ಸಿಡಿಲು ಪ್ರತಿಬಂಧಕ ನಿರ್ಮಾಣಕ್ಕೆ ಸರ್ಕಾರದ ನಿರ್ಲಕ್ಷ್ಯ; ಇನ್ನೆಷ್ಟು ಬಲಿಯಾಗಬೇಕಿದೆ ಜನಸಾಮಾನ್ಯರ ಪ್ರಾಣ?

ಕರಾವಳಿ ಜಿಲ್ಲೆಯಾದ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಮಳೆಗಾಲದಲ್ಲಿ ಸಿಡಿಲಿಗೆ ಬಲಿಯಾಗಿ ಸಾವನ್ನಪ್ಪುವವರ ಸಂಖ್ಯೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಗಣನೀಯ ಏರಿಕೆಯಾಗುತ್ತಿದೆ. 2014-18 ಸಾಲಿಗೆ ಈ ಸಂಖ್ಯೆ 30 ರ ಗಡಿ ದಾಟಿದೆ. ಅದರಲ್ಲೂ ಸರ್ಕಾರಿ ಮಾಹಿತಿ ಪ್ರಕಾರ ಪುತ್ತೂರು ತಾಲೂಕೊಂದರಲ್ಲೇ ಸುಮಾರು 20  ಮಂದಿ ಮೃತಪಟ್ಟಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪುತ್ತೂರು (ಜೂ.11):  ರೈಲು ಹೋದ ಬಳಿಕ ಟಿಕೆಟ್ ತೆಗೆಯುವುದು ನಮ್ಮನ್ನಾಳುವ ಜನಪ್ರತಿನಿಧಿಗಳ ಹಾಗೂ ಸರ್ಕಾಕಾರದ ಪಾಲಿಸಿ. ಹೌದು ಇಂಥಹ ಉದಾಹರಣೆಯನ್ನು ನೀಡುವುದಕ್ಕೆ ಹಲವು ನಿದರ್ಶನಗಳೂ ನಮ್ಮ ಮುಂದಿದೆ. ಮಳೆಗಾಲ ಬಂತೆಂದರೆ ಮಳೆಯ ಪ್ರವಾಹದ ಜೊತೆಗೆ ರಣ ಸಿಡಿಲು ಕೂಡಾ ಬರುವುದು ಸಾಮಾನ್ಯ. ಅದರಲ್ಲೂ ಕರಾವಳಿ ಭಾಗದಲ್ಲಿ ಯಾವ ರೀತಿ ಪ್ರತಿವರ್ಷ ದೈವಗಳಿಗೆ ಕೋಳಿ ಬಲಿ ನೀಡಲಾಗುತ್ತದೋ ಅದೇ ರೀತಿಯಲ್ಲಿ ಮಳೆಗಾಲದಲ್ಲಿ ಬರುವ ಈ ಸಿಡಿಲು-ಮಿಂಚಿಗೆ ಜನರ ಬಲಿಯಾಗುತ್ತಿದೆ. ಸಿಡಿಲಿಗೆ ಹೆಚ್ಚು ಬಲಿಯಾಗುವ ಪ್ರದೇಶಗಳನ್ನು ಗುರುತಿಸಿ ಆ ಭಾಗದಲ್ಲಿ ಮಿಂಚು ಬಂಧಕವನ್ನು ಅಳವಡಿಸುವ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಿದರೂ ಈ ವರೆಗೂ ಯಾವುದೇ ವ್ಯವಸ್ಥೆಯಾಗಿಲ್ಲ.

ಬ್ರಿಟಿಷ್ ಕಾಲದಲ್ಲಿ ಗುಡುಗು-ಸಿಡಿಲಿನಿಂದ ಜನರ ಪ್ರಾಣ ರಕ್ಷಿಸುವ ನಿಟ್ಟಿನಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲಿ ಮಿಂಚು ಪ್ರತಿಬಂಧಕವನ್ನು ಅಳವಡಿಸಿತ್ತು. ಆದರೆ ಆ ಬಳಿಕ ಬಂದ ಪ್ರಜಾಪ್ರಭುತ್ವ ವ್ಯವಸ್ಥೆ ಮಾತ್ರ ಜನರ ಪ್ರಾಣವನ್ನು ಸಂಪೂರ್ಣ ನಿರ್ಲಕ್ಷಿಸಿದೆಯೋ ಎನ್ನುವ ಸಂಶಯಗಳೂ ಮೂಡಲಾರಂಭಿಸಿದೆ. ಕರಾವಳಿಯಲ್ಲಿ ಮೇಘಸ್ಫೋಟದ ರೀತಿಯಲ್ಲಿ ಮಳೆ ಬರುತ್ತಿದ್ದು, ಇದರ ಜೊತೆಗೆ ಸಿಡಿಲು-ಮಿಂಚುಗಳ ಆರ್ಭಟವೂ ಹೆಚ್ಚಾಗುತ್ತಿದೆ. ಇಂಥ ಸಮಯದಲ್ಲಿ ಸಿಡಿಲಿಗೆ ತುತ್ತಾಗಿ ಜನರ ಪ್ರಾಣ ಬಲಿಯಾಗುವ ಸನ್ನಿವೇಶಗಳೂ ಹೆಚ್ಚಾಗಿದೆ.

ಕರಾವಳಿ ಜಿಲ್ಲೆಯಾದ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಮಳೆಗಾಲದಲ್ಲಿ ಸಿಡಿಲಿಗೆ ಬಲಿಯಾಗಿ ಸಾವನ್ನಪ್ಪುವವರ ಸಂಖ್ಯೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಗಣನೀಯ ಏರಿಕೆಯಾಗುತ್ತಿದೆ. 2014-18 ಸಾಲಿಗೆ ಈ ಸಂಖ್ಯೆ 30 ರ ಗಡಿ ದಾಟಿದೆ. ಅದರಲ್ಲೂ ಸರ್ಕಾರಿ ಮಾಹಿತಿ ಪ್ರಕಾರ ಪುತ್ತೂರು ತಾಲೂಕೊಂದರಲ್ಲೇ ಸುಮಾರು 20  ಮಂದಿ ಮೃತಪಟ್ಟಿದ್ದಾರೆ. ಇದು ಸರ್ಕಾರದ ಲೆಕ್ಕಾಚಾರವಾದರೆ, ಇದರ ಹೊರತುಪಡಿಸಿಯೂ ಸಾವುಗಳು ಸಂಭವಿಸಿದ್ದು, ಸಣ್ಣ-ಪುಟ್ಟ ಹಾಗೂ ಗಂಭೀರ ಗಾಯಗೊಂಡವರ ಸಂಖ್ಯೆ ಹಲವಿದೆ.

ಬ್ರಿಟಿಷ್​ ಕಾಲದಲ್ಲಿ ನಿರ್ಮಾಣವಾದ ಮಿಂಚು ಪ್ರತಿಬಂಧಕ


ಜಿಲ್ಲೆಯಲ್ಲಿ ಒಟ್ಟು ಸಿಡಿಲಿನ ಹೊಡೆತದ ಸಾವು ಇಲ್ಲಿನ ಪ್ರತಿ ಕುಟುಂಬಗಳನ್ನೂ ದಿಕ್ಕಾಪಾಲು ಮಾಡಿದೆ. ಕೇವಲ ಪ್ರಾಣ ಹಾನಿಯಲ್ಲದೆ ಮನೆ, ಆಸ್ತಿಪಾಸ್ತಿ , ಜಾನುವಾರುಗಳ ಸಾವು ಹೀಗೆ ಎಲ್ಲವನ್ನೂ ಹಾನಿ ಮಾಡುತ್ತಿರುವ ಈ ಸಿಡಿಲಿನಿಂದ ಇಲ್ಲಿನ ಜನರನ್ನು ರಕ್ಷಿಸಲು ಪರಿಹಾರವಿದ್ದರೂ, ಆಡಳಿತ ವ್ಯವಸ್ಥೆ ಮಾತ್ರ ಪರಿಹಾರವನ್ನು ಕಲ್ಪಿಸಲಾರದಷ್ಟು ಜಡ್ಡುಕಟ್ಟಿ ಹೋಗಿದೆ. ಅದರಲ್ಲೂ ಸಿಡಿಲಿನಿಂದ ಅತೀ ಹೆಚ್ಚು ಸಾವಾಗುತ್ತಿರುವ ನೆಲ್ಯಾಡಿ, ಕುಂಬ್ರಾ, ಚಾರ್ವಾಕ, ಕಾಣಿಯೂರು, ಪುಣಚ ಹಾಗೂ ಇತರ ಪ್ರದೇಶಗಳಲ್ಲಿ ಮಿಂಚು ಬಂಧಕವನ್ನು ಅಳವಡಿಸಬೇಕು ಎನ್ನುವ ಬಗ್ಗೆ ತಾಲೂಕು ಪಂಚಾಯತ್ ಸಭೆಗಳಲ್ಲೂ ನಿರ್ಣಯವಾಗಿದ್ದು, 2016 ರಲ್ಲಿ ಈ ಕುರಿತ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ನಿರ್ಣಯದ ಪ್ರಕಾರ ಕೆಯ್ಯೂರು ಮತ್ತು ನೆಲ್ಯಾಡಿ ಪ್ರದೇಶವನ್ನು ಆಯ್ಕೆಯೂ ಮಾಡಲಾಗಿದೆ. ಆದರೆ ಈವರೆಗೂ ಈ ಬಗ್ಗೆ ಸರಕಾರ ಸ್ಪಂದಿಸುತ್ತಿಲ್ಲ ಎಂದು  ಮಿಂಚು ಪ್ರತಿಬಂಧಕ ಅಳವಡಿಕೆಗಾಗಿ  ಕಳೆದ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸಂಜೀವ  ಕಬಕ ಆರೋಪಿಸುತ್ತಾರೆ.

"ಸಿಡಿಲಿನ ಹೊಡೆತದ ಅಪಾಯವನ್ನು ತಡೆಯಲು ವೈಜ್ಞಾನಿಕ ಮಾರ್ಗೋಪಾಯಗಳಿದ್ದು, ಆದರೆ ಇದನ್ನು ಅನುಷ್ಠಾನಕ್ಕೆ ತರುವಂತಹ ಇಚ್ಛಾಶಕ್ತಿಯ ಕೊರತೆ ಮಾತ್ರ ಹೆಚ್ಚಾಗಿದೆ. ಹಿಂದೆ ಬ್ರಿಟಿಷರು ಇದ್ದ ಸಮಯದಲ್ಲಿ ಈ ಸಿಡಿಲಿನ ಹೊಡೆತದಿಂದ ಜನರ ಪ್ರಾಣವನ್ನು ರಕ್ಷಿಸುವ ಉದ್ದೇಶದಿಂದ ಪುತ್ತೂರು ತಾಲೂಕಿನ ಪ್ರತಿ ಎತ್ತರದ ಬೆಟ್ಟದ ತಪ್ಪಲಿನಲ್ಲಿ ಎತ್ತರವಾದ ಮಿಂಚು ಪ್ರತಿಬಂಧಕವನ್ನು ಅಳವಡಿಸಿದ್ದರು. ಈ ಬಂಧಕವು ಸಿಡಿಲು-ಮಿಂಚಿನ ಪ್ರಕರತೆಯನ್ನು ಸಂಪೂರ್ಣ ಕಡಿಮೆ ಮಾಡುವುದರಿಂದ ಪ್ರಾಣ ಹಾನಿಯಂಥಹ ಅವಘಡಗಳನ್ನು ತಪ್ಪಿಸಲೂ ಸಾಧ್ಯವಿದೆ," ಎನ್ನುತ್ತಾರೆ ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ರಾಧಾಕೃಷ್ಣ ಬೋರ್ಕರ್.

ಬ್ರಿಟಿಷರು ಹಾಕಿದ ಇಂಥಹ ಹಲವು ಮಿಂಚು ಬಂಧಕಗಳು ನಿರ್ವಹಣೆಯಿಲ್ಲದೆ ಗುಜರಿ ಅಂಗಡಿಗಳಿಗೆ ಸೇರಿದೆ. ಇದೀಗ ಮಿಂಚು ಬಂಧಕಗಳನ್ನು ಅಳವಡಿಸಿ ಜನರ ಆಸ್ತಿ ಪಾಸ್ತಿ ಹಾಗೂ ಪ್ರಾಣವನ್ನು ರಕ್ಷಿಸಬೇಕೆಂಬ ಬೇಡಿಕೆಯು ಹೆಚ್ಚಾದ ಹಿನ್ನಲೆಯಲ್ಲಿ ದಕ್ಷಿಣಕನ್ನಡ ಜಿಲ್ಲಾಡಳಿತ 2014 ರಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಎಲ್ಲೆಲ್ಲಿ ಮಿಂಚು ಬಂಧಕಗಳನ್ನು ಅಳವಡಿಸಬೇಕು ಎನ್ನುವ ಕುರಿತು ಸಮೀಕ್ಷೆಯನ್ನೂ ನಡೆಸಿದೆ. ಜಿಲ್ಲೆಯಲ್ಲಿ 11 ಊರುಗಳಲ್ಲಿ ಈ ಮಿಂಚು ಪ್ರತಿಬಂಧಕವನ್ನು ಅಳವಡಿಸಬೇಕೆಂದು ಸಮೀಕ್ಷೆ ನಡೆಸಿದ ಏಜೆಸ್ಸಿ ಜಿಲ್ಲಾಡಳಿತಕ್ಕೆ ವರಿದಿಯನ್ನೂ ನೀಡಿದೆ. ಈ ಪೈಕಿ ಪುತ್ತೂರು ತಾಲೂಕಿನಲ್ಲಿ ಎರಡು ಮಿಂಚು ಪ್ರತಿಬಂಧಕವನ್ನು ಅಳವಡಿಸಲು ಯೋಜನೆಯನ್ನೂ ರೂಪಿಸಲಾಗಿತ್ತು. 11 ಮಿಂಚು ಪ್ರತಿಬಂಧಕಗಳಿಗೆ ಒಟ್ಟು 22.62 ಲಕ್ಷ ರೂಪಾಯಿಗಳು ಬೇಕಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಈ ವರದಿಯ ಪ್ರಸ್ತಾವನೆಯನ್ನು ಜಿಲ್ಲಾಡಳಿತ ಸರಕಾರಕ್ಕೆ ಕಳುಹಿಸಿ ಇದೀಗ 5 ವರ್ಷಗಳು ಕಳೆದಿದೆ. ಇದೀಗ ಮತ್ತೆ ಈ ಬಗ್ಗೆ ಸರಕಾರದ ಗಮನ ಸೆಳೆಯುವ ಪ್ರಯತ್ನ ನಡೆಯುತ್ತಿದೆ ಎಂಬುದು ರಾಧಾಕೃಷ್ಣ ಬೋರ್ಕರ್ ಮಾತು.

ಪುತ್ತೂರು ತಾಲೂಕಿನ ಕಣಿಯೂರು, ಸವಣೂರು, ಆರ್ಯಾಪು, ನಿಡ್ಲೆ, ಪಟ್ರಮೆ ಮೊದಲಾದ ಕಡೆಗಳಲ್ಲಿ ಪ್ರತಿವರ್ಷವೂ ಸಿಡಿಲಿಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸರಕಾರವು ಆಯಾ ಗ್ರಾಮಪಂಚಾಯತ್ ಮಟ್ಟದಲ್ಲಿ ಮಿಂಚು ಪ್ರತಿಬಂಧಕವನ್ನು ಅಳವಡಿಸುವ ಸೂಚನೆಯನ್ನು ನೀಡಿ ತನ್ನ ಜವಾಬ್ದಾರಿಯನ್ನು ಪಂಚಾಯತ್ ಗಳ ಮೇಲೆ ಹೇರಿದೆ. ಆದರೆ ಇವುಗಳ ಅಳವಡಿಕೆಗೆ ತಗಲುವ ಖರ್ಚನ್ನು ಬರಿಸಲಾರದೆ ಪಂಚಾಯತ್ ಗಳು ತಮಗೂ, ಅದಕ್ಕೂ ಯಾವುದೇ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ನಟಿಸುತ್ತಿದೆ.

ತಮಗೆ ಲಾಭವಿದ್ದ ಕೆಲಸಗಳನ್ನು ಮಾಡಲು ಸಾಕಷ್ಟು ಮುತುವರ್ಜಿಯನ್ನು ವಹಿಸುವ ಅಧಿಕಾರಿಗಳು, ಜನಪ್ರತಿನಿಧಿಗಳು ಜನರ ಪ್ರಾಣಬಲಿಯಿಂದ ತಮಗೇನು ಲಾಭ ಎನ್ನುವ ಕಾರಣಕ್ಕೇನೋ ಮಿಂಚು ಪ್ರತಿಬಂಧಕದಂತಹ ಸಾಧನವನ್ನು ಅಳವಡಿಸಲು ಮಾತ್ರ ಉದಾಸೀನತೆಯನ್ನು ತೋರಿಸುತ್ತಿದ್ದಾರೆ. ಪ್ರಾಣ ಹೋದ ಮನೆಗೆ ಪರಿಹಾರ ನೀಡುವ ಬದಲು ಪ್ರಾಣ ಹೋಗದಂತೆ ತಡೆಯುವ ಕೆಲಸವನ್ನು ಮೊದಲೇ ಮಾಡಬೇಕೆಂಬ ಅರಿವಿದ್ದರೂ, ಇಂಥಹ ಉದಾಸೀನತೆ ಏಕೆ ಎನ್ನುವ ಪ್ರಶ್ನೆಗೆ ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ.
First published: