ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಬಂದರೂ ಅಪ್ಪನ ಅಕಾಲಿಕ ಸಾವಿನ ಸಂಕಟ; ವಿಜಯಪುರ ವಿದ್ಯಾರ್ಥಿನಿಯ ತೊಳಲಾಟ

ತೇಜಶ್ವಿನಿ ಸಿದ್ಧರಾಮ ಶೆಟಗಾರ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದರೂ ಆ ಸಂತಸವನ್ನು ಪೂರ್ಣ ಪ್ರಮಾಣದಲ್ಲಿ ಆನಂದಿಸಲು ಸಾಧ್ಯವಾಗುತ್ತಿಲ್ಲ. ತಂದೆಯ ಅಕಾಲಿಕ ಅಗಲಿಕೆ ಒಂದೆಡೆಯಾದರೆ, ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮತ್ತೋಂದೆಡೆ.

ತೇಜಶ್ವಿನಿ ಸಿದ್ದರಾಮ ಶೆಟಗಾರ

ತೇಜಶ್ವಿನಿ ಸಿದ್ದರಾಮ ಶೆಟಗಾರ

  • Share this:
ವಿಜಯಪುರ(ಆ. 11): ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕೇವಲ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಪೋಷಕರಿಗೂ ಕುತೂಹಲ ಮತ್ತು ಸಂತೋಷಕ್ಕೆ ಕಾರಣವಾಗುತ್ತದೆ. ವಿದ್ಯಾರ್ಥಿಗಳು ತಾವು ಕಾಲೇಜು ಶಿಕ್ಷಣದಲ್ಲಿ ಯಾವ ವಿಷಯ ಆಯ್ದುಕೊಳ್ಳಬೇಕು? ಭವಿಷ್ಯದಲ್ಲಿ ಯಾವ ಗುರಿ ಸಾಧಿಸಬೇಕು? ಹೇಗೆ ಜೀವನ ರೂಪಿಸಿಕೊಳ್ಳುವತ್ತ ಗಮನ ಹರಿಸಬೇಕು ಎಂಬ ಚಿಂತನೆಗೂ ಮತ್ತು ನಿರ್ಧಾರಕ್ಕೂ ಕಾರಣವಾಗಿರುತ್ತದೆ. ಅದೇ ರೀತಿ ಪೋಷಕರಲ್ಲಿಯೂ ಅಷ್ಟೇ, ತಮ್ಮ ಮಗಳು ಅಥವಾ ಮಗ ಎಷ್ಟು ಅಂಕ ಪಡೆಯುತ್ತಾರೆ? ಅವರಿಗೆ ಪಿಯುನಲ್ಲಿ ಯಾವ ವಿಷಯ ಓದಿಸಬೇಕು? ಎಂದು ಯೋಚಿಸುತ್ತಾರೆ. ಜೊತೆಗೆ ತಾವು ಮತ್ತು ತಮ್ಮ ಕುಟುಂಬದ ಇತರ ಸದಸ್ಯರು ಈಡೇರಿಸದ ಕನಸುಗಳನ್ನು ಮಕ್ಕಳ ಮೂಲಕ ಸಾಧಿಸುವ ಛಲ ಮತ್ತು ಹೊಂಗನಸು ಹೊಂದಿರುತ್ತಾರೆ. ಅಲ್ಲದೇ, ತಮ್ಮ ಕನಸುಗಳನ್ನು ಮಕ್ಕಳ ಮೂಲಕ ನನಸು ಮಾಡಿಸಲು ಶತಪ್ರಯತ್ನ ಮಾಡುತ್ತಾರೆ. ಕೆಲವರು ಮಕ್ಕಳ ಕನಸುಗಳನ್ನು ನೀರೆರೆದು ಪೋಷಿಸುತ್ತಾರೆ. 

ನಿನ್ನೆ ಪ್ರಕಟವಾದ ಎಸ್ಎಸ್‌ಎಲ್‌ಸಿ ಫಲಿತಾಂಶ ಎಲ್ಲ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಇಂಥದ್ದೇ ಯೋಚನೆಯನ್ನು ಮೂಡಿಸಿದೆ. ಈಗಾಗಲೇ ಪಾಸಾಗಿರುವ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಕಾಲೇಜು ಶಿಕ್ಷಣದ ಬಗ್ಗೆ ಕಾರ್ಯೋನ್ಮುಖರೂ ಆಗಿದ್ದಾರೆ. ಇದೇ ವೇಳೆ, ಎಸ್ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶದಿಂದ ಬಸವನಾಡಿನ ಈ ಒಬ್ಬ ವಿದ್ಯಾರ್ಥಿನಿಗೆ ಪೂರ್ಣ ಪ್ರಮಾಣದಲ್ಲಿ ಅದರ ಸಂತೋಷ ಅನುಭವಿಸಲೂ ಸಾಧ್ಯವಾಗುತ್ತಿಲ್ಲ. ಮಗಳ ಎಸ್ಎಸ್ಎಲ್‌ಸಿ ಫಲಿತಾಂಶವನ್ನು ಕುತೂಹಲದಿಂದ ಕಾಯುತ್ತಿದ್ದ ಮತ್ತು ಮಗಳ ಸಾಧನೆಯ ಬಗ್ಗೆ ಅಪಾರ ನಿರೀಕ್ಷೆಯಿದ್ದ ಈ ವಿದ್ಯಾರ್ಥಿನಿಯ ತಂದೆ ಈಗಿಲ್ಲ.

ಇದನ್ನೂ ಓದಿ: SSLC Exam Results – ಬಸವನಾಡಿನ ಮಾನ ಕಾಪಾಡಿದ ವಿದ್ಯಾರ್ಥಿಗಳು; ಅರ್ಪಿತಾ 3, ನಿಂಗೊಂಡ 4ನೇ ಸ್ಥಾನ

ವಿಜಯಪುರ ನಗರದ ಪ್ರತಿಷ್ಠಿತ ಜಿಓಸಿಸಿ(ಸರಕಾರಿ ನೌಕರರ ಸಹಕಾರಿ ಸಂಘ) ಬ್ಯಾಂಕಿನ ಅಸಿಸ್ಟಂಟ್ ಮ್ಯಾನೇಜರ್ ಮತ್ತು ಚೀಫ್ ಅಕೌಂಟೆಂಟ್ ಆಗಿದ್ದ ಸಿದ್ದರಾಮ ಶೆಟಗಾರ ಅವರ ಪುತ್ರಿ ತೇಜಶ್ವಿನಿ ಸಿದ್ದರಾಮ ಶಟಗಾರ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಮಾತೃಭಾಷೆ ಕನ್ನಡ ಮಾಧ್ಯಮದಲ್ಲಿ ಶೇ. 82ರಷ್ಟು ಅಂಕಗಳನ್ನು ಪಡೆದಿದ್ದಾಳೆ. ವಿಜಯಪುರ ನಗರದ ಪ್ರತಿಷ್ಠಿತ ಎಕ್ಸಲೆಂಟ್ ಸ್ಕೂಲ್​ನಲ್ಲಿ ಓದುತ್ತಿದ್ದ ತೇಜಶ್ವಿನಿ ಈಗ ಉತ್ತಮ ಸಾಧನೆ ಮಾಡಿದ್ದಾಳೆ. ಆದರೆ, ಮಗಳ ಸಾಧನೆಯ ಖುಷಿಯನ್ನು ಅನುಭವಿಸಲು ಈಗ ಸಿದ್ಧರಾಮ ಶೆಟಗಾರ ಇಲ್ಲ. ಆ. 6 ರಂದು ತೀವ್ರ ಹೃದಯಾಘಾತದಿಂದ ಸಿದ್ಧರಾಮ ಶೆಟಗಾರ ನಿಧನರಾಗಿದ್ದಾರೆ. ಮಗಳನ್ನು ಯಾವ ಕಾಲೇಜಿಗೆ ಸೇರಿಸಬೇಕು ಮತ್ತು ಯಾವ ವಿಷಯವನ್ನು ಓದಿಸಬೇಕು ಎಂದು ಮೊದಲೇ ನಿರ್ಧರಿಸಿದ್ದ ಮತ್ತು ತಮಗೆ ಪರಿಚಯಸ್ಥರಿಗೆ ಈ ಕುರಿತು ಮನವಿಯನ್ನೂ ಮಾಡಿದ್ದ ತಂದೆ ಈಗ ಇಲ್ಲ.ಇದೀಗ ತೇಜಶ್ವಿನಿ ಸಿದ್ಧರಾಮ ಶೆಟಗಾರ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದರೂ ಆ ಸಂತಸವನ್ನು ಪೂರ್ಣ ಪ್ರಮಾಣದಲ್ಲಿ ಆನಂದಿಸಲು ಸಾಧ್ಯವಾಗುತ್ತಿಲ್ಲ. ತಂದೆಯ ಅಕಾಲಿಕ ಅಗಲಿಕೆ ಒಂದೆಡೆಯಾದರೆ, ಎಸ್ಎಸ್ಎಲ್‌ಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮತ್ತೋಂದೆಡೆ. ಎರಡರ ಮಧ್ಯೆ ಭವಿಷ್ಯದಲ್ಲಿ ಓದಬೇಕಿರುವ ಕಾಲೇಜು ಶಿಕ್ಷಣದ ಬಗ್ಗೆ ಈ ವಿದ್ಯಾರ್ಥಿನಿ ಚಿಂತನೆ ನಡೆಸಬೇಕಿದೆ. ಸಂಬಂಧಿಕರು ಮತ್ತು ಹಿತೈಷಿಗಳು ಈ ನಿಟ್ಟಿನಲ್ಲಿ ಮಾರ್ಗದರ್ಶನ ಮಾಡಬಹುದಾದರೂ ಮಕ್ಕಳು ತಂದೆಯೊಂದಿಗೆ ಹೊಂದಿರುವ ಒಡನಾಟ, ಹಂಚಿಕೊಳ್ಳುವ ಸಂತಸದ ಸಂಗತಿಗಳು ನೀಡುವ ಖುಷಿಯೇ ಬೇರೆ. ಆದರೆ, ಸಮಯದ ಹಾದಿಯಲ್ಲಿ ಎಲ್ಲರೂ ನಡೆಯಲೇಬೇಕು. ಯಾರಿಗೂ ಇಂಥ ಸಂದಿಗ್ಧ ಪರಿಸ್ಥಿತಿ ಬಾರದಿರಲಿ.

ವರದಿ: ಮಹೇಶ ವಿ. ಶಟಗಾರ
Published by:Vijayasarthy SN
First published: