ಪುತ್ತೂರು(ನವೆಂಬರ್. 25): ಅರೆಯುವ ಕಲ್ಲು ಇಲ್ಲದ ಮನೆಯಿರುವುದು ವಿರಳ. ಇಂತಹ ಅರೆಯುವ ಕಲ್ಲಿಗೆ ಪ್ರಸಿದ್ದಿಯಾದ ಒಂದು ಊರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿದೆ. ಇಲ್ಲಿ ತಯಾರಾಗುವ ಕಲ್ಲು ರಾಜ್ಯ ಸೇರಿದಂತೆ ದೇಶದ ವಿವಿಧ ಕಡೆಗಳಿಗೂ ರವಾನೆಯಾಗುತ್ತಿದೆ. ಆದರೆ, ಇದೀಗ ಕೆಲಸಗಾರರ ಕೊರತೆಯಿಂದಾಗಿ ಈ ಕಲ್ಲು ತಯಾರಿಸುವ ಊರಿನ ಹೆಸರೇ ಮುಂದಿನ ದಿನಗಳಲ್ಲಿ ಮಾಯವಾಗುವ ಲಕ್ಷಣಗಳು ಗೋಚರಿಸುತ್ತಿದೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಲ್ಲರ್ಪೆ ಎನ್ನುವ ಊರಿನಲ್ಲಿ ಎಲ್ಲಿ ಕಣ್ಣಾಡಿಸಿದರೂ, ಕಿವಿಯಾಡಿಸಿದರೂ ಕಲ್ಲು ಕೆತ್ತುವವರು ಹಾಗೂ ಕಲ್ಲಿನ ಧ್ವನಿಯೇ ಕೇಳಿಸುತ್ತದೆ. ಗೃಹಿಣಿಯರಿಗೆ ಅತೀ ಅಗತ್ಯವಾಗಿ ಬೇಕಾಗಿರುವಂತಹ ಅರೆಯುವ ಕಲ್ಲು ಇಲ್ಲಿಯೇ ತಯಾರಾಗುವುದು. ಇತ್ತೀಚಿನ ದಿನಗಳಲ್ಲಿ ಮನೆಗಳಿಗೆ ಮಿಕ್ಸಿ ಬಂದಿದ್ದರಿಂದ ಕೆಲವು ಮನೆಗಳಲ್ಲಿ ಈ ಕಲ್ಲುಗಳು ಕಾಣ ಸಿಗದಿದ್ದರೂ, ಹೆಚ್ಚಿನ ಮನೆಗಳಲ್ಲಿ ಇಂಥಹ ಕಲ್ಲುಗಳು ಸಾಮಾನ್ಯವಾಗಿ ಇರುತ್ತದೆ.
ಈ ಕಲ್ಲಿನಿಂದ ಅರೆಯುವ ಪದಾರ್ಥಗಳಿಗೆ ರುಚಿಯೂ ಜಾಸ್ತಿ ಎನ್ನುವ ನಂಬಿಕೆಯೂ ಕೆಲವರಲ್ಲಿ ಇಂದಿಗೂ ಇದೆ. ಈ ಕಾರಣಕ್ಕಾಗಿಯೇ ಕರಾವಳಿ ಜಿಲ್ಲೆ ಸೇರಿದಂತೆ ರಾಜ್ಯದ ಉದ್ದಗಲಕ್ಕೂ ವ್ಯಾಪಿಸಿರುವಂತಹ ಕರಾವಳಿಯ ಜನರಿಗೆ ಹೆಚ್ಚು ಚಿರಪರಿಚಿತವಾಗಿರುವ ಪುತ್ತೂರಿನ ಈ ಅರೆಯುವ ಕಲ್ಲು ಕೆಲವು ಸಂದರ್ಭಗಳಲ್ಲಿ ಬೇಡಿಕೆಗಳಿಗೆ ಅನುಗುಣವಾಗಿ ವಿದೇಶಗಳಿಗೂ ರವಾನೆಯಾಗುತ್ತಿದೆ.
ಅರೆಯುವ ಕಲ್ಲುಗಳನ್ನು ಈ ಪ್ರದೇಶಗಳಲ್ಲಿ ಹೆಚ್ಚಾಗಿ ಸಿಗುವಂತಹ ಸೋಮನಾಥ ಕಲ್ಲುಗಳಿಂದ ತಯಾರಿಸಲಾಗುತ್ತಿದ್ದು, ಆದರೆ, ಇತ್ತೀಚಿನ ದಿನಗಳಲ್ಲಿ ಒಂದೆಡೆ ಕಲ್ಲಿನ ಅಭಾವವಾದರೆ, ಇನ್ನೊಂದೆಡೆ ಕಲ್ಲು ಕಡಿಯುವ ಕಾರ್ಮಿಕರ ಅಭಾವವೂ ತಲೆದೋರಿದೆ.
ಇದನ್ನೂ ಓದಿ : ವಾಟಾಳ್ ನಾಗರಾಜ್ ರೋಲ್‌ಕಾಲ್ ಹೋರಾಟಗಾರ: ಶಾಸಕ ಅರವಿಂದ ಬೆಲ್ಲದ್
ಹಿರಿ ತಲೆಗಳು ಮಾತ್ರ ಇದೀಗ ಈ ಕಲ್ಲು ಕಡಿಯುವ ಕಾಯಕದಲ್ಲಿ ತೊಡಗಿದ್ದು, ಹೊಸ ತಲೆಮಾರು ಈ ಕಾಯಕದಿಂದ ಸಂಪೂರ್ಣ ತನ್ನ ಅಂತರವನ್ನು ಕಾಯ್ದುಕೊಂಡಿರುವ ಹಿನ್ನಲೆಯಲ್ಲಿ ಇದೀಗ ಕಲ್ಲರ್ಪೆಯ ಕಲ್ಲುಗಳು ಮುಂದಿನ ದಿನಗಳಲ್ಲಿ ಮಾಯವಾಗುವ ಲಕ್ಷಣಗಳೂ ಕಂಡು ಬರುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ