news18-kannada Updated:December 26, 2020, 7:25 AM IST
ದುಬಾರಿಯಲ್ಲಿ ಪ್ರವಾಸಿಗರ ದಂಡು.
ಕೊಡಗು: ಕ್ರಿಸ್ ಮಸ್ ಮತ್ತು ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ನಿರಂತರವಾಗಿ ಸರ್ಕಾರಿ ರಜೆ ಬಂದಿದ್ದೇ ತಡ, ಕೊಡಗು ಜಿಲ್ಲೆಗೆ ಸಾವಿರಾರು ಪ್ರವಾಸಿಗರು ದಾಂಗುಡಿ ಇಟ್ಟಿದ್ದಾರೆ. ಹೀಗಾಗಿ ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣಗಳಾದ ದುಬಾರೆ, ದುಬಾರೆ ಸಾಕಾನೆ ಶಿಬಿರ ಸೇರಿದಂತೆ ಹಲವು ಪ್ರವಾಸಿ ತಾಣಗಳಲ್ಲಿ ಸಾವಿರಾರು ಪ್ರಯಾಣಿಕರು ತುಂಬಿ ತುಳುಕುತಿದ್ದಾರೆ. ಆದರೆ ಎಲ್ಲೆಡೆ ಸಾಮಾಜಿಕ ಅಂತರ ಮಾತ್ರ ಸಂಪೂರ್ಣ ಮಾಯವಾಗಿಬಿಟ್ಟಿದೆ.
ಹೌದು, ವಿಶ್ವ ಪ್ರಸಿದ್ಧ ದುಬಾರೆ ಸಾಕಾನೆ ಶಿಬಿರ ನೋಡಲು ದೇಶ, ವಿದೇಶದಿಂದಲೂ ಪ್ರವಾಸಿಗರು ಬರುತ್ತಾರೆ. ಅಲ್ಲಿರುವ ಆನೆಗಳನ್ನು ನೋಡಿ ಎಂಜಾಯ್ ಮಾಡುತ್ತಾರೆ. ಅಷ್ಟೇ ಅಲ್ಲದೇ, ಸಾಕಾನೆ ಶಿಬಿರಕ್ಕೆ ಹೋಗಬೇಕಾದರೆ, ಮೈತುಂಬಿ ಹರಿಯುವ ಕಾವೇರಿ ನದಿಯನ್ನು ಬೋಟ್ ಮೂಲಕ ಹಾದು ದಾಟಬೇಕು. ಅದು ಕೂಡ ರೋಚಕ ಅನುಭವವೇ ಸರಿ. ಹೀಗಾಗಿ ಸಾವಿರಾರು ಪ್ರವಾಸಿಗರು ದುಬಾರೆ ಸಾಕಾನೆ ಶಿಬಿರವನ್ನು ನೋಡಲು ಮುಗಿಬೀಳುತ್ತಾರೆ. ಕ್ರಿಸ್ ಮಸ್ ಹಬ್ಬ, ಭಾನುವಾರದ ರಜೆ ಸೇರಿದಂತೆ ಮೂರು ದಿನಗಳ ಕಾಲ ನಿರಂತರವಾಗಿ ರಜೆ ಇರುವುದರಿಂದ ಸಾಕಾನೆ ಶಿಬಿರ ನೋಡಲು ಸಾವಿರಾರು ಜನರು ಸರದಿಯಲ್ಲಿ ನಿಲ್ಲುತ್ತಿದ್ದಾರೆ. ಆದರೆ ಈ ವೇಳೆ ಯಾರೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿಲ್ಲುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪ್ರವಾಸಿಗರು ಕೂಡ ಕೊರೋನಾ ಹರಡಬಹುದಾ ಎನ್ನೋ ಸಣ್ಣ ಅಳುಕು ಕೂಡ ಇಲ್ಲದೆ ಎಲ್ಲವನ್ನು ಮರೆತು ನಿಲ್ಲುತ್ತಿದ್ದಾರೆ.
ಒಬ್ಬರಿಗೆ ಒಬ್ಬರು ಅಂಟಿಕೊಂಡೇ ಹನುಮಂತನ ಬಾಲದಂತೆ ದೊಡ್ಡ ಸರದಿಯ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಸಾಕಷ್ಟು ಜನರು ಮಾಸ್ಕ್ ಹಾಕಿಕೊಂಡಿದ್ದರಾದರೂ ಸಾಕಷ್ಟು ಜನರು ಮಾಸ್ಕ್ ಅನ್ನು ಕ್ರಮಬದ್ಧವಾಗಿಯೇ ಹಾಕಿಕೊಳ್ಳದೆ ನಿರ್ಲಕ್ಷ್ಯ ಮಾಡುತ್ತಿರೋದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಜೊತೆಗೆ ಕಾವೇರಿ ನದಿ ದಾಟಲು ಬೋಟ್ ಏರಿದರೆ ಕನಿಷ್ಠ 12 ಜನರನ್ನು ಕರೆದೊಯ್ಯಬಹುದು. ಆದರೆ ಬೋಟ್ ನಲ್ಲಿ ಬರೋಬ್ಬರಿ 20 ಜನರನ್ನು ಕೂರಿಸಿ ಕರೆದೊಯ್ಯಲಾಗುತ್ತಿದೆ. ಹೀಗಾಗಿ ಪ್ರವಾಸಿ ತಾಣಗಳು ಕೊರೋನಾ ಹರಡುವುದಕ್ಕೆ ರಹದಾರಿಗಳಾಗಿ ಬಿಡುತ್ತವಾ ಎನ್ನುವ ಆತಂಕ ಶುರುವಾಗಿದೆ.
ಇದನ್ನು ಓದಿ: ಬಾರ್ಕ್ ಮಾಜಿ ಸಿಇಒ ದಾಸಗುಪ್ತಾ ಟಿಆರ್ಪಿ ಹಗರಣದ ಮಾಸ್ಟರ್ಮೈಂಡ್; ಸಿಎನ್ಎನ್-ನ್ಯೂಸ್ 18 ಸೇರಿ ಇತರೆ ಚಾನಲ್ಗಳ ಟಿಆರ್ಪಿ ಕುಗ್ಗಿಸಿದ್ದ ಆರೋಪಿ
ಅಷ್ಟೇ ಅಲ್ಲ ದುಬಾರೆಯಲ್ಲಿ ಕಾವೇರಿ ಹೊಳೆಯಲ್ಲಿ ನೂರಾರು ಜನರು ಜಲಕ್ರೀಡೆಗಳನ್ನು ಆಡುತ್ತಿದ್ದಾರೆ. ನೀರೊಳಗೆ ಬಿದ್ದು ಒರಳಾಡುತ್ತಿರುವುದು ಕೊರೋನಾ ಹರಡುವುದಕ್ಕೆ ಸುಲಭವಾದ ಮಾರ್ಗವಾಗಿದೆ. ಜನರು ಮಾತ್ರ ಇದ್ಯಾವುದನ್ನೂ ಗಮನಕ್ಕೆ ಹಾಕಿಕೊಳ್ಳದೆ, ಎಂಜಾಯ್ ಮಾಡುತ್ತಿದ್ದಾರೆ. ದೇಶದಲ್ಲಿ ಈಗಾಗಲೇ ಕೊರೋನಾ ಎರಡನೆಯ ಅಲೆ ಶುರುವಾಗಿದೆ ಎನ್ನಲಾಗುತ್ತಿದ್ದು, ಆರೋಗ್ಯ ತಜ್ಞರು, ಸರ್ಕಾರಗಳು ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್ ಬಳಸಿ ಎಂದು ಬಾಯಿ ಬಾಯಿ ಬಡಿದು ಕೊಳ್ಳುತ್ತಿದ್ದಾರೆ. ಆದರೆ ಪ್ರವಾಸಿಗರು ಮಾತ್ರ ಕೊರೋನಾ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಎಂಜಾಯ್ ಮಾಡುತ್ತಿರುವುದು ಕೊರೋನಾ ಹರಡುವುದಕ್ಕೆ ಅತ್ಯಂತ ಸರಳ ಮಾರ್ಗವಾಗಿ ಬಿಡುತ್ತಾ ಎನ್ನೋದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಒಟ್ಟಿನಲ್ಲಿ ಕೊಡಗಿನಲ್ಲಿ ಕಳೆದ ಎರಡು ವಾರಗಳಿಂದ ಕೊರೋನಾ ರೋಗಿಗಳ ಸಂಖ್ಯೆ ಕಡೆಮೆಯಾಗುತ್ತಿದ್ದರೂ ಜಿಲ್ಲೆಗೆ ಬರುತ್ತಿರುವ ಪ್ರವಾಸಿಗರಿಂದ ಜಿಲ್ಲೆಗೆ ಮತ್ತೆ ಕಂಟಕ ಎದುರಾಗುತ್ತಾ ಎನ್ನುವ ಆತಂಕ ಶುರುವಾಗಿದೆ.
Published by:
HR Ramesh
First published:
December 26, 2020, 7:25 AM IST