ರಸ್ತೆಯಲ್ಲಿ ಹೆಚ್ಚುತ್ತಿದೆ ಟಿಪ್ಪರ್, ಲಾರಿಗಳ ಅಬ್ಬರ; ಲಂಗು ಲಗಾಮಿಲ್ಲದ ಓಡಾಟಕ್ಕೆ ಬಲಿಯಾಗುತ್ತಿವೆ ಅಮಾಯಕ ಜೀವಗಳು

ರಸ್ತೆಗಳಲ್ಲಿ ಮರಳು, ಮಣ್ಣು ಸಾಗಾಟದ ಸಂದರ್ಭದಲ್ಲಿ ಇವುಗಳಿಗೆ ಹೊದಿಕೆಯನ್ನು ಹಾಕಿ ಚಾಲನೆ ಮಾಡಬೇಕು ಎನ್ನುವ ಕಾನೂನಿದ್ದರೂ, ಈ ಎಲ್ಲಾ ಕಾನೂನುಗಳು ಈ ವಾಹನಗಳಿಗೆ ಅನ್ವಯಿಸುವುದಿಲ್ಲ ಎನ್ನುವ ರೀತಿಯಲ್ಲಿ ಇವುಗಳು ಓಡಾಟ ನಡೆಸುತ್ತಿವೆ. ಮಣ್ಣು ಹಾಗೂ ಮರಳನ್ನು ರಸ್ತೆಯಲ್ಲಿ ಎಲ್ಲೆಂದರಲ್ಲಿ ಚೆಲ್ಲುವ ಪ್ರಕರಣಗಳೂ ಹೆಚ್ಚಾಗಿ ನಡೆಯುತ್ತಿದ್ದು, ಇವುಗಳನ್ನು ಆದಷ್ಟು ಬೇಗ ನಿಯಂತ್ರಿಸುವ ಕೆಲಸ ಆಗಬೇಕಿದೆ. 

ಟಿಪ್ಪರ್

ಟಿಪ್ಪರ್

  • Share this:
ಪುತ್ತೂರು; ಗ್ರಾಮೀಣ, ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಟಿಪ್ಪರ್ ಲಾರಿಗಳು ಇತ್ತೀಚಿನ ದಿನಗಳಲ್ಲಿ ಯಮಸ್ವರೂಪಿಯಾಗಿ ಬದಲಾಗುತ್ತಿವೆ. ಮರಳು, ಮಣ್ಣು ಸಾಗಿಸುವ ಈ ಟಿಪ್ಪರ್ ಲಾರಿ ಚಾಲಕರು ತುರ್ತು ಸೇವೆಯ ಆ್ಯಂಬುಲೆನ್ಸ್ ಗಳಿಂತಲೂ ವೇಗವಾಗಿ ಚಾಲನೆ ಮಾಡುವ ಮೂಲಕ ಇತರ ವಾಹನಗಳಿಗೆ ಅಪಾಯವಾಗಿ ಕಾಡಲಾರಂಭಿಸಿದೆ. ತಿಂಗಳೊಂದರಲ್ಲೇ ಹತ್ತಕ್ಕೂ ಮಿಕ್ಕಿದ ಅವಘಡಗಳು ಟಿಪ್ಪರ್ ಲಾರಿಗಳಿಂದಲೇ ಸಂಭವಿಸುತ್ತಿದ್ದು, ಈ ಲಾರಿಗಳ ಓಡಾಟದ ಮೇಲೆ ಕ್ರಮ ಜರುಗಿಸಬೇಕು ಎನ್ನುವ ಒತ್ತಡ ಕೇಳಿ ಬರಲಾರಂಭಿಸಿದೆ.

ಮರಳು , ಕಲ್ಲಿಗೆ ದಕ್ಷಿಣಕನ್ನಡ ಜಿಲ್ಲೆಗೆ ಎಲ್ಲೆಡೆ ಬೇಡಿಕೆಯಿದೆ. ಈ ಕಾರಣಕ್ಕಾಗಿ ಕೇರಳ ಹಾಗೂ ಹೊರ ಜಿಲ್ಲೆಗಳಿಂದ ಹೆಚ್ಚಿನ ಪ್ರಮಾಣದ ಲಾರಿಗಳು ಜಿಲ್ಲೆಗೆ ಪ್ರವೇಶಿಸುತ್ತಿದೆ. ಅದರಲ್ಲೂ ಟಿಪ್ಪರ್ ಲಾರಿಗಳ ಸಂಖ್ಯೆಯೇ ಹೆಚ್ಚಾಗಿದ್ದು, ಮರಳು ಹಾಗೂ ಮಣ್ಣು ಸಾಗಾಟದ ನೆಪದಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗುತ್ತಿದೆ. ಗ್ರಾಮೀಣ, ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚಾಗಿ ಸಂಚರಿಸುವ ಈ ಟಿಪ್ಪರ್ ಲಾರಿಗಳ ಚಾಲಕರು ತಮಗೆ ತೋಚಿದ ರೀತಿಯಲ್ಲಿ ವಾಹನವನ್ನು ಚಲಾಯಿಸುವುದರಿಂದಾಗಿ ದ್ವಿಚಕ್ರ ವಾಹನ ಹಾಗೂ ಇತರ ವಾಹನಗಳಿಗೆ ಇವುಗಳು ಯಮ ಸ್ವರೂಪಿಯಾಗುತ್ತಿವೆ. ಏಕಮುಖ ಚಾಲನೆಯಿರುವ ಹೆದ್ದಾರಿಗಳಲ್ಲಿ ವಿರುದ್ಧ ದಿಕ್ಕಿನಲ್ಲಿ ಚಲಾಯಿಸುವುದು, ಅತೀ ವೇಗದ ಚಾಲನೆಯಿಂದಾಗಿ ಹಲವು ಅಫಘಾತಗಳಿಗೆ ಕಾರಣವಾಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ.

ವೇಗ ನಿಯಂತ್ರಕಗಳನ್ನು ಪ್ರತೀ ವಾಹನಗಳಿಗೂ ಅಳವಡಿಸಬೇಕೆಂಬ ಕಾನೂನಿದ್ದರೂ, ಟಿಪ್ಪರ್ ವಾಹನಗಳು ಮಾತ್ರ ಈ ಕಾನೂನನ್ನು ಪಾಲಿಸುತ್ತಿಲ್ಲ ಎನ್ನುವ ಆರೋಪವಿದೆ. ಪೊಲೀಸ್ ತಪಾಸಣೆಯ ವೇಳೆ ವೇಗ ನಿಯಂತ್ರಕದ ಬಿಲ್ ಗಳನ್ನು ಮಾತ್ರ ಹಾಜರುಪಡಿಸುವ ವ್ಯವಸ್ಥೆಯೂ ಇದ್ದು, ಅವುಗಳನ್ನು ತಮ್ಮ ವಾಹನಗಳಿಗೆ ಅಳವಡಿಸದೆ ಸಾಕಷ್ಟು ಲಾರಿಗಳು ಓಡಾಡುತ್ತಿವೆ. ಅತೀ ವೇಗವಾಗಿ ಟಿಪ್ಪರ್ ಚಾಲಕ ವಾಹನವನ್ನು ರಸ್ತೆಯಿಂದ ಸೀದಾ ಪಾದಾಚಾರಿ ರಸ್ತೆಗೆ ನುಗ್ಗಿಸಿ ರಸ್ತೆ ಬದಿಯಲ್ಲಿರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ ಸೇರಿದಂತೆ ಹಲವು ಸಾರ್ವಜನಿಕ ಆಸ್ತಿಪಾಸ್ತಿಗಳಿಗೂ ಹಾನಿಯುಂಟು ಮಾಡಿದ ಘಟನೆಯೂ ನಡೆದಿದೆ. ಅಲ್ಲದೆ ಗ್ರಾಮೀಣ ರಸ್ತೆಯಲ್ಲಿ ಈ ಟಿಪ್ಪರ್ ಲಾರಿಗಳ ಓಡಾಟ ಅಪಾಯಕಾರಿಯಾಗಿದ್ದು, ಪುತ್ತೂರಿನ ಕೌಡಿಚಾರಿನಲ್ಲಿ ಟಿಪ್ಪರ್ ಲಾರಿಯೊಂದು ದ್ವಿಚಕ್ರ ವಾಹನಗಳ ಮೇಲೆ ನುಗ್ಗಿ ವಾಹನ ಸವಾರ ಸಾವನ್ನಪ್ಪಿದ ಘಟನೆಯಂತಹ ಹಲವು ಘಟನೆಗಳು ಜಿಲ್ಲೆಯಲ್ಲಿ ನಡೆದಿದೆ.

ಇದನ್ನು ಓದಿ: ಸರ್ಕಾರಿ, ಖಾಸಗಿ ಶಾಲೆಗಳ ಮೇಲೆ ಬಿತ್ತು ಕಳ್ಳರ ಕಣ್ಣು: ಬ್ಯಾಟರಿ, ಯುಪಿಎಸ್ ಕದ್ದೊಯ್ದ ಚಾಲಾಕಿ ಖದೀಮರು!

ತುರ್ತು ಸೇವೆಗಳನ್ನು ನೀಡುವ ಆಂಬ್ಯುಲೆನ್ಸ್ ಹಾಗೂ ಅಗ್ನಿಶಾಮಕ ದಳದ ವಾಹನಗಳಿಗಿಂತಲೂ ಹೆಚ್ಚಿನ ವೇಗದಲ್ಲಿ ಈ ಟಿಪ್ಪರ್ ಗಳನ್ನು ಚಲಾಯಿಸುವ ಮೂಲಕ ಜನರ ಪ್ರಾಣಕ್ಕೆ ಕುತ್ತು ತರಲಾಗುತ್ತಿದೆ. ಅಲ್ಲದೆ ಕೆಲವು ಟಿಪ್ಪರ್ ಗಳ ಮುಂದೆ ನಂಬರ್ ಪ್ಲೇಟ್ ಇದ್ದರೆ, ಹಿಂದೆ ಇರುವುದಿಲ್ಲ, ಹಿಂದೆ ಇದ್ದಲ್ಲಿ , ಮುಂದೆ ಇರದಂತಹ ಸ್ಥಿತಿಯಿದೆ. ರಸ್ತೆಗಳಲ್ಲಿ ಮರಳು, ಮಣ್ಣು ಸಾಗಾಟದ ಸಂದರ್ಭದಲ್ಲಿ ಇವುಗಳಿಗೆ ಹೊದಿಕೆಯನ್ನು ಹಾಕಿ ಚಾಲನೆ ಮಾಡಬೇಕು ಎನ್ನುವ ಕಾನೂನಿದ್ದರೂ, ಈ ಎಲ್ಲಾ ಕಾನೂನುಗಳು ಈ ವಾಹನಗಳಿಗೆ ಅನ್ವಯಿಸುವುದಿಲ್ಲ ಎನ್ನುವ ರೀತಿಯಲ್ಲಿ ಇವುಗಳು ಓಡಾಟ ನಡೆಸುತ್ತಿವೆ. ಮಣ್ಣು ಹಾಗೂ ಮರಳನ್ನು ರಸ್ತೆಯಲ್ಲಿ ಎಲ್ಲೆಂದರಲ್ಲಿ ಚೆಲ್ಲುವ ಪ್ರಕರಣಗಳೂ ಹೆಚ್ಚಾಗಿ ನಡೆಯುತ್ತಿದ್ದು, ಇವುಗಳನ್ನು ಆದಷ್ಟು ಬೇಗ ನಿಯಂತ್ರಿಸುವ ಕೆಲಸ ಆಗಬೇಕಿದೆ.
Published by:HR Ramesh
First published: