ಮೈಸೂರು; ಮಾಧ್ಯಮ, ಮಾನವ ಹಕ್ಕುಗಳ ಹೆಸರಲ್ಲಿ ವೈದ್ಯರಿಗೆ ಬ್ಲ್ಯಾಕ್‌ಮೇಲ್ ಮಾಡಿದ ಮೂವರು ಯುವತಿಯರ ಬಂಧಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಸರ್ಕಾರಿ ವೈದ್ಯನಿಂದ ಹಣ ಪೀಕಲು ವಿಫಲ ಯತ್ನ ಮಾಡಿದ ಅಮ್ರೀನ್, ಆಯಿಷಾ ಬಾಯಿ, ಶಹೀನಾ ನವೀದ್ ಪೊಲೀಸರು ಬಂಧಿಸಿರುವ ಆರೋಪಿಗಳಾಗಿದ್ದು, ಮೂವರ ವಿರುದ್ದ ಎಫ್‌ಐಆರ್ ದಾಖಲಿಸಿದ್ದಾರೆ. ಅವರು ಹೇಗೆ ಕಾರ್ಯಾಚರಣೆ ಮಾಡ್ತಿದ್ರು ಹೇಗೆ ಬೆದರಿಕೆ ಹಾಕ್ತಿದ್ರು ಅಂತ ಕೇಳಿ ಪೊಲೀಸರೆ ಶಾಕ್ ಆಗಿದ್ದಾರೆ. ಯುವತಿಯರೇ ನಡೆಸಿದ ಈ ಕಾರ್ಯಾಚರಣೆಯ ಸಂಪೂರ್ಣ ಇಲ್ಲಿದೆ.
ಮೈಸೂರಿನಲ್ಲಿ ಬಂಧನವಾಗಿರುವ ಅವರ್ಯಾರು ಪತ್ರಕರ್ತರಲ್ಲ, ಯಾವುದೇ ಮಾಧ್ಯಮ ಸಂಸ್ಥೆಯಲ್ಲಿ ಕೆಲಸವನ್ನೂ ಮಾಡುತ್ತಿರಲಿಲ್ಲ. ಕೇವಲ ನಕಲಿ ಕಾರ್ಡ್ ಬಳಸಿಕೊಂಡು ವೈದ್ಯರಿಂದ ಹಣಕ್ಕೆ ಬ್ಲಾಕ್ ಮೇಲ್ ಮಾಡೋಕೆ ಪ್ರಾರಂಭಿಸಿದ್ದರು. ಸ್ವಲ್ಪ ಹಣ ಕೊಟ್ಟ ನಂತರ ಹೆಚ್ಚಿನ ಹಣಕ್ಕಾಗಿ ಗಲಾಟೆ ಮಾಡೋಕೆ ಶುರುಮಾಡ್ತಿದ್ರು. ಕೊನೆಗೂ ಮೂವರ ಅಸಲಿ ಬಣ್ಣ ಬಯಲಾಗಿ ಮೂವರು ಯುವತಿಯರು ಇದೀಗ ಜೈಲು ಸೇರಿದ್ದಾರೆ.
ಹೌದು, ಬಂಧಿತರಾಗಿರುವ ಆರೋಪಿಗಳಲ್ಲಿ ಒಬ್ಬರು ಕ್ರೈಂ ರಿಪೋರ್ಟರ್, ಹೆಸರು ಅಮ್ರೀನ್. ಮತ್ತೊಬ್ಬಳು ಪೊಲಿಟಿಕಲ್ ರಿಪೋರ್ಟರ್, ಹೆಸರು ಶಾಯಿದಾ ಬಾಯಿ, ಇನ್ನೊಬ್ಬಳು ಶಾಹೀನಾ ನವೀದ್, ಈಕೆಯಂತೂ ಕೇಂದ್ರ ಸರ್ಕಾರದ ಸಿಟಿಜನ್ ಲೇಬರ್ ವೆಲ್ಫೇರ್ ಆ್ಯಂಡ್ ಆ್ಯಂಟಿ ಕರಪ್ಷನ್ ಕಮಿಟಿ ಪ್ರಧಾನ ಕಾರ್ಯದರ್ಶಿ. ಇನ್ಫ್ಯಾಕ್ಟ್, ಇವರು ಹೇಳುತ್ತಿರುವ ಸಂಸ್ಥೆಗಳೇ ಅಸ್ತಿತ್ವದಲ್ಲಿ ಇಲ್ಲ. ನಕಲಿ ಗುರುತಿನ ಚೀಟಿ ತೋರಿಸಿ ಹಣ ವಸೂಲಿ ಮಾಡಲು ಯತ್ನಿಸಿದ್ದ ಇವರೆಲ್ಲ, ಇದೀಗ ಜೈಲು ಪಾಲಾಗಿದ್ದಾರೆ. ಮೈಸೂರಿನ ಕೆ.ಆರ್.ಆಸ್ಪತ್ರೆಯ ನರರೋಗ ತಜ್ಞ ಟಿ.ಎಸ್.ರಾಜೇಶ್ ಅವರನ್ನು ಈ ಯುವತಿಯರು ನಾವು ಸುವರ್ಣ ಕಾವೇರಿ ಎಕ್ಸ್ಪ್ರೆಸ್ ಚಾನಲ್ ವರದಿಗಾರ್ತಿಯರು ಅಂತ ಪರಿಚಯ ಮಾಡಿಕೊಂಡಿದ್ದಾರೆ. ನಂತರ ನೀವು ಸರ್ಕಾರಿ ವೈದ್ಯರಾಗಿದ್ದುಕೊಂಡು ರೋಗಿಗಳಿಂದ ಕಾನೂನು ಬಾಹಿರವಾಗಿ ಹಣ ವಸೂಲಿ ಮಾಡಿದ್ದೀರಿ. ಈ ಸಂಬಂಧ ವಿಡಿಯೋ ದೃಶ್ಯಗಳಿವೆ. ಅದನ್ನು ಮಾಧ್ಯಮದಲ್ಲಿ ಹಾಕ್ತಿವಿ ಅಂತ ಬ್ಲಾಕ್ಮೇಲ್ ಶುರುಮಾಡಿದ್ದಾರೆ. ಜೊತೆಗೆ ಹಣಕ್ಕೂ ಬೇಡಿಕೆ ಇಟ್ಟು ಅಲ್ಪ ಮೊತ್ತದ ಹಣ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನು ಓದಿ: ಖಾಸಗಿ ಕಂಪನಿಯಿಂದ ಅಕ್ರಮವಾಗಿ ಭೂಮಿ ಕಬಳಿಕೆ ಅರೋಪ: ನಮಗೆ ನ್ಯಾಯ ಕೊಡಿ ಎನ್ನುತ್ತಿರುವ ರೈತರು
ಈ ರೀತಿ ಬ್ಲಾಕ್ ಮೇಲ್ ಶುರು ಮಾಡಿದ ಇವರುಗಳು ಮೊದಲಿಗೆ 5 ಲಕ್ಷ ರೂ. ಕೊಟ್ಟರೆ ಸುಮ್ಮನಾಗುತ್ತೇವೆ ಅಂತ ಬೇಡಿಕೆ ಇಟ್ಟಿದ್ದರು. ನಂತರ ಪೋನಲ್ಲಿ ಮಾತಾಡಿ 2 ಲಕ್ಷಕ್ಕೆ ಫೈನಲ್ ಮಾಡಿದ್ದಾರೆ. ನಂತರ ಮುಂಗಡವಾಗಿ 50 ಸಾವಿರ ಕೊಟ್ಟು ಸುಮ್ಮನಾಗಿಸಲು ವೈದ್ಯ ರಾಜೇಶ್ ಯತ್ನಿಸಿದ್ದಾರೆ. ಇದಾದ ನಂತರ ಪೂರ್ತಿ ಹಣಕ್ಕೆ ಬೇಡಿಕೆ ಇಟ್ಟು ವೈದ್ಯರು ಹಣ ನೀಡದೆ ಇದ್ದಾಗ ವೈದ್ಯರ ಜೊತೆ ಗಲಾಟೆ ಮಾಡಲು ಶುರುಮಾಡಿದ್ದಾರೆ. ಗಲಾಟೆ ಹೆಚ್ಚಾಗಿ ಅಕ್ಕಪಕ್ಕದವರೆಲ್ಲ ಬಂದಾಗ ವೈದ್ಯ ರಾಜೇಶ್ ಮಂಡಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಯುವತಿಯರನ್ನು ಕರೆಸಿ ತನಿಖೆ ನಡೆಸಿದಾಗ ಈ ಮೂವರು ನಕಲಿ ಪತ್ರಕರ್ತರು ಹಾಗೂ ಸರ್ಕಾರಿ ಇಲಾಖೆಯ ನಕಲಿ ಸಂಸ್ಥೆಯ ಸಿಬ್ಬಂದಿ ಎಂದು ಹೇಳಿದ್ದ ಇವರ ಬಣ್ಣ ಬಯಲಾಗಿದೆ. ಅಂತಿಮವಾಗಿ ಮೂವರನ್ನು ಬಂಧಿಸಿರುವ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ