ ಹಣ ಸಾಕಾಗದೆ ಇದ್ದಾಗ ತಂದುಕೊಟ್ಟಿದ್ದು ಯಾರು ಅಂತ ಪ್ರಶ್ನಿಸಿದ ಸಾ.ರಾ.ಮಹೇಶ್, ನೀವು ಇನ್ನೊಂದು ಪಕ್ಷ ಮೆಚ್ಚಿಸಲು ಮಾತನಾಡಬೇಡಿ. ನಮ್ಮ ಪಕ್ಷವನ್ನು ಬೇರೆ ನಾಯಕರು ಯಾರೂ ಟೀಕೆ ಮಾಡಲ್ಲ. ಪಕ್ಷದಲ್ಲಿ ಅಧಿಕಾರ ಅನುಭವಿಸಿ, ನಮ್ಮ ನಾಯಕರನ್ನು ಇಂದ್ರ ಚಂದ್ರ ಅಂತ ಹೊಗಳಿರುತ್ತಾರೆ. ಬಿಟ್ಟು ಹೋದ ಬಳಿಕ ನಮ್ಮ ನಾಯಕರ ಬಗ್ಗೆ ಟೀಕೆ ಮಾಡ್ತಾರೆ ಅಂತ ಜಮೀರ್ ವಿರುದ್ದ ವಾಗ್ದಾಳಿ ನಡೆಸಿದರು.
ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ ಅವರಿಗೆ ಟೀಕೆಗಳನ್ನು ಅರಗಿಸಿಕೊಳ್ಳುವ ಶಕ್ತಿಯನ್ನು ನಮ್ಮ ಪಕ್ಷದ ಕಾರ್ಯಕರ್ತರು ನೀಡಿದ್ದಾರೆ. ಜಮೀರ್ ಅಹಮದ್ ತಮ್ಮ ಆತ್ಮಸಾಕ್ಷಿಯನ್ನ ಮುಟ್ಟಿಕೊಂಡು ಇದನ್ನೆಲ್ಲ ಮಾತನಾಡಲಿ. 10 ಕೋಟಿ ಪಡೆದಿದ್ದಾರೋ ಇಲ್ಲವೋ ಅನ್ನೋ ಆರೋಪ ಬೇರೆ, ಆದರೆ ತಮ್ಮ ಆತ್ಮಸಾಕ್ಷಿಗೆ ವಿರುದ್ದವಾಗಿ ಮಾತನಾಡೋದು ಸರಿಯಲ್ಲ ಅಂತ ಜಮೀರ್ ಅಹ್ಮದ್‌ರನ್ನ ಟೀಕಿಸಿದರು.
ಇದನ್ನು ಓದಿ: ಎಂಟು ಬೇಡಿಕೆ ಈಡೇರಿಸಿದ್ದೇವೆ; ಹಠ ಬಿಟ್ಟು ಕೆಲಸಕ್ಕೆ ಬನ್ನಿ: ಸಾರಿಗೆ ನೌಕರರಿಗೆ ಸಿಎಂ ಕರೆ
ಇದೇ ವೇಳೆ ಮೈಸೂರು ಉಸ್ತುವಾರಿ ಮಂತ್ರಿಗಳು ಒತ್ತಡದಲ್ಲಿದ್ದಾರೆ, ಹಾಗಾಗಿ ಅವರು ಮೈಸೂರಿನ ಸಮಸ್ಯೆಗಳನ್ನು ಗಮನಿಸುತ್ತಿಲ್ಲ ಅಂತ ವ್ಯಂಗ್ಯವಾಡಿದ ಸಾ.ರಾ.ಮಹೇಶ್, ತಮ್ಮ ರಕ್ಷಣೆಗೆ ನ್ಯಾಯಾಲಯಕ್ಕೆ ಹೋದವರು ನೀವು, ಇನ್ನು 6.5 ಕೋಟಿ ಜನರ ರಕ್ಷಣೆ ಹೇಗೆ ಮಾಡ್ತೀರಾ? ಅಂತ ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌ರನ್ನ ಪ್ರಶ್ನಿಸಿದರು. ಶಾಸಕರು ಒಂದು ಬಾರಿ ಪ್ರಮಾಣ ವಚನ ಸ್ವೀಕಾರ ಮಾಡ್ತಾರೆ, ಆದ್ರೆ ಸಚಿವರು ಎರಡು ಬಾರಿ ಪ್ರಮಾಣ ವಚನ ಸ್ವೀಕಾರ ಮಾಡ್ತಾರೆ. ಎರಡೆರಡು ಬಾರಿ ಪ್ರಮಾಣ ವಚನ ಸ್ವೀಕರಿಸಿದ ನೀವೇ ನಿಮ್ಮನ್ನ ರಕ್ಷಣೆ ಮಾಡಿಕೊಳ್ಳಲು ಆಗ್ತಿಲ್ಲ ಇನ್ನು ಜನರ ರಕ್ಷಣೆ ಏನ್ ಮಾಡ್ತಿರಾ? ನಾನು ಬೇರೆ ಏನು ಮಾತನಾಡೋಲ್ಲ. ಆದ್ರೆ ನಿಮ್ಮ ಮನಸಾಕ್ಷಿಯನ್ನ ಕೇಳಿಕೊಳ್ಳಿ ಅಂತ ನ್ಯಾಯಾಲಯದ ಮೆಟ್ಟಿಲೇರಿಸುವ ಸಚಿವ ಎಸ್‌ಟಿ ಸೋಮಶೇಖರ್ ಕಾಲೆಳೆದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ