HOME » NEWS » District » THIS FAMILY MEMBERS OF MANGALORE ARE MAKING GANESHA IDOLS FROM PRE INDEPENDENCE VB

Ganesh Chaturthi 2020: ಸ್ವಾತಂತ್ರ್ಯ ಪೂರ್ವದಿಂದಲೂ ಗಣೇಶನನ್ನು ತಯಾರಿಸುತ್ತಿದೆ ಮಂಗಳೂರಿನ ಈ ಕುಟುಂಬ: ಅಮೆರಿಕಾ, ಲಂಡನ್​ಗೂ ರವಾನೆ!

ಆಧುನಿಕ ಪ್ರಪಂಚದ ಭಾಗವಾಗಿದ್ದುಕೊಂಡೇ ಸ್ವಾತಂತ್ರ್ಯ ಪೂರ್ವದಿಂದಲೂ ಬಳುವಳಿಯಾಗಿ ಬಂದಿದ್ದ ಗಣೇಶನ ಮೂರ್ತಿ ತಯಾರಿಕೆಯನ್ನು ಇಂದಿಗೂ ಅಷ್ಟೇ ಶ್ರದ್ಧೆ ಭಕ್ತಿಯಿಂದ ಈ ಕುಟುಂಬ ಮುಂದುವರಿಸುತ್ತಿರುವುದು ಶ್ಲಾಘನೀಯ.

news18-kannada
Updated:August 22, 2020, 10:08 AM IST
Ganesh Chaturthi 2020: ಸ್ವಾತಂತ್ರ್ಯ ಪೂರ್ವದಿಂದಲೂ ಗಣೇಶನನ್ನು ತಯಾರಿಸುತ್ತಿದೆ ಮಂಗಳೂರಿನ ಈ ಕುಟುಂಬ: ಅಮೆರಿಕಾ, ಲಂಡನ್​ಗೂ ರವಾನೆ!
ಗಣೇಶ್ ಚತುರ್ಥಿ.
  • Share this:
ಅಂತೂ ಇಂತೂ ಗಣೇಶನ‌ ಹಬ್ಬ ಬಂದೇ ಬಿಟ್ಟಿತು. ನಾಡಿನಾದ್ಯಂತ ಗಣೇಶ ಹಬ್ಬ ಆಚರಿಸಲಾಗುವುದರಿಂದ ಗಣೇಶನ ಮೂರ್ತಿಗೂ ಸಿಕ್ಕಾಪಟ್ಟೆ ಬೇಡಿಕೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲೂ ಸಾವಿರಾರು ಗಣೇಶನ ಮೂರ್ತಿಗಳು ಪೂಜೆ ಪಡೆಯಲು ತಯಾರಾಗಿವೆ. ಕೊರೋನಾ ಸಂಕಷ್ಟದಲ್ಲಿ ಈ ಬಾರಿ ಸರ್ಕಾರ ನೀಡಿದ ಷರತ್ತುಬದ್ಧ ಮಾರ್ಗಸೂಚಿಯಂತೆ ಗಣೇಶ ಹಬ್ಬ ಮಾಡಲಾಗುತ್ತಿದೆ. ಅಂತೆಯೆ ಇಲ್ಲೊಂದು ಕುಟುಂಬ ಮಾತ್ರ ಸ್ವಾತಂತ್ರ್ಯ ಪೂರ್ವದಿಂದಲೂ ಗಣೇಶನ ಮೂರ್ತಿ ತಯಾರಿಸುತ್ತಿದೆ. ಈ ಮೂರ್ತಿಗಳು ದೂರದ ಅಮೇರಿಕಾ, ಇಂಗ್ಲೆಂಡ್‌ಗೂ ರವಾನೆಯಾಗುತ್ತೆ. ಹಾಗಾದ್ರೆ ಆ ಕಲಾವಿದರ ಕುಟುಂಬ ಎಲ್ಲಿದೆ ಅಂತೀರಾ..? ಇಲ್ಲಿದೆ ವಿವರ.

ಮಂಗಳೂರಿನ ಮಣ್ಣಗುಡ್ಡೆಯಲ್ಲಿ ಗಣಪತಿಯ ಮೂರ್ತಿಯನ್ನು ವಿವಿಧ ಕಲಾವಿದರು ಬಗೆ-ಬಗೆಯಲ್ಲಿ ರೂಪಿಸುತ್ತಾರೆ. ಆದರೆ ಮಂಗಳೂರಿನ ಮಣ್ಣಗುಡ್ಡೆಯಲ್ಲಿರುವ ಈ ಕಲಾವಿದರ ಕುಟುಂಬ ಸಾಂಪ್ರದಾಯಿಕವಾಗಿ, ಪರಿಸರ ಸ್ನೇಹಿ ಗಣೇಶನ ಮೂರ್ತಿಯನ್ನು ಕಳೆದ 89 ವರ್ಷಗಳಿಂದ ತಯಾರಿಸುತ್ತಿದೆ. ಅಷ್ಟಕ್ಕೂ ಗಣೇಶನ ಮೂರ್ತಿ ರಚನೆ ಈ ಕುಟುಂಬಕ್ಕೆ ತಂದೆಯಿಂದಲೇ ಬಳುವಳಿಯಾಗಿ ಬಂದದ್ದು, ಇದೀಗ ಈ ಕುಟುಂಬದಲ್ಲಿ ನಾಲ್ಕನೇ ಪೀಳಿಗೆಯೂ ಗಣೇಶನ‌ ಮೂರ್ತಿ ರಚನೆಯಲ್ಲಿ ತೊಡಗಿಕೊಳ್ಳುತ್ತಿದೆ.



Ganesh Chaturthi 2020: ಬೆಂಗಳೂರಿನಲ್ಲಿ ಇಂದು ಸಂಭ್ರಮದ ಗಣೇಶ ಚತುರ್ಥಿ; ಮಾಂಸ ಮಾರಾಟ ನಿಷೇಧ

ವಿಶೇಷವೆಂದರೆ, ಎರಡು ತಿಂಗಳ ಹಿಂದೆ ಬರುವ ಚಿತ್ರ ನಕ್ಷತ್ರದಿಂದ ಮೂರ್ತಿ ತಯಾರಿಕೆ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದು, ವಿದೇಶದಲ್ಲಿ ವೈದ್ಯ ವೃತ್ತಿ ಮಾಡುವವರಿಂದ ಹಿಡಿದು ಕುಟುಂಬದ ಸಣ್ಣ ಮಕ್ಕಳವರೆಗೆ ಒಟ್ಟು 22 ಮಂದಿ ಮೂರ್ತಿ ತಯಾರಿಕೆ,‌ ಬಣ್ಣ ಹಚ್ಚುವಿಕೆಯಲ್ಲಿ ತೊಡಗಿಕೊಳ್ಳುತ್ತಾರೆ. ಅಮೇರಿಕಾ, ಲಂಡನ್‌ ಮಾತ್ರವಲ್ಲದೇ ಮಂಗಳೂರಿನ ವಿವಿಧೆಡೆ ಸಾರ್ವಜನಿಕ ಗಣೇಶೋತ್ಸವಕ್ಕೂ ಇಲ್ಲಿಂದಲೇ ಮೂರ್ತಿಗಳನ್ನು ಕೊಂಡೊಯ್ಯಲಾಗುತ್ತಿದೆ.

ಅಂದಹಾಗೆ, ಈ ಕುಟುಂಬದ ಹಿರಿಯ ಜೀವಗಳ‌ ತಂದೆ ದಿವಂಗತ ಮೋಹನ್ ರಾವ್ ಮುಂಬಯಿಯಲ್ಲಿದ್ದಾಗ ಶೇಟ್ ಒಬ್ಬರ ಮನೆಯಲ್ಲಿದ್ದುಕೊಂಡು ಸುಮಾರು 12 ವರ್ಷಗಳ ಕಾಲ ಗಣೇಶನ ಮೂರ್ತಿ‌ ನಿರ್ಮಿಸಿದ್ದರು. ಅವರಿಂದಲೇ ಬಳುವಳಿಯಾಗಿ ಬಂದ ಈ ಕಲೆಯನ್ನು ಇಂದಿನ ಪೀಳಿಗೆಯೂ ಮುಂದುವರಿಸಿಕೊಂಡು ಹೋಗುತ್ತಿದೆ. ತಂದೆಯ ಬಳಿಕ ಅವರ ಮಕ್ಕಳು ಸುಧಾಕರ ರಾವ್, ಪ್ರಭಾಕರ ರಾವ್, ರಾಮಚಂದ್ರ ರಾವ್ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಪ್ರಸ್ತುತ ಈ ಹಿರಿ ಜೀವಗಳ ಮಕ್ಕಳು, ಮೊಮ್ಮಕ್ಕಳು ಕೂಡಾ ಗಣೇಶನ ಮೂರ್ತಿ ತಯಾರಿಕೆಗೆ ಸಾಥ್ ನೀಡುತ್ತಿದ್ದಾರೆ. ಈ ಕುಟುಂಬ ಮಂಗಳೂರಿನಲ್ಲಿದ್ದುಕೊಂಡೇ ಕಳೆದ 90 ವರ್ಷಗಳಿಂದ ಗಣೇಶನ ಮೂರ್ತಿ ನಿರ್ಮಿಸುವ ಕಾಯಕದಲ್ಲಿ ತೊಡಗಿಕೊಂಡಿದೆ.

ಗಣೇಶನ ಮೂರ್ತಿ ಸಂಪೂರ್ಣ ಆವೆಮಣ್ಣಿನಿಂದಲೇ ಮಾಡಲಾಗುತ್ತಿದ್ದು, ಇದಕ್ಕೆ ಲೆಡ್ ಫ್ರೀ ಬಣ್ಣವನ್ನು ಮಾತ್ರ ಹಚ್ಚಲಾಗುತ್ತಿದೆ. ಈ ಮೂಲಕ ಪರಿಸರ ಸ್ನೇಹಿ ಗಣೇಶನಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ. ಇವರು ತಯಾರಿಸಿದ ಗಣೇಶನ ಮೂರ್ತಿಗೆ ಇಂತಿಷ್ಟೇ ಹಣವೆಂದು ನಿಗದಿಪಡಿಸದ ಈ ಕುಟುಂಬ ಜನರು ನೀಡಿದಷ್ಟು ಹಣ ಮಾತ್ರ ಪಡೆದುಕೊಳ್ಳುತ್ತದೆ.

Ganesha Festival 2020 : ವಿಜಯಪುರದಲ್ಲಿ ಸದ್ದಿಲ್ಲದೆ ನಡೆದಿದೆ ಪರಿಸರಕ್ಕೆ ಪೂರಕವಾದ ಗಣೇಶೋತ್ಸವ ಆಚರಣೆ

ಒಟ್ಟಿನಲ್ಲಿ ಆಧುನಿಕ ಪ್ರಪಂಚದ ಭಾಗವಾಗಿದ್ದುಕೊಂಡೇ ಸ್ವಾತಂತ್ರ್ಯ ಪೂರ್ವದಿಂದಲೂ ಬಳುವಳಿಯಾಗಿ ಬಂದಿದ್ದ ಗಣೇಶನ ಮೂರ್ತಿ ತಯಾರಿಕೆಯನ್ನು ಇಂದಿಗೂ ಅಷ್ಟೇ ಶ್ರದ್ಧೆ ಭಕ್ತಿಯಿಂದ ಈ ಕುಟುಂಬ ಮುಂದುವರಿಸುತ್ತಿರುವುದು ಶ್ಲಾಘನೀಯ.

- ಭರತ್ ರಾಜ್ ಕಲ್ಲಡ್ಕ
Published by: Vinay Bhat
First published: August 22, 2020, 10:08 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories