ಕಲಬುರ್ಗಿಯಲ್ಲೂ ನೂರಾರು ಟ್ರ್ಯಾಕ್ಟರ್​ಗಳ ಮೂಲಕ ಸಾವಿರಾರು ಸಂಖ್ಯೆಯಲ್ಲಿ ರೈತರ ಪ್ರತಿಭಟನೆ

ಕೂಡಲೇ ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ, ವಿದ್ಯುತ್ ಕಾಯ್ದೆ ವಾಪಸ್ ತೆಗೆದುಕೊಳ್ಳಬೇಕು. ರೈತ, ಕಾರ್ಮಿಕ, ದಲಿತ ವಿರೋಧಿ ನೀತಿ ಕೈಬಿಡಬೇಕು. ಇಲ್ಲದಿದ್ದಲ್ಲಿ ರೈತರನ್ನು ಬೆಂಬಲಿಸಿ ಉಗ್ರ ಹೋರಾಟ ಮಾಡೋದಾಗಿ ಪ್ರತಿಭಟನಾಕರಾರು ಎಚ್ಚರಿಕೆ ನೀಡಿದರು. 

ಕಲಬುರ್ಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರೈತರು.

ಕಲಬುರ್ಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರೈತರು.

  • Share this:
ಕಲಬುರ್ಗಿ; ರೈತರು ತಾವಿದ್ದೇವಿ ಅನ್ನೋದನ್ನು ತೋರಿಸೋದಕ್ಕೆ ಪ್ರತಿಭಟನೆ ಮಾಡ್ತಿದಾರೆ ಎಂಬ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಮುಖ್ಯ ಸಚೇತಕ, ಜೇವರ್ಗಿ ಶಾಸಕ ಅಜಯಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ಎರಡು ಕಡೆ ರೈತ ವಿರೋಧಿ ಸರ್ಕಾರವಿದೆ. ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ, ವಿದ್ಯುತ್ ಕಾಯ್ದೆ ವಿರೋಧಿಸಿ ದೇಶಾದ್ಯಂತ ರೈತರು ಹೋರಾಟ ಮಾಡ್ತಿದ್ದಾರೆ. ಅವರ ನ್ಯಾಯಯುತ ಹೋರಾಟ ಇವರ ಕಣ್ಣಿಗೆ ಬೇರೆಯ ರೀತಿಯಲ್ಲಿಯೇ ಕಾಣ್ತಿದೆ ಎಂದು ಅಜಯಸಿಂಗ್ ಕಿಡಿಕಾರಿದರು.

ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದಾಗಲೆಲ್ಲಾ ಹೆಗಲ ಮೇಲೆ ಶಾಲು ಹಾಕಿದ್ದಾರೆ. ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ ಮಾಡುತ್ತಿರುವುದೆಲ್ಲವೂ ರೈತ ವಿರೋಧಿ ಕಾರ್ಯಗಳು. ರೈತರ ಬಗ್ಗೆ ಮಾತನಾಡುವ ಯಾವ ನೈತಿಕತೆ ಸಿಎಂ ಯಡಿಯೂರಪ್ಪ ಅವರಿಗಿಲ್ಲ. ಕೇಂದ್ರ ಹಾಗೂ ರಾಜ್ಯ ಜಾರಿಗೆ ತಂದಿರೋಎಲ್ಲಾ ಕಾಯ್ದೆಗಳು ರೈತ ವಿರೋಧಿಯಾಗಿವೆ. ಅವರಿಗೆ ರೈತರ ಬಗ್ಗೆ ಯಾವ ಕಾಳಜಿಯೂ ಇಲ್ಲ. ಮುಂದಿನ ದಿನಗಳಲ್ಲಿ ಕರ್ನಾಟಕದ ರೈತರು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ. ಪ್ರಧಾನಿ ಮೋದಿ ಸರ್ವಾಧಿಕಾರಿಯಂತೆ ವರ್ತಿಸಿದ್ದಾರೆ. ರೈತ ವಿರೋಧಿಯಾಗಿರುವ ಮೂರು ಕರಾಳ ಕಾಯ್ದೆ ಹಿಂಪಡೆಯುವ ತನ್ನಕ ಹೋರಾಟ ನಿಲ್ಲದು ಎಂದು ಅಜಯಸಿಂಗ್ ಎಚ್ಚರಿಕೆ ನೀಡಿದ್ದಾರೆ.

ಜನತಾ ರ್ಯಾಲಿಯಲ್ಲಿ ನೂರಾರು ಟ್ರ್ಯಾಕ್ಟರ್ ಗಳು

ಕೇಂದ್ರ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ, ಮೂರು ಕರಾಳ ಕಾಯ್ದೆ ವಾಪಸ್ ಪಡೆಯಲು ಒತ್ತಾಯಿಸಿ ಕಲಬುರ್ಗಿಯಲ್ಲಿಯೂ ಬೃಹತ್ ಟ್ರ್ಯಾಕ್ಟರ್ ರ್ಯಾಲಿ ನಡೆಸಲಾಯಿತು. ಎಪಿಎಂಸಿ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ, ವಿದ್ಯುತ್ ಕಾಯ್ದೆ ಸಂಯುಕ್ತ ಕಿಸಾನ್ ಮೋರ್ಚಾ ಹೋರಾಟಕ್ಕೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದವು. ರೈತ, ದಲಿತ, ಕೃಷಿ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ನಗರದ ಹುಮ್ನಾಬಾದ್ ರಿಂಗ್ ರಸ್ತೆಯಿಂದ ಟ್ರ್ಯಾಕ್ಟರ್ ರ್ಯಾಲಿ ಆರಂಭಗೊಂಡಿತು. ಟ್ರ್ಯಾಕ್ಟರ್ ರ್ಯಾಲಿಗೆ ರಾಜ್ಯ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್ ಕಮ್ಮರಡಗಿ ಚಾಲನೆ ನೀಡಿದರು.

ಇದನ್ನು ಓದಿ: Budget 2021: ಕೃಷಿ ವಲಯಕ್ಕೆ ಈ ಬಾರಿಯ ಕೇಂದ್ರ ಬಜೆಟ್​ನಲ್ಲಿ ಹೆಚ್ಚಿನ ಅನುದಾನ ಹಂಚಿಕೆ ನಿರೀಕ್ಷೆ

ನಗರದ ಪ್ರಮುಖ ರಸ್ತೆಯಲ್ಲಿ ಸಂಚರಿಸಿದ ಮೆರವಣಿಗೆಯಲ್ಲಿ 200ಕ್ಕೂ ಹೆಚ್ಚು ಟ್ರ್ಯಾಕ್ಟರ್ ಗಳು ಭಾಗಿಯಾಗಿದ್ದವು. ರಿಂಗ್ ರಸ್ತೆಯಿಂದ ಆರಂಭಗೊಂಡ ಜನತಾ ರ್ಯಾಲಿ ಡಿಸಿ ಕಚೇರಿ ಬಳಿ ಅಂತ್ಯಗೊಂಡಿತು. ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಅಜಯಸಿಂಗ್, ಶಾಸಕಿ ಖನೀಸ್ ಫಾತಿಮಾ ಬೇಗಂ, ಮಾಜಿ ಶಾಸಕ ಬಿ.ಆರ್.ಪಾಟೀಲ, ಅಲ್ಲಮಪ್ರಭು ಪಾಟೀಲ, ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್ ಕಮ್ಮರಡಿ, ಕೆ.ನೀಲಾ  ಮತ್ತಿತರರು ಭಾಗಿಯಾಗಿದ್ದರು. ಡಿಸಿ ಕಚೇರಿ ಬಳಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಮುಖಂಡರು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮೂರು ಕರಾಳ ಕಾಯ್ದೆ ವಾಪಸ್ ಪಡೆಯಲೇಬೇಕು. ಇಲ್ಲದಿದ್ದಲ್ಲಿ ಹೋರಾಟ ಮತ್ತಷ್ಟು ತೀವ್ರಗೊಳಿಸುವುದಾಗಿ ಹೋರಾಟಗಾರರು ಎಚ್ಚರಿಕೆ ನೀಡಿದರು.

ದಲಿತ ಸಂಘಟನೆಗಳಿಂದಲೂ ಬೃಹತ್ ಪ್ರತಿಭಟನೆ

ಕೇಂದ್ರದ ಮೂರು ಕಾಯ್ದೆಗಳ ವಾಪಸಾತಿಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಕಲಬುರ್ಗಿಯಲ್ಲಿ ರಿಪಬ್ಲಿಕನ್ ಯೂತ್ ಫೆಡರೇಷನ್ ಮತ್ತು ದಲಿತ ಸಂಘಟನೆಗಳು ಸಹ ಬೃಹತ್ ಮೆರವಣಿಗೆ ನಡೆಸಿದವು. ಸಂಯುಕ್ತ ಕಿಸಾನ್ ಮೋರ್ಚಾ ಹೋರಾಟ ಬೆಂಬಲಿಸಿ ಟ್ರ್ಯಾಕ್ಟರ್ ಮತ್ತು ಚಕ್ಕಡಿ ರಾಲಿ ನಡೆಸಿತು. ಹೀರಾಪುರ ಕ್ರಾಸ್ ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಟ್ರ್ಯಾಕ್ಟರ್ ಮತ್ತು ಚಕ್ಕಡಿಗಳ ಮೆರವಣಿಗೆ ನಡೆಯಿತು. ರಾಲಿಯಲ್ಲಿ ಹತ್ತಾರು ಟ್ರ್ಯಾಕ್ಟರ್, ನೂರಾರು ಹೋರಾಟಗಾರರು ಭಾಗಿಯಾದರು. ಕೂಡಲೇ ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ, ವಿದ್ಯುತ್ ಕಾಯ್ದೆ ವಾಪಸ್ ತೆಗೆದುಕೊಳ್ಳಬೇಕು. ರೈತ, ಕಾರ್ಮಿಕ, ದಲಿತ ವಿರೋಧಿ ನೀತಿ ಕೈಬಿಡಬೇಕು. ಇಲ್ಲದಿದ್ದಲ್ಲಿ ರೈತರನ್ನು ಬೆಂಬಲಿಸಿ ಉಗ್ರ ಹೋರಾಟ ಮಾಡೋದಾಗಿ ಪ್ರತಿಭಟನಾಕರಾರು ಎಚ್ಚರಿಕೆ ನೀಡಿದರು.
Published by:HR Ramesh
First published: