Basavaraj Bommai: ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ಕೊಟ್ಟ ಧಾರವಾಡದ ಕಮಡೊಳ್ಳಿ, ಊರೆಲ್ಲೆಲ್ಲಾ ಹಬ್ಬದ ಸಂಭ್ರಮ

ಒಂದೇ ಜಿಲ್ಲೆಯಿಂದ 2 ಸಿಎಂ ಬರುವುದೇ ಅಪರೂಪ. ಅಂಥಾದ್ರಲ್ಲಿ ಒಂದೇ ಹಳ್ಳಿ ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಈಗ ಇಡೀ ಗ್ರಾಮದ ಜನ ತಮ್ಮ ಮನೆ ಮಗನೇ ನಾಡಿನ ದೊರೆ ಎನ್ನುವ ಸಂಭ್ರಮ ಸಡಗರದಲ್ಲಿದ್ದಾರೆ.

ಬಸವರಾಜ​​ ಬೊಮ್ಮಾಯಿ.

ಬಸವರಾಜ​​ ಬೊಮ್ಮಾಯಿ.

  • Share this:
ಧಾರವಾಡ: ಜನತಾ ಪರಿವಾರದಿಂದ ಹಿಂದೆ ಎಸ್.ಆರ್.ಬೊಮ್ಮಾಯಿ ಸಿಎಂ ಆಗಿದ್ದರು. ಅದಾದ ಮೂರು ದಶಕಗಳ ನಂತ್ರ ಅವರ ಪುತ್ರ ಬಸವರಾಜ ಬೊಮ್ಮಾಯಿ ಬಿಜೆಪಿಯಿಂದ ಸಿಎಂ ಆಗಿದ್ದಾರೆ. ಪಕ್ಷಗಳು ಬೇರೆ ಬೇರೆಯಾಗಿದ್ದರೂ ಒಂದೇ ಗ್ರಾಮದವರಾದ ತಂದೆ ಮತ್ತು ಮಗ ಇಬ್ಬರು ಸಿಎಂ ಆಗಿರೋದು ವಿಶೇಷ. ಹೀಗೆ ಇಬ್ಬರು ಸಿಎಂಗಳನ್ನು ಕೊಟ್ಟ ಕೀರ್ತಿಗೆ ಪಾತ್ರವಾಗಿರೋ ಗ್ರಾಮ ಕಮಡೊಳ್ಳಿ. ಹೌದು... ಯಡಿಯೂರಪ್ಪ ರಾಜೀನಾಮೆಯಿಂದ ತೆರವಾಗಿದ್ದ ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿದ್ದಾರೆ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸ್ತಿರೋ ಗಳಿಗೆಯಲ್ಲಿ ಬಸವರಾಜ ಬೊಮ್ಮಾಯಿ ತವರಲ್ಲಿ ಸಂಭ್ರಮ ಮನೆ ಮಾಡಿದೆ. ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಕಮಡೊಳ್ಳಿಯಲ್ಲಿ ಸಂಭ್ರಮವೋ ಸಂಭ್ರಮ. ಇಬ್ಬರು ಸಿಎಂ ಗಳನ್ನು ಕೊಟ್ಟ ಹೆಗ್ಗಳಿಕೆ ಕಮಡೊಳ್ಳಿ ಗ್ರಾಮದ್ದಾಗಿದೆ.

ಬಸವರಾಜ ಬೊಮ್ಮಾಯಿ ತಂದೆ ಎಸ್.ಆರ್.ಬೊಮ್ಮಾಯಿ ಈ ಹಿಂದೆ ಸಿಎಂ ಆಗಿದ್ರು. ಎಸ್.ಆರ್.ಬೊಮ್ಮಾಯಿ ಧಾರವಾಡ ಜಿಲ್ಲೆಯನ್ನು ತಮ್ಮ ರಾಜಕೀಯ ಅಖಾಡವನ್ನಾಗಿಸಿಕೊಂಡಿದ್ದರೆ, ಬಸವರಾಜ ಬೊಮ್ಮಾಯಿ ಮಾತ್ರ ನೆರೆಯ ಹಾವೇರಿ ಜಿಲ್ಲೆ ಶಿಗ್ಗಾಂವಿ ಕ್ಷೇತ್ರವನ್ನು ರಾಜಕೀಯ ಕಾರ್ಯಸ್ಥಾನವನ್ನಾಗಿಸಿಕೊಂಡಿದ್ದರು. ತಂದೆಯಂತೆ ಚಾಣಾಕ್ಷ ರಾಜಕಾರಣಿ ಎನಿಸಿಕೊಂಡಿರುವ ಬಸವರಾಜ ಬೊಮ್ಮಾಯಿ ತಂದೆಯ ಹಾದಿಯಲ್ಲೇ ಸಿಎಂ ಗಾದಿಯತ್ತ ಮುನ್ನಡೆದಿದ್ದಾರೆ.

ಇದನ್ನೂ ಓದಿ: Basavaraj Bommai: ನೂತನ ಸಿಎಂ ಬಸವರಾಜ ಬೊಮ್ಮಾಯಿ; ತಂದೆ-ಮಗ ಇಬ್ಬರಿಗೂ ಅದೃಷ್ಟ ಒಲಿದ ರೀತಿ ಒಂದೇ!

ಎಸ್.ಆರ್.ಬೊಮ್ಮಾಯಿ ನಂತ್ರ ಇದೀಗ ಅವರ ಪುತ್ರ ಬಸವರಾಜ ಬೊಮ್ಮಾಯಿ ಸಿಎಂ ಆಗ್ತಿದ್ದು, ಕಮಡೊಳ್ಳಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಗ್ರಾಮದ ಪ್ರತಿ ಮನೆಯಲ್ಲಿಯೂ ಸಂಭ್ರಮ ಮನೆ ಮಾಡಿದೆ. ತಮ್ಮ ಮನೆಯ ಮಗನೇ ಸಿಎಂ ಆಗಿದ್ದಾನೆ ಅನ್ನೋ ರೀತಿಯಲ್ಲಿ ಜನ ಖುಷಿಪಡುತ್ತಿದ್ದಾರೆ. ತಮ್ಮ ಊರಿನ ಮತ್ತೊಬ್ಬ ವ್ಯಕ್ತಿ ಸಿಎಂ ಆಗ್ತಿದಾರೆ ಅಂತ ಜನ ಖುಷಿಯಲ್ಲಿದ್ದಾರೆ. ಬೊಮ್ಮಾಯಿ ಕುಟುಂಬದ ಸದಸ್ಯರಲ್ಲಿಯೂ ಹರ್ಷ. ನಮ್ಮ ಊರಿನವರು ಸಿಎಂ ಆಗ್ತಿರೋದಕ್ಕೆ ದುಪ್ಪಟ್ಟು ಖುಷಿಯಾಗ್ತಿದೆ. ಹಿಂದೆ ಎಸ್.ಆರ್.ಬೊಮ್ಮಾಯಿ ಸಿಎಂ ಆಗಿದ್ರು. ಈಗ ಅವರ ಪುತ್ರ ಬಸವರಾಜ ಬೊಮ್ಮಾಯಿ ಸಿಎಂ ಆಗ್ತಿದಾರೆ. ಒಂದೇ ಊರಿನವರು ಇಬ್ಬರು ವ್ಯಕ್ತಿಗಳು ಸಿಎಂ ಆಗೋದಂದ್ರೆ ಸಣ್ಣ ಮಾತಲ್ಲ. ಸರಳ ಸ್ವಭಾವದ ಬಸವರಾಜ ಬೊಮ್ಮಾಯಿ ಅವರು ತಂದೆಯಂತೆ ಒಳ್ಳೆಯ ಆಡಳಿತ ಕೊಡುತ್ತಾರೆ. ನಮ್ಮ ಊರಿಗೂ ಕೀರ್ತಿ ತರ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಕಮಡೊಳ್ಳಿ ಜನ, ಶುಭವಾಗಲಿ ಅಂತ ಹಾರೈಸಿದ್ದಾರೆ. ಕುಟುಂಬದ ಸದಸ್ಯರಿಂದಲೂ ಬೊಮ್ಮಾಯಿಗೆ ಶುಭ ಹಾರೈಕೆ ವ್ಯಕ್ತವಾಗಿದೆ.

ಬಸವರಾಜ ಬೊಮ್ಮಾಯಿ ಅವರ ಹುಬ್ಬಳ್ಳಿ ನಿವಾಸದ ಎದುರು ವಿಜಯೋತ್ಸವಗಳು ಮುಂದುವರೆದಿವೆ. ಬೊಮ್ಮಾಯಿ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. ಹುಬ್ಬಳ್ಳಿಯ ಆದರ್ಶ ನಗರದಲ್ಲಿರುವ ಬೊಮ್ಮಾಯಿ ನಿವಾಸದ ಎದುರು ಕಳೆದ ರಾತ್ರಿಯಿಂದಲೂ ಸಂಭ್ರಮಾಚರಣೆಗಳು ಮುಂದುವರೆದಿವೆ. ಬೊಮ್ಮಾಯಿ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಹಾಗೂ ಹುಬ್ಬಳ್ಳಿಯ ವಿವಿಧ ಗಣ್ಯರು ಬೊಮ್ಮಾಯಿ ನಿವಾಸದ ಬಳಿ ಆಗಮಿಸಿ ವಿಜಯೋತ್ಸವ ಮಾಡಿ ಸಂಭ್ರಮಿಸುತ್ತಿದ್ದಾರೆ. ಬೊಮ್ಮಾಯಿ ಪರ ಘೋಷಣೆ ಕೂಗಿ ಹರ್ಷ ವ್ಯಕ್ತಪಡಿಸಿದ್ದಾರೆ. ನೂತನ ಸಿಎಂ ಗೆ ಶುಭವಾಗಲಿ ಎಂದು ಹಾರೈಸುತ್ತಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: