ಭಟ್ಕಳ: ಸದ್ಯ ಕಳೆದೆರಡು ದಿನಗಳಿಂದ ನೀರಜ್ ಚೋಪ್ರಾ (Neeraj Chopra) ಹೆಸರು ಎಲ್ಲಾ ಕಡೆಗಳಲ್ಲೂ ಟ್ರೆಂಡಿಂಗ್ ನಲ್ಲಿದೆ. ಓಲಂಪಿಕ್ ಇತಿಹಾಸದಲ್ಲೇ ಭಾರತಕ್ಕೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಚೊಚ್ಚಲ ಚಿನ್ನದ ಪದಕ ತಂದುಕೊಟ್ಟಿರುವ ನೀರಜ್ ಚೋಪ್ರಾಗೆ ಸದ್ಯ ಎಲ್ಲಾ ಕಡೆಯಿಂದಲೂ ಶುಭ ಹಾರೈಕೆಗಳು ಬರುತ್ತಿವೆ. ಈ ನಡುವೆ ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಹೋಟೆಲೊಂದು ನೀರಜ್ ಎಂಬ ಹೆಸರಿನವರಿಗೆ ಉಚಿತವಾಗಿ ಊಟ ನೀಡುವುದಾಗಿ ಘೋಷಿಸಿದೆ. ಭಟ್ಕಳದ ಶಿರಾಲಿಯ ನೀರಕಂಠ ಜಂಕ್ಷನ್ ನಲ್ಲಿ ನೂತನವಾಗಿ ಕಳೆದ ಏಳು ತಿಂಗಳ ಹಿಂದೆ ಆರಂಭಗೊಂಡ 'ತಾಮ್ರ' ರೆಸ್ಟೋರೆಂಟ್ ನಲ್ಲಿ ಈ ವಿಶೇಷ ಕೊಡುಗೆಯನ್ನು ಘೋಷಿಸಲಾಗಿದೆ. ಆ ಮೂಲಕ ಚಿನ್ನದ ವೀರ ನೀರಜ್ ಚೋಪ್ರಾ ಅವರಿಗೆ ಗೌರವ ಸಲ್ಲಿಸಲು ಹೋಟೆಲ್ ಮಾಲೀಕರು ಮುಂದಾಗಿದ್ದಾರೆ.
ಇತ್ತೀಚಿಗೆ ಆರಂಭವಾಗಿದ್ದರೂ 'ತಾಮ್ರ' ರೆಸ್ಟೋರೆಂಟ್ ಸಾಂಪ್ರದಾಯಿಕ ಶೈಲಿಯ, ಸಮುದ್ರಾಹಾರಗಳಿಗೆ ಪ್ರಸಿದ್ಧಿ ಪಡೆಯುತ್ತಿದೆ. ಇಲ್ಲಿ ಪ್ರತಿದಿನ ನೂರಾರು ಜನರು ಈ ಸಮುದ್ರಾಹಾರಗಳ ಖಾದ್ಯಕ್ಕಾಗಿಯೇ ಇಲ್ಲಿ ಭೇಟಿ ನೀಡುತ್ತಾರೆ. ಇತ್ತೀಚಿನವರೆಗೂ, ತಾಮ್ರದಲ್ಲಿ ಊಟ ಮಾಡಿದವರು ಇನ್ಸ್ಟಾಗ್ರಾಂನಲ್ಲಿ ರೆಸ್ಟೋರೆಂಟ್ ಪೇಜ್ ಅನ್ನು ಟ್ಯಾಗ್ ಮಾಡಿದರೆ ಶೇ 10ರಷ್ಟು ರಿಯಾಯಿತಿಯನ್ನೂ ನೀಡಲಾಗುತ್ತಿತ್ತು. ಅನೇಕರು ಕೂಡ ಇದರ ಪ್ರಯೋಜನ ಪಡೆದಿದ್ದಾರೆ. ಇದೀಗ ಮತ್ತೊಂದು ಕೊಡುಗೆಯ ಮೂಲಕ 'ತಾಮ್ರ' ಜನರನ್ನು ತನ್ನತ್ತ ಸೆಳೆಯುತ್ತಿದೆ.
ನೀರಜ್ ಎಂಬ ಹೆಸರಿನವರಿಗೆ ಅನ್ ಲಿಮಿಟೆಡ್ ಊಟವನ್ನು ಇಲ್ಲಿ ನೀಡಲಾಗುತ್ತಿದೆ. ಈ ಕೊಡುಗೆ ಆಗಸ್ಟ್ 15ರವರೆಗೂ ಇದ್ದು, ಈ ಬಗ್ಗೆ ಈಗಾಗಲೇ ತಮ್ಮ ಇನ್ಟ್ಟಾಗ್ರಾಂ ಖಾತೆಯಲ್ಲೂ 'ತಾಮ್ರ' ರೆಸ್ಟೋರೆಂಟ್ ಘೋಷಣೆ ಮಾಡಿಕೊಂಡಿದೆ. ಈ ಇನ್ಸ್ಟಾಗ್ರಾಂ ಪೋಸ್ಟ್ ಇದೀಗ ಜಿಲ್ಲೆಯಾದ್ಯಂತ ಸಾಕಷ್ಟು ವೈರಲ್ ಆಗಿದ್ದು, ಈ ಆಫರ್ ಭಾರೀ ಸದ್ದು ಮಾಡುತ್ತಿದೆ.
ಇನ್ನು ಈ ಬಗ್ಗೆ ನ್ಯೂಸ್ 18 ಕನ್ನಡದೊಂದಿಗೆ ಮಾತನಾಡಿರುವ 'ತಾಮ್ರ' ರೆಸ್ಟೋರೆಂಟ್ ಮಾಲೀಕ ಆಶೀಶ್ ನಾಯಕ್, ನೀರಜ್ ಹೆಸರಿನವರು ಯಾರೇ ಬಂದರೂ ಅವರಿಗೆ ನಮ್ಮ ರೆಸ್ಟೋರೆಂಟ್ ನಲ್ಲಿ ಉಚಿತವಾಗಿ, ಅನ್ ಲಿಮಿಟೆಡ್, ಅವರಿಗೆ ಬೇಕಾದ ಅಥವಾ ನಮ್ಮಲ್ಲಿ ಲಭ್ಯವಿರುವ ಊಟ ನೀಡಲಾಗುತ್ತದೆ. ತಮ್ಮ ಹೆಸರಿನ ಐಡಿಯನ್ನು ಅಥವಾ ಇನ್ಸ್ಟಾಗ್ರಾಂ, ಫೇಸ್ ಬುಕ್ ಖಾತೆಗಳನ್ನು ತೋರಿಸಿ ತಮ್ಮ ಹೆಸರು ನೀರಜ್ ಎಂದು ದೃಢಪಡಿಸಿದರೆ ಸಾಕು, ಅವರು ಈ ಕೊಡುಗೆ ಪಡೆದುಕೊಳ್ಳಲಿದ್ದಾರೆ. ಆದರೆ ಇದು ಕೇವಲ ನೀರಜ್ ಎಂದು ಹೆಸರಿರುವವರಿಗೆ ಮಾತ್ರ ಎಂದು ತಿಳಿಸಿದ್ದಾರೆ.
ಈ ಹಿಂದೆ ನಮ್ಮ ಭಾರತೀಯ ವಾಯುಸೇನೆಯು ಬಾಲಕೋಟ್ ಭಯೋತ್ಪಾದಕ ಶಿಬಿರದ ಮೇಲೆ ನಡೆಸಿದ ವಾಯುದಾಳಿಗೆ ಪ್ರತಿಯಾಗಿ, ಭಾರತೀಯ ಸೇನಾನೆಲೆಗಳ ಮೇಲೆ ಪಾಕಿಸ್ತಾನದ ವಾಯುಸೇನೆಯು ವಿಫಲ ದಾಳಿಯನ್ನು ನಡೆಸಿತ್ತು. ಆಗ ಪಾಕ್ ಯುದ್ಧವಿಮಾನವನ್ನು ಅಟ್ಟಿಸಿಕೊಂಡು ಹೋಗಿ ಪಾಕಿ ವಾಯುಸೇನೆಯ ವಿಮಾನವನ್ನು ನಮ್ಮ ಭಾರತೀಯ ವಾಯುಸೇನೆಯ ಪೈಲಟ್ ಅಭಿನಂದನ್ ವರ್ಧಮಾನ್ ಅವರು ತಮ್ಮ ವಿಮಾನದ ಮೂಲಕ ಹೊಡೆದುರುಳಿಸಿದ್ದರು.
ಇದನ್ನೂ ಓದಿ: NASA Report: ಮಂಗಳೂರು, ಮುಂಬೈ, ಗೋವಾ ಸೇರಿದಂತೆ ಭಾರತದ ಈ ನಗರಗಳು 2100 ವೇಳೆಗೆ ಸಂಪೂರ್ಣ ಮುಳುಗಿರುತ್ತವೆ!
ಆದರೆ ಪಾಕ್ ವಿಮಾನವನ್ನು ಅಟ್ಟಿಸಿಕೊಂಡು ಹೋಗುವ ಭರದಲ್ಲಿ ಇನ್ನೊಂದು ಪಾಕ್ ಫೈಟರ್ ಜೆಟ್ ದಾಳಿಗೊಳಗಾದ ವರ್ಧಮಾನ್ ಅವರ ವಿಮಾನ, ಪಾಕ್ ಆಕ್ರಮಿತ ಕಾಶ್ಮೀರದ ಭೂಭಾಗದಲ್ಲಿ ಪತನವಾಗಿ, ಪಾಕ್ ಸೈನಿಕರಿಂದ ಬಂಧಿಸಲ್ಪಟ್ಟಿದ್ದರು. ನಂತರ ಭಾರತದ ಒತ್ತಡಕ್ಕೆ ಮಣಿದು ಅವರನ್ನು ಬಿಡುಗಡೆ ಮಾಡಲಾಗಿತ್ತು. ಅವರು ಬಂಧನಕ್ಕೊಳಗಾಗಿ ಬಿಡುಗಡೆಯಾಗುವವರೆಗೂ ಅವರಿಗಾಗಿ ಇಡೀ ದೇಶದಲ್ಲಿ ಪ್ರಾರ್ಥನೆಗಳು ಮೊಳಗಿದ್ದವು. ಅವರ ಸಾಹಸಕ್ಕೆ ಮೆಚ್ಚಿ, ಅವರಿಗೆ ಗೌರವ ಸಲ್ಲಿಸಲು ಹೋಟೆಲ್ ಒಂದು ಅಭಿನಂದನ್ ಎನ್ನುವ ಹೆಸರಿರುವವರಿಗೆ ಉಚಿತ ಊಟ ನೀಡುವುದಾಗಿ ಘೋಷಿಸಿತ್ತು. ಅದು ಈ ಸಮಯದಲ್ಲಿ ನೆನಪಾಗಿ, ಅದೇ ರೀತಿಯ ಆಫರ್ ಅನ್ನು ನಮ್ಮಲ್ಲಿ ನೀಡುತ್ತಿದ್ದೇವೆ ಎಂದು ವಿವರಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ