ತುಮಕೂರು: (Tumkur) ಅದೊಂದು ಬಡ ಕುಟುಂಬ. ತಮಗಿದ್ದ ಒಂದು ಎಕರೆ ಜಾಗದಲ್ಲಿ ಕಷ್ಟಪಟ್ಟು ತೆಂಗು, ಅಡಿಕೆ (Coconut, Areca Nut) ಮರಗಳನ್ನು ಬೆಳೆಸಿತ್ತು. ಹತ್ತಾರು ವರ್ಷದಿಂದ ತಮ್ಮ ತೋಟದ ಫಸಲಿಗಾಗಿ ಕಾದು ಕುಳಿತ್ತಿದ್ದರು. ಇನ್ನೇನು ಫಸಲು ಕೈ ಸೇರುತ್ತದೆ ಅನ್ನುವಷ್ಟರಲ್ಲಿ ಅರ್ಧಕರ್ಧ ತೋಟ ಧರೆಗುರುಳಿದೆ. ಪ್ರಭಾವಿಗಳ ಇದ್ದಿಲು ಕಾರ್ಖಾನೆಗೆ ರಸ್ತೆ ಮಾಡಿ ಕೊಡಲು ಅಧಿಕಾರಿಗಳು ಫಸಲಿಗೆ ಬಂದ ತೋಟವನ್ನೇ ಉರುಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ತೋಟ ಕಳೆದುಕೊಂಡ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುತಿದೆ. ಅಂದ ಹಾಗೆ ಈ ಮನಕಲುಕುವ ಘಟನೆ ನಡೆದಿರೋದು ತುಮಕೂರು ಜಿಲ್ಲೆ ತಿಪಟೂರಿನ ಹೂಲಿಹಳ್ಳಿಯಲ್ಲಿ.
ಹೌದು, ಹಚ್ಚಹಸಿರಾಗಿ ನಿಂತಿದ್ದ ತೆಂಗಿನ ತೋಟ. ಮುಗಿಲೆತ್ತರಕ್ಕೆ ಬೆಳೆದು ನಿಂತಿದ್ದ ಅಡಿಕೆ, ತೆಂಗಿನ ಮರಗಳನ್ನು ಮಕ್ಕಳಿಗಿಂತ ಹೆಚ್ಚು ಕಾಳಜಿಯಿಂದ ಹತ್ತಾರು ವರ್ಷಗಳಿಂದ ತೋಟ ಬೆಳೆಸಿದ್ದ ಮಾಲೀಕರು. ತೋಟದ ಫಸಲಿನಿಂದಾಗಿ ಇನ್ನೇನು ತಮ್ಮ ಬಾಳು ಹಸನಾಗುತ್ತದೆ ಎನ್ನುವಷ್ಟರಲ್ಲಿ ಕುತಂತ್ರಿಗಳ ವಕ್ರದೃಷ್ಟಿ ಬಿದ್ದೇ ಬಿಟ್ಟಿದೆ ಎಂಬ ಆರೋಪ ಕೇಳಿ ಬಂದಿದೆ. ಫಸಲಿಗೆ ಬಂದಿದ್ದ ತೆಂಗು, ಅಡಿಕೆ ಮರಗಳು ಧರೆಗುರುಳಿವೆ. ತಿಪಟೂರು ತಾಲೂಕಿನ ಹೂಲಿಹಳ್ಳಿಯಲ್ಲಿ ಗ್ರಾಮದ ಸರ್ವೆ ನಂಬರ್ 95 , 96, 97 ರ 1 ಎಕರೆ ಭೂಮಿಯಲ್ಲಿ ದೊಡ್ಡಚಿಕ್ಕಯ್ಯ ಎಂಬುವರು ತೋಟ ಮಾಡಿಕೊಂಡಿದ್ದರು. ಆದರೆ ಇವರ ತೋಟದ ನಡುವೆ ಮಧ್ಯೆ ಬಂಡಿ ಜಾಡು ಹಾದು ಹೋಗುತ್ತದೆ ಎಂದು ಸಮಜಾಯಿಸಿ ನೀಡಿದ ತಹಸೀಲ್ದಾರ್ ಚಂದ್ರಶೇಖರ್ ಏಕಾಏಕಿ ಜೆಸಿಬಿ ತಂದು ಮರಗಳನ್ನು ಉರುಳಿಸಿದ್ದಾರೆ ಎಂದು ತೋಟದ ಮಾಲೀಕ ದೊಡ್ಡಚಿಕ್ಕಯ್ಯ ಆರೋಪಿಸಿದ್ದಾರೆ. ಅಲ್ಲದೇ ತಮ್ಮ ತೋಟದ ಪಕ್ಕದಲ್ಲಿ ಕಾಂಗ್ರೆಸ್ ಮುಖಂಡ ನಿಂಗಪ್ಪ ಎನ್ನುವವರ ಇದ್ದಿಲು ಕಾರ್ಖಾನೆ ಇದೆ. ಅವರಿಗೆ ರಸ್ತೆ ಮಾಡಿ ಕೊಡುವ ಸಲುವಾಗಿ ನಮ್ಮ ತೋಟವನ್ನು ನಾಶ ಮಾಡಿದ್ದಾರೆ ಎನ್ನುವುದು ತೋಟದ ಮಾಲೀಕರ ಆರೋಪ.
ಇದ್ದಿಲು ಫ್ಯಾಕ್ಟರಿಗೆ ಹೋಗಲು ಈಗಾಲೇ ತೋಟದ ಕೊನೆಯ ಬದಿಯಲ್ಲಿ 12 ಅಡಿ ರಸ್ತೆ ಬಿಡಲಾಗಿದೆ. ಅಲ್ಲಿಂದ ಇಷ್ಟು ವರ್ಷ ಓಡಾಡುತಿದ್ದರು. ಇನ್ನೂ ಬೇಕಾದರೆ ಅದೇ ಬದಿಯಲ್ಲಿ 5, 6 ಅಡಿ ಜಾಗ ಬಿಟ್ಟುಕೊಡಬಹುದಿತ್ತು. ಇದನ್ನು ಲೆಕ್ಕಿಸದ ತಹಸೀಲ್ದಾರ್ ಚಂದ್ರಶೇಖರ್, ತೋಟದ ನಡುಮಧ್ಯೆ ರಸ್ತೆ ಮಾಡಲು ಹೊರಟು ಮರಗಳನ್ನು ಧರೆಗೆ ಉರುಳಿಸಿದ್ದಾರೆ. ತೋಟದ ಮಧ್ಯೆ 30 ಅಡಿ ರಸ್ತೆ ನಿರ್ಮಿಸಿ ಕೊಡುವ ಸಲುವಾಗಿ 60 ಅಡಿಕೆ ಗಿಡ, 50 ತೆಂಗಿನ ಮರಗಳನ್ನು ಕರುಣೆ ಇಲ್ಲದೇ ನಾಶ ಮಾಡಿದ್ದಾರೆ ಎಂದು ತೋಟದ ಮಾಲೀಕ ದೊಡ್ಡ ಚಿಕ್ಕಯ್ಯ ದೂರಿದ್ದಾರೆ.
![]()
ಅಡಿಕೆ ಮರ ಉರುಳಿಸುತ್ತಿರುವುದು.
ತಹಸೀಲ್ದಾರ್ ಚಂದ್ರಶೇಖರ್ ಹೇಳುವುದೇನು?
ಇನ್ನು ಈ ಆರೋಪವನ್ನು ತಹಸೀಲ್ದಾರ್ ಚಂದ್ರಶೇಖರ್ ತಳ್ಳಿಹಾಕಿದ್ದು, ಕಾನೂನು ಬದ್ದವಾಗಿ ನೋಟಿಸ್ ನೀಡಿ ಬಂಡಿಜಾಡು ದಾರಿಯನ್ನು ತೆರವುಗೊಳಿಸಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ ಅದೇ ಜಾಗದಲ್ಲಿ ಕರಾಬು ಜಾಗ ಇದೆ. ಅದು ಸಂಪೂರ್ಣ ಸರ್ಕಾರಕ್ಕೆ ಸೇರಿರುವುದರಿಂದ ಕರಾಬು ಜಾಗದಲ್ಲಿ ರಸ್ತೆ ಮಾಡಲಾಗಿದೆ ಅಂತಾರೆ ತಹಶಿಲ್ದಾರ್ ಚಂದ್ರಶೇಖರ್.
ಇದನ್ನು ಓದಿ: Union Minister Narayan Rane: ಕೇಂದ್ರ ಸಚಿವ ರಾಣೆಯನ್ನು ಬಂಧಿಸಲು ಪೊಲೀಸರು ರತ್ನಗಿರಿಗೆ ಬಂದಾಗ ಅವರು ಏನು ಮಾಡುತ್ತಿದ್ದರು ಗೊತ್ತೆ?
ತೋಟ ತೆರವುಗೊಳಿಸಲು ತಹಸೀಲ್ದಾರ್ ಖಾಕಿ ಪಡೆಯನ್ನೇ ತಂದಿದ್ರು. ಹೂಲಿಹಳ್ಳಿ ಗ್ರಾಮದ ಸುತ್ತ ಪೊಲೀಸ್ ಬಂದೋಬಸ್ತ್ ಮಾಡಿಸಿದ್ದು. ತೋಟದಲ್ಲಂತು 50 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆಗೊಳಿಸಿ ಬಿಗಿ ಭದ್ರತೆ ನೀಡಿದ್ರು. ತಹಸೀಲ್ದಾರ್ ಪೂರ್ವಾಗ್ರಹ ಪೀಡಿತರಾಗಿ ಪೊಲಿಸ್ ಪಡೆ ತಂದು ದೌರ್ಜನ್ಯ ನಡೆಸಿದ್ದಾರೆ ಅನ್ನೋದು ಮಾಲೀಕರ ವಾದ. ತಹಸೀಲ್ದಾರರಿಗೆ ನೈತಿಕತೆ ಇದ್ದರೆ ತಾಲೂಕಿನ ಎಲ್ಲಾ ಬಂಡಿ ಜಾಡು ಜಾಗವನ್ನು ತೆರವುಗೊಳಿಸಲಿ ಎಂದು ರೈತರು ಸವಾಲು ಹಾಕಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ