ರಾಜ್ಯ ಮಹಿಳಾ ನಿಲಯದಲ್ಲಿ ನವ ಜೀವನಕ್ಕೆ ಕಾಲಿಟ್ಟ ಮೂರು ನವ ಜೋಡಿಗಳು; ಹರಸಿ ಶುಭ ಕೋರಿದ ಅಧಿಕಾರಿಗಳು

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಮೈಸೂರು ಪೇಟಾ ಧರಿಸಿ, ಮದುವೆ ಸಮಾರಂಭದ ನೇತೃತ್ವ ವಹಿಸಿದ್ದರು.  ತಾವೇ ಮುಂದೆ ನಿಂತು ನೂತನ ವಧು ವರರು ವಿವಾಹ ಜೀವನಕ್ಕೆ ಕಾಲಿರಿಸಿದ ಸಂಭ್ರಮಕ್ಕೆ ಸಾಕ್ಷಿಯಾದರು.  ಅಲ್ಲದೆ ಅಕ್ಷತೆಯನ್ನು ನವ ದಂಪತಿಗಳಿಗೆ ಹಾಕಿ ಶುಭ ಹಾರೈಸಿದರು.

news18-kannada
Updated:September 24, 2020, 7:13 AM IST
ರಾಜ್ಯ ಮಹಿಳಾ ನಿಲಯದಲ್ಲಿ ನವ ಜೀವನಕ್ಕೆ ಕಾಲಿಟ್ಟ ಮೂರು ನವ ಜೋಡಿಗಳು; ಹರಸಿ ಶುಭ ಕೋರಿದ ಅಧಿಕಾರಿಗಳು
ಹೊಸ ಜೀವನಕ್ಕೆ ಕಾಲಿಟ್ಟ ನವ ದಂಪತಿಗಳು.
  • Share this:
ದಾವಣಗೆರೆ: ಮಹಿಳಾ ಮತ್ತು  ಮಕ್ಕಳ ಅಭಿವೃದ್ಧಿ ಇಲಾಖೆಯಡಿ ದಾವಣಗೆರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಮಹಿಳಾ ನಿಲಯದಲ್ಲಿ ಚಟುವಟಿಕೆಗಳು ಎಂದಿನಂತೆ ಸಾಮಾನ್ಯವಾಗಿರದೆ ಬುಧವಾರದಂದು ಸಂಭ್ರಮ, ಗಡಿಬಿಡಿ ಮನೆಮಾಡಿತ್ತು.  ಮಂಗಳವಾದ್ಯ ಮೊಳಗುತ್ತಾ, ಅಲ್ಲೊಂದು ಶುಭ ಸಮಾರಂಭವಿರುವ ಬಗ್ಗೆ ಸಂಕೇತ ನೀಡುತ್ತಿತ್ತು. ಹೌದು, ಅದು ಶುಭ ಸಮಾರಂಭದ ಸಂದೇಶವೇ ಸರಿ. ಜೊತೆಗೆ ವಿಶೇಷ ಕಾರ್ಯಕ್ರಮದ ಮೆರಗು ಬೇರೆ. ವಿವಿಧ ಕಾರಣಗಳಿಂದ ಶೋಷಣೆಗೆ ಒಳಗಾಗಿ ರಾಜ್ಯ ಮಹಿಳಾ ನಿಲಯದಲ್ಲಿ ಆಶ್ರಯ ಪಡೆದಿದ್ದ ಮೂವರು ಯುವತಿಯರಿಗೆ ಬದುಕು ಕಟ್ಟಿಕೊಡುವ ಶುಭ ಸಮಾರಂಭವದು. 24 ವರ್ಷದ ಮಂಜುಳಾ, 19 ವರ್ಷದ ರೇಷ್ಮಾ ಹಾಗೂ 21 ವರ್ಷದ ಕುಪ್ಪಮ್ಮ ಸೇರಿದಂತೆ ಮೂವರು ಯುವತಿಯರಿಗೆ ಸುಂದರ ಬದುಕು ಕಟ್ಟಿಕೊಡಲು ಮೂವರು ಯುವಕರು ಮುಂದಾಗಿದ್ದು ಮೂವರು ನೂತನ ವಧು ವರರ ಪಾಲಕರು, ಸ್ನೇಹಿತರು, ಬಂಧುಮಿತ್ರರು, ಅಧಿಕಾರಿ ಸಿಬ್ಬಂದಿಗಳು, ಸಾರ್ವಜನಿಕರೂ ಸೇರಿದಂತೆ ಎಲ್ಲರಲ್ಲೂ ಸಂತಸ ಮೂಡಿಸಿತ್ತು.

ಮಂಜುಳಾ ಇವರನ್ನು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಹೆದ್ಲಿ ಹೆನಿಯಾದ ಉಮೇಶ್ ಹೆಚ್.ಜಿ ಅವರು ಬಾಳ ಸಂಗಾತಿಯಾಗಿ ಸ್ವೀಕರಿಸಿದರೆ, ರೇಷ್ಮಾ ಅವರನ್ನು ಉತ್ತರಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಮುಂಡಗನಮನೆ ಗ್ರಾಮದ ನಾಗರಾಜ ಸುಬ್ರಾಯ ಹೆಗಡೆ ಅವರು ಹಾಗೂ ಕುಪ್ಪಮ್ಮ ಅವರನ್ನು ಶಿರಸಿ ತಾಲ್ಲೂಕಿನ ಶಿವಳ್ಳಿಯ ದಯಾನಂದ ಆರ್. ಭಟ್ಟ ಅವರು ಬಾಳ ಸಂಗಾತಿಯಾಗಿಸಿಕೊಂಡರು.

ವಿಶೇಷ ಕಾರ್ಯಕ್ರಮದಲ್ಲಿ ನವ ಜೀವನಕ್ಕೆ ಕಾಲಿಟ್ಟ ಉಮೇಶ್ ಹೆಚ್.ಜಿ. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿ, "ಇಂತಹ ಮಾದರಿ ಕಾರ್ಯಕ್ರಮದಲ್ಲಿ ಮದುವೆಯಾಗುತ್ತಿರುವುದು ಸಂತಸ ತಂದಿದೆ.  ಗ್ರಾಮದಲ್ಲಿ ತಾನು ಪುರೋಹಿತ ವೃತ್ತಿ ಜೊತೆಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು, ತಮ್ಮ ಸಮುದಾಯದಲ್ಲಿ ಪುರೋಹಿತ ವೃತ್ತಿ, ಕೃಷಿ ಮಾಡುವವರಿಗೆ ಹೆಣ್ಣು ಕೊಡುವುದು ದುಸ್ಥರವಾಗಿದೆ.  ಹೀಗಾಗಿ ಸರ್ಕಾರಿ ಯೋಜನೆಯ ಬಗ್ಗೆ ಮಾಹಿತಿ ಪಡೆದು, ನಿಯಮಾನುಸಾರ ರಾಜ್ಯ ಮಹಿಳಾ ನಿಲಯಕ್ಕೆ ಅರ್ಜಿ ಸಲ್ಲಿಸಿ, ಕುಟುಂಬದ ಒಪ್ಪಿಗೆ ಪಡೆದು ಮದುವೆಯಾಗುತ್ತಿದ್ದೇನೆ" ಎಂದರು.

ಇವರಿಗೆ ಬಾಳ ಸಂಗಾತಿಯಾದ ಮಂಜುಳಾ ಪ್ರತಿಕ್ರಿಯಸಿ, "ಉಮೇಶ್ ಅವರನ್ನು ಮದುವೆಯಾಗುತ್ತಿರುವುದಕ್ಕೆ ಖುಷಿಯಾಗಿದೆ ಎಂದರು.  ಇನ್ನೋರ್ವ ನವ ವರ ದಯಾನಂದ ಭಟ್ಟ ಮಾತನಾಡಿ, ತಾನು ಮಾದರಿ ಜೀವನ ಕಟ್ಟಿಕೊಳ್ಳುವ ಯತ್ನ ಮಾಡಿದ್ದು, ನಿಲಯದ ನಿವಾಸಿಯಾಗಿದ್ದ ರೇಷ್ಮ ಅವರನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿದ್ದೇನೆ" ಎಂದು ಸಂತಸ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಮೈಸೂರು ಪೇಟಾ ಧರಿಸಿ, ಮದುವೆ ಸಮಾರಂಭದ ನೇತೃತ್ವ ವಹಿಸಿದ್ದರು.  ತಾವೇ ಮುಂದೆ ನಿಂತು ನೂತನ ವಧು ವರರು ವಿವಾಹ ಜೀವನಕ್ಕೆ ಕಾಲಿರಿಸಿದ ಸಂಭ್ರಮಕ್ಕೆ ಸಾಕ್ಷಿಯಾದರು.  ಅಲ್ಲದೆ ಅಕ್ಷತೆಯನ್ನು ನವ ದಂಪತಿಗಳಿಗೆ ಹಾಕಿ ಶುಭ ಹಾರೈಸಿದರು.  ಜಿಲ್ಲಾ ಪಂಚಾಯತ್ ಅಧ್ಯಕ್ಷೆ ದೀಪಾ ಜಗದೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪದ್ಮಾ ಬಸವಂತಪ್ಪ ಅವರು ಉಪಸ್ಥಿತರಿದ್ದು, ಮದುವೆ ಸಂಭ್ರಮದ ಸಂತಸ ಹಂಚಿಕೊಂಡು, ನೂತನ ದಂಪತಿಗಳಿಗೆ ಶುಭ ಕೋರಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್ ಅವರು ಈ ಸಂದರ್ಭದಲ್ಲಿ ಮಾಧ್ಯಮದವರಿಗೆ ಮಾಹಿತಿ ನೀಡಿ, "ದಾವಣಗೆರೆಯಲ್ಲಿನ ರಾಜ್ಯ ಮಹಿಳಾ ನಿಲಯದ ಸಂಸ್ಥೆ 1977 ರಿಂದಲೂ ಕಾರ್ಯ ನಿರ್ವಹಿಸುತ್ತಿದೆ. ನಾನಾ ಕಾರಣಗಳಿಂದ ಶೋಷಣೆ, ಅತ್ಯಾಚಾರ, ದೌರ್ಜನ್ಯಕ್ಕೆ ಒಳಗಾದ, ದೈಹಿಕ ಅಥವಾ ಮಾನಸಿಕವಾಗಿ ತೊಂದರೆ ಎದುರಿಸುವ ಮಹಿಳೆಯರಿಗೆ ತಾತ್ಕಾಲಿಕವಾಗಿ ಆಶ್ರಯ ನೀಡುವುದಲ್ಲದೆ, ಅಂತಹವರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಂತೆ ಮಾಡುವ ಕಾರ್ಯವನ್ನು ಮಹಿಳಾ ನಿಲಯ ನಿರ್ವಹಿಸುತ್ತಿದೆ.

ಇದನ್ನೂ ಓದಿ : Suresh Angadi Passes Away: ಕೊರೋನಾಗೆ ತುತ್ತಾಗಿದ್ದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್​ ಅಂಗಡಿ ನಿಧನ!18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ರಕ್ಷಣೆ, ಪೋಷಣೆ, ವೈದ್ಯಕೀಯ ನೆರವು, ಪುನರ್ವಸತಿ ಸೌಲಭ್ಯದ ಅವಕಾಶವಿದೆ.  ಸಂಸ್ಥೆಯಲ್ಲಿ ದಾಖಲಾದ ಮಹಿಳೆಯರು ಅಥವಾ ಮಕ್ಕಳು ನ್ಯಾಯಾಲಯಗಳಿಂದ ವಿವಿಧ ಕಾನೂನುಗಳಡಿ ಇತರೆ ಪುನರ್ವಸತಿ ಅಥವಾ ಅಂತಿಮ ತೀರ್ಮಾನದವರೆಗೆ ದಾಖಲಾಗಲು ಅವಕಾಶವಿದೆ.  ಸಂಸ್ಥೆಯಲ್ಲಿ ಸದ್ಯ 63 ನಿವಾಸಿಗಳು, 06 ಮಕ್ಕಳು ಆಶ್ರಯ ಪಡೆದಿದ್ದಾರೆ.

ಇಂದಿನವರೆಗೆ 39 ವಿವಾಹಗಳು, 07 ನಾಮಕರಣಗಳನ್ನು ಸಂಸ್ಥೆಯಲ್ಲಿ ನೆರವೇರಿಸಲಾಗಿದೆ.  ಈ ಹಿಂದೆ ಸಂಸ್ಥೆಯಲ್ಲಿ ವಿವಾಹವಾದ ಮಹಿಳೆಯರು ತಮ್ಮ ಸುಖ ಜೀವನ ನಡೆಸುತ್ತಿದ್ದಾರೆ" ಎಂದರು. ರಾಜ್ಯ ಮಹಿಳಾ ನಿಲಯದ ಅಧೀಕ್ಷಕಿ ಸುಜಾತಾ ಅಲ್ಲದೆ ನಿಲಯದ ಸಿಬ್ಬಂದಿಗಳು ವಿಶೇಷ ಮದುವೆ ಸಮಾರಂಭವನ್ನು ಅಚ್ಚುಕಟ್ಟಾಗಿ ನೆರವೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
Published by: MAshok Kumar
First published: September 24, 2020, 7:13 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading