ಕೊಡಗಿನಿಂದಲೂ ರಾಜಧಾನಿಯತ್ತ ಹೊರಟ ಸಾವಿರಾರು ರೈತರು!

ಈ ವೇಳೆ ಭೂಮಿ ಮತ್ತು ವಸತಿ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ನಿರ್ವಾಣಪ್ಪ ಮಾತನಾಡಿ, ದೆಹಲಿಯಲ್ಲಿ ಎರಡು ತಿಂಗಳಿಂದ ರೈತರು ಹೋರಾಟ ಮಾಡುತ್ತಿದ್ದು, ಪ್ರತಿಕೂಲ ವಾತಾವರಣದಿಂದಾಗಿ 160 ಕ್ಕೂ ಹೆಚ್ಚು ರೈತರು ಮೃತಪಟ್ಟಿದ್ದಾರೆ. ಆದರೂ ಕೃಷಿ ಮಸೂದೆಯನ್ನು ವಾಪಸ್ ಪಡೆಯದೆ ಕೇಂದ್ರ ಸರ್ಕಾರ ರೈತರ ಪ್ರತಿಭಟನೆಯನ್ನು ಹತ್ತಿಕ್ಕುವ ಹುನ್ನಾರ ನಡೆಸುತ್ತಿದೆ ಎಂದರು.

ಟ್ರ್ಯಾಕ್ಟರ್​ನಲ್ಲಿ ಕೊಡಗಿನಿಂದ ಬೆಂಗಳೂರಿಗೆ ಹೊರಟ ರೈತರು.

ಟ್ರ್ಯಾಕ್ಟರ್​ನಲ್ಲಿ ಕೊಡಗಿನಿಂದ ಬೆಂಗಳೂರಿಗೆ ಹೊರಟ ರೈತರು.

  • Share this:
ಕೊಡಗು: ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ದೆಹಲಿಯಲ್ಲಿ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆ ಪ್ರತಿಭಟನೆಯನ್ನು ಬೆಂಬಲಿಸಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಸಾವಿರಾರು ರೈತರು ಟ್ರ್ಯಾಕ್ಟರ್ ಪೆರೇಡ್ ನಡೆಸಲಿದ್ದಾರೆ. ರೈತರ ಈ ಟ್ರ್ಯಾಕ್ಟರ್ ಪೆರೇಡ್ ನಲ್ಲಿ ಭಾಗವಹಿಸಲು ಕೊಡಗು ಜಿಲ್ಲೆಯಿಂದಲೂ ಸಾವಿರಾರು ರೈತರು ಬೆಂಗಳೂರಿಗೆ ತೆರಳಿದ್ದಾರೆ. ಕೊಡಗಿನ ಎರಡು ಸ್ಥಳಗಳಿಂದ ಬೆಂಗಳೂರಿನತ್ತ ಸಾವಿರಾರು ರೈತರು ಹೊರಟಿದ್ದಾರೆ.

ಕೊಡಗು ಕೇರಳ ಗಡಿಭಾಗವಾದ ಕುಟ್ಟದಿಂದ ರಾಜ್ಯ ರೈತ ಸಂಘ ಹಸಿರು ಸೇನೆ ನೇತೃತ್ವದಲ್ಲಿ 20 ಕ್ಕೂ ಹೆಚ್ಚು ಟ್ರ್ಯಾಕ್ಟರ್ ಗಳು ಬೆಂಗಳೂರಿಗೆ ಹೊರಟವು. ರೈತ ಸಂಘದ ಜಿಲ್ಲಾಧ್ಯಕ್ಷ ಮನುಸೋಮಯ್ಯ ನೇತೃತ್ವದಲ್ಲಿ ಪ್ರತಿಭಟನಾ ಜಾಥಾ ಆರಂಭಿಸಿದ ರೈತರು ಟ್ರ್ಯಾಕ್ಟರ್ ಜೊತೆಗೆ ಜೀಪು, ಪಿಕಪ್ ವಾಹನ ಸೇರಿದಂತೆ ವಿವಿಧ ಹತ್ತಾರು ವಾಹನಗಳಲ್ಲೂ ಬೆಂಗಳೂರಿಗೆ ತೆರಳಿದ್ದಾರೆ. ಇದಕ್ಕೂ ಮೊದಲು ಕುಟ್ಟ ಗ್ರಾಮದಲ್ಲಿ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿದರು. ಅಲ್ಲದೆ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

ಮಂಡ್ಯದಿಂದ ಕೊಡಗು ಕೇರಳ ಗಡಿಭಾಗ ಕುಟ್ಟಕ್ಕೆ ಆಗಮಿಸಿದ್ದ ರಾಜ್ಯ ರೈತ ಸಂಘ ಹಸಿರುಸೇನೆಯ ಮುಖಂಡ ಬಡಗಲಪುರ ನಾಗೇಂದ್ರ ಮಾತನಾಡಿ, ಗಣರಾಜ್ಯೋತ್ಸವ ದಿನದಂದೇ ಟ್ರ್ಯಾಕ್ಟರ್ ಪೆರೇಡ್ ನಡೆಸುತ್ತಿದ್ದೇವೆ. ದೇಶ ನಿಜವಾಗಿಯೂ ಗಣರಾಜ್ಯವಾಗಿಲ್ಲ. ಹೀಗಾಗಿಯೇ ರೈತರು ಇಂದಿಗೂ ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ನಾಳೆ ರಾಜಧಾನಿಯಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ರೈತರು ಪೆರೇಡ್ ಮಾಡುವ ಮೂಲಕ ನಿಜವಾದ ಗಣರಾಜ್ಯೋತ್ಸವ ಆಚರಿಸಲಿದ್ದೇವೆ ಎಂದರು.

ಮತ್ತೊಂದೆಡೆ ಜಿಲ್ಲಾ ಕೇಂದ್ರ ಮಡಿಕೇರಿಯಿಂದಲೂ ಬೆಂಗಳೂರಿನತ್ತ ರೈತರು, ಕಾರ್ಮಿಕರು ನೂರಾರು ಸಂಖ್ಯೆಯಲ್ಲಿ ಹೊರಟಿದ್ದಾರೆ. ಇದರ ಭಾಗವಾಗಿಯೇ ಮಡಿಕೇರಿ ನಗರದ ಎಬಿ ಶಾಲೆಯಿಂದ ಭೂಮಿ ಮತ್ತು ವಸತಿ ಹಕ್ಕು ಹೋರಾಟ ಸಮಿತಿ, ದಲಿತ ಸಂಘರ್ಷ ಸಮಿತಿ ಮತ್ತು ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ನೂರಾರು ಜನರು ಪ್ರತಿಭಟನಾ ಮೆರವಣಿಗೆ ಆರಂಭಿಸಿದರು. ಎಬಿ ಶಾಲೆ ಬಳಿಯಿಂದ ಪ್ರತಿಭಟನೆ ಆರಂಭಿಸಿ ನಗರದ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆಯಲ್ಲಿ ಸಾಗಿದರು. ಮೆರವಣಿಗೆ ಉದ್ಧಕ್ಕೂ ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಎರಡು ಗಂಟೆಗಳ ಕಾಲ ಧರಣಿ ನಡೆಸಿದರು. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ನಾಲ್ಕು ಬಸ್ಸುಗಳಲ್ಲಿ ಮಡಿಕೇರಿಯಿಂದ ಬೆಂಗಳೂರಿಗೆ ಹೊರಟರು.

ಇದನ್ನು ಓದಿ: 1.87 ಲಕ್ಷ ಜನರಿಗೆ ಕೊರೋನಾ ಲಸಿಕೆ, ವ್ಯಾಕ್ಸಿನ್​ನಿಂದ ಯಾವುದೇ ಅಡ್ಡ ಪರಿಣಾಮವಿಲ್ಲ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ಈ ವೇಳೆ ಭೂಮಿ ಮತ್ತು ವಸತಿ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ನಿರ್ವಾಣಪ್ಪ ಮಾತನಾಡಿ, ದೆಹಲಿಯಲ್ಲಿ ಎರಡು ತಿಂಗಳಿಂದ ರೈತರು ಹೋರಾಟ ಮಾಡುತ್ತಿದ್ದು, ಪ್ರತಿಕೂಲ ವಾತಾವರಣದಿಂದಾಗಿ 160 ಕ್ಕೂ ಹೆಚ್ಚು ರೈತರು ಮೃತಪಟ್ಟಿದ್ದಾರೆ. ಆದರೂ ಕೃಷಿ ಮಸೂದೆಯನ್ನು ವಾಪಸ್ ಪಡೆಯದೆ ಕೇಂದ್ರ ಸರ್ಕಾರ ರೈತರ ಪ್ರತಿಭಟನೆಯನ್ನು ಹತ್ತಿಕ್ಕುವ ಹುನ್ನಾರ ನಡೆಸುತ್ತಿದೆ ಎಂದರು.

ಕೊಡಗಿನಲ್ಲಿ ಸುಮಾರು 35 ಗ್ರಾಮಗಳಲ್ಲಿ ಜನರು ವಸತಿ ಇಲ್ಲದೆ ಇಂದಿಗೂ ತೀವ್ರ ತೊಂದರೆಯಲ್ಲಿ ಬದುಕುತ್ತಿದ್ದಾರೆ. ಕನಿಷ್ಠ ಮೂಲಸೌಲಭ್ಯಗಳಿಲ್ಲದೆ ಹೀನಾಯ ಬದುಕು ನಡೆಸುತ್ತಿದ್ದಾರೆ. ಈ ಸಮಸ್ಯೆಗಳನ್ನು ಬಗೆಹರಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೇವೆ. ಇವುಗಳನ್ನು ಕೂಡ ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಲು ಬೆಂಗಳೂರಿನ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದೇವೆ ಎಂದಿದ್ದಾರೆ.
Published by:HR Ramesh
First published: