• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಇಂದು ಸಿಂದಗಿಯಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಮಾಜಿ ಸಚಿವ ಎಂ.ಸಿ.ಮನಗೂಳಿ ಅಂತ್ಯಕ್ರಿಯೆ

ಇಂದು ಸಿಂದಗಿಯಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಮಾಜಿ ಸಚಿವ ಎಂ.ಸಿ.ಮನಗೂಳಿ ಅಂತ್ಯಕ್ರಿಯೆ

ಎಂ.ಸಿ ಮನಗೂಳಿ

ಎಂ.ಸಿ ಮನಗೂಳಿ

ಬೆಂಗಳೂರಿನಲ್ಲಿ ನಿನ್ನೆ ನಿಧನರಾಗಿದ್ದ ಎಂ.ಸಿ. ಮನಗೂಳಿ ಅವರ ಅಂತ್ಯಕ್ರಿಯೆ ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಇಂದು ಬೆಳಗ್ಗೆ 11ಗಂಟೆಗೆ ನಡೆಯಲಿದೆ. ಮಾಜಿ ಸಿಎಂ ಕುಮಾರಸ್ವಾಮಿ ಅವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

  • Share this:

ವಿಜಯಪುರ (ಜ. 28); ಬುಧವಾರ ನಸುಕಿನ ಜಾವ ನಿಧನರಾದ ಮಾಜಿ ಸಚಿವ ಹಾಗೂ ವಿಜಯಪುರ ಜಿಲ್ಲೆಯ ಸಿಂದಗಿ ಜೆಡಿಎಸ್ ಹಾಲಿ ಶಾಸಕ ಎಂ. ಸಿ. ಮನಗೂಳಿ ಅವರ ಅಂತ್ಯಕ್ರಿಯೆ ಶುಕ್ರವಾರ ಬೆ. 11ಕ್ಕೆ ಸಿಂದಗಿ ಪಟ್ಟಣದಲ್ಲಿರುವ ತಾಲೂಕು ವಿದ್ಯಾ ಪ್ರಸಾರಕ ಮಂಡಳಿ ಕಾಲೇಜಿನಲ್ಲಿ ನಡೆಯಲಿದೆ. ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಮನಗೂಳಿ ಅವರ ನಿವಾಸದಲ್ಲಿ ಈ ವಿಷಯ ತಿಳಿಸಿದ ಮನಗೂಳಿ ಸಂಸ್ಥಾನ ಹಿರೇಮಠದ ಶ್ರೀ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ, ಇಂದು ಬೆಳಗ್ಗೆ  11ಕ್ಕೆ ಮಾಜಿ ಸಚಿವರ ಅಂತ್ಯಕ್ರಿಯೆ ನಡೆಯಲಿದೆ. ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ. ಎಂ.ಸಿ. ಮನಗೂಳಿ ಪ್ರತಿನಿತ್ಯ ಇಷ್ಟಲಿಂಗ ಪೂಜೆ ಮಾಡುತ್ತಿದ್ದರು. ಇಷ್ಟಲಿಂಗ ಪೂಜೆಯ ಬಳಿಕವಷ್ಟೇ ನೀರು ಕುಡಿಯುತ್ತಿದ್ದರು ಎಂದು ಎಂ.ಸಿ. ಮನಗೂಳಿ ಅವರ ಸಂಪ್ರದಾಯ ಪಾಲನೆಯನ್ನು ಸ್ಮರಿಸಿದರು.


ಇಂದು ಸಕಲ ಸ್ವಾಮೀಜಿಗಳ ಸಮ್ಮುಖದಲ್ಲಿ ಕ್ರಿಯಾ ಸಮಾಧಿ ನಡೆಸಲಾಗುವುದು. 5000 ವಿಭೂತಿಗಳನ್ನು ಅಂತ್ಯಕ್ರಿಯೆಗೆ ಬಳಸಲಾಗುವುದು. ಸಾಮಾನ್ಯವಾಗಿ ಅಂತ್ಯಕ್ರಿಯೆಗೆ 500 ರಿಂದ 1000 ವಿಭೂತಿಗಳನ್ನು ಬಳಸಲಾಗುತ್ತದೆ.  ಸ್ವಾಮೀಜಿಗಳ ಅಂತ್ಯಕ್ರಿಯೆಯ ಶೇ. 25 ರಷ್ಟು ಸಂಪ್ರದಾಯಗಳು ನಾಳೆ ನಡೆಯಲಿವೆ ಎಂದು ಶ್ರೀ ಅಭಿನವ ಸಂಗನಬಸವ ಶಿವಾಚಾರ್ಯರು ಗುರುವಾರ ತಿಳಿಸಿದರು.


ಇಂದು ನಡೆಯಲಿರುವ ಎಂ.ಸಿ. ಮನಗೂಳಿ ಅವರ ಅಂತ್ಯಕ್ರಿಯೆಯಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಪಾಲ್ಗೊಳ್ಳಲಿದ್ದಾರೆ. ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ನೇರವಾಗಿ ಸಿಂದಗಿಗೆ ಆಗಮಿಸಲಿರುವ ಅವರು, ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಡಿಸಿಎಂ ಗೋವಿಂದ ಕಾರಜೋಳ ಕೂಡ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.


ತವರಿಗೆ ಪಾರ್ಥಿವ ಶರೀರ


ಈ ಮಧ್ಯೆ ಬೆಂಗಳೂನಲ್ಲಿ ನಿಧನರಾದ ಎಂ.ಸಿ. ಮನಗೂಳಿ ಅವರ ಪಾರ್ಥಿವ ಶರೀರವನ್ನು ಅವರ ಸ್ವಕ್ಷೇತ್ರ ವಿಜಯಪುರ ಜಿಲ್ಲೆಯ ಸಿಂದಗಿಗೆ ಗುರುವಾರ ಸಂಜೆ ತರಲಾಯಿತು.  ಪಾರ್ಥಿವ ಶರೀರ ಆಗಮಿಸುತ್ತಿದ್ದಂತೆ ಅವರ ಸಂಬಂಧಿಕರು, ಅಭಿಮಾನಿಗಳು, ಬೆಂಬಲಿಗರ ಆಕ್ರಂದನ ಮುಗಿಲು ಮುಟ್ಟಿತ್ತು. ಇದಕ್ಕೂ ಮೊದಲು ಸಿಂದಗಿಗೆ ಆಗಮಿಸಿದ ಎಂ.ಸಿ. ಮನಗೂಳಿ ಅವರ ಪುತ್ರ ಅರವಿಂದ ಮನಗೂಳಿ, ಅಶೋಕ ಮನಗೂಳಿ ತಂದೆಯ ನೆನೆದು ಬಿಕ್ಕಿ ಬಿಕ್ಕಿ ಅತ್ತರು. ಉಳಿದ ಮಕ್ಕಳಾದ ಡಾ. ಶಾಂತವೀರ, ಡಾ. ಚನ್ನವೀರ, ಮಗಳು ಅನ್ನಪೂರ್ಣ ಕೂಡ ತಂದೆಯ ಸಾವಿನ ದುಃಖವನ್ನು ತಡೆಯಲಾಗದೇ ಬಿಕ್ಕಿ ಬಿಕ್ಕಿ ಅಳುತ್ತಿರುವುದು ಅಲ್ಲಿನ ದುಃಖ ಭರಿತ ಸನ್ನಿವೇಶಕ್ಕೆ ಸಾಕ್ಷಿಯಾಗಿತ್ತು. ಎಂ.ಸಿ. ಮನಗೂಳಿ ಪತ್ನಿ ಸಿದ್ದಮ್ಮ ಗೌಡತಿ ಎಂ. ಮನಗೂಳಿ ಅವರೂ ಪತಿಯನ್ನು ನೆನೆದು ಗಳಗಳನೆ ಕಣ್ಣೀರಿಡುತ್ತಿದ್ದರು.


ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ಸಿದ್ದಮ್ಮ ಗೌಡತಿ ಅವರು, ವಿಜಯಪುರ ಆಸ್ಪತ್ರೆಯಲ್ಲಿದ್ದಾಗ ಕೊನೆಯದಾಗಿ ಭೇಟಿಯಾಗಿದ್ದೆ. ನಂತರ ಭೇಟಿಯಾಗಿರಲಿಲ್ಲ. ನನ್ನ ರಾಜನ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ ಎಂದು ಉಮ್ಮಳಿಸಿ ಬರುತ್ತಿದ್ದ ದುಃಖವನ್ಮು ಹೊರಹಾಕುತ್ತಲೇ ಕಣ್ಣೀರಿಡುತ್ತಿದ್ದ ದೃಶ್ಯ ಎಂ.ಸಿ. ಮನಗೂಳಿ ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿತ್ತು.


ರಾತ್ರಿಯಿಡಿ ಮನಗೂಳಿ ನಿವಾಸದಲ್ಲಿ ಪಾರ್ಥಿವ ಶರೀರ


ಗುರುವಾರ ಸಂಜೆ ಬೆಂಗಳೂರಿನಿಂದ ಆಗಮಿಸಿದ ಎಂ.ಸಿ. ಮನಗೂಳಿ ಅವರ ಪಾರ್ಥಿವ ಶರೀರವನ್ನು ಅವರ ಸಿಂದಗಿ ನಿವಾಸದಲ್ಲಿಯೇ ಇಡಲಾಗಿತ್ತು. ಸಾರ್ವಜನಿಕರು ಅಂತಿಮ ದರ್ಶನ ಪಡೆದರು. ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಸಿಂದಗಿ ಪಟ್ಟಣದಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆಯಲಿದ್ದು, ನಂತರ ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿ ಆವರಣದಲ್ಲಿ ಬೆಳಗ್ಗೆ 11ಕ್ಕೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಮನಗೂಳಿ ಅವರ ನಿಕಟವರ್ತಿ ಗೊಲ್ಲಾಳಪ್ಪಗೌಡ ತಿಳಿಸಿದ್ದಾರೆ.


ಇದನ್ನು ಓದಿ: MC Managuli Death: ಶಾಸಕ ಎಂ.ಸಿ ಮನಗೂಳಿ ಇನ್ನಿಲ್ಲ; ಗ್ರಾಮ ಸೇವಕರಾಗಿದ್ದ ಮನಗೂಳಿ ಮುತ್ಯಾ ರಾಜಕೀಯ ಜೀವನ ಇಲ್ಲಿದೆ


ಅಂತಿಮ ದರ್ಶನ ಪಡೆದ ಅಧಿಕಾರಿಗಳು


ಈ ಮಧ್ಯೆ ಸಿಂದಗಿಗೆ ಆಗಮಿಸಿದ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನಿಲ ಕುಮಾರ, ಎಸ್ಪಿ ಅನುಪಮ ಅಗ್ರವಾಲ, ಇಂಡಿ ಎಸಿ ರಾಹುಲ ಸಿಂಧೆ, ಡಿವೈಎಸ್ಪಿ ಶ್ರೀಧರ ದೊಡ್ಡಿ ಸಿಪಿಐ ಪಟೇಲ, ತಹಸೀಲ್ದಾರ ಸಂಜೀವಕುಮಾರ ದಾಸರ ಸೇರಿದಂತೆ ನಾನಾ ಅಧಿಕಾರಿಗಳು ಮಾಜಿ ಸಚಿವ ಎಂ. ಸಿ. ಮನಗೂಳಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.


ಕೊರೋನಾ ಸೋಂಕಿತರಾಗಿದ್ದ ಮಾಜಿ ಸಚಿವ


ಈ ಮಧ್ಯೆ ಜ.5 ರಂದು ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ಎಂ.ಸಿ. ಮನಗೂಳಿ ಅವರನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜ. 8 ರಂದು ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು. ಜ. 9ರಂದು ಬೆಂಗಳೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಏರ್​ ಲಿಫ್ಟ್ ಮಾಡಲಾಗಿತ್ತು. ಆದರೆ, ಗುರುವಾರ ನಸುಕಿನ ಜಾವ 1 ಗಂಟೆಗೆ ಅವರು ಮೃತಪಟ್ಟಿದ್ದಾರೆ. ಆನಂತರ ನಡೆಸಲಾದ ಕೊರೋನಾ ಟೆಸ್ಟ್ ಕೂಡ ಪಾಸಿಟಿವ್ ಬಂದಿದೆ.  ಆದರೆ, ಕೊರೋನಾ ಪಾಸಿಟಿವ್ ಬಂದ 11 ದಿನಗಳ ನಂತರ ಅದು ಹರಡುವುದಿಲ್ಲ. ಈ ಹಿನ್ನೆಲೆಯಲ್ಲಿ ಎಂ.ಸಿ. ಮನಗೂಳಿ ಅವರ ಪಾರ್ಥಿವ ಶರೀರವನ್ನು ಅವರ ಕುಟುಂಬಸ್ಥರಿಗೆ ಅಂತ್ಯಕ್ರಿಯೆಗಾಗಿ ಹಸ್ತಾಂತರಿಸಲಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನಿಲ ಕುಮಾರ ತಿಳಿಸಿದ್ದಾರೆ.

Published by:HR Ramesh
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು