HOME » NEWS » District » TIGER KILLED AN OLD LADY AND A BOY IN KODAGU RSK MAK

ಕೊಡಗು: ಸೌದೆ-ಅಣಬೆಗಾಗಿ ಮನೆಯಿಂದ ಹೊರ ಹೋದ ಬಾಲಕ, ವೃದ್ಧೆ ಹುಲಿಗೆ ಬಲಿ!

ವೃದ್ಧೆ ಚಿಣ್ಣಿಯವರ ಶವವನ್ನು ಗೋಣಿಕೊಪ್ಪಲು ಆಸ್ಪತ್ರೆಗೆ ಸಾಗಿಸಿ ಶವಪರೀಕ್ಷೆ ನಡೆಸಲಾಯಿತು. ಬಳಿಕ ಮತ್ತಿಗೋಡು ಸಾಕಾನೆ ಶಿಬಿರದಿಂದ ದಸರಾ ಆನೆ ಅರ್ಜುನ ಮತ್ತು ಗೋಪಾಲಸ್ವಾಮಿ ಆನೆಯನ್ನು ಹುಲಿ ಕಾರ್ಯಚರಣೆಗೆ ಕರೆತರಲಾಯಿತು.

news18-kannada
Updated:February 21, 2021, 8:08 PM IST
ಕೊಡಗು: ಸೌದೆ-ಅಣಬೆಗಾಗಿ ಮನೆಯಿಂದ ಹೊರ ಹೋದ ಬಾಲಕ, ವೃದ್ಧೆ ಹುಲಿಗೆ ಬಲಿ!
ಸಾಂದರ್ಭಿಕ ಚಿತ್ರ.
  • Share this:
ಕೊಡಗು: ಅಣಬೆ ಅರಸಿ ಲೈನ್ ಮನೆಯಿಂದ ಹೊರಟಿದ್ದ ವೃದ್ಧೆ ಹುಲಿ ಬಾಯಿಗೆ ಸಿಕ್ಕಿ ಹೆಣವಾಗಿ ಹೋಗಿದ್ದಾರೆ. ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಟಿ. ಶೆಟ್ಟಿಗೇರಿ ಗ್ರಾಮದ ಚಿಣ್ಣಿ (65) ಹುಲಿ ದಾಳಿಯಿಂದ ಮೃತಪಟ್ಟ ಮಹಿಳೆ. ಶೆಟ್ಟಿಗೇರಿ ಗ್ರಾಮದ ಸೋಮಪ್ಪ ಎಂಬುವರ ತೋಟದಲ್ಲಿ ಕೆಲಸ ಮಾಡುತ್ತಾ ಲೈನ್ ಮನೆಯಲ್ಲಿ ವಾಸವಿದ್ದ ಪಣಿಯರವರ ಬೋಳಾಕ ಎಂಬುವರ ಪತ್ನಿ ಚಿಣ್ಣಿ, ಮುಂಜಾನೆ ಎದ್ದು ಸಾಂಬಾರ್ ಮಾಡೋದಕ್ಕೆ ಅಣಬೆ ಸಿಗುತ್ತದೆ ಎಂದು ಲೈನ್ ಮನೆಯಿಂದ ಹೊರಗೆ ಹೋಗಿದ್ದಾರೆ. ಆದರೆ, ರಾತ್ರಿಯಷ್ಟೇ ಕುಮಟೂರಿನಲ್ಲಿ ಬಾಲಕನನ್ನು ಕೊಂದು ಸುತ್ತಮುತ್ತ ಹೊಂಚು ಹಾಕಿದ್ದ ಹುಲಿ ಮುಂಜಾನೆ ಮತ್ತೆ ವೃದ್ದೆ ಮೇಲೆರಗಿ ಕೊಂದು ಹಾಕಿದೆ.

ಕುತ್ತಿಗೆ ಬಾಗಕ್ಕೆ ಕಚ್ಚಿ ರಕ್ತ ಹೀರಿರುವ ಹುಲಿ ವೃದ್ದೆಯನ್ನು ಸ್ಥಳದಲ್ಲಿಯೇ ಸಾಯಿಸಿದೆ. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಸಿಬ್ಬಂದಿ, ಅಧಿಕಾರಿಗಳೆಲ್ಲರೂ ಸ್ಥಳಕ್ಕೆ ದೌಡಾಯಿಸಿದ್ದಾರೆ. ರಾತ್ರಿಯಷ್ಟೇ ಬಾಲಕನನ್ನು ಕೊಂದಿದ್ದ ಹುಲಿ ಬೆಳಿಗ್ಗೆಯೂ ಮತ್ತೆ ವೃದ್ದೆಯನ್ನು ಕೊಂದಿದ್ದರಿಂದ ಸ್ಥಳಕ್ಕೆ ಬಂದಿದ್ದ ಅರಣ್ಯ ಇಲಾಖೆ ಸಿಬ್ಬಂದಿಯನ್ನು ರಾಜ್ಯ ರೈತ ಸಂಘಟನೆ ಹಸಿರು ಸೇನೆ ಮುಖಂಡರು ತೀವ್ರ ತರಾಟೆಗೆ ತೆಗೆದುಕೊಂಡರು. ನೀವು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ, ಹುಲಿಯನ್ನು ನಾವೇ ಗುಂಡು ಹೊಡೆದು ಕೊಲ್ಲುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೂ ಮೊದಲು ಅಂತರರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟಿಸಲು ಮುಂದಾದರು. ಈ ವೇಳೆ ಅರಣ್ಯ ಅಧಿಕಾರಿಗಳು ಮತ್ತು ರೈತ ಸಂಘಟನೆ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ರೈತ ಮುಖಂಡರು ಅರಣ್ಯ ಇಲಾಖೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಭೇಟಿ ನೀಡಿದ್ದ ಎಂಎಸ್‍ಸಿ ವೀಣಾ ಅಚ್ಚಯ್ಯ ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್ ಅವರನ್ನು ತರಾಟೆಗೆ ತೆಗೆದುಕೊಂಡರು. "ನಮ್ಮ ಜಿಲ್ಲೆಯ ಜನರಾಗಿರುವುದಕ್ಕೆ ಇಷ್ಟಕ್ಕೆ ಸುಮ್ಮನಿದ್ದಾರೆ. ಬೇರೆ ಜಿಲ್ಲೆಯ ಜನರಾಗಿದ್ದರೆ ನಿಮ್ಮ ಗ್ರಹಚಾರ ಬಿಡಿಸುತ್ತಿದ್ದರು" ಎಂದು ಅಸಮಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: Drugs Mafia: ಮುಂದುವರೆದ ಸಿಸಿಬಿ ಪೊಲೀಸರ ಕಾರ್ಯಾಚರಣೆ; ಸಿಲಿಕಾನ್ ಸಿಟಿಯಲ್ಲಿ ಮತ್ತಷ್ಟು ಡ್ರಗ್ ಪೆಡ್ಲರ್​ಗಳ ಬೇಟೆ

ಬಳಿಕ ವೃದ್ಧೆ ಚಿಣ್ಣಿಯವರ ಶವವನ್ನು ಗೋಣಿಕೊಪ್ಪಲು ಆಸ್ಪತ್ರೆಗೆ ಸಾಗಿಸಿ ಶವಪರೀಕ್ಷೆ ನಡೆಸಲಾಯಿತು. ಬಳಿಕ ಮತ್ತಿಗೋಡು ಸಾಕಾನೆ ಶಿಬಿರದಿಂದ ದಸರಾ ಆನೆ ಅರ್ಜುನ ಮತ್ತು ಗೋಪಾಲಸ್ವಾಮಿ ಆನೆಯನ್ನು ಹುಲಿ ಕಾರ್ಯಚರಣೆಗೆ ಕರೆತರಲಾಯಿತು. ಬಳಿಕ ಟಿ. ಶೆಟ್ಟಿಗೇರಿ ವ್ಯಾಪ್ತಿಯ ಕುಮಟೂರು, ಶ್ರೀಮಂಗಲ, ಹರಿಹರ ಬೆಳ್ಳೂರು ಮತ್ತು ವೆಸ್ಟ್ ನೆಮ್ಮಲೆ ಗ್ರಾಮಗಳ ಸುತ್ತಮುತ್ತ ಈ ಹುಲಿ ಓಡಾಡುತ್ತಿದ್ದು, ಸದ್ಯ ಎರಡು ಆನೆಗಳನ್ನು ಬಳಸಿ ಹುಲಿ ಸೆರೆಗೆ ಕಾರ್ಯಚರಣೆ ಮಾಡಲಾಗುತ್ತಿದೆ.

ನಿನ್ನೆ ಸಂಜೆ ಕೂಡ ಯರವರ ಬಸವ ಎಂಬುವರ ಮಗ ಎಂಟನೆ ತರಗತಿ ಓದುತ್ತಿದ್ದ ಅಯ್ಯಪ್ಪ ಕೂಡ ಉಳಿಯ ದಾಳಿಗೆ ಬಲಿಯಾಗಿದ್ದ. ಶನಿವಾರ ಶಾಲೆಗೆ ಹೋಗಿ ಬಂದಿದ್ದ ಅಯ್ಯಪ್ಪ ಸೌದೆಗಾಗಿ ಸಂಜೆ ತೋಟದ ಕಡೆಗೆ ಹೋಗಿದ್ದಾನೆ. ಈ ವೇಳೆ ದಾಳಿ ಮಾಡಿದ್ದ ಹುಲಿ ಬಾಲಕನನ್ನು ಕೊಂದಿತ್ತು. ಒಟ್ಟಿನಲ್ಲಿ 12 ಗಂಟೆ ಅವಧಿಯಲ್ಲಿ ಇಬ್ಬರನ್ನು ಹುಲಿ ಬಲಿ ಪಡೆದಿರುವುದು ಈ ಭಾಗದ ಜನರನ್ನು ಆತಂಕಕ್ಕೆ ದೂಡಿದೆ.
Published by: MAshok Kumar
First published: February 21, 2021, 8:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories