Yatnal: ಇದು ರೈತರ ಹೋರಾಟವಲ್ಲ, ಇದು ದೇಶದ್ರೋಹಿಗಳ ಹೋರಾಟ; ಶಾಸಕ ಯತ್ನಾಳ್ ವಿವಾದಾತ್ಮಕ ಹೇಳಿಕೆ

ವಾಜಪೇಯಿ ಕಾಲದಲ್ಲಿ ಮಂತ್ರಿಯಾದವನು, ಮಂತ್ರಿ ಆಗಲೇಬೇಕೆಂಬುದೇನು ಇಲ್ಲ. ಯೋಗ್ಯ, ಸಮರ್ಥ ಇದ್ದರೆ ಮಾಡ್ತಾರೆ, ಇಲ್ಲವಾದ್ರೆ ಬಿಡ್ತಾರೆ. ನಾನು ಎಲ್ಲ ಸಮುದಾಯಗಳ ಧ್ವನಿಯಾಗಿದ್ದೇನೆ. ಬೊಮ್ಮಾಯಿ ಅವರ ಮೇಲೆ ವಿಶ್ವಾಸ ಇದೆ ಎಂದು ಯತ್ನಾಳ ಅಸಮಾಧಾನದಿಂದ ಹೇಳಿದರು.

ಬಸನಗೌಡ ಪಾಟೀಲ್ ಯತ್ನಾಳ

ಬಸನಗೌಡ ಪಾಟೀಲ್ ಯತ್ನಾಳ

 • Share this:
  ಬಾಗಲಕೋಟೆ: ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ವಿಚಾರವಾಗಿ ಜಮಖಂಡಿಯಲ್ಲಿ ಪ್ರತಿಕ್ರಿಯೆ ನೀಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು, ಮೋದಿ ಅವರೇನು ಸಂಸಾರಕ್ಕಾಗಿ ಒಯ್ತಾರಾ? ಅವರು ಯಾವುದರಲ್ಲೂ ಸ್ವಾರ್ಥತೆ ಮಾಡಿಲ್ಲ. ಅವರ ಅಣ್ಣನ ಸೋಸೆ ರಾಜಕೋಟ್ ನಲ್ಲಿ ಕಾರ್ಪೊರೇಷನ್ ಟಿಕೆಟ್ ಬೇಡಿದರೂ ಕೊಡಲಿಲ್ಲ. ಮೋದಿ ಅವರು ಅಷ್ಟು ಕುಟುಂಬದಿಂದ ದೂರ ಇದ್ದಾರೆ. ಅವರು ಯಾವತ್ತು ಸ್ವಾರ್ಥ ಬಯಸೋದಿಲ್ಲ ಎಂದು ಹೇಳಿದರು.

  ರೈತರಿಂದ ಭಾರತ್ ಬಂದ್ ಕರೆ ವಿಚಾರವಾಗಿ ಮಾತನಾಡಿದ ಯತ್ನಾಳ್ ಅವರು, ಇದು ರೈತರ ಹೋರಾಟವಲ್ಲ. ಇದು ದೇಶ ದ್ರೋಹಿಗಳ ಹೋರಾಟ ಎಂದು ಹೇಳಿದರು. ಇನ್ನು ತಮಗೆ ಮುಖ್ಯಮಂತ್ರಿ, ಮಂತ್ರಿ ಸ್ಥಾನ ಸಿಗದ ಬಗ್ಗೆ ಮಾತನಾಡಿದ ಅವರು,  ಎಷ್ಟೋ ಮಂದಿ ಯೋಗ್ಯರು ಹಂಗೇ ಸತ್ತಾರ. ಹಂಗೇ ನಾನು ಒಬ್ಬ ಅಂತಾ ತಿಳ್ಕೋರಿ. ಸಮಾಜದ ಹೋರಾಟವನ್ನು ನಾನು ಎಂದೂ ಮಂತ್ರಿ, ಮುಖ್ಯಮಂತ್ರಿ ಸ್ಥಾನಕ್ಕಾಗಿ ಬಳಸಿಕೊಂಡಿಲ್ಲ. ಸಮಾಜವನ್ನು ದುರುಪಯೋಗ ಮಾಡಿಕೊಳ್ಳೋದಿಲ್ಲ. ವಾಜಪೇಯಿ ಕಾಲದಲ್ಲಿ ಮಂತ್ರಿಯಾದವನು, ಮಂತ್ರಿ ಆಗಲೇಬೇಕೆಂಬುದೇನು ಇಲ್ಲ. ಯೋಗ್ಯ, ಸಮರ್ಥ ಇದ್ದರೆ ಮಾಡ್ತಾರೆ, ಇಲ್ಲವಾದ್ರೆ ಬಿಡ್ತಾರೆ. ನಾನು ಎಲ್ಲ ಸಮುದಾಯಗಳ ಧ್ವನಿಯಾಗಿದ್ದೇನೆ. ಬೊಮ್ಮಾಯಿ ಅವರ ಮೇಲೆ ವಿಶ್ವಾಸ ಇದೆ ಎಂದು ಅಸಮಾಧಾನದಿಂದ ಹೇಳಿದರು. ಹಾಗೆ, ಕಾಶಪ್ಪನವರ ಮತ್ತು ಸ್ವಾಮೀಜಿಗಳ ಪಂಚಮಸಾಲಿ 2ಎ ಮೀಸಲಾತಿ ಹೋರಾಟ ವ್ಯರ್ಥವಾಗೋದಿಲ್ಲ ಎಂದು ಯತ್ನಾಳ ಹೇಳಿದರು.

  ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಹೋರಾಟಕ್ಕೆ ಬೆಂಬಲ ಕೊಡದವರು ಹೊಟ್ಟೆ ಕಿಚ್ಚು ಪಡುತ್ತಿದ್ದಾರೆ. ಅವರು ಏನ್ ಮಾಡಿದರೂ ಹೋರಾಟ ನಿಲ್ಲಲ್ಲ. ಈ ಹೋರಾಟ ಮೀಸಲಾತಿ ಪಡೆಯುವರೆಗೆ ನಿಲ್ಲೋದಿಲ್ಲ. ಮುರುಗೇಶ್ ನಿರಾಣಿಗೆ ಮೀಸಲಾತಿ ಚಿಂತೆಯಿಲ್ಲ, ಮುಖ್ಯಮಂತ್ರಿ ಆಗೋ ಚಿಂತೆ ಇದೆ. ನಮಗೆ ಸಮಾಜದ ಮೀಸಲಾತಿ ಚಿಂತೆ ಇದೆ ಎಂದು ಸಚಿವ ಮುರುಗೇಶ್ ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದರು.

  ಹೋರಾಟದಲ್ಲಿ ಭಾಗಿಯಾಗಿದವರಿಗೆ ಬೆದರಿಕೆ ವಿಚಾರವಾಗಿ ಮಾತನಾಡಿ, ನಮ್ಮ ಜನಕ್ಕೆ ಕಾರ್ಯಕ್ರಮಕ್ಕೆ ಹೋಗಬೇಡಿ ಎಂದು ಹೇಳಿದ್ದಾರೆ. ಗುರುಗಳು ಬಂದಾಗ, ಯತ್ನಾಳ ಬಂದಾಗ, ಕಾಶಪ್ಪನವರ ಬಂದಾಗ ಏನಾದ್ರೂ ಮಾತನಾಡಿದರೆ ಕಲ್ಲು ಎಸಿರಿ ಅಂತ ಹೇಳಿದ್ದಾರೆ. ನಿರಾಣಿ ಸಹೋದರ ಕಾಲಿ ಕುಂತಾರ ಏನೂ ಕೆಲಸ ಇಲ್ಲ ಅವರಿಗೆ. ಅವರಿಗೆ ಎಂಎಲ್ ಎ ಆಗೋಕೆ ಮಂತ್ರಿ ಆಗೋಕೆ ಮಾತ್ರ ಅಂತ ತಿಳಿದಿದ್ದಾರೆ. ಆದ್ರೆ, ಸಮಾಜ ಮತ್ತು ಕೂಡಲ ಸಂಗಮ ಪೀಠ ಯಾರನ್ನೂ ಮಂತ್ರಿ, ಮುಖ್ಯಮಂತ್ರಿ ಮಾಡೊದಕ್ಕೆ ಇಲ್ಲ. ಮೀಸಲಾತಿಗಾಗಿ ಹೋರಾಟ ಮಾಡ್ತಿದ್ದೇವೆ. ಆದೇಶ ಬರೋವರೆಗೆ ಹೋರಾಟ ಮಾಡ್ತೇವೆ. ಇಂತಹ ಗೊಡ್ಡು ಬೆದರಿಕೆಗೆ ನಾವು ಹೆದರೋದಿಲ್ಲ. ನಾವು ಹುಟ್ಟುತ್ತಲೇ ನೋಡಿಕೊಂಡು ಬಂದಿದ್ದೀವಿ. ಇವರು ರಾಜಕೀಯದಲ್ಲಿ ನಿನ್ನೆ ಮೊನ್ನೆ ಕಣ್ಣು ತೆಗೆದಿದ್ದಾರೆ ಎಂದರು.

  ಮೂರನೇ ಪೀಠ ಸ್ಥಾಪನೆ ವಿಚಾರವಾಗಿ ಪ್ರತಿಕ್ರಿಯಿಸಿದ ಕಾಶಪ್ಪನವರ, ಮೂರನೇ ಪೀಠ ಸ್ಥಾಪನೆ ವಿಚಾರ ಹೊಟ್ಟೆ ಕಿಚ್ಚಿನ ಕೆಲಸ. ಯಾವ ಪೀಠನೂ ಆಗಲ್ಲ, ಮಣ್ಣು ಮಸೀನೂ ಆಗಲ್ಲ. ಎರಡು ಪೀಠಗಳು ಏನ್ ಮಾಡಿದ್ದಾವೆ? ಯಾವ ಪೀಠ ಜನರಿಗೆ ಸಾಮಾಜಿಕ ನ್ಯಾಯ ಕೊಡಿಸಲು ಹೋರಾಟ ಮಾಡ್ತಿವೆ ಅಂತ ಜನರಿಗೆ ಗೊತ್ತಿದೆ. ಈ ಬಾರಿ ಸರ್ಕಾರ ಮೀಸಲಾತಿ ಕೊಡದಿದ್ದರೆ ಕಳೆದ ಬಾರಿ 10 ಜನ ಸೇರಿಸಿದ್ವಿ ಈ ಬಾರಿ 20 ಲಕ್ಷ ಜನ ಸೇರಿಸಿ ಹೋರಾಟ ಮಾಡ್ತೀವಿ. 6 ತಿಂಗಳು ನೀಡಿದ ಅವಧಿ ಮುಗಿದಿದೆ. ಬಸವರಾಜ ಬೊಮ್ಮಾಯಿ ಸಮಾಜದ ಋಣ ತೀರಿಸ್ತೇನೆ ಅಂದಿದ್ದಾರೆ, ತೀರಿಸಲಿ ಎಂದರು.

  ಇದನ್ನು ಓದಿ: Janata Parva 1.0; ಜೆಡಿಎಸ್ ಮುಗಿಸಲು ಸಿದ್ದರಾಮಯ್ಯ ಅಲ್ಲ ಯಾರಿಂದಲೂ ಸಾಧ್ಯವಿಲ್ಲ: ಎಚ್.ಡಿ. ದೇವೇಗೌಡರ ಗುಡುಗು  ಪಂಚಮಾಸಲಿ 2ಎ ಮೀಸಲಾತಿ ಹೋರಾಟದ ಅಂಗವಾಗಿ ಇಂದು  ಜಮಖಂಡಿ ನಗರದ ಬಸವಭವನದಲ್ಲಿ ಪ್ರತಿಜ್ಞೆ ಪಂಚಾಯತ್ ನಡೆಸಲಾಯಿತು. ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ, ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಹಲವು ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
  Published by:HR Ramesh
  First published: