• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಹೆಣ್ಮಕ್ಕಳ ಸಮಸ್ಯೆಗೆ ಹುಡುಗರ ಪರಿಹಾರ – ಲಿಮ್ಕಾ ದಾಖಲೆಯಾದ ಇದೊಂದು ಅಪರೂಪದ ವಿಚಾರ

ಹೆಣ್ಮಕ್ಕಳ ಸಮಸ್ಯೆಗೆ ಹುಡುಗರ ಪರಿಹಾರ – ಲಿಮ್ಕಾ ದಾಖಲೆಯಾದ ಇದೊಂದು ಅಪರೂಪದ ವಿಚಾರ

ಸ್ಲಂ ಮಹಿಳೆಯರಲ್ಲಿ ಸ್ಯಾನಿಟರಿ ಪ್ಯಾಡ್ ಬಳಕೆ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಸ್ವಯಂ ಸೇವಕರು

ಸ್ಲಂ ಮಹಿಳೆಯರಲ್ಲಿ ಸ್ಯಾನಿಟರಿ ಪ್ಯಾಡ್ ಬಳಕೆ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಸ್ವಯಂ ಸೇವಕರು

ಋತುಸ್ರಾವ ಎಂಬುದು ಮಹಿಳೆಯರ ಸಹಜ ದೈಹಿಕ ಪ್ರಕ್ರಿಯೆ. ಆದರೆ, ಇದರ ಬಗ್ಗೆ ಕುಟುಂಬದೊಳಗೆ ಮಾತನಾಡಲು ಮಹಿಳೆಯರು ಮುಜುಗರ ಪಡುವಾಗ ದಿ ಗುಡ್ ಕ್ವೆಸ್ಟ್ ಫೌಂಡೇಶನ್​ನ ಹುಡುಗರು ಸ್ಲಂಗಳಿಗೆ ಹೋಗಿ ಮಹಿಳೆಯರಲ್ಲಿ ಸ್ಯಾನಿಟರಿ ಪ್ಯಾಡ್ ಬಳಕೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ಧಾರೆ.

  • Share this:

ಬೆಂಗಳೂರು: ಹೆಣ್ಣುಮಕ್ಕಳ ಸಮಸ್ಯೆಗಳು ಅಂದ್ರೆ ಅವುಗಳನ್ನು ಪರಿಹರಿಸೋಕೆ, ಅವುಗಳ ಬಗ್ಗೆ ಅರಿವು ಮೂಡಿಸೋಕೆ ಹೆಣ್ಮಕ್ಕಳೇ ಬರ್ಬೇಕು ಅನ್ನೋದು ಸಾಮಾನ್ಯ ಅನಿಸಿಕೆ. ಆದ್ರೆ ಇಲ್ಲೊಂದಷ್ಟು ಹುಡುಗರು ಸ್ಲಂಗಳಲ್ಲಿ ವಾಸಿಸೋ ಹೆಣ್ಣುಮಕ್ಕಳಿಗೆ ಋತುಚಕ್ರದ ಬಗ್ಗೆ ಅರಿವು ಮೂಡಿಸಿ, ಆ ಸಂದರ್ಭಗಳಲ್ಲಿ ಅವರು ಪಾಲಿಸಬೇಕಾದ ಶುಚಿತ್ವದ ಪಾಠ ಮಾಡ್ತಾರೆ. ಬರೀ ಪಾಠ ಅಲ್ಲ, ಅವರೆಲ್ಲಾ ಅದನ್ನು ಅನುಸರಿಸುವಂತೆ ಅರಿವು ಮೂಡಿಸ್ತಾರೆ. 


ಕೆಲವು ವರ್ಷಗಳ ಹಿಂದೆ ಒಂದಷ್ಟು ಹುಡುಗರು ತಮ್ಮ ರಜಾ ದಿನಗಳಲ್ಲಿ ಈ ಸ್ಲಂಗಳಿಗೆ ಬಂದು ಇಲ್ಲಿನ ಮಹಿಳೆಯರನ್ನೆಲ್ಲಾ ಮಾತಾಡಿಸೋಕೆ ಪ್ರಯತ್ನ ಪಡುತ್ತಿದ್ದರು. ಋತುಚಕ್ರದ ಸಂದರ್ಭದಲ್ಲಿ ಶುಚಿತ್ವ ಕಾಪಾಡಿಕೊಳ್ಳೋದು ಹೇಗೆ, ಸ್ಯಾನಿಟರಿ ಪ್ಯಾಡ್ ಗಳನ್ನು ಯಾಕೆ ಮತ್ತು ಹೇಗೆ ಬಳಸಬೇಕು, ಇಲ್ಲದಿದ್ದರೆ ಆರೋಗ್ಯ ಹೇಗೆ ಹದಗೆಡುತ್ತೆ ಅನ್ನೋದನ್ನೆಲ್ಲಾ ಸ್ಲಂನ ಮಹಿಳೆಯರಿಗೆ ಅರ್ಥ ಮಾಡಿಸೋ ಪ್ರಯತ್ನ ಶುರುಮಾಡುತ್ತಿದ್ದರು. ಆಗ ಇಲ್ಲಿನವರೆಲ್ಲಾ ಇವರನ್ನು ಯಾವುದೋ ಅನ್ಯಗ್ರಹ ಜೀವಿಗಳ ಥರಾ ನೋಡ್ತಿದ್ರಂತೆ. ನಾವು ಮನೆಯ ಹೆಣ್ಣುಮಕ್ಕಳೇ ಮಾತಾಡೋಕೆ ಮುಜುಗರ ಪಡೋ ವಿಚಾರವನ್ನು ಇದ್ಯಾರೋ ಗಂಡಸರು ಬಂದು ಹೇಳ್ತಾರೆ ಅಂತ ಎಲ್ಲರೂ ಮನೆ ಸೇರ್ಕೊಂಡು ಬಿಡುತ್ತಿದ್ದರಂತೆ. ಆದ್ರೆ ಈ ಹುಡುಗರು ಕೈಚೆಲ್ಲಲಿಲ್ಲ. ತಮ್ಮ ಗುಂಪಿನ ಯುವತಿಯರನ್ನು ಕರೆದುಕೊಂಡು ಬಂದು ಅದೇ ಕೆಲಸ ಮಾಡಿಸಿದರು.


ಯುವತಿಯರು ಬಂದು ಇದೆಲ್ಲಾ ಹೇಳೋಕೆ ಶುರು ಮಾಡಿದಾಗ ನಿಧಾನಕ್ಕೆ ಒಬ್ಬೊಬ್ಬರೇ ಮನೆಯಿಂದ ಹೊರಬಂದು ಇವರ ಮಾತುಗಳನ್ನು ಕೇಳಿಸಿಕೊಳ್ಳೋಕೆ ಶುರು ಮಾಡಿದರು. ಕ್ರಮೇಣವಾಗಿ ಯುವತಿಯರು ಬರೋದು ನಿಂತು ಹುಡುಗರೇ ಬಂದು ಮಾತನಾಡುವಷ್ಟರಲ್ಲಿ ಎಲ್ಲರಿಗೂ ಇವರು ಪರಿಚಿತರಾಗಿಬಿಟ್ಟಿದ್ದರು. ನಿವಾಸಿಗಳೆಲ್ಲಾ ಪ್ರೀತಿಯಿಂದ ಇವರನ್ನು 'ಅಣ್ಣಾ...' ಅಂತ ಕರೆಯೋಕೆ ಶುರು ಮಾಡಿದರು. ಯಾಕಂದ್ರೆ ಇವರ ಮನಸ್ಸಿನಲ್ಲಿ ಇದ್ದ ಉದ್ದೇಶ ಅಷ್ಟು ಸ್ಪಷ್ಟವಿತ್ತು. ಹೆಣ್ಮಕ್ಕಳ ಕಷ್ಟ ತಿಳಿದು ಅರಿವು ಮತ್ತು ಸಹಾಯ ಕೊಡೋಕೆ ಅಂತಲೇ ಇವರು ಬಂದ್ದರು.


ಇದನ್ನೂ ಓದಿ: ನಾಪತ್ತೆಯಾಗಿದ್ದ ಮಾಜಿ ಶಾಸಕರ ಮೊಮ್ಮಕ್ಕಳು ಶವವಾಗಿ ಪತ್ತೆ; ವಾಮಾಚಾರಕ್ಕೆ ಬಲಿಯಾಗಿರುವ ಶಂಕೆ


ಈಗ ಈ ವಿಚಾರದಲ್ಲಿ ಇವರುಗಳು ಎಕ್ಸ್ ಪರ್ಟ್ ಗಳಾಗ್ಬಿಟ್ಟಿದ್ದಾರೆ. ಎಷ್ಟರಮಟ್ಟಿಗೆ ಅಂದ್ರೆ ಇವ್ರು ಬಂದ್ರು ಅಂದ್ರೆ ಸ್ಲಂನ ಮಹಿಳೆಯರೆಲ್ಲಾ ಅಣ್ಣ ಬಂದಿದಾರೆ ಅಂತ ತಾವಾಗೇ ಬಂದು ಇವರ ಮಾತು ಕೇಳ್ತಾರೆ. ದಿ ಗುಡ್ ಕ್ವೆಸ್ಟ್ ಫೌಂಡೇಶನ್ ಹೆಸರಿನಲ್ಲಿ ಇವರೆಲ್ಲಾ ನಾನಾ ಉತ್ತಮ ಕೆಲಸಗಳನ್ನು ಮಾಡ್ತಿದ್ದಾರೆ. ಸ್ಲಂನಲ್ಲಿರೋ ಮಹಿಳೆಯರು ಋತುಚಕ್ರದ ಸಂದರ್ಭದಲ್ಲಿ ಹಳೆಯ ಬಟ್ಟೆ ಮುಂತಾದವನ್ನು ಬಳಸಿ ಅದರಿಂದ ನಾನಾ ಖಾಹಿಲೆಗಳಿಗೆ ತುತ್ತಾಗೋದನ್ನ ತಿಳಿದುಕೊಂಡು ಇವರಿಗೆ ಸ್ಯಾನಿಟರಿ ಪ್ಯಾಡ್ ಗಳನ್ನು ಪರಿಚಯಿಸಿದ್ರು.


ಹೀಗೆ ರಾಜ್ಯದ ಮೂಲೆಮೂಲೆಗಳಲ್ಲಿ ಇರೋ ಸ್ಲಂ ಗಳಿಗೆ ಭೇಟಿ ಕೊಟ್ಟು ಮಹಿಳೆಯರು ಮತ್ತು ಯುವತಿಯರಿಗೆ ತಮ್ಮ ಆರೋಗ್ಯ ಮತ್ತು ಅದನ್ನು ಕಾಪಾಡಿಕೊಳ್ಳೋ ಬಗ್ಗೆ ಅರಿವು ಮೂಡಿಸ್ತಾರೆ.  ಸ್ಲಂಗಳಲ್ಲಿ ದೊಡ್ಡ ದೊಡ್ಡ ಕುಟುಂಬಗಳು ಒಂದೇ ಕೋಣೆಯೊಳಗೆ ವಾಸಿಸೋ ಸಂದರ್ಭಗಳು ಇರುತ್ತವೆ. ಅಂಥಾ ಸನ್ನಿವೇಶಗಳಲ್ಲಿ ಹೆಣ್ಣುಮಕ್ಕಳ ಈ ಕಷ್ಟದ ಬಗ್ಗೆ ಇಡೀ ಕುಟುಂಬಕ್ಕೆ ಅರಿವು ಇರೋದು ಬಹಳ ಮುಖ್ಯವಾಗುತ್ತದೆ. ಇಂಥಾ ಸವಾಲುಗಳನ್ನು ಸ್ವೀಕರಿಸಿ ಒಂದಷ್ಟು ಸಮಾಧಾನ ನೀಡೋ ಕೆಲಸವನ್ನು ಯಶಸ್ವಿಯಾಗಿ ಮಾಡ್ತಿದ್ದಾರೆ ಇವರು. ಇವರ ಸಾಧನೆಗಳು ಲಿಮ್ಕಾ ದಾಖಲೆಗೂ ಪಾತ್ರವಾಗಿದೆ. ಹೆಣ್ಮಕ್ಕಳೇ ಅನೇಕ ಬಾರಿ ಸಂಕೋಚ ಪಟ್ಟುಕೊಳ್ಳೋ ವಿಚಾರಗಳನ್ನು ಯಾವುದೇ ಹಿಂಜರಿಕೆ ಇಲ್ಲದೆ ಸರಳವಾಗಿ ವಿವರಿಸಿ ಅರಿವು ಮೂಡಿಸಿ ಸಮಾಜದ ಸ್ವಾಸ್ಥ್ಯ ಕಾಪಾಡೋಕೆ ಇವರು ಪಡುತ್ತಿರೋ ಶ್ರಮ ನಿಜಕ್ಕೂ ಅಪೂರ್ವ.


ವರದಿ: ಸೌಮ್ಯಾ ಕಳಸ

Published by:Vijayasarthy SN
First published: