HOME » NEWS » District » THREE CHILDREN DROWNED AWAY IN DRAINAGE AT BANGARPET KOLAR RRK SNVS

ಬಂಗಾರಪೇಟೆಯಲ್ಲಿ ಮಳೆನೀರಿನಿಂದ ತುಂಬಿದ ಕಾಲುವೆಯಲ್ಲಿ ಮುಳುಗಿ ಮೂವರು ಮಕ್ಕಳು ದುರ್ಮರಣ

ಅಂಡರ್​ಪಾಸ್​ನಲ್ಲಿ ನಿಲ್ಲುವ ನೀರನ್ನ ಹೊರಹಾಕಲು ಕೊರೆಯಲಾಗಿದ್ದ ಕಾಲುವೆಯೊಳಗೆ ಮೂವರು ಮಕ್ಕಳು ಆಕಸ್ಮಿಕವಾಗಿ ಬಿದ್ದು ಜಲಸಮಾಧಿಯಾಗಿರುವ ದುರಂತ ಕೋಲಾರದ ಬಂಗಾರಪೇಟೆಯಲ್ಲಿ ಸಂಭವಿಸಿದೆ.

news18-kannada
Updated:October 10, 2020, 9:39 PM IST
ಬಂಗಾರಪೇಟೆಯಲ್ಲಿ ಮಳೆನೀರಿನಿಂದ ತುಂಬಿದ ಕಾಲುವೆಯಲ್ಲಿ ಮುಳುಗಿ ಮೂವರು ಮಕ್ಕಳು ದುರ್ಮರಣ
ಬಂಗಾರಪೇಟೆಯಲ್ಲಿ ಮೂವರು ಮಕ್ಕಳು ಜಲಸಮಾಧಿಯಾದ ಕಾಲುವೆ
  • Share this:
ಕೋಲಾರ(ಅ. 10): ಜಿಲ್ಲೆಯಲ್ಲಿ ರೈಲ್ವೆ ಅಂಡರ್ ಪಾಸ್  ಮತ್ತು ಕಾಲುವೆಗಳು ಅವ್ಯವಸ್ಥೆಯ ಆಗರಗಳಾಗಿವೆ. ಸುಗಮ ಸಂಚಾರಕ್ಕೆಂದು ನಿರ್ಮಿಸಿರುವ ಕಾಲುವೆಗಳು ಮಳೆ ಬಂದರೆ ಕೆರೆಗಳಂತಾಗುತ್ತಿವೆ. ಕಾಲುವೆಯಲ್ಲಿ ನೀರು ಖಾಲಿಯಾಗುವ ತನಕ ಜನರು, ವಾಹನ ಸವಾರರು ಕಾಯುವ ದುಸ್ಥಿತಿ ಇಂದಿಗೂ ಕೋಲಾರ ನಗರದಲ್ಲಿದೆ. ಇದೀಗ ಕಾಲುವೆಯಿಂದ ನೀರನ್ನ ಹೊರಹಾಕಲು ನಿರ್ಮಿಸಿರುವ ಸಣ್ಣ ಕಾಲುವೆಯ ನೀರಲ್ಲಿ ಆಟ ಆಡಲು ಹೋದ ಮೂವರು ಮಕ್ಕಳು ಜಲ ಸಮಾಧಿಯಾಗಿರುವ ದಾರುಣ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಕುಂಬಾರಪಾಳ್ಯದ ಹೊರವಲಯದಲ್ಲಿ ಸಂಭವಿಸಿದೆ. 

ಬಡಾವಣೆಯಲ್ಲಿನ ರೈಲ್ವೆ ಅಂಡರ್ ಪಾಸ್​ನಲ್ಲಿ ಮಳೆ ಬಂದರೆ ನೀರು ಶೇಖರಣೆಯಾಗುತ್ತೆ. ಇತ್ತೀಚೆಗೆ ಬಂಗಾರಪೇಟೆಯಲ್ಲಿ ಹೆಚ್ಚು ಮಳೆಯಾಗ್ತಿದ್ದು, ರೈಲ್ವೇ ಸೇತುವೆಯಲ್ಲಿ ನಿಂತಿದ್ದ ನೀರನ್ನು ಹೊರಹಾಕಲು ಇತ್ತೀಚೆಗೆ ಕಾಲುವೆಯನ್ನ ಕೊರೆದಿದ್ದರು ಎಂದು ತಿಳಿದುಬಂದಿದೆ. ಮಧ್ಯಾಹ್ನ ಮಕ್ಕಳು ಆಟವಾಡಲು ಹೋಗಿರುವ ವೇಳೆ ನೀರಲ್ಲಿ ಮುಳುಗಿದ್ದನ್ನು ಯಾರೂ ಗಮನಿಸದ ಹಿನ್ನೆಲೆ ದುರಂತ ನಡೆದಿದೆ. ಮೃತರು ಕುಂಬಾರಪಾಳ್ಯದ 8 ವರ್ಷದ ಬಾಲಕಿ ಮೆಹಿಕ್, 12 ವರ್ಷದ ಸಾದಿಕ್ ಹಾಗು 7 ವರ್ಷದ ಫಯಾಜ್ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಬಂಗಾರಪೇಟೆ ಪೊಲೀಸರು ಭೇಟಿ ನೀಡಿದ್ದು, ಮಕ್ಕಳ ಶವಗಳನ್ನ ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ಸಂಬಂಧಿಸಿದಂತೆ ಪೋಷಕರು ರೈಲ್ವೆ ಇಲಾಖೆಯ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳದಲ್ಲಿ ಪೋಷಕರ ರೋಧನೆ ಮುಗುಲುಮುಟ್ಟಿತ್ತು.

ಇದನ್ನೂ ಓದಿ: ಫೇಸ್​ಬುಕ್​ನಲ್ಲಿದ್ದ ಫೋಟೊ ಬಳಸಿ ಅಶ್ಲೀಲವಾಗಿ ಮಾರ್ಫಿಂಗ್ ಮಾಡುತ್ತಿದ್ದ ಬೆಂಗಳೂರಿನ ವ್ಯಕ್ತಿಯ ಬಂಧನ

ಕೋಲಾರ ಜಿಲ್ಲೆಯಲ್ಲಿ ರೈಲ್ವೆ ಅಂಡರ್ ಪಾಸ್ ಹಾಗು ಸೇತುವೆಗಳು ಅವೈಜ್ಞಾನಿಕ ವಿಧಾನದಿಂದಲೇ ನಿರ್ಮಿಸಲಾಗಿದ್ದು, ಇದರಿಂದಲೆ ಅವಘಡ ಸಂಭವಿಸಿದೆ ಎಂದು ಬಂಗಾರಪೇಟೆಯ ರೈತ ಮುಖಂಡರು ಕಿಡಿಕಾರಿದ್ದಾರೆ.

ಮಳೆಯಾದರೆ ಜಿಲ್ಲೆಯಲ್ಲಿನ ರೈಲ್ವೆ ಅಂಡರ್ ಪಾಸ್​ಗಳು ಕೆರೆಗಳಾಗುತ್ತವೆ:

ಕೋಲಾರ ನಗರ ಹಾಗು ಬಂಗಾರಪೇಟೆ ತಾಲೂಕಿನ ಕೆಲ ರೈಲ್ಚೆ ಅಂಡರ್​ಪಾಸ್​ಗಳು ಮಳೆಯಾದರೆ ಸಣ್ಣ ಪುಟ್ಟ ಕೆರೆಗಳಂತೆ ತುಂಬಿಕೊಳ್ಳುತ್ತಿವೆ. ಸಣ್ಣ ಪುಟ್ಟ ಮಳೆಗೆ ತುಂಬುವ ಅಂಡರ್​ಪಾಸ್​ಗಳು ಗಂಟೆಗಟ್ಟಲೆ ಕಳೆದರೂ ನೀರು ಮಾತ್ರ ಖಾಲಿಯಾಗಲ್ಲ. ಅಂಡರ್​ಪಾಸ್​ನಿಂದ ನೀರು ಸರಾಗವಾಗಿ ಹರಿದುಹೋಗಲು ಸೂಕ್ತ ಕೊಳವೆ ಮಾರ್ಗ ನಿರ್ಮಿಸದೆ ಇರೋದೇ ಇದಕ್ಕೆ ಮೂಲಕಾರಣವಾಗಿದೆ. ಮಾಜಿ ಸಂಸದ ಕೆಎಚ್ ಮುನಿಯಪ್ಪ ಅವರ ಅವಧಿಯಲ್ಲೇ ನಿರ್ಮಾಣವಾಗಿದ್ದ ಈ ಅಂಡರ್ ಪಾಸ್​ಗಳ ವಿರುದ್ದ ಹಲವು ಬಾರಿ ಸಾರ್ವಜನಿಕರು ದೂರು ನೀಡಿ ಸರಿಪಡಿಸಿ ಎಂದು ಮನವಿ ಮಾಡಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ‌. ಇದೀಗ ಹಾಲಿ ಬಿಜೆಪಿ ಸಂಸದ ಎಸ್ ಮುನಿಸ್ವಾಮಿ ಅವರಿಗೂ ಸಾರ್ವಜನಿಕರು ಮನವಿ ಮಾಡಿದ್ದು, ರೈಲ್ವೆ ಅಂಡರ್​ಪಾಸ್​ನಲ್ಲಿ ನೀರು ನಿಲ್ಲದಂತೆ ಕ್ರಮ ಜರುಗಿಸಿ ಎಂದು ಆಗ್ರಹಿಸಿದ್ದಾರೆ.ವರದಿ: ರಘುರಾಜ್
Published by: Vijayasarthy SN
First published: October 10, 2020, 9:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories