• Home
  • »
  • News
  • »
  • district
  • »
  • ಭಾರಿ ಮಳೆ-ಬಿರುಗಾಳಿಗೆ ನೆಲಕಚ್ಚಿದ ಬಾಳೆ ಬೆಳೆ; ಮೂರಾಬಟ್ಟೆಯಾದ ರೈತನ ಬದುಕು

ಭಾರಿ ಮಳೆ-ಬಿರುಗಾಳಿಗೆ ನೆಲಕಚ್ಚಿದ ಬಾಳೆ ಬೆಳೆ; ಮೂರಾಬಟ್ಟೆಯಾದ ರೈತನ ಬದುಕು

ಗಾಳಿ-ಮಳೆಗೆ ನೆಲಕಚ್ಚಿರುವ ಬಾಳೆ ಮರ

ಗಾಳಿ-ಮಳೆಗೆ ನೆಲಕಚ್ಚಿರುವ ಬಾಳೆ ಮರ

ವರ್ಷದುದ್ದಕ್ಕೂ ಕೊರೋನಾ ಲಾಕ್ಡೌನ್ ನಂತಹ ಹಾಗೂ ಇನ್ನಿತರ ಸಮಸ್ಯೆಗಳಿಂದ ರೈತ ಸಮೂಹ ಕಂಗಾಲಾಗಿ ಹೋಗಿದೆ. ಬೆಲೆ ತಾರತಮ್ಯದ ನಡುವೆ ಕಷ್ಟಪಟ್ಟು ರೈತವರ್ಗ ಚೇತರಿಕೆ‌ ಕಾಣ್ತಾಯಿತ್ತು. ಏತನ್ಮಧ್ಯೆ ಪ್ರಕೃತಿಯೇ ಈ ರೀತಿ ಮುನಿಸಿಕೊಂಡಾಗ ರೈತನ ಪಾಡು ಕೇಳೋದಾದರೂ ಯಾರು ಅನ್ನೋ ಪ್ರಶ್ನೆ ಮೂಡಿದೆ? ಹೀಗಾಗಿ ಸಂಬಂಧಪಟ್ಟ ಇಲಾಖೆ ರೈತರಿಗಾಗಿರುವ ನಷ್ಟವನ್ನ ಭರಿಸಿ ಅ‌ನ್ನದಾತರ ಕೈ ಹಿಡಿಯಬೇಕಾಗಿದೆ.

ಮುಂದೆ ಓದಿ ...
  • Share this:

ಗದಗ: ರೈತ ಸಾಲ ಸೂಲ ಮಾಡಿ ಬಾಳೆ ಬೆಳೆ ಬೆಳೆದಿದ್ದ. ಬಾಳಿನ ಬುತ್ತಿಗೆ ಬಾಳೆ ಬೆಳಕಾಗುತ್ತೆ‌ ಅಂದುಕೊಂಡಿದ್ದ. ಆದರೆ ಪ್ರಕೃತಿ ಆಟದ ಮುಂದೆ ಆತನ ಶ್ರಮ ಗೆಲ್ಲಲಿಲ್ಲ. ವರುಣನ ಆರ್ಭಟ, ವಾಯುವಿನ ರಣಾರ್ಭಟ ಅದೆಲ್ಲವನ್ನೂ ನುಂಗಿ ಹಾಕಿದೆ. ಕೊರೋನಾ ಮೊದಲನೇ ಅಲೆಯನ್ನೇ ಇನ್ನೂ ಅರಗಿಸಿಕೊಳ್ಳದ ರೈತ ಎರಡನೇ ಅಲೆ ಭರಾಟೆ ನಡುವೆಯೇ ಪ್ರಕೃತಿ ಮತ್ತೊಂದು ಹೊಡೆತ ಕೊಟ್ಟಿದೆ.


ಹೌದು, ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೊರ್ಲಹಳ್ಳಿಯಲ್ಲಿ ಕಳೆದ ಎರಡು ದಿನಗಳ ಹಿಂದಷ್ಟೇ ಭೀಕರ ಬಿರುಗಾಳಿ ಸಹಿತ ಮಳೆ ಉಂಟಾದ ಪರಿಣಾಮ, ರೈತ ತೋಟಪ್ಪ ಲಿಂಬಿಕಾಯಿ ಅನ್ನೋರ ಜಮೀನಿನಲ್ಲಿ ಬೆಳೆದಿದ್ದ ಸಾವಿರಾರು ಬಾಳೆ ಗಿಡಗಳು, ಮುರಿದು ನೆಲಕ್ಕೆ ಬಿದ್ದಿವೆ. ಇನ್ನೇನು ವಾರ ಕಳೆಯುವಷ್ಟರಲ್ಲಿ ಬಾಳೆ ಗೊನೆಗಳನ್ನು ಕಟಾವು ಮಾಡಿ ಮಾರುಕಟ್ಟೆಗೆ ಒಯ್ಯೋದಷ್ಟೇ ಬಾಕಿ ಇತ್ತು. ಅಷ್ಟರಲ್ಲಾಗಲೇ ವರ್ಷಗಟ್ಟಲೇ ಕಷ್ಟಪಟ್ಟು ದುಡಿದ ಬಾಳೆ ಬೆಳೆ ಸಂಪೂರ್ಣ ಸರ್ವನಾಶವಾಗಿದೆ. ಒಟ್ಟು ಒಂಬತ್ತುವರೆ ಎಕರೆ ಜಮೀನಿನಲ್ಲಿ ಎಂಟು ಎಕರೆ ಬಾಳೆ ಬೆಳೆ ಬೆಳೆಯಲಾಗಿತ್ತು. ಆದರೆ ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ನಾಲ್ಕು ಎಕರೆಗೂ ಹೆಚ್ಚು ಬಾಳೆ ಹಾಳಾಗಿದೆ. ಸುಮಾರು ಹದಿನೈದು ಲಕ್ಷ‌ ರೂಪಾಯಿ ಖರ್ಚು ಮಾಡಿದ್ದ ಬೆಳೆ ಅಸಲಿಗೂ ಲೆಕ್ಕವಿಲ್ಲದಂತಾಗಿದೆ. ಹೀಗಾಗಿ ಕೈಗೆ‌ ಬಂದ ತುತ್ತು ಬಾಯಿಗೆ ಬರದಂತಾಗಿದ್ದು ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಸೂಕ್ತ ಪರಿಹಾರ ನೀಡಬೇಕು ಅಂತ ರೈತ ಒತ್ತಾಯಿಸಿದ್ದಾನೆ.


ಇದನ್ನು ಓದಿ: ಕೊರೋನಾ ವಾರಿಯರ್ಸ್ ಪೊಲೀಸ್ ಸಿಬ್ಬಂದಿಗೂ ವಕ್ಕರಿಸಿದ ಮಾರಕ ಕೋವಿಡ್ ಸೋಂಕು


ಇನ್ನು ಭೀಕರ ಬಿರುಗಾಳಿಗೆ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಅಷ್ಟೇ ಅಲ್ಲದೇ ಹಲವು ಕಡೆ ಅವಾಂತರ ಸೃಷ್ಟಿಯಾಗಿದೆ. ತಾಲೂಕಿನಾದ್ಯಂತ 28 ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಷ್ಟು ಬೆಳೆ ಹಾಳಾಗಿದೆ. ಇನ್ನು ಮುಂಡವಾಡ ಗ್ರಾಮದ ರೈತ ರಮೇಶ ಕಳಕರೆಡ್ಡಿ ಅನ್ನೋ ರೈತನ ಜಮೀನಿನಲ್ಲಿ‌ ಬೆಳೆದ ಮಾವು ಸಹ ಗಾಳಿಯ ರಭಸಕ್ಕೆ ನೆಲಕ್ಕುರುಳಿವೆ. ಒಟ್ಟು ಮೂರಕ್ಕೂ‌ ಹೆಚ್ಚು ಟನ್ ಮಾವು ನೆಲಕಚ್ಚಿದ್ದು ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ಮೊತ್ತದಷ್ಟು ರೈತನಿಗೆ ನಷ್ಟವಾಗಿದೆ. ಅಲ್ಲದೇ ಮಜ್ಜಗಿ‌ ಅನ್ನೋ ರೈತನ ಭತ್ತದ ಬೆಳೆ ಸಹ ಸಂಪೂರ್ಣ ಹಾಳಾಗಿದ್ದು ಹಲವು ಗ್ರಾಮಗಳಲ್ಲಿ ಮನೆಗಳ ಮೇಲ್ಛಾವಣೆ ಕಿತ್ತು ಹೋಗಿವೆ. ಬೃಹತ್ ಗಾತ್ರದ ಮರಗಳು ಸಹ ನೆಲಕ್ಕುರುಳಿದ್ದು ವಿದ್ಯುತ್ ಕಂಬಗಳು ತುಂಡಾಗಿ ರಸ್ತೆಗೆ ಬಿದ್ದಿವೆ. ಹೀಗಾಗಿ ತಾಲೂಕಿನಾದ್ಯಂತ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತ ಸಮೂಹಕ್ಕೆ ಇದೀಗ ಬರಸಿಡಿಲು ಬಡಿದಂತಾಗಿದೆ.


ವರ್ಷದುದ್ದಕ್ಕೂ ಕೊರೋನಾ ಲಾಕ್ಡೌನ್ ನಂತಹ ಹಾಗೂ ಇನ್ನಿತರ ಸಮಸ್ಯೆಗಳಿಂದ ರೈತ ಸಮೂಹ ಕಂಗಾಲಾಗಿ ಹೋಗಿದೆ. ಬೆಲೆ ತಾರತಮ್ಯದ ನಡುವೆ ಕಷ್ಟಪಟ್ಟು ರೈತವರ್ಗ ಚೇತರಿಕೆ‌ ಕಾಣ್ತಾಯಿತ್ತು. ಏತನ್ಮಧ್ಯೆ ಪ್ರಕೃತಿಯೇ ಈ ರೀತಿ ಮುನಿಸಿಕೊಂಡಾಗ ರೈತನ ಪಾಡು ಕೇಳೋದಾದರೂ ಯಾರು ಅನ್ನೋ ಪ್ರಶ್ನೆ ಮೂಡಿದೆ? ಹೀಗಾಗಿ ಸಂಬಂಧಪಟ್ಟ ಇಲಾಖೆ ರೈತರಿಗಾಗಿರುವ ನಷ್ಟವನ್ನ ಭರಿಸಿ ಅ‌ನ್ನದಾತರ ಕೈ ಹಿಡಿಯಬೇಕಾಗಿದೆ.


ವರದಿ: ಸಂತೋಷ ಕೊಣ್ಣೂರ

Published by:HR Ramesh
First published: