Belagavi By Election | ಬೆಳಗಾವಿ ಲೋಕಸಭಾ ಕ್ಷೇತ್ರದ ಮೇಲೆ ಚಿಕ್ಕೋಡಿ ನಾಯಕರ ಕಣ್ಣು; ಟಿಕೆಟ್​ಗಾಗಿ ತೆರೆಮರೆಯ ಕಸರತ್ತು

ಬೆಳಗಾವಿ ಲೋಕಸಭೆಗೆ ಉಪ ಚುನಾವಣೆ ಘೋಷಣೆ ಆಗಿದ್ದು ಇದುವರೆಗೂ ಯಾವ ಪಕ್ಷವೂ ಕೂಡ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ಅಭ್ಯರ್ಥಿ ಯಾರಾಗುತ್ತಾರೆ ಎಂಬ ಕುತೂಹಲ ಈಗ ಮತದಾರರಲ್ಲಿ ಮನೆ ಮಾಡಿದೆ.

ಬೆಳಗಾವಿ ಲೋಕಸಭಾ ಕ್ಷೇತ್ರ

ಬೆಳಗಾವಿ ಲೋಕಸಭಾ ಕ್ಷೇತ್ರ

  • Share this:
ಬೆಳಗಾವಿ: ದಿವಂಗತ ಸುರೇಶ್ ಅಂಗಡಿ ಅಕಾಲಿಕ ನಿಧನದಿಂದಾಗಿ ತೆರವಾಗಿರುವ ಬೆಳಗಾವಿ ಲೋಕಸಭೆಗೆ ಅಂತಿಮವಾಗಿ ಉಪ ಚುನಾವಣೆ ಘೋಷಣೆ ಆಗಿದೆ. ಚುನಾವಣಾ ಆಯೋಗ ಅಧಿಕೃತ ಆದೇಶ ಹೊರಡಿಸಿದ್ದು, ರಾಜಕೀಯ ಪಕ್ಷದಲ್ಲಿ ಗೆಲುವಿನ ತಂತ್ರಗಾರಿಕೆ ಕೂಡ ಶುರುವಾಗಿದೆ. ಬೆಳಗಾವಿ ಲೋಕಸಭೆಯಿಂದ ಸ್ಪರ್ಧೆಗೆ ಚಿಕ್ಕೋಡಿ ಜಿಲ್ಲೆಯ ನಾಯಕರು ತೆರೆ ಮರೆಯ ಕಸರತ್ತು ನಡೆಸಿದ್ದಾರೆ.

ಮಾರ್ಚ್ 23 ರಂದು ಉಪ ಚುನಾವಣೆಯ ಅಧಿಸೂಚನೆ ಪ್ರಕಟವಾಗಲಿದ್ದು ಮಾರ್ಚ್ 30 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ ಮಾರ್ಚ 31 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು ನಾಮಪತ್ರ ಹಿಂದೆ ಪಡೆಯಲು ಏಪ್ರಿಲ್ 3 ಕೊನೆಯ ದಿನವಾಗಿದೆ. ಏಪ್ರಿಲ್ 17 ರಂದು ಮತದಾನ ನಡೆಯಲಿದೆ.

ಕೇಂದ್ರ ರೈಲ್ವೆ ಸಚಿವ ದಿವಂಗತ ಸುರೇಶ್ ಅಂಗಡಿ ನಿಧನದಿಂದಾಗಿ ತೆರವಾಗಿರುವ ಸ್ಥಾನಕ್ಕೆ ಟಿಕೆಟ್ ಗಾಗಿ ಬಿಜೆಪಿ ಪಾಳಯದಲ್ಲಿ ಸಾಕಷ್ಟು ಪೈಪೋಟಿ ಶುರುವಾಗಿದೆ. ಬಿಜೆಪಿಯಿಂದ ಸ್ಪರ್ಧೆ ಮಾಡಿದವರು ಆರಾಮಾಗಿ ಜಯ ಸಾಧಿಸಬಹುದಾದ ಕ್ಷೇತ್ರ ಇದಾಗಿದ್ದು, ಟಿಕೆಟ್ ಗಾಗಿ ಸಾಕಷ್ಟು ನಾಯಕರು ತೆರೆ ಮರೆಯ ಕಸರತ್ತು ನಡೆಸಿದ್ದಾರೆ. ಇನ್ನು ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ನಿರ್ಣಾಯಕ ಮತದಾರರು ಲಿಂಗಾಯತರಾಗಿರುವ ಹಿನ್ನಲೆ ಮೊದಲ ಆದ್ಯತೆ ಲಿಂಗಾಯತ ನಾಯಕರಿಗೆ ಸಿಗಲಿದೆ.

ಇನ್ನು ಅನುಕಂಪದ ಆಧಾರದ ಮೇಲೆ ಟಿಕೆಟ್ ಅನ್ನು ದಿವಂಗತ ಸುರೇಶ್ ಅಂಗಡಿ ಅವರ ಪುತ್ರಿ ಶ್ರದ್ದಾ ಅಂಗಡಿ ಅವರಿಗೆ ನೀಡಬೇಕು ಎಂದು ಜಿಲ್ಲೆಯ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಅವರ ಕುಟುಂಬದ ಹೊರತಾಗಿ  ಬೇರೆಯವರಿಗೆ ಟಿಕೆಟ್ ನಿಡುವುದಾದರೆ ನಮಗೆ ನೀಡಿ ಎಂದು ದುಂಬಾಲು ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಟಿಕೆಟ್ ಗಾಗಿ ಬಿಜೆಪಿಯಲ್ಲಿ ದೊಡ್ಡ ಪಟ್ಟಿಯೆ ತಯಾರಾಗಿದ್ದು ಚಿಕ್ಕೋಡಿ ಜಿಲ್ಲೆಯ ನಾಯಕರು ಕೂಡ ಲಾಬಿ ನಡೆಸಿದ್ದಾರೆ. ಬೆಳಗಾವಿ ಜಿಲ್ಲೆಯ ನಾಯಕರಾದ ಸಂಜಯ ಪಾಟೀಲ್, ಡಾ‌. ಸೋನಾಲಿ ಸರ್ನೊಬತ್, ಡಾ.ಗೀರಿಶ್ ಸೋನವಾಲಕರ ಟಿಕೆಟ್ ಗಾಗಿ ಲಾಬಿ ನಡೆಸಿದರೆ ಇತ್ತ ಚಿಕ್ಕೋಡಿ ಜಿಲ್ಲೆಯ ನಾಯಕರಾದ, ರಮೇಶ್ ಕತ್ತಿ, ಡಾ.ಪ್ರಭಾಕರ್ ಕೋರೆ, ಅಮರಸಿಂಹ ಪಾಟೀಲ್ ಕೂಡ ಬಿಜೆಪಿ ಟಿಕೆಟ್ ಗಾಗಿ ತೆರೆ ಮರೆಯ ಕಸರತ್ತು ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು ಬಿಜೆಪಿಯ ಕಥೆ ಇದಾದ್ರೆ ಕಾಂಗ್ರೆಸ್ ಕಥೆಯೆ ಬೇರೆಯಾಗಿದೆ. ಬಿಜೆಪಿ ವಿರುದ್ದ ಪ್ರಬಲ ಅಭ್ಯರ್ಥಿ ಹುಡುಕುವುದೇ ಕಾಂಗ್ರೆಸ್ ಗೆ ಈಗ ದೊಡ್ಡ ತಲೆನೋವಾಗಿದೆ. ಬಿಜೆಪಿ ಹಿಡಿತದಲ್ಲಿರುವ ಕ್ಷೇತ್ರವನ್ನು ಹೇಗಾದರೂ ಮಾಡಿ ಗೆಲ್ಲಲೇಬೇಕು ಎನ್ನುವ ಹಿನ್ನಲೆ ಲಿಂಗಾಯತ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಿಲು ಕಾಂಗ್ರೆಸ್ ತಯಾರಿ ನಡೆಸಿದ್ದು ಅಭ್ಯರ್ಥಿ ಯಾರು ಎಂಬ ಗೊಂದಲ ಮಾತ್ರ ಇದುವರೆಗೂ ಮುಗಿದಿಲ್ಲಾ. ಈ ಹಿಂದೆ ಕಾಂಗ್ರೆಸ್ ಗೆ ದೊಡ್ಡ ಶಕ್ತಿಯಾಗಿದ್ದ ರಮೇಶ್‌ ಜಾರಕಿಹೊಳಿ ಕಾಂಗ್ರೆಸ್ ತೊರೆದ ಬಳಿಕ ಬೆಳಗಾವಿ ಜಿಲ್ಲೆಯಲ್ಲಿ ಸತೀಶ್ ಜಾರಕಿಹೊಳಿ ಒಬ್ಬರೆ ಈಗ ಕಾಂಗ್ರೆಸ್ ನ ಪ್ರಬಲ ನಾಯಕರಾಗಿ ಉಳಿದುಕೊಂಡಿದ್ದಾರೆ. ಒಂದು ವೇಳೆ ಬೆಳಗಾವಿ ಲೋಕಸಭೆಯಲ್ಲಿ ಗೆಲ್ಲಬೇಕಾದರೆ ಪ್ರಬಲ ನಾಯಕನನ್ನೆ ಕಣಕ್ಕೆ ಇಳಿಸಬೇಕು ಎಂಬ ಕೂಗು ಕೇಳಿ ಬಂದಿದ್ದು ಸತೀಶ್ ಜಾರಕಿಹೊಳಿ ಹೆಸರು ಕೂಡ ಪ್ರಸ್ತಾಪ ಆಗಿದೆ. ಸತೀಶ್ ಜಾರಕಿಹೊಳಿ ಕಾಂಗ್ರೆಸ್ ನಿಂದ ಅಭ್ಯರ್ಥಿ ಆದ್ರೆ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಬಹುದಾಗಿದೆ. ಆದರೆ ಸತೀಶ್ ಜಾರಕಿಹೊಳಿ ಮಾತ್ರ ಲೋಕಸಭೆ ಸ್ಪರ್ಧೆಗೆ ನಿರಾಸಕ್ತಿ ತೋರಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ: Coronavirus | ಕೊರೋನಾ ನಿಯಂತ್ರಣಕ್ಕೆ ಪ್ರಧಾನಿ ಮೋದಿಯಿಂದ ಮೂರು ಪ್ರಮುಖ ಸಲಹೆ; ಸಿಎಂ ಬಿಎಸ್ ಯಡಿಯೂರಪ್ಪ

ಇನ್ನು ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡಲು ಕಾಂಗ್ರೆಸ್​ನಲ್ಲಿ ಮಾಜಿ ಸಚಿವ ಚಿಕ್ಕೋಡಿ ಲೋಕಸಭಾ ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಹೆಸರು ಕೂಡ ಮುಂಚೂಣಿಯಲ್ಲಿದೆ ಲಿಂಗಾಯತ ನಾಯಕರಾಗಿರುವ ಪ್ರಕಾಶ್ ಹುಕ್ಕೇರಿ ಕೂಡ ಟಿಕೆಟ್‌ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಅಲ್ಲದೇ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ಸಹೋದರ ಚನ್ನರಾಜ ಹಟ್ಟಿಹೊಳಿಗೆ ಟಿಕೆಟ್ ಕೊಡಿಸಲು ಹೆಬ್ಬಾಳ್ಕರ್ ತೆರೆ ಮರೆಯಲ್ಲೆ ಕಸರತ್ತು ನಡೆಸಿದ್ದಾರೆ.

ಒಟ್ಟಿನಲ್ಲಿ ಬೆಳಗಾವಿ ಲೋಕಸಭೆಗೆ ಉಪ ಚುನಾವಣೆ ಘೋಷಣೆ ಆಗಿದ್ದು ಇದುವರೆಗೂ ಯಾವ ಪಕ್ಷವೂ ಕೂಡ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ಅಭ್ಯರ್ಥಿ ಯಾರಾಗುತ್ತಾರೆ ಎಂಬ ಕುತೂಹಲ ಈಗ ಮತದಾರರಲ್ಲಿ ಮನೆ ಮಾಡಿದೆ.
Published by:HR Ramesh
First published: