ಮಂಡ್ಯ (ಮಾ.11): ಒಂದು ಕಡೆ ಬಾನಲ್ಲಿ ಚಿತ್ತಾರ ಮೂಡಿಸುತ್ತಿರುವ ಬೆಳ್ಳಕ್ಕಿಗಳು. ಮತ್ತೊಂದು ಕಡೆ ಸಂತಾನೋತ್ಪತ್ತಿಯಲ್ಲಿ ತೊಡಗಿರೋ ವಿವಿಧ ಬಗೆಯ ಪಕ್ಷಿಗಳು (Birds). ಹಾಗೆ ಇನ್ನೊಂದು ಕಡೆ ತಾಯಿ ಗುಟುಕಿಗಾಗಿ ಕಾಯ್ತ ಇರೋ ಮರಿಗಳು. ಇವೆಲ್ಲ ದೃಶ್ಯಗಳು ಕಂಡು ಬಂದಿದ್ದು ರಂಗನತಿಟ್ಟು ಪಕ್ಷಿಧಾಮದಲ್ಲಿ (Bird Sanctuary). ಅದ್ರಲ್ಲೂ ಸುಡುವ ಬೇಸಿಗೆಯಲ್ಲೂ ರಂಗನ ತಿಟ್ಟು(Ranganatittu) ಕೂಲ್ ಕೂಲ್ ಆಗಿದೆ. ಈ ತಂಪಾದ ವಾತಾವರಣ, ಹಕ್ಕಿಗಳ ಕಲರವದ ಈ ಪ್ರಕೃತಿಕ ತಾಣ ನೋಡಿದ್ರೆ ಸ್ವರ್ಗವೇ ಧರೆಗಿಳಿದಂತಿದೆ. ರಂಗನತಿಟ್ಟು ಪಕ್ಷಿ ಕಾಶಿ ವೀಕ್ಷಣೆ ಮಾಡೋದಕ್ಕೆ ಸಾವಿರಾರು ಪ್ರವಾಸಿಗರ ದಂಡು ಹರಿದುಬರ್ತಿದೆ.
ರಂಗನತಿಟ್ಟಿನಲ್ಲಿ ಬೆಳ್ಳಕ್ಕಿಗಳ ಕಲರವ
ನೀರಿನ ಮಧ್ಯೆ ಬಣ್ಣ-ಬಣ್ಣದ ಪಕ್ಷಿಗಳ ಕಲರವ, ಗೂಡು ನಿರ್ಮಾಣದಲ್ಲಿ ತೊಡಗಿರುವ ಕೊಕ್ಕರೆಗಳು, ಮತ್ತೊಂದೆಡೆ ಮರಿಗಳನ್ನು ಸಂರಕ್ಷಣೆ ಮಾಡುತ್ತಿರುವ ತಾಯಿ ಪಕ್ಷಿ. ಈ ಮಧ್ಯ ಭಯ ಹುಟ್ಟಿಸುವ ಮೊಸಳೆಗಳು, ನೀರಿನಲ್ಲಿ ಮುಳುಗೇಳುತ್ತಿರುವ ನೀರು ನಾಯಿ. ಈ ದೃಶ್ಯ ಕಾಣಲು ಸಿಗುವುದು ವಿಶ್ವ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮದಲ್ಲಿ. ಹೌದು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ರಂಗನತಿಟ್ಟು ಪಕ್ಷಿ ಕಾಶಿ ವೀಕ್ಷಣೆ ಮಾಡೋದಕ್ಕೆ ಸಾವಿರಾರು ಪ್ರವಾಸಿಗರ ದಂಡು ಹರಿದುಬರ್ತಿದೆ.
ಕೂಲ್ ಕೂಲ್ ವಾತಾವರಣದಲ್ಲಿ ದೋಣಿ ವಿಹಾರ ಮಾಡಿ
ಡಿಸೆಂಬರ್ ತಿಂಗಳಿನಿಂದ ಮೇ ತಿಂಗಳವರೆಗೆ ದೇಶ-ವಿದೇಶದಿಂದ ಸಂತಾನೋತ್ಪತ್ತಿಗಾಗಿ ಪಕ್ಷಿಗಳು ವಲಸೆ ಬರುತ್ತವೆ. ಹೀಗಾಗಿ ಈ ಆರು ತಿಂಗಳ ಕಾಲ ರಂಗನತಿಟ್ಟು ಪಕ್ಷಿಧಾಮದಲ್ಲಿ ಪ್ರಕೃತಿ ದೇವತೆಯೇ ಧರಗೆ ಇಳಿದು ಬಂದ ಹಾಗೆ ಕಾಣುತ್ತೆ. ಪೆಲಿಕಾನ್, ಓಪನ್ ಬಿಲ್ ಸ್ಟಾರ್ಕ್, ಸ್ಫೂನ್ ಬಿಲ್, ಕಾರ್ಮಾರೆಂಟ್, ಐಬಿಸ್, ಇಗ್ರೀಟ್, ಕಿಂಗ್ ಫಿಶರ್, ಪೆಂಟೆಂಡ್ ಸ್ಟಾಕ್ ಸೇರಿದಂತೆ 170 ಬಗೆಯ ಸಾವಿರಾರು ಪಕ್ಷಿಗಳು ರಂಗತಿಟ್ಟಿನ 25 ನಡುಗಡ್ಡೆಗಳಲ್ಲಿ ಗೂಡು ಕಟ್ಟಿ ವಾಸ ಮಾಡುತ್ತಿವೆ.
ಇದಲ್ಲದೇ 100ಕ್ಕೂ ಹೆಚ್ಚು ಮೊಸಳೆಗಳು ಸಹ ವಾಸವಾಗಿದ್ದು, ಅಲ್ಲಲ್ಲಿ ಅಪರೂಪದ ಪ್ರಾಣಿಯಾದ ನೀರು ನಾಯಿ ತುಂಟಾಟ ನೋಡುಗರಿಗೆ ಮುದನೀಡುತ್ತಿವೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ರಂಗನತಿಟ್ಟು ಪಕ್ಷಿಧಾಮಕ್ಕೆ ಹರಿದು ಬರುತ್ತಿದ್ದಾರೆ.
ಇದನ್ನೂ ಓದಿ: Travel Tips: ದಕ್ಷಿಣ ಭಾರತದಲ್ಲಿ ನೀವು ನೋಡಲೇಬೇಕಾದ ಸ್ಥಳಗಳಿವು
ಬಾನಾಲಿಗಳ ವೀಕ್ಷಣೆಗೆ ಜನರ ದಂಡು
ಕರೋನಾದಿಂದಾಗಿ ರಂಗನತಿಟ್ಟಿಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆ ಇತ್ತು. ಇದೀಗ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, ನಿತ್ಯ ಒಂದು ಸಾವಿರ ಜನರು ಭೇಟಿ ನೀಡ್ತಿದ್ಧಾರೆ. ಇಲ್ಲಿಗೆ ಬರುವ ಬಹುತೇಕರು ಬೋಟಿಂಗ್ ಮೂಲಕ ಪಕ್ಷಿ ಸೌಂದರ್ಯದ ಜತೆಗೆ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ, ಪಕ್ಷಿಗಳ ಫೋಟೋ ತೆಗೆಯುವ ಜೊತೆ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಫುಲ್ ಎಂಜಾಯ್ ಮಾಡ್ತಾ ಇದ್ದಾರೆ.
ಪಕ್ಷಿಧಾಮಕ್ಕೆ ಬರುವ ಮಾರ್ಗ
ಇನ್ನು ಈ ಪಕ್ಷಿಧಾಮಕ್ಕೆ ಬೆಂಗಳೂರಿನಿಂದ ಸುಮಾರು 130 ಕಿಮಿ. ಆಗಲಿದೆ. ಕಾರು ಇರುವವರು ಕೆಂಗೇರಿ, ರಾಮನಗರ, ಮಂಡ್ಯ ಮೂಲಕ ಶ್ರೀರಂಗಪಟ್ಟಣಕ್ಕೆ ಬಂದು ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿ ಬಳಿ ಬಲ ಭಾಗಕ್ಕೆ ತಿರುಗಿ ಕೆಆರ್ಎಸ್ ರಸ್ತೆಯಲ್ಲಿ ಚಲಿಸಿದ್ರೆ ರಂಗನತಿಟ್ಟು ಪಕ್ಷಿಧಾಮ ಸಿಗಲಿದೆ. ಒಂದು ವೇಳೆ ಬಸ್ ನಲ್ಲಿ ಬರೋದಾದ್ರೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಅಥವಾ ಬಾಪೂಜಿ ನಗರದ ಸ್ಯಾಟ್ಲೈಟ್ ಬಸ್ ನಿಲ್ದಾಣದಿಂದ ಮೈಸೂರಿಗೆ ತೆರಳುವ ಬಸ್ ನಲ್ಲಿ ಹೊರಟು ಶ್ರೀರಂಗಪಟ್ಟಣದಲ್ಲಿ ಇಳಿಯಬೇಕು. ನಂತರ ಶ್ರೀರಂಗಪಟ್ಟಣದಿಂದ ಪಕ್ಷಿಧಾಮಕ್ಕೆ ಸಿಟಿ ಬಸ್ ವ್ಯವಸ್ಥೆ ಕೂಡ ಇದೆ.
ಇದನ್ನೂ ಓದಿ: Weekend Travel: ಈ ವೀಕೆಂಡ್ ಗೆ ಟ್ರಿಪ್ ಪ್ಲಾನ್ ಮಾಡ್ತಿದ್ದೀರಾ? ಬೆಂಗ್ಳೂರಿನ ಹತ್ತಿರವೇ ಇರೋ ಈ ಸುಂದರ ಸ್ಥಳಗಳಿಗೆ ಹೋಗ್ಬಹುದು ನೋಡಿ
ಪಕ್ಷಿಧಾಮಕ್ಕೆ ಎಂಟ್ರಿ ಫೀಸ್ 50 ರೂಪಾಯಿ
ಇನ್ನು ಪಕ್ಷಿಧಾಮ ಎಂಟ್ರಿ ಫೀಸ್ ಕೂಡ ದುಬಾರಿ ಎನಿಸಲ್ಲ. ಒಬ್ಬರಿಗೆ 50 ರೂ ಎಂಟ್ರಿ ಫೀಸ್ ಇದ್ರೆ, ಬೋಟಿಂಗ್ ಹೋಗಲು ತಲಾ 100 ರೂ ನೀಡಬೇಕಾಗತ್ತೆ. ಇನ್ನು ಪಕ್ಷಿಧಾಮದಲ್ಲಿ ಪುರಾತನ ಕಾಲದ ದೊಡ್ಡ ದೊಡ್ಡ ಮರಗಳಿವೆ. ಬೇಸಿಗೆಯ ಬಿರು ಬಿಸಿಲಿನಲ್ಲಿ ಕಂಗೆಟ್ಟಿರುವವರಿಗೆ ಅಲ್ಲಿನ ಪ್ರಕೃತಿ ಸೊಬಗು ಮನಸಿಗೆ ಸಂತೋಷವನ್ನ ನೀಡುತ್ತೆ. ಒಟ್ಟಾರೆ ಕೊರೊನಾ ದಿಂದ ಕಂಗೆಟ್ಟಿರೋ ಜನ್ರು ಹಾಗೂ ಪಕ್ಷಿ ಪ್ರಿಯರು ಸಾವಿರಾರು ರೂ ಖರ್ಚು ಮಾಡಿ ಯಾವುದೋ ರೆಸಾರ್ಟ್ಗೆ ಹೋಗಿ ಬಂಧಿ ಆಗೋದ್ರ ಬದಲು, ಇಲ್ಲಿಗೆ ಆಗಮಿಸಿ ಫುಲ್ ಎಂಜಾಯ್ ಮಾಡಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ