ದಾಂಡೇಲಿ ತಾಲೂಕೆಂದು ಘೋಷಣೆ ಆಗಿ ಮೂರು ವರ್ಷವಾದರೂ ಅಭಿವೃದ್ಧಿ ಮಾತ್ರ ಮರೀಚಿಕೆ

ಉತ್ತರಕನ್ನಡ ಜಿಲ್ಲೆಯಲ್ಲಿ ಈಗಾಗಲೇ 11 ತಾಲ್ಲೂಕುಗಳು ಇದ್ದು ಹನ್ನೆರಡನೇಯ ತಾಲ್ಲೂಕಾಗಿ ದಾಂಡೇಲಿ ಘೋಷಣೆಯಾಗಿತ್ತು. ದಾಂಡೇಲಿಯನ್ನ ತಾಲ್ಲೂಕನ್ನಾಗಿಸಲು ಸಾಕಷ್ಟು ಹೋರಾಟಗಳು ಸಹ ನಡೆದಿದ್ದು ಇದೀಗ ಘೋಷಣೆಯಾದ ಬಳಿಕ ಮೂಲಭೂತ ಸೌಕರ್ಯಗಳು ಸಿಗದಿರುವುದು ಜನರ ಬೇಸರಕ್ಕೆ ಕಾರಣವಾಗಿದೆ.

ದಾಂಡೇಲಿ ಬಸ್‌ ನಿಲ್ದಾಣ.

ದಾಂಡೇಲಿ ಬಸ್‌ ನಿಲ್ದಾಣ.

  • Share this:
ಕಾರವಾರ: ಪ್ರವಾಸೋದ್ಯಮದಲ್ಲಿ ಇಡೀ ವಿಶ್ವದ ಗಮನವನ್ನೇ ಸೆಳೆದ ಸ್ಥಳ ದಾಂಡೇಲಿ. ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ಪ್ರವಾಸೋದ್ಯಮದ ಜೊತೆಗೆ ಕೈಗಾರಿಕೆಯಲ್ಲೂ ಸಹ ರಾಜ್ಯದಲ್ಲಿ ಗುರುತಿಸಿಕೊಂಡಿದೆ. ಹೀಗಾಗಿ ನಗರವನ್ನ ತಾಲ್ಲೂಕನ್ನಾಗಿ ಘೋಷಿಸುವಂತೆ ಸಾಕಷ್ಟು ಹೋರಾಟಗಳು ಸಹ ನಡೆದಿದ್ದು ಇದರ ಫಲವಾಗಿ ಎರಡು ವರ್ಷಗಳ ಹಿಂದೆ ಅಂದಿನ ಸರ್ಕಾರ ದಾಂಡೇಲಿಯನ್ನ ತಾಲ್ಲೂಕಾಗಿ ಘೋಷಣೆ ಮಾಡಿತ್ತು. ಆದರೆ, ಇದುವರೆಗೂ ಸಹ ತಾಲ್ಲೂಕಿಗೆ ಸಿಗಬೇಕಾದ ವ್ಯವಸ್ಥೆಗಳನ್ನ ಒದಗಿಸಿಲ್ಲ ಅಂತಾ ಸ್ಥಳೀಯರು ಆರೋಪಿಸಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಮಟ್ಟಿಗೆ ಪ್ರವಾಸೋದ್ಯಮ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಇಡೀ ವಿಶ್ವದ ಗಮನವನ್ನೇ ಸೆಳೆದ ನಗರ ದಾಂಡೇಲಿ. ಕಾಳಿ ನದಿಯ ದಡದಲ್ಲಿರುವ ದಾಂಡೇಲಿಯಲ್ಲಿ ಸುಮಾರು 60 ಸಾವಿರಕ್ಕೂ ಅಧಿಕ ಜನರು ವಾಸಿಸುತ್ತಿದ್ದಾರೆ. ನಗರವಾಗಿ ದೊಡ್ಡ ಮಟ್ಟದಲ್ಲಿ ಬೆಳೆದಿರುವ ದಾಂಡೇಲಿಗೆ ನಗರಸಭೆ ಸ್ಥಾನಮಾನವೂ ಸಹ ಹಲವು ವರ್ಷಗಳ ಹಿಂದೆಯೇ ಸಿಕ್ಕಿದೆ.

ಜಿಲ್ಲಾಕೇಂದ್ರ ಕಾರವಾರಕ್ಕಿಂತ ದೊಡ್ಡದಾಗಿ ಬೆಳೆದಿರುವ ದಾಂಡೇಲಿಯನ್ನ ಸಾಕಷ್ಟು ಹೋರಾಟದ ಬಳಿಕ ಎರಡು ವರ್ಷದ ಹಿಂದೆ ತಾಲ್ಲೂಕನ್ನಾಗಿ ಘೋಷಣೆಯೇನೋ ಮಾಡಲಾಗಿದೆ. ಆದ್ರೆ ಘೋಷಣೆ ಕೇವಲ ನಾಮಕಾವಸ್ಥೆ ಎನ್ನುವಂತಾಗಿದ್ದು ಇನ್ನೂ ಸಹ ತಾಲ್ಲೂಕಿನಲ್ಲಿರಬೇಕಾದ ಪೂರ್ಣಪ್ರಮಾಣದ ಸೌಲಭ್ಯಗಳನ್ನ ಮಾತ್ರ ಒದಗಿಸಿಲ್ಲ. ದಾಂಡೇಲಿ ನಗರಸಭೆಯಾಗಿದ್ದರೂ ಸಹ ಆರ್.ಟಿ.ಓ ಕಛೇರಿ ಸೇರಿದಂತೆ ಜಿಲ್ಲಾಕೇಂದ್ರದಲ್ಲಿರುವಂತಹ ಕೆಲವು ಕಛೇರಿಗಳು ಮೊದಲಿನಿಂದಲೇ ಇವೆ.

ಆದರೆ, ತಾಲ್ಲೂಕು ಆಸ್ಪತ್ರೆ, ಬಿಇಓ ಕಛೇರಿ, ನೋಂದಣಿ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ಅತ್ಯಗತ್ಯವಾಗಿರುವ ಕಛೇರಿಗಳು ಇದುವರೆಗೂ ಸಹ ಪ್ರಾರಂಭವಾಗಿಲ್ಲ. ಕೇವಲ ತಹಶೀಲ್ದಾರರ ಕಛೇರಿ ಒಂದನ್ನ ಮಾತ್ರ ಸದ್ಯಕ್ಕೆ ನೀಡಲಾಗಿದ್ದು ಉಳಿದ ಎಲ್ಲ ಕೆಲಸ ಕಾರ್ಯಗಳಿಗೂ ಸಹ ದಾಂಡೇಲಿ ಜನರು ಪಕ್ಕದ ಹಳಿಯಾಳ ತಾಲ್ಲೂಕನ್ನೇ ಅವಲಂಭಿಸಬೇಕಾದ ಪರಿಸ್ಥಿತಿ ಇದೆ.

ಇನ್ನು ಪ್ರವಾಸೋದ್ಯಮದಲ್ಲಿ ಸಾಕಷ್ಟು ಪ್ರಸಿದ್ಧಿ ಹೊಂದಿರುವ ದಾಂಡೇಲಿ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಆದಾಯ ತರುವ ಪ್ರದೇಶವಾಗಿದೆ. ಕಾಳಿ ನದಿಯ ದಡದಲ್ಲಿ ಇರುವುದರ ಜೊತೆಗೆ ದಟ್ಟಅರಣ್ಯ ಪ್ರದೇಶವನ್ನ ಹೊಂದಿರುವುದರಿಂದ ದೇಶ ವಿದೇಶಗಳ ಪ್ರವಾಸಿಗರೂ ಸಹ ದಾಂಡೇಲಿಗೆ ಆಗಮಿಸುತ್ತಾರೆ. ಆದ್ರೆ ಇದುವರೆಗೂ ಸಹ ತಾಲ್ಲೂಕಿಗೆ ಸಿಗಬೇಕಾದ ಸೌಲಭ್ಯಗಳು ಇಲ್ಲದಿರುವುದರಿಂದ ದಾಂಡೇಲಿ ಜನರು ಆಸ್ಪತ್ರೆಗೆ, ಚಿಕಿತ್ಸೆಗೆ ಬೇರೆಡೆಗೆ ತೆರಳಲು ವೈದ್ಯರ ಶಿಫಾರಸ್ಸು ಪಡೆದುಕೊಳ್ಳಲು ಸಹ ಪಕ್ಕದ ಹಳಿಯಾಳವನ್ನೇ ಅವಲಂಭಿಸುವಂತಾಗಿದ್ದು ಸಾಕಷ್ಟು ಸಮಸ್ಯೆ ಉಂಟಾಗುತ್ತಿದೆ ಅನ್ನೋದು ಸ್ಥಳೀಯರ ಅಭಿಪ್ರಾಯವಾಗಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ, ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಕಳೆದ ಅವಧಿಯಲ್ಲಿ ಘೋಷಣೆಯಾಗಿರುವ ತಾಲ್ಲೂಕು ಪ್ರದೇಶಗಳಿಗೆ ಮೂಲಭೂತ ಸೌಕರ್ಯಗಳನ್ನ ಒದಗಿಸುವ ಕೆಲಸವನ್ನ ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದ್ದಾರೆ

ಇದನ್ನೂ ಓದಿ : Harsimrat Kaur Badal: ಕೃಷಿ ಮಸೂದೆಗೆ ವಿರೋಧ: ಕೇಂದ್ರ ಸಚಿವ ಸ್ಥಾನಕ್ಕೆ ಹರ್ಸಿಮ್ರತ್​ ಕೌರ್​ ಬಾದಲ್​ ರಾಜೀನಾಮೆ

ಇನ್ನು ಉತ್ತರಕನ್ನಡ ಜಿಲ್ಲೆಯಲ್ಲಿ ಈಗಾಗಲೇ 11 ತಾಲ್ಲೂಕುಗಳು ಇದ್ದು ಹನ್ನೆರಡನೇಯ ತಾಲ್ಲೂಕಾಗಿ ದಾಂಡೇಲಿ ಘೋಷಣೆಯಾಗಿತ್ತು. ದಾಂಡೇಲಿಯನ್ನ ತಾಲ್ಲೂಕನ್ನಾಗಿಸಲು ಸಾಕಷ್ಟು ಹೋರಾಟಗಳು ಸಹ ನಡೆದಿದ್ದು ಇದೀಗ ಘೋಷಣೆಯಾದ ಬಳಿಕ ಮೂಲಭೂತ ಸೌಕರ್ಯಗಳು ಸಿಗದಿರುವುದು ಜನರ ಬೇಸರಕ್ಕೆ ಕಾರಣವಾಗಿದೆ.

ಒಟ್ಟಾರೇ ತಾಲ್ಲೂಕು ಘೋಷಣೆಯಾಗಿ ಎರಡು ವರ್ಷ ಕಳೆದರೂ ದಾಂಡೇಲಿಗೆ ಸರ್ಕಾರ ಕಛೇರಿಗಳು ಬರದಿರುವುದು ನಿಜಕ್ಕೂ ದುರಂತವೇ. ಇನ್ನಾದ್ರೂ ಸರ್ಕಾರ ಇತ್ತ ಗಮನಹರಿಸಿ ಅಗತ್ಯ ಸೌಲಭ್ಯಗಳನ್ನ ಒದಗಿಸಿಕೊಡಲು ಕ್ರಮ ಕೈಗೊಳ್ಳಬೇಕಾಗಿದೆ...
Published by:MAshok Kumar
First published: